ರುದ್ರು ಪುನೀತ್
ಪ್ರತೀ ಬಾರಿಯೂ ಬಾಬಾಸಾಹೇಬರ ಕುರಿತು ಓದುವಾಗ ನನಗನ್ನಿಸುವುದು ಅಷ್ಟೊಂದು ಅಗಾಧವಾದ ಜ್ಞಾನವನ್ನು ಅವರು ದಕ್ಕಿಸಿಕೊಂಡಿದ್ದಾದರೂ ಹೇಗೆ?
ನಿರಂತರ ಓದುವುದರಿಂದ, ಅಥವಾ ಹಗಲು ರಾತ್ರಿ ಓದುವುದರಿಂದ, ಅಥವಾ ವಿದೇಶದಲ್ಲಿ ಓದುವುದರಿಂದ ಇವುಗಳ ಕಾರಣಕ್ಕಷ್ಟೇ ಬಾಬಾ ಸಾಹೇಬರು ವಿಶ್ವಮಟ್ಟದ ಜ್ಞಾನಿಯಾಗಿ ಹೊರಹೊಮ್ಮಿದರೇ?
ಬಾಬಾಸಾಹೇಬರು ವಿಶ್ವಜ್ಞಾನಿ ಎಂದು ಕರೆಸಿಕೊಳ್ಳಲು ಅವರು ಪಟ್ಟ ಪರಿಶ್ರಮ, ಅವರ ಓದು, ಅವರ ದಿನನಿತ್ಯ ಬದುಕಿನಲ್ಲಿ ಅವರು ಅಳವಡಿಸಿಕೊಂಡ ಶಿಸ್ತು, ಅವರು ಯಾವುದನ್ನೆಲ್ಲ ಓದಲು ಬಯಸುತ್ತಿದ್ದರು ಎನ್ನುವುದನ್ನು ತಿಳಿಯಲು ಅವರ ದಿನಚರಿಯನ್ನು ನಾವು ಗಮನಿಸಬೇಕು. ಬಾಬಾ ಸಾಹೇಬರ ಜೊತೆಯಲ್ಲಿಯೇ ಇದ್ದು ಹತ್ತಾರು ವರ್ಷಗಳು ಕಳೆದ ದೇವಿದಯಾಳ್ ಅವರು ಬರೆದಿರುವ ಅಂಬೇಡ್ಕರ್ ಡೈರಿ ಪುಸ್ತಕವನ್ನು ಕನ್ನಡಕ್ಕೆ “ಅಂಬೇಡ್ಕರ್ ದಿನಚರಿ” ಎನ್ನುವ ಶೀರ್ಷಿಕೆಯೊಂದಿಗೆ ಸಹಾಯಕ ಉಪನ್ಯಾಸಕರು ಮತ್ತು ಅಂಬೇಡ್ಕರ್ ವಾದಿ ಲೇಖಕರಾದ ಪಿ.ಆರಡಿಮಲ್ಲಯ್ಯ ಕಟ್ಟೇರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.. ಬಾಬಾಸಾಹೇಬರ ದಿನಚರಿಯನ್ನು ಅವರು ದಾಖಲಿಸಿರುವ ರೀತಿ ಇದೆಯಲ್ಲ ಅದು ನಿಜಕ್ಕೂ ಓದುಗರಿಗೆ ಬಾಬಾಸಾಹೇಬರ ಬಗ್ಗೆ ಹೊಸ ಹೊಳವುಗಳನ್ನು ನೀಡುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಅರ್ಥವಾಗುವ ಹಾಗೆ ಸರಳ ಕನ್ನಡದಲ್ಲಿ ಅನುವಾದಿಸಿದ್ದಾರೆ. ಬಾಬಾಸಾಹೇಬರ ಅನೇಕ ಪುಸ್ತಕಗಳನ್ನು ನಾನು ಓದಿದ್ದೇನೆ. ಆದರೆ ಅಂಬೇಡ್ಕರ್ ದಿನಚರಿ ಸಾಹೇಬರೊಂದಿಗೆ ಜರ್ನಿ ಮಾಡುವ ಅನುಭವ ನೀಡುತ್ತದೆ.
ಶೋಷಿತ ದಮನಿತ ಧ್ವನಿ ಇಲ್ಲದ ನನ್ನ ಸಮುದಾಯಕ್ಕೆ ನಾನು ನ್ಯಾಯ ದೊರಕಿಸಿಕೊಡಲು ನಿತ್ಯ ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದು ಬಾಬಾ ಸಾಹೇಬರು ಹಾತೊರೆಯುತ್ತಾರೆ. ಬಾಬಾ ಸಾಹೇಬರು ಸಮಯಕ್ಕೆ ತುಂಬಾ ಪ್ರಾಮುಖ್ಯತೆ ನೀಡುತ್ತಿದ್ದರು. ಅವರು ಶಿಸ್ತಿನ ಸಿಪಾಯಿಯಾಗಿದ್ದರು. ಅವರು ತಮ್ಮ ವೈಯಕ್ತಿಕ ಬದುಕಿಗಿಂತ ಹೆಚ್ಚಾಗಿ ತನ್ನ ಸಮುದಾಯದ ಬಗ್ಗೆ ಹೆಚ್ಚು ಚಿಂತಿತರಾಗಿದ್ದರು. ನನ್ನ ಸಮುದಾಯದ ಅಬ್ಯುದಯಕ್ಕಾಗಿ ನಾನು ಮತ್ತಷ್ಟು ಹೆಚ್ಚು ದಿನಗಳು ಬದುಕಬೇಕೆಂದು ಬಯಸಿದ್ದರು. ಬಾಬಾ ಸಾಹೇಬರು ನೇರ ನಿಷ್ಟುರವಾದಿಯಾಗಿದ್ದರು. ಬಾಬಾ ತಮ್ಮ ಆಳವಾದ ಜ್ಞಾನದಿಂದಲೇ ಎದುರಾಳಿಗಳಲ್ಲಿ ಭಯ ಹುಟ್ಟಿಸುವಂತಿದ್ದರು. ಬಾಬಾ ಸಾಹೇಬರ ಬಗ್ಗೆ ಎಲ್ಲೂ ದಾಖಲಾಗದ ಇಂತಹ ಅನೇಕ ವಿಷಯಗಳನ್ನು ಈ ಅಂಬೇಡ್ಕರ್ ಡೈರಿ ತೆರೆದಿಡುತ್ತದೆ. ಈ ಪುಸ್ತಕವು ಖಂಡಿತ ನಿಮಗೆ ಬಾಬಾ ಸಾಹೇಬರನ್ನು ಮತ್ತಷ್ಟು ಓದಲು ಪ್ರಚೋದಿಸಿತ್ತದೆ.
ಇದನ್ನು ಹೇಳಲೇಬೇಕು: ನಿರಂತರ ಓದು, ಅಥವಾ ಹತ್ತಾರು ಡಿಗ್ರಿಗಳು, ವಿದೇಶದಲ್ಲಿ ಪಡೆದ ಶಿಕ್ಷಣ ಇವುಗಳಿಂದ ಮಾತ್ರ ಜ್ಞಾನಿಗಳು ಎನ್ನಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ನನ್ನ ಅನೇಕ ಸ್ನೇಹಿತರು ಅನೇಕ ಡಿಗ್ರಿಗಳನ್ನು ಪಡೆದುಕೊಂಡು ಕನಿಷ್ಠ ಎಂಟತ್ತು ವರ್ಷಗಳ ಕಾಲ UPSC ಗೆ ಪ್ರಿಪೇರ್ ಆದವರು ಇದ್ದಾರೆ. UPSC ಪ್ರಿಪೇರ್ ಆಗುವುದೆಂದರೆ ವರ್ಲ್ಡ್ ಹಿಸ್ಟರಿ, ವರ್ಲ್ಡ್ ಜಿಯಾಗ್ರಫಿ, ಎನ್ವಿರಾನ್ಮೆಂಟ್, ವಿಜ್ಞಾನ, ಸೋಷಿಯಾಲಾಜಿ, ಲಿಟರೇಚರ್, ಎತಿಕ್ಸ್ ಇವುಗಳೆಲ್ಲವನ್ನು ಓದುತ್ತಾರೆ ಆದರೂ ಪ್ರಿಪೇರ್ ಆಗುವವರನ್ನು ಬಿಟ್ಟಾಕಿ ಈಗಾಗಲೇ IAS ಕ್ಲಿಯರ್ ಮಾಡಿಕೊಂಡು ಉನ್ನತ ಹುದ್ದೆಯಲ್ಲಿರುವ ಪರಿಚಯದ ಅಧಿಕಾರಿಯೊಬ್ಬ ತೀರಾ ಇತ್ತೀಚೆಗೆ ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ಸುಪ್ರೀಂಕೋರ್ಟ್ ಕೊಟ್ಟ ತೀರ್ಪು ನಮ್ಮ ದೇಶದ ಧರ್ಮ ಮತ್ತು ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ನನ್ನ ಬಳಿ ಹೇಳಿದ್ದನ್ನು ಕೇಳಿ ನಾನು ದಂಗಾಗಿದ್ದೆ. ಅಷ್ಟೇ ಏಕೆ ಈ ದೇಶದ ಉನ್ನತ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಪರಿಚಯದವರು ಕೂಡ ಬೆಳಗ್ಗೆ ಪೂಜೆ ಮಾಡದೆಯೇ ಆಫೀಸಿಗೆ ಹೋಗೋದಿಲ್ಲ..
ಬಾಬಾಸಾಹೇಬರು ಈ ಜಗತ್ತಿನಲ್ಲಿಯೇ ಅತೀ ಹೆಚ್ಚು ಡಿಗ್ರಿಗಳನ್ನು ಹೊಂದಿದವರು ಎನ್ನುವ ಖ್ಯಾತಿ ಪಡೆದಿದ್ದಾರೆ. ಅವರ ಬಳಿ ಜಗತ್ತಿನ ಅತೀ ದೊಡ್ಡ ವೈಯಕ್ತಿಕ ಲೈಬ್ರರಿ ಇತ್ತು. ಅವರ ಜನ್ಮದಿನವನ್ನು ವಿಶ್ವಸಂಸ್ಥೆಯು ವಿಶ್ವ ಜ್ಞಾನಿಗಳ ದಿನವೆಂದು ಘೋಷಿಸಿದೆ. ಬಾಬಾ ಸಾಹೇಬರು ವಿಶ್ವ ಜ್ಞಾನಿಯಾಗಲು ಖಂಡಿತ ನಿರಂತರ ಓದಿನಿಂದ ಸಾಧ್ಯವಾಯಿತು ಆದರೆ ಆ ಓದಿನ ಹಿಂದೆ ಒಂದು ಸ್ಪಷ್ಟವಾದ ದ್ಯೇಯವಿತ್ತು. ಆ ಕಾರಣಕ್ಕೆ ಅವರು ಈ ದೇಶದ ನೈಜ ಇತಿಹಾಸವನ್ನು ತಿಳಿಯಬಯಸಿದರು. ಸಾವಿರಾರು ವರ್ಷಗಳ ಯಾಕೆ ಈ ದೇಶದ SC/ST/OBC/ಅಲ್ಪಸಂಖ್ಯಾತ ರಾದ ಬಹುಜನರಿಗೆ ಶಿಕ್ಷಣ ಇರಲಿಲ್ಲ. ಯಾಕೆ ಅವರಿಗೆ ಭೂಮಿ ಇರಲಿಲ್ಲ, ಯಾಕೆ ಅವರು ಗುಲಾಮರಾಗಿದ್ದರು, ವರ್ಣ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು ಯಾರು. ಯಾಕೆ ಬ್ರಾಹ್ಮಣರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ತಮ್ಮ ವಸಾಹತು ಸ್ಥಾಪಿಸಿದ್ದಾರೆ ಇವುಗಳ ಅಧ್ಯಯನದಲ್ಲಿ ತೊಡಗಿಕೊಂಡರು. ಇತಿಹಾಸವನ್ನು ಹೆಕ್ಕಿ ಹೆಕ್ಕಿ ಹೊರತೆಗೆದರು. ದಾಖಲೆಗಳನ್ನು ಕ್ರೂಡಿಕರಿಸಿದರು,
ಅಸಮಾನತೆಯ ಬಗ್ಗೆ, ಜಾತಿ ವ್ಯವಸ್ಥೆಯ ಬಗ್ಗೆ, ಶ್ರೇಣೀಕೃತ ವ್ಯವಸ್ಥೆಯ ಬಗ್ಗೆ ದಾಖಲಿಸಿದರು, ದೇವರು ದೆವ್ವ ಎನ್ನುವ ಕಾಲ್ಪನಿಕ ಕಥೆಗಳ ಮೂಲಕ ಹೇಗೆ ಈ ದೇಶದ ಬಡವರನ್ನು ಮಂತ್ರಮುಗ್ದರನ್ನಾಗಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎನ್ನುವುದರ ಬಗ್ಗೆಯೂ ಬರೆದರು. ಹೆಣ್ಣಿನ ಮೇಲಾಗುತ್ತಿದ್ದ ಮೇಲಾಗುತ್ತಿದ್ದ ಶೋಷಣೆ ದಬ್ಬಾಳಿಕೆಯ ಬಗ್ಗೆ ಬರೆದರು. ಇಷ್ಟೆಲ್ಲ ಓದು ಬರಹ ಸಂಶೋಧನೆಯ ಕಾರಣಕ್ಕೆ ಬಾಬಾ ಸಾಹೇಬರು ವಿಶ್ವಜ್ಞಾನಿಯಾದ್ರು. ಈ ದೇಶದ ಸಂವಿಧಾನ ಬರೆಯುವ ಮಟ್ಟಕ್ಕೆ ಬೆಳೆದರು. ಆ ಮೂಲಕ ಸಾವಿರಾರು ವರ್ಷಗಳ ಕಾಲ ಗುಲಾಮರಾಗಿದ್ದ ಈ ದೇಶದ ಮೂಲನಿವಾಸಿ SC/ST/OBC/RM ಮತ್ತು ಮಹಿಳೆಯರಿಗೆ ಶಿಕ್ಷಣ, ಭೂಮಿ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ, ಆಡಳಿತದಲ್ಲಿ ಅಧಿಕಾರವನ್ನು ನೀಡಲು ಸಾಧ್ಯವಾಯಿತು.
ಕೇವಲ ಶಿಕ್ಷಿತರಾದರೆ ಸಾಲದು ವೈಚಾರಿಕ, ವೈಜ್ಞಾನಿಕ, ಬೌದ್ಧಿಕ ಜ್ಞಾನವನ್ನು ಪಡೆದಾಗ ಮಾತ್ರ ನಾವುಗಳು ನಾಗರೀಕರಾಗಲು ಸಾಧ್ಯ.
ಅಂಬೇಡ್ಕರ್ ಡೈರಿಯನ್ನು ಕನ್ನಡಕ್ಕೆ ಅನುವಾದಿಸಿ ಬಾಬಾಸಾಹೇಬರ ಬಗ್ಗೆ ನಮಗೆ ಗೊತ್ತಿಲ್ಲದ ಅನೇಕ ಸೂಕ್ಷ್ಮ ವಿಷಯಗಳನ್ನು ಅಂಬೇಡ್ಕರ್ ದಿನಚರಿಯ ಮೂಲಕ ಕರ್ನಾಟಕದ ಜನತೆಗೆ ತಲುಪಿಸಿದ್ದಕ್ಕಾಗಿ ನಿಮಗೆ ಕೋಟಿ ಕೋಟಿ ವಂದನೆಗಳು.