ಮಾಜಿ ಸಂಸದೆ ಸುಮಲತಾ ಅಂಬರೀಷ್ ಅವರು ಮುಂದಿನ ಚುನಾವಣೆಯಲ್ಲಿ ಮತ್ತೆ ಸಕ್ರಿಯ ರಾಜಕೀಯಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮ ಮುಂದಿನ ರಾಜಕೀಯ ಭವಿಷ್ಯ ಕುರಿತು ಪಕ್ಷದ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಕೈಗೊಳ್ಳುವ ತೀರ್ಮಾನಕ್ಕೆ ತಾವು ಬದ್ಧಳಾಗಿರುವುದಾಗಿ ಹೇಳಿದರು.
ಮುಂದಿನ ಚುನಾವಣೆಗೆ ಸಂಬಂಧಿಸಿದಂತೆ ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೋ ಅದನ್ನು ಸ್ವೀಕರಿಸುತ್ತೇನೆ. ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇನೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಮತ್ತು ರಾಜ್ಯ ನಾಯಕರ ಜತೆ ಚರ್ಚೆ ನಡೆಸುವ ಉದ್ದೇಶವಿದೆ ಎಂದು ಸುಮಲತಾ ತಿಳಿಸಿದರು.
ರಾಜ್ಯ ರಾಜಕಾರಣ ಪ್ರವೇಶಕ್ಕೂ ಸಿದ್ಧತೆ
ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ವಿಚಾರದಲ್ಲಿ ಯಾವುದೇ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಮಯ ಮತ್ತು ಸಂದರ್ಭ ಒಟ್ಟಿಗೆ ಬಂದರೆ ಎಲ್ಲವೂ ಸಾಧ್ಯ. ಜಿಲ್ಲೆಯ ಮಟ್ಟದಲ್ಲಿ ನಡೆಯುವ ಪಕ್ಷದ ಹೋರಾಟಗಳು, ಸಭೆಗಳು ಮತ್ತು ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದೇನೆ. ಪಕ್ಷವನ್ನು ಕೆಳಮಟ್ಟದಿಂದ ಗಟ್ಟಿಗೊಳಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರಕ್ಕೂ ತಮ್ಮ ವಿರೋಧವಿಲ್ಲ ಎಂದು ತಿಳಿಸಿದ ಅವರು, ಅದರ ಅಂತಿಮ ತೀರ್ಮಾನವನ್ನು ಹೈಕಮಾಂಡ್ ಕೈಗೊಳ್ಳಬೇಕು ಎಂದರು. ಜಿಲ್ಲೆಯಲ್ಲೀಗ ಬಿಜೆಪಿ ಮತಗಳಿಕೆ ಪ್ರಮಾಣ ಹೆಚ್ಚಾಗುತ್ತಿದ್ದು, ಪಕ್ಷ ಸಂಘಟನೆ ಸರಿಯಾದ ದಿಕ್ಕಿನಲ್ಲಿ ಸಾಗಬೇಕು ಎಂದು ಅಭಿಪ್ರಾಯಪಟ್ಟರು.
ಮಂಡ್ಯದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಅಂತ್ಯದ ಸೂಚನೆ
ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ನಾರಾಯಣ ಗೌಡ ನೀಡಿದ ಹೇಳಿಕೆಗಳು ಮಂಡ್ಯ ರಾಜಕೀಯದಲ್ಲಿ ಮಹತ್ವದ ತಿರುವು ತಂದಿವೆ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, “ನಾವು ನಮ್ಮ ಹಕ್ಕುಗಳನ್ನು ಬಿಟ್ಟುಕೊಟ್ಟೆವು, ನಮ್ಮ ಎಂಪಿ ಸ್ಥಾನವನ್ನೂ ತ್ಯಾಗ ಮಾಡಿದೆವು. ಅವರು ಗೆದ್ದರು, ಕುಮಾರಸ್ವಾಮಿ ಕೇಂದ್ರ ಸಚಿವರಾದರು. ಆದರೆ ಈಗ ನಮಗೆ ಮೌಲ್ಯವೇ ಇಲ್ಲ” ಎಂದು ಆರೋಪಿಸಿದರು.
“ಒಮ್ಮೆ ನಾವು ಬೇಕಾಗಿದ್ದೆವು, ಈಗ ಬೇಡವಾಗಿದ್ದೇವೆ. ಇದು ಮಂಡ್ಯದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಅಂತ್ಯಗೊಂಡಿರುವುದಕ್ಕೆ ಸ್ಪಷ್ಟ ಸೂಚನೆ. ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಸ್ವತಂತ್ರವಾಗಿ ಗಟ್ಟಿಯಾಗಿ ಕಟ್ಟುತ್ತೇವೆ” ಎಂದು ನಾರಾಯಣ ಗೌಡ ಘೋಷಿಸಿದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ವತಂತ್ರ ಹೋರಾಟ
ಬಿಜೆಪಿ ನಾಯಕ ಸಚ್ಚಿದಾನಂದ ಮಾತನಾಡಿ, ಮಂಡ್ಯ ಜಿಲ್ಲೆಯ ಎಲ್ಲಾ ಪ್ರಮುಖ ನಾಯಕರು ಸೇರಿ ರಾಜಕೀಯ ಸ್ಥಿತಿಗತಿಗಳ ಕುರಿತು ಚರ್ಚೆ ನಡೆಸಿದ್ದೇವೆ. ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಸ್ವತಂತ್ರವಾಗಿ ಎದುರಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
“ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಗೆಲ್ಲುವುದು ನಮ್ಮ ಪ್ರಮುಖ ಗುರಿ. ಸುಮಲತಾ ಅಂಬರೀಷ್ ಮತ್ತು ನಾರಾಯಣ ಗೌಡ ಅವರೊಂದಿಗೆ ಜಿಲ್ಲಾ ಪ್ರವಾಸ ಕೈಗೊಳ್ಳಲಾಗುತ್ತದೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಶಕ್ತಿ ಪ್ರದರ್ಶನವಿಲ್ಲದೆ ನಾಯಕತ್ವ ಸಾಧ್ಯವಿಲ್ಲ” ಎಂದು ಹೇಳಿದರು.
