ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ದಶಮಾನೋತ್ಸವ ವಿಶೇಷ ಸರಣಿಯ `ನಮ್ಮ ಅಕ್ಕ ನಮ್ಮ ಹಿರಿಮೆʼ ಮಾಲಿಕೆಯ ಮೂರನೇ ಕಂತಿನಲ್ಲಿ ಸಂಶೋಧಕರೂ ಹೋರಾಟಗಾರರೂ ಆಗಿರುವ ಮೀನಾಕ್ಷಿ ಬಾಳಿ ಅವರು ಬೀದರ ಜಿಲ್ಲೆಯ ಹುಮನಾಬಾದದ ಅಂಬುಬಾಯಿ ಮಾಳಗೆ ಅವರ ಕುರಿತು ಬರೆದಿದ್ದಾರೆ. ಓದಿ.
ಅಭಿವೃದ್ಧಿಯ ಅಂಕದಲ್ಲಿ ರಾಜಕೀಯವಾಗಿ ಹಿಂದುಳಿದಿರುವ ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನಲ್ಲಿರುವ ಹಳ್ಳಿ ಚಿಟಗುಪ್ಪಾ. (ಈಗ ಇದು ತಾಲೂಕು ಕೇಂದ್ರ). ಅಲ್ಲಿಯ ಸಮಗಾರ ಮನೆತನದಲ್ಲಿ ಜನಿಸಿದ ಅಂಬುಬಾಯಿ ಅಕ್ಷರಶಃ ಬಡತನವನ್ನೇ ಹಾಸುಂಡವರು. ಸ್ಥಳೀಯ ಸಂಪ್ರದಾಯದಂತೆ ಎಳೆಯ ವಯಸ್ಸಿನಲ್ಲಿ ಮದುವೆಯಾದರು. ಗಂಡನ ಚಪ್ಪಲಿ ಹೊಲಿಯುವ ಕಾಯಕದೊಂದಿಗೆ ಕೈ ಜೋಡಿಸಿದರು. ವಯಸ್ಸು 20 ತುಂಬುವಷ್ಟರಲ್ಲಿ 7 ಮಕ್ಕಳನ್ನು ಹಡೆದರೂ ಉಳಿದವರು ಮೂವರು ಮಾತ್ರ. ಬಾಣಂತಿ ಇರುವಾಗಲೇ ಕೂಲಿಗೆ ಹೋಗಬೇಕಾದ ದರ್ದು. ಕೂಲಿ ಮಾಡದಿದ್ದರೆ ಹೊಟ್ಟೆ ತುಂಬುವಂತೆ ಇರಲಿಲ್ಲ. ಚಪ್ಪಲಿ ಹೊಲಿಯುವ ಕಾಯಕದಲ್ಲಿ ಮನೆ ಮಂದಿಯ ಹೊಟ್ಟೆ ತುಂಬದ ಕಾರಣ ಕೃಷಿ ಕೂಲಿ ಮಾಡುವುದು ಅನಿವಾರ್ಯವಾಗಿತ್ತು. ಮನೆಗೆ ಬಂದ ನಂತರ ಚಪ್ಪಲಿ ಹೊಲಿಯುವ ಕಾಯಕವನ್ನು ರಾತ್ರಿ ಸರುಹೊತ್ತಿನವರೆಗೆ ಮಾಡಲೇಬೇಕಿತ್ತು.
ಹೊಲಕ್ಕೆ ಕೂಲಿಗೆ ಹೋದಾಗ ಕೂಲಿಹಣ ಕೊಡುವಲ್ಲಿ ಇರುವ ಲಿಂಗತಾರತಮ್ಯ ಅವರನ್ನು ಸೆಟೆದು ನಿಲ್ಲುವಂತೆ ಮಾಡಿ ಹೋರಾಟದ ಅಂಗಳಕ್ಕೆ ತಂದಿತು. ತಮ್ಮ ಓಣಿಯಲ್ಲಿರುವ ನೂರಾರು ಕುಟುಂಬಗಳ ಬಡತನವೇ ಅವರನ್ನು ಬಗ್ಗದ ಹೋರಾಟಗಾರ್ತಿಯಾಗಿ ರೂಪಿಸಿತು. ಮುನ್ಸಿಪಾಲ್ಟಿಯಲ್ಲಿ ಬಡವರಿಗೆ ಏನಾದರೂ ಸೌಲಭ್ಯಗಳಿವೆಯೇ ಎಂದು ಹುಡುಕುತ್ತ ಹೋದಾಗ ಸಾಂಘಿಕ ಹೋರಾಟ ಮಾಡದೇ ಯಾವ ಸೌಲಭ್ಯಗಳೂ ದಕ್ಕವು ಎಂಬುದು ಖಾತ್ರಿಯಾಗಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸೇರಿದರು. ಅಲ್ಲಿಂದ ಅಂಬುಬಾಯಿ ತಿರುಗಿ ನೋಡಿದ್ದೇ ಇಲ್ಲ. ಪಂಚಾಯತ್ ಮುಂದೆ ಧರಣಿ ಮಾಡಿ ತಮ್ಮ ಓಣಿಗೆ ಬೇಕಾದ ನೀರು, ರಸ್ತೆ ಮಾಡಿಸಿಕೊಂಡರು. ಉಳಿದ ಬಡಾವಣೆಯವರು ಅಂಬುಬಾಯಿಯವರನ್ನು ಸಂಪರ್ಕಿಸತೊಡಗಿದರು. ನಂತರ ಊರಿನೆಲ್ಲ ಬಡವರನ್ನು ಸೇರಿಸಿ ದೊಡ್ಡಮಟ್ಟದ ಹೋರಾಟಗಳನ್ನು ರೂಪಿಸಿ ಮನರೇಗಾದಡಿಯಲ್ಲಿ ಕೃಷಿ ಕೂಲಿಕಾರರಿಗೆ ಕೆಲಸ ಕೊಡಿಸುವಲ್ಲಿ ನಿರತರಾದರು. ಕ್ರಮೇಣ ಇಡೀ ಜಿಲ್ಲೆಗೆ ವಿಸ್ತರಿಸಿಕೊಂಡ ಅವರ ಹೋರಾಟ ಮನೆ ಮಾತಾಯಿತು. ಕೆಲಸ ಕೊಡಿಸಲು ಧರಣಿ, ಮಾಡಿದ ಕೆಲಸಕ್ಕೆ ಕೂಲಿ ಕೊಡಿಸಲು ಧರಣಿ ಹೀಗೆ ಸರಣಿ ಹೋರಾಟಗಳನ್ನು ರೂಪಿಸುತ್ತ ಪೂರ್ಣ ಪ್ರಮಾಣದ ನಾಯಕಿಯಾಗಿ ಅರಳಿದರು. 2008ರಿಂದ 2022ರ ಡಿಸೆಂಬರಿನವರೆಗೆ ಅವರು ಮನರೇಗಾ ಕೆಲಸಕ್ಕಾಗಿ ಜಿಲ್ಲೆಯಾದ್ಯಂತ ನೂರಾರು ಹೋರಾಟಗಳನ್ನು ಸಂಘಟಿಸಿದ್ದಾರೆ.
- 2005ರಲ್ಲಿ ಹೆಣ್ಣು ಭ್ರೂಣಹತ್ಯೆ ನಿಷೇಧ ಅಭಿಯಾನದಲ್ಲಿ ಪಾಲ್ಗೊಂಡು ಬೀದರ ಜಿಲ್ಲೆಯಾದ್ಯಂತ ಜಾಥಾದ ಉಸ್ತುವಾರಿ ಮಾಡಿದರು.
- 2008ರಲ್ಲಿ ಮನರೇಗಾ ಕೆಲಸಕ್ಕಾಗಿ ದಿಲ್ಲಿ ಚಲೋದಲ್ಲಿ ಬೀದರನಿಂದ ನೂರಾರು ಮಹಿಳೆಯರನ್ನು ಕರೆದುಕೊಂಡು ಹೋಗಿ ಇತಿಹಾಸ ನಿರ್ಮಿಸಿದರು.
- 2007-08ರಲ್ಲಿ ಬೀದರ ಜಿಲ್ಲಾ ಪಂಚಾಯತ್ ಎದುರು ಉದ್ಯೋಗಕ್ಕಾಗಿ ಏಳು ದಿನ ಅಹೋರಾತ್ರಿ ಹೋರಾಟ ಅಣಿ ನೆರೆಸಿದರು. ಪ್ರತಿ ದಿವಸ ನೂರಾರು ಹಳ್ಳಿಗಳಿಂದ ಜನರು ಸಾಗರೋಪಾದಿಯಲ್ಲಿ ಹರಿದು ಬರತೊಡಗಿದರು. ಪೊಲೀಸ್ ಲಾಠಿಗಳಿಗೂ ಬಗ್ಗದಂತೆ ಜನರನ್ನು ಸೆಟೆದು ನಿಲ್ಲಿಸುವಲ್ಲಿ ಅಂಬುಬಾಯಿಯವರು ಯಶಸ್ವಿಯಾದರು. ಜನರ ಛಲವನ್ನು ಕಂಡು ಬೆಚ್ಚಿ ಬಿದ್ದ ಜಿಲ್ಲಾಡಳಿತ ರಾತೋ ರಾತ್ರಿ ಎಲ್ಲ ಪಿಡಿಓಗಳನ್ನು ಕರೆಸಿ ಸ್ಥಳದಲ್ಲಿಯೇ ವರ್ಕ್ ಆರ್ಡರ್ ಹಾಕಿಸಿ ಮರುದಿವಸಕ್ಕೆ ಬೇಡಿಕೆ ನೀಡಿದ ಎಲ್ಲರಿಗೂ ಕೆಲಸ ನೀಡುವುದು ಅನಿವಾರ್ಯವಾಯಿತು. ಇಲ್ಲಿಂದ ಅಂಬುಬಾಯಿ ಎಂದರೆ ಹೋರಾಟ; ಹೋರಾಟ ಎಂದರೆ ಅಂಬುಬಾಯಿ ಎಂದು ಗುರುತಿಸುವಂತಾಯಿತು.
- 2011ರಲ್ಲಿ ಮಾಡಿದ ಕೆಲಸಕ್ಕೆ ಕೂಲಿ ಕೊಡಲು ಸತಾಯಿಸಿದಾಗ ಹುಮನಾಬಾದ ತಾಲೂಕು ಪಂಚಾಯತ ಎದುರು ಅಹೋರಾತ್ರಿ ಧರಣಿ ನಡೆಸಿ, ಅಲ್ಲಿಯೇ ಒಲೆ ಹಚ್ಚಿ ಅನ್ನ ಬೇಯಿಸಿ ಹಾಕಿದರು. ಬೆಳ್ಳಂಬೆಳಗಿನವರೆಗೂ ಜನರು ಕಣ್ಣಿಗೆ ಕಣ್ಣು ಹಚ್ಚದೆ ಹಾಡುತ್ತ, ಘೋಷಣೆ ಹಾಕುತ್ತ ಪಟ್ಟಾಗಿ ಕುಳಿತಾಗ ಗಾಬರಿ ಬಿದ್ದು ಮರುದಿನ ರಾತ್ರಿ 11.00 ಗಂಟೆಗೆ ಹೋರಾಟದ ಅಂಗಳಕ್ಕೆ ಕಚೇರಿ ತಂದು ಕಾಯಕ ಜೀವಿಗಳಿಗೆ ಚೆಕ್ ವಿತರಿಸಬೇಕಾಯ್ತು.
- 2017-18ರಲ್ಲಿ ಬೀದರಿನ ಅಂಗನವಾಡಿ ಮಹಿಳೆಯೊಬ್ಬಳ ಮೇಲಾದ ಅತ್ಯಾಚಾರವನ್ನು ಖಂಡಿಸಿ ಬೃಹತ್ ಹೋರಾಟ ಅಣಿ ನೆರೆಸಿದರು. ಅಪರಾಧಿಗಳಿಗೆ ಶಿಕ್ಷೆ ಮಾಡಿಸಿದರು. ನೊಂದ ಮಹಿಳೆಗೆ ಪರಿಹಾರ ದೊರಕಿಸಿದರು.
- 2019-20ರಲ್ಲಿ ದೇಶದಲ್ಲಿ ಸಿಎಎ, ಎನ್‍ಆರ್ ಸಿ ದಾಳಿ ನಡೆದಾಗ ಅಂಬುಬಾಯಿ ಜಿಲ್ಲೆಯಲ್ಲಿ ನಡೆದ ಮುಸ್ಲಿಂ ಮಹಿಳೆಯರ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲೆಯಲ್ಲಿ ವರದಕ್ಷಿಣೆ ಪೀಡಿತ ಸಾವುಗಳು ವರದಿಯಾಗುತ್ತಿರುವುದನ್ನು ಕಂಡು ಜನವಾದಿ ಮಹಿಳಾ ಸಂಘಟನೆ ಸಿಡಿದೆದ್ದಿತು. ತಕ್ಷಣವೇ ಅಂಬುಬಾಯಿ ಮುಖಂಡರೊಂದಿಗೆ ಚರ್ಚಿಸಿ ಜಿಲ್ಲೆಯಾದ್ಯಂತ ವರದಕ್ಷಿಣೆ ವಿರೋಧಿ ಅಭಿಯಾನ ಸುರುವಿಟ್ಟುಕೊಂಡರು. ಸತತ ಹತ್ತು ದಿನಗಳವರೆಗೆ ಜಿಲ್ಲೆಯ ಹಲವು ಶಾಲಾ, ಕಾಲೇಜು, ಬಡಾವಣೆಗಳಲ್ಲಿ ಅಭಿಯಾನ ನಡೆಸಿ ಕರಪತ್ರ ವಿತರಣೆ, ಉಪನ್ಯಾಸ, ಹಾಡು, ಬೀದಿನಾಟಕಗಳನ್ನು ಪ್ರದರ್ಶಿಸಿ ಸಂಚಲನ ಮೂಡಿಸಿದರು.
ಬೀದರ ಜಿಲ್ಲೆ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಯಾವತ್ತೂ ಹೆಸರುವಾಸಿ. ನಿಜಾಂ ಶಾಹಿ ಆಡಳಿತದ ಪಡಿನೆಳಲು, ಮೊಘಲಾಯಿ ಬದುಕಿನ ಶೈಲಿ ಜಿಲ್ಲೆಯ ಅಳಿಸಲಾಗದ ಚಹರೆ. ಇಂಥ ನಾಡಿನಲ್ಲಿ ಕೋಮುವಾದಿಗಳ ಉಪಟಳ ಪ್ರಾರಂಭವಾಯಿತು. ತಕ್ಷಣವೇ ಜಾಗೃತರಾದ ಪ್ರಗತಿಪರರು ಕೋಮುವಾದಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುವ ಎಲ್ಲ ಪ್ರಯತ್ನಗಳನ್ನು ಮಾಡತೊಡಗಿದರು. ಅಂಬುಬಾಯಿ ಈ ಕ್ರಿಯೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಸೌಹಾರ್ದ ರಂಜಾನ್, ದೀಪಾವಳಿ, ಯುಗಾದಿ, ಕ್ರಿಸ್‍ಮಸ್ ಹಬ್ಬಗಳು ಹಾಗೂ ಇಫ್ತಿಯಾರ್ ಕೂಟ ಆಚರಿಸುತ್ತ ಬರುತ್ತಿದ್ದಾರೆ.
ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್-ಆಜಾನ್-ಹಲಾಲ್ ಕಟ್ ವಿವಾದ, ಮುಸ್ಲಿಂ ವ್ಯಾಪಾರಿಗಳ ಮೇಲೆ ನಿರ್ಬಂಧ, ಲವ್ ಜಿಹಾದ್, ಮರ್ಯಾದೆಗೇಡು ಹತ್ಯೆ, ಅದರೊಟ್ಟಿಗೆ ಮೂಲಭೂತವಾದಿಗಳ ಉಪಟಳ ಮುಂತಾದ ಎಲ್ಲ ಸೂಕ್ಷ್ಮ ವಿಷಯಗಳ ಬಗೆಗೂ ಅಂಬುಬಾಯಿ ದನಿಯೆತ್ತಿದ್ದಾರೆ.
ಸ್ವಸಹಾಯ ಸಂಘ, ಸ್ತ್ರೀಶಕ್ತಿ ಸಂಘದ ಮಹಿಳೆಯರನ್ನು ಸೇರಿಸಿಕೊಂಡು ಹೋರಾಟ ಮಾಡುವ ಮೂಲಕ ಅವರಿಗೆ ಬರಬೇಕಾದ ಸುತ್ತುನಿಧಿ, ಸಬ್ಸಿಡಿಯನ್ನು ಕೊಡಿಸಿದ್ದಾರೆ.
ಹುಮನಾಬಾದ ತಾಲೂಕಿನ ಬೇನಚಿಂಚೋಳಿಯಲ್ಲಿ ಭಾನಾಮತಿ ಮಾಡಿಸುತ್ತಾಳೆ ಎಂಬ ಆರೋಪದಲ್ಲಿ ಮಹಿಳೆಯೊಬ್ಬಳ ಸಜೀವ ದಹನ ಮಾಡಲಾಗಿತ್ತು. ಗಮನಕ್ಕೆ ಬಂದದ್ದೆ ತಡ, ಅಂಬುಬಾಯಿ ಬೇವಿನ ಚಿಂಚೋಳಿಗೆ ಧಾವಿಸಿ ಹೋರಾಟ ರೂಪಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಿದ್ದಾರೆ.
ಚಿಟಗುಪ್ಪಾದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ, ಅವ್ಯವಸ್ಥೆಗಳನ್ನು ಖಂಡಿಸಿ, ಧರಣಿ ಕೈಕೊಂಡು, ಅಲ್ಲಿನ ವ್ಯವಸ್ಥೆ ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೀಗೆ ನಿರಂತರ ಸಂಘಟನೆ, ಜಾಗೃತಿ, ಹೋರಾಟದಲ್ಲಿ ತೊಡಗಿರುವ ಅಂಬುಬಾಯಿ ಅವರಿಗೆ ಎಚ್ಚರದ ಕಣ್ಣೋಟವೊಂದು ಇದೆ. ಜನರ ನೋವು, ಸಂಕಟಗಳೇ ತಮ್ಮನ್ನು ಹೋರಾಟಗಾರ್ತಿಯಾಗಿ ರೂಪಿಸಿವೆ ಎಂಬ ವಿನಯವಂತಿಕೆಯಿದೆ. ಎಲ್ಲರಿಗೂ ಎಲ್ಲ ಕಾಲಕ್ಕೂ ಸ್ಫೂರ್ತಿ ನೀಡುವ ಬಾಳು ನಡೆಸುತ್ತಿರುವ ಕಲಬುರಗಿ-ಬೀದರ ಜಿಲ್ಲೆಗಳ ಕೆಚ್ಚೆದೆಯ ಈ ಹೋರಾಟಗಾರ್ತಿ ನಮ್ಮ ಅಕ್ಕ, ನಮ್ಮ ಹಿರಿಮೆಯಾಗಿದ್ದಾರೆ.
ಮೀನಾಕ್ಷಿ ಬಾಳಿ
ಸಂಶೋಧಕರು, ಲೇಖಕರು, ಹೋರಾಟಗಾರರು.