Home ಜನ-ಗಣ-ಮನ ಹೆಣ್ಣೋಟ “ನಿನ್ನ ಋಣ ಹೆಂಗ್ ತೀರುಸ್ಲಿ ಗಂಗೂ…”

“ನಿನ್ನ ಋಣ ಹೆಂಗ್ ತೀರುಸ್ಲಿ ಗಂಗೂ…”

0

(ಈ ವರೆಗೆ…)

ಸೋಪಾನಪೇಟೆಯ ವೈದ್ಯರಿಗೆ ಲಕ್ಷ್ಮಿಯ ಕಾಯಿಲೆಯ ಗುಟ್ಟನ್ನು ಕಂಡು ಹಿಡಿಯಲಾಗಲಿಲ್ಲ. ಇದು ಆಸ್ಪತ್ರೆಯಲ್ಲಿ ಗುಣವಾಗುವ ಕಾಯಿಲೆ ಅಲ್ಲವೆಂದು ಅಕೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಹೊತ್ತಲ್ಲಿ ಅವಳ ಅಣ್ಣಂದಿರು, ಗಂಗೆಯೊಂದಿಗೆ ಬುತ್ತಿಗಂಟು ಹಿಡಿದು ತಲಪುತ್ತಾರೆ. ಅಣ್ಣಂದಿರ ಪ್ರೀತಿ ಕಂಡು ಅವರು ತನಗೆ ಕೊಟ್ಟ ಕಷ್ಟಕೋಟಲೆಗಳನ್ನು ಮನದಿಂದ ಎಸೆದು ಬಿಡುತ್ತಾಳೆ. ಗಂಗೆಯೊಂದಿಗೆ ಏಕಾಂತದಲ್ಲಿ ಮಾತಾಡಲು ಬಯಸುತ್ತಾಳೆ. ಲಕ್ಷ್ಮಿ ಗಂಗೆಯೊಡನೆ ಏನು ಮಾತಾಡಿದಳು? ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆಯ ೧೧ನೇ ಕಂತು ಓದಿ. 

ಗಂಗೆಯ ಕೈ ತೆಗೆದು ಕೊಂಡು ಮುತ್ತಿಕ್ಕಿದ ಲಕ್ಷ್ಮಿ, “ಗಂಗೂ, ಚಂದ್ರಣ್ಣಯ್ಯ ಗಿರಿ ಇಬ್ರು ನನ್ನ ಸೇವೆ ಮಾಡಿ ಋಣ ತೀರುಸ್ಕೊಂಬುಟ್ರು. ಆದ್ರೆ  ನಿನ್ನ ಋಣ ನಾನು ಹೆಂಗ್ ತಿರುಸ್ಲಿ ಮಗ” ಎಂದು ಹಿಡಿದಿದ್ದ ಗಂಗೆಯ ಕೈಯನ್ನು ಕಣ್ಣಿಗೊತ್ತಿಕೊಂಡಳು. ಗಂಗೆ ಅಳು ಮೋರೆ ಹಾಕಿಕೊಂಡು “ಹಿಂಗೆಲ್ಲ ನನ್ನ ಹಂಗುಸ್ ಬ್ಯಾಡ  ಅಕ್ಕಯ್ಯ.  ನನ್ನಿಂದ್ಲೆಯ  ನೀನು ಇವತ್ತು ಹಿಂಗ್ ಮಲಗಿರದು ಅನ್ನದು ನನಗೊತ್ತು ಕನೆ. ಅವತ್ತು ನಾನು ಹಠ ಮಾಡಿ ಅವ್ವುಂತವ ಹೊಡ್ಸ್ದೆ ಇದ್ದಿದ್ರೆ ನಿಂಗೆ ಇಂಗಾಯ್ತಿರ್ಲಿಲ್ಲ ಅಲ್ವ” ಎಂದು ಬಿಕ್ಕಿದಳು. ಲಕ್ಷ್ಮಿ ಗಂಗೆಯ ಕಣ್ಣೊರೆಸುತ್ತಾ ” ಅಯ್ಯೋ ಮೂಢೆ  ನನಗೆ ಹಿಂಗಾಗ್ಬೇಕು ಅಂತ ಹಣೆಲಿ ಬರ್ದಿದ್ರೆ ಯಾರಾನ ತಪ್ಸಕಾದದ ಗಂಗೂ. ಅವ್ವ ಹೊಡ್ದಿದ್ದು ಒಂದು ನೆವ ಅಷ್ಟೇಯಾ ಬುಡು. ನಾನು ಈಗ ಅದುನ್ನಲ್ಲ ನಿಂತವ ಮಾತಾಡ್ಬೇಕು ಅಂತಿರದು. ಇಲ್ಲಿ ಕೇಳು ಗಂಗೂ, ನನಗೆ ಬುದ್ಧಿ ಬಂದ ತಟಿಂದ ಒಂದು ದೊಡ್ಡ ಆಸೆ ಏನು ಗೊತ್ತಾ ಮಗ, ಹೆತ್ತ ಮಕ್ಕ್ಳುಗಿಂತ ಒಂದು ಮುಷ್ಟಿ ಮುಂದಾಗಿ ಪಿರುತಿ ತೋರಿ ಬೆಳ್ಸ್ದ ಅಪ್ಪ ಅವ್ವನ್ನ, ನನ್ನ ಜೀವ ಇರೋ ತನ್ಕಾವ  ಒಂದು ಸಣ್ಣ ನೋವು ಆಗ್ದಂಗೆ ನೋಡ್ಕೊ ಬೇಕು  ಅನ್ನದು. ಇಲ್ಲಿ ಗಂಟ ಹಂಗೆ ನಡ್ಕೊಂಡು ಬಂದೆ. ಆದ್ರೆ ಈಗ ಒಂದೆರಡು ತಿಂಗಳಿಂದ, ನೀನೆಲ್ಲಿ ನನ್ನ ಹೆತ್ತವ್ವ ಮನೆಗೆ ಬಂದೋದ ಸುದ್ದಿನ ಅವ್ವುಂತವ ಹೇಳ್ಬುಡ್ತಿಯೋ, ನಾನು ಅವಳುನ್ನ ಊಟಕಿಕ್ಕಿ ಉಪಚಾರಮಾಡಿ ಕಳುಸ್ದೆ ಅನ್ನದುನ್ನ ಕೇಳಿ ಅವ್ವ ಎಲ್ಲಿ ಕಣ್ಣೀರ್ ಹಾಕ್ಬುಡ್ತಾಳೋ  ಅಂತ ಬಾಳ ಹೆದ್ರಿದ್ದೆ ಗಂಗು. ನಿಜವಾಗ್ಲು ಮಗ, ನನ್ನ ತನ್ನ ಜೀವದಂಗೆ ಸಾಕ್ತಿರೊ ಅವ್ವುಂಗೆ  ಈ ಸುದ್ದಿಗೊತ್ತಾದ್ರೆ ಅವಳು ಸೈಸ್ತಳ ಹೇಳು. ನಾನವತ್ತು “ಯಾರಹತ್ರನು ಬಾಯ್ಬುಡ್ಬೇಡ” ಅಂದ ಒಂದು ಮಾತ್ನ ಇಲ್ಲಿಗಂಟ ಕಾಯ್ಕೊಂಡು ಬಂದ್ ಬುಟ್ಟಲ್ಲ ಮಗ. ನನ್ನ ಜೊತೆ ಜಗ್ಳಕ್ಕೆ ಬಿದ್ದಾಗಲು ತುಟಿಕ್ ಪಿಟಿಕ್ ಅಂದಿಲ್ವಲ್ಲ.. ಈ ಋಣನ ನಾನು ಹೆಂಗ್ ತಿರುಸ್ಲಿ ನೀನೆ ಹೇಳು” ಎಂದು ಗಂಗೆಯ ಕೆನ್ನೆ ಸವರಿದಳು. ಗಂಗೆ ಅಕ್ಕನ ಕೈ ಕೊಸರುತ್ತಾ ” ಅವ್ವುನ್ ಮೇಲೆ ಇಷ್ಟೊಂದು ಪ್ರೀತಿ ಇರೋಳು ಯಾಕೆ ಮತ್ತೆ ನಿಮ್ಮವ್ವನ್ತವ “ನನ್ನ ಯಾಕ್ ಕೊಟ್ಟು ಹೋದವ್ವ.  ಇವತ್ತು ನಿನ್ನ ಜೊತೆಗಿದ್ದಿದ್ರೆ ಕೂಲಿನೋ ನಾಲಿನೋ ಮಾಡಿ ನಿನ್ನ ಸಾಕ್ತಿರ್ಲಿಲ್ವ” ಅಂತ ಅಳ್ತಿದ್ದೆ ಮತ್ತೆ. ನೀನು ಹಂಗ್ ಅಂದಿದ್ದು ಸರಿಯೇನೆ ಅಕ್ಕಯ್ಯ? ಎಂದು ಅಕ್ಕನನ್ನು ತಾತ್ಸಾರ ದಿಂದ ನೋಡಿದಳು. ತಂಗಿಯ ಆ ನೋಟವನ್ನು ಎದುರಿಸಲಾರದ ಲಕ್ಷ್ಮಿ ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಭಾರವಾಗುತ್ತಿದ್ದ ತನ್ನ ಎದೆಯನ್ನು ನೀವಿಕೊಳ್ಳತೊಡಗಿದಳು.ಅವಳ ಮುಚ್ಚಿದ ಕಣ್ಣ ಗೊಂಬೆಯ ಮೇಲೆ ಆ ದಿನ ಕೆಳಗಿನ ಬೀದಿಯ  ದಾರಿಯುದ್ದಕ್ಕೂ ಅವರಿವರ ಬಳಿ ವಿಳಾಸ ಕೇಳುತ್ತಾ ಓಡೋಡಿ ಬರುತ್ತಿದ್ದ ತನ್ನ ಹೆತ್ತವ್ವನ ಚಿತ್ರ ಮೂಡಿ ನಿಂತಿತು. 

ಅದು ಕೊಯ್ಲಿನ ಸಮಯ ಅಪ್ಪ, ಅವ್ವ, ಅಣ್ಣ ತಮ್ಮಂದಿರೆಲ್ಲಾ ಆಳುಗಳನ್ನು ಕಟ್ಟಿಕೊಂಡು ಬುತ್ತಿಯೊಂದಿಗೆ ಗದ್ದೆ ಸೇರಿದ್ದರು. ಇತ್ತ ಲಕ್ಷ್ಮಿ ಬೇಗಬೇಗ ಮನೆ ಕೆಲಸ ಮುಗಿಸಿ, ಮನೆ ಮುಂದಿನ ದೊಡ್ಡ ಜಗಲಿಕಟ್ಟೆಯ ಮೇಲೆ ಗಂಗೆಯೊಂದಿಗೆ ಅಕ್ಕಿ ಮಾಡುತ್ತಾ ಕುಳಿತಿದ್ದಳು. ಅಕ್ಕ ಕೇರಿ ಕೇರಿ ಹಾಕುತ್ತಿದ್ದ ಅಕ್ಕಿಯ ರಾಶಿಯನ್ನು ಗಂಗೆ ಆರಿಸತೊಡಗಿದ್ದಳು. 

ಮೂರು ದಾರಿ ಕೂಡುವ  ಮಧ್ಯದಲ್ಲಿ ಸರಿಯಾಗಿ ತಲೆಯೆತ್ತಿ ನಿಂತಿದ್ದ ಬೋಪಯ್ಯ ಸಾಕವ್ವನ ಆ ಮನೆ, ಮರದ ದೊಡ್ಡ  ಕಟಕಟೆಯಿಂದ ಸುತ್ತುವರಿದಿದ್ದರಿಂದಾಗಿ ನೋಡಿದ ಕೂಡಲೇ ದೇವಸ್ಥಾನದಂತೆ ಕಾಣುತ್ತಿತ್ತು. ಎಷ್ಟೋ ಬಾರಿ ಆ ಹಾದಿಯಲ್ಲಿ ಎಡತಾಕುತ್ತಿದ್ದ ಅಪರಿಚಿತ ಜನ, ದೇವಸ್ಥಾನವೆಂದೇ ನಂಬಿ ಚಪ್ಪಲಿಯನ್ನು ಪಕ್ಕಕ್ಕೆ ಬಿಟ್ಟು ನಮಸ್ಕರಿಸಿ ಹೋಗುತ್ತಿದ್ದುದೂ ಉಂಟು. ಮನೆಯ ಮುಂದಿನ ಎರಡು ದೊಡ್ಡ ಜಗಲಿ ಕಟ್ಟೆಗೆ ಅಡ್ಡಲಾಗಿ ನಿಂತಿದ್ದ ಕಟಕಟೆಯ ಸಂಧಿಯಿಂದ ನೋಡಿದರೆ ಹೆಬ್ಬಾವಿನಂತೆ ಮಲಗಿದ್ದ ರಸ್ತೆ ನಿಚ್ಚಳವಾಗಿ ಕಾಣುತ್ತಿತ್ತು. ಅಣ್ಣ ತಮ್ಮಂದಿರ ನಿರ್ಬಂಧದಿಂದಾಗಿ ರಸ್ತೆಗಿಳಿದು ನಾಲ್ಕು ಜನರಂತೆ ಮುಕ್ತವಾಗಿ  ಹರಟಲು ಅವಕಾಶವಿಲ್ಲದ ಲಕ್ಷ್ಮಿಗೆ, ಆ ಕಟಕಟೆಯ ಸಂದಿಯೇ ಹೊರಗಿನವರೊಂದಿಗೆ ಸಂಪರ್ಕ ಬೆಸೆಯುವ ರಹದಾರಿಯಾಗಿತ್ತು. ಅಂದು ಲಕ್ಷ್ಮಿ ಅಕ್ಕಿ ಕೇರುತ್ತಾ ಕಟಕಟೆಯ ಸಂಧಿಗಳಿಂದ ದಾರಿಯುದ್ದಕ್ಕೂ ಕಣ್ಣು ಹಾಯಿಸಿದಳು. ಕೆಳಗಿನ ಬೀದಿಯಿಂದ ಮೈ ತುಂಬಾ ಸೆರಗೊದ್ದ ಕಟ್ಟು ಮಸ್ತಾದ, ಲಕ್ಷಣವಾದ ಹೆಂಗಸು ಬರುವುದು ಅವಳ ಕಣ್ಣಿಗೆ ಬಿತ್ತು. ಊರಿಗೆ ಅಪರಿಚಿತಳಂತೆ ಕಾಣುತ್ತಿದ್ದ ಆ ಹೆಂಗಸು ದಾರಿ ಉದ್ದಕ್ಕೂ  ಮನೆಯ ಹೊರ ನಿಂತಿದ್ದ ಹೆಂಗಸರಲ್ಲಿ ಏನೋ ಕೇಳುತ್ತಾ ಇತ್ತ ಕಡೆಯೇ ಬರುತ್ತಿದ್ದಳು. ಲಕ್ಷ್ಮಿ ಕಣ್ಣು ಕಿರಿದು ಮಾಡಿ ನೋಡುತ್ತಲೇ ಇದ್ದಳು. ಆಗಲೇ ಆ ಹೆಂಗಸು ಮನೆಯ ಕಟಕಟೆ ದಾಟಿ ಜಗಲಿಯ ಬಳಿ ಪ್ರತ್ಯಕ್ಷಳಾಗಿಯೇ ಬಿಟ್ಟಳು.

 ಬಂದ ಹೆಂಗಸಿಗೆ ಇಲ್ಲಿ ಲಕ್ಷ್ಮಿ ಯಾರು ಎಂದು ಕೇಳುವ ಪ್ರಮೇಯವೇ ಬರಲಿಲ್ಲ. ತನ್ನ ಪಡಿಯಚ್ಚಿನಂತೆ ಕಟ್ಟು ಮಸ್ತಾಗಿ, ಸ್ಪುರದ್ರೂಪಿಯಾಗಿ ಬೆಳೆದು ನಿಂತಿದ್ದ ಮಗಳೊಂದಿಗೆ ತನಗರಿವಿಲ್ಲದಂತೆ ಜೀವ ದೇಹಗಳೆರಡು ಬೆಸೆದುಕೊಂಡು ಬಿಟ್ಟಿತ್ತು. ಸೀರೆ ಕೊಡವುತ್ತಾ ಜಗುಲಿ ಕಟ್ಟೆಯಿಂದ ಕೆಳಗಿಳಿದ ಲಕ್ಷ್ಮಿ, ಬಾಯಿ ತೆಗೆಯುವ ಮೊದಲೇ ಆ ಹೆಂಗಸು ಅವಳನ್ನು ಗಟ್ಟಿಯಾಗಿ ತಬ್ಬಿ ಮುಖದ ತುಂಬಾ ಮುತ್ತಿನ ಮಳೆಗರೆದಳು. ಆ ಹೆಂಗಸಿನ ತೆಕ್ಕೆಗೆ ಬಿದ್ದ ಲಕ್ಷ್ಮಿಗೆ ಅವ್ವ ಎಂಬ ಅರಿವಿಲ್ಲದಿದ್ದರೂ ಏನೋ ಒಂದು ರೀತಿಯ ಹೇಳಲಸದಳವಾದ ಆನಂದದ ಭಾವ  ಗಾಢವಾಗಿ ಆವರಿಸಿ ಬಿಟ್ಟಿತು. ಲಕ್ಷ್ಮಿಯನ್ನು ತಬ್ಬಿ ಹಿಡಿದ ಆ ಹೆಂಗಸಿನ ಕಣ್ಣಿನಲ್ಲಿ ನೀರು ಜಿನುಗುತ್ತಲೇ ಇತ್ತು. ಲಕ್ಷ್ಮಿ ಆ ಹೆಂಗಸಿನ ಮುಖ ಹಿಡಿದು “ಯಾರವ್ವ ನೀನು ನನಗೂ ನಿನ್ನ ನೋಡಿ ಮನಸ್ಸಿಗೆ ಏನೋ ಒಂತರ ನೆಮ್ಮದಿ ಅನ್ನುಸ್ತೈತೆ” ಎಂದು ಕೇಳಿದಳು. ತಕ್ಷಣ ತನ್ನ ಗುರುತು ಹೇಳಿಕೊಳ್ಳಲು ಹಿಂಜರಿದ ಆ ಹೆಂಗಸು “ಹೇಳ್ತೀನಿ ಮಗ ಮೊದ್ಲು ಕುಡಿಯಕೆ ಒಂದೀಟು ನೀರ್ಕೊಡ್ತಿಯವ್ವ” ಎಂದು ಕೇಳಿದಳು. 

ನೀರು ಕುಡಿದು ಮತ್ತೊಂದು ಜಗಲಿಯ ಮೇಲೆ ಕುಳಿತು ಕೊಂಡ ಆ ಹೆಂಗಸು, ದೃಷ್ಟಿ ಇಟ್ಟು  ಲಕ್ಷ್ಮಿಯನ್ನು ನೋಡುವ ಧೈರ್ಯವಿಲ್ಲದೆ ತಲೆತಗ್ಗಿಸಿ “ಈ ಪಾಪಿ ಮುಂಡೆ ಹೊಟ್ಟೆಲಿ ನೀನು ಯಾಕ್ ಹುಟ್ದ ಮಗ” ಎಂದು ಹೇಳುತ್ತಾ ಮೊಣಕಾಲ ನಡುವೇ ಮುಖ ಹುದುಗಿಸಿ ಕೂತಳು. ಆ ಮಾತನ್ನು   ಕೇಳಿದ ಲಕ್ಷ್ಮಿಯ ಜೀವ ಕುಣಿಯತೊಡಗಿತ್ತು. ಆ ಹೆಂಗಸಿನ ಬಳಿ ಹೋಗಿ ಕಾಲ ಸಂಧಿ ಹುದುಗಿದ್ದ ಅವಳ ಮುಖವನ್ನು ಮೇಲಕ್ಕೆತ್ತಿ. ” ನಿನ್ನ್ ದಮ್ಮಯ್ಯ ನಿಜಹೇಳವ್ವ ಸುಳ್ಳ್ ಹೇಳ್ತಿಲ್ಲ ತಾನೆಯ” ಎಂದು ಆರ್ದ್ರವಾಗಿ ಕೇಳಿದಳು. ಆ ಹೆಂಗಸು ಲಕ್ಷ್ಮಿಯ ಕೈತೆಗೆದು ತನ್ನ ತಲೆಯ ಮೇಲಿಟ್ಟು ಕೊಂಡು” ವಯಸ್ನಲ್ಲಿ ಮಾಡಿದ ಪಾಪುವೇ ನನ್ನ ಹರ್ದುಮುಕ್ತಿರೊವಾಗ ಸುಳ್ಳ್ ಹೇಳಿ ಇನ್ಯಾವ ನರ್ಕುಹೋಗ್ಲವ್ವ” ಎಂದು ಹೇಳಿ  ತನ್ನ ಎದೆ ಹೊಡೆದು ಚೂರಾದಂತೆ ಜೋರು ದನಿಯಲ್ಲಿ ಅಳ ತೊಡಗಿದಳು. ಆತಂಕದಿಂದ ತನ್ನ ಸುತ್ತಾಮುತ್ತಾ ಕಣ್ಣಾಡಿಸಿದ ಲಕ್ಷ್ಮಿ”ಅವ್ವ  ಹಾದಿ ಬೀದಿಯವರ್ಗು, ಆಚೆಮನೆಯವ್ರ್ಗು ಕೇಳುಸ್ಬುಡ್ತದೆ ಸುಮ್ಕಿರು” ಎಂದು ಹೇಳಿ ತನ್ನವ್ವನನ್ನು ಇನ್ನಿಲ್ಲದಂತೆ ಮುದ್ದಿಸಿ ಸಂತೈಸಿದಳು.” ಒಂದೀಟು ಅನ್ನುಕ್ಕಿಟ್ಟ್ ಬತ್ತಿನಿ ಉಂಡೋಗಿವಂತೆ ಇರು” ಎಂದು ಹೇಳಿ ಕ್ಷಣಾರ್ಧದಲ್ಲಿ ಜಿಂಕೆ ಮರಿಯಂತೆ ಪುಟಿಯುತ್ತಾ ಒಳ ಹೋಗಿ ಅನ್ನಕ್ಕೆ ಎಸರಿಟ್ಟು ಬಂದಳು. ಇನ್ನೊಂದು ಜಗಲಿಯಲ್ಲಿ ಅಕ್ಕಿ‌ಆರಿಸುತ್ತಾ ಕೂತಿದ್ದ ಗಂಗೆಗೆ ” ಪಾರ್ವತಿ ಮನೆಗೋಗಿ ಒಂದಿಷ್ಟೊತ್ತು  ಆಡ್ಕೊಂಡು ಬಾ ಹೋಗು ಮಗ” ಎಂದಳು ಲಕ್ಷ್ಮಿ. ಗಂಗೆ  ಕೇಳಿಯೂ ಕೇಳದವಳಂತೆ ಕೂತ ಜಾಗದಿಂದ ಕದಲದೆ ಅಕ್ಕಿ ಆರಿಸುವುದರಲ್ಲಿ ಮುಳುಗಿದವಳಂತೆ ನಟಿಸ ತೊಡಗಿದಳು. 

ತನ್ನ ಅವ್ವನ ಮುಂದೆ ಚಕ್ಕಳಂಬಕ್ಕಳ ಹಾಕಿ ಕುಳಿತ ಲಕ್ಷ್ಮಿ ತನ್ನ ಕಣ್ಣತುಂಬಾ ಅವ್ವನನ್ನೆ ತುಂಬಿಕೊಳ್ಳುತ್ತಾ “ಇಷ್ಟೊಂದು ಪಿರುತಿ ಇದ್ದೋಳು ನನ್ನ ಹೆಂಗವ್ವ ತೊರ್ಕೊಂಡೆ. ನಿನ್ನ ಕಳ್ಳುನ್ನೇ ಕತ್ರುಸೋ ಅಂತದ್ದು ಏನಾಗಿತ್ತವ್ವ” ಎಂದು ಕೇಳಿದಳು. ಹಾಗೆ ಕೇಳಿದ ಮಗಳ ಮುಂದೆ  ಅತ್ಯಂತ ಭಾವುಕಳಾಗಿ ಮಾತು ಆರಂಭಿಸಿದ ಆ ಹೆಂಗ್ಸು “ನನ್ನ್ ಜೀವಮಾನ್ದಲ್ಲೇ ನೀನೇ ಮೊದ್ಲುನೆ ದಪ ಮಗ  ನನ್ ನೋವು ಏನು ಅಂತ ಕೇಳಿದ್ದು. ಇಲ್ಲಿ ಗಂಟ ನನ್ನ ಎಲ್ಲಾ ಬಳ್ಸಿ ಉಜ್ಜಾಕಿದ್ರೆ ಹೊರತು ಒಂದು ನರಪಿಳ್ಳೆನು ನೀನೆ ಅಂತ ಕೇಳ್ಳಿಲ್ಲ ಮಗ” ಎಂದು ನಿಟ್ಟುಸಿರು ಬಿಟ್ಟು ” ನಾನು ಸುಂದ್ರುವಾಗಿ ಹುಟ್ಟಿದ್ದು ನನ್ ತಪ್ಪವ್ವ. ಹಂಗಾದ್ರೆ ನಮ್ಮಂತೋರು ಚಂದಾಗಿ ಹುಟ್ಲೇ ಬಾರದ ಎಂದು ಮಗಳನ್ನು ಪ್ರಶ್ನಿಸಿದಳು. ಲಕ್ಷ್ಮಿ ಈ ಪ್ರಶ್ನೆಯನ್ನು ತನಗೆ ತಾನೇ ಅದೆಷ್ಟು ಬಾರಿ ಕೇಳಿಕೊಂಡಿದ್ದಳೊ ಲೆಕ್ಕವಿಲ್ಲ. “ನನಗೆ ನಿನ್ನ ಸಂಕ್ಟ ಅರ್ಥ ಆಯ್ತದೆ ಕನವ್ವ. ಈ ಪ್ರಶ್ನೆನ ನಾನುವೇ ಕೋಟಿ ಕೋಟಿ ದಪ ಕೇಳ್ಕೊಂಬುಟ್ಟಿದ್ದೀನಿ. ಏನಾಯ್ತು ಅಂತ ನನ್ನತ್ರ ಮನುಸ್ ಬಿಚ್ಚಿ ಹೇಳಿ ಹಗುರಾಗ್ಬುಡು. ಇಲ್ಲಿಗಂಟ ನಿನ್ನ ಮ್ಯಾಲಿದ್ದ ನನ್ನ ಕ್ವೊಪುವು ಹೊಂಟೋಗ್ ಬುಡ್ಲಿ”  ಎಂದು ಹೇಳಿ ಅವ್ವನ ಮಾತಿಗಾಗಿ ಕಾತರಿಸುತ್ತಾ ಕುಳಿತಳು. 

ವಾಣಿ ಸತೀಶ್‌

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

You cannot copy content of this page

Exit mobile version