Home ದೇಶ ಕುದುರಿದ ಶಾಂತಿ ಸಂಧಾನ.. ಮುಗಿಯಿತೇ ಮಹಾಯುದ್ಧ? ಅಮೆರಿಕ-ಇರಾನ್ ನಡುವೆ ಕದನ ವಿರಾಮ ಒಪ್ಪಂದ

ಕುದುರಿದ ಶಾಂತಿ ಸಂಧಾನ.. ಮುಗಿಯಿತೇ ಮಹಾಯುದ್ಧ? ಅಮೆರಿಕ-ಇರಾನ್ ನಡುವೆ ಕದನ ವಿರಾಮ ಒಪ್ಪಂದ

0

ಜಗತ್ತನ್ನು ತೀವ್ರ ಆತಂಕಕ್ಕೆ ತಳ್ಳಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧಕ್ಕೆ ಕೊನೆಗೂ ತೆರೆ ಬಿದ್ದಿದೆ. ಸುದೀರ್ಘ ಮಾತುಕತೆಗಳ ನಂತರ ಉಭಯ ದೇಶಗಳು ಶಾಶ್ವತ ಶಾಂತಿ ಒಪ್ಪಂದಕ್ಕೆ ಬಂದಿವೆ ಎಂದು ಸೌದಿ ಅರೇಬಿಯಾ ಮಾಧ್ಯಮಗಳು ವರದಿ ಮಾಡಿವೆ. 

ಇತ್ತೀಚೆಗೆ ಎರಡೂ ದೇಶಗಳು ಪರಸ್ಪರ ಸೇನಾ ನೆಲೆಗಳ ಮೇಲೆ ಭೀಕರ ವೈಮಾನಿಕ ದಾಳಿಗಳನ್ನು ನಡೆಸಿದ್ದವು. ಅಷ್ಟೇ ಅಲ್ಲದೆ, ಪಶ್ಚಿಮಾಸಿಯಾದಲ್ಲಿ ಅಮೆರಿಕದ ಮಿತ್ರರಾಷ್ಟ್ರಗಳಾದ ಸೌದಿ ಅರೇಬಿಯಾ, ಕತಾರ್, ಯುಎಇ ಮತ್ತು ಇಸ್ರೇಲ್ ಮೇಲೂ ಇರಾನ್ ಕ್ಷಿಪಣಿ ಹಾಗೂ ಡ್ರೋನ್‌ಗಳ ಮೂಲಕ ದಾಳಿ ನಡೆಸಿ ತೀವ್ರವಾಗಿ ತಿರುಗೇಟು ನೀಡಿತ್ತು.

ಕಳೆದ ಏಪ್ರಿಲ್ 8ರಂದು ಅಮೆರಿಕ ಮತ್ತು ಇರಾನ್ ನಡುವೆ ತಾತ್ಕಾಲಿಕ ಕದನ ವಿರಾಮ ಒಪ್ಪಂದ ಕುದರಿದ್ದರಿಂದ ಯುದ್ಧವು ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಅಂದಿನಿಂದ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಉಭಯ ದೇಶಗಳ ನಡುವೆ ಸಂಧಾನ ಮಾತುಕತೆಗಳು ನಡೆಯುತ್ತಿದ್ದವು. 

ಇಸ್ಲಾಮಾಬಾದ್‌ನಲ್ಲಿ ನಡೆದ ಮುಖಾಮುಖಿ ಚರ್ಚೆಗಳು ವಿಫಲವಾದ ನಂತರವೂ, ಹಲವು ಹಂತಗಳಲ್ಲಿ ಪರೋಕ್ಷ ರಾಜತಾಂತ್ರಿಕ ಮಾತುಕತೆಗಳನ್ನು ಮುಂದುವರಿಸಲಾಗಿತ್ತು. ಕೊನೆಗೂ ಈ ಪ್ರಯತ್ನಗಳು ಫಲಪ್ರದವಾಗಿದ್ದು, ಉಭಯ ದೇಶಗಳು ಶಾಶ್ವತ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ವರದಿಗಳು ತಿಳಿಸಿವೆ.

ಈ ಒಪ್ಪಂದದ ಪ್ರಕಾರ, ಉಭಯ ದೇಶಗಳು ಇನ್ಮುಂದೆ ಪರಸ್ಪರರ ಮಿಲಿಟರಿ ಮತ್ತು ನಾಗರಿಕ ನೆಲೆಗಳ ಮೇಲೆ ಯಾವುದೇ ದಾಳಿ ನಡೆಸುವಂತಿಲ್ಲ. ಎಲ್ಲಾ ರೀತಿಯ ಸೈನಿಕ ಕ್ರಮಗಳನ್ನು ತಕ್ಷಣವೇ ರದ್ದುಗೊಳಿಸಬೇಕಾಗುತ್ತದೆ.

 ಇದರೊಂದಿಗೆ ಪರಸ್ಪರರ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ. ಪರ್ಷಿಯನ್ ಗಲ್ಫ್, ಹಾರ್ಮುಜ್ ಜಲಸಂಧಿ ಮತ್ತು ಒಮಾನ್ ಗಲ್ಫ್‌ಗಳಲ್ಲಿ ಹಡಗುಗಳ ಮುಕ್ತ ಮತ್ತು ಸುರಕ್ಷಿತ ಸಂಚಾರಕ್ಕೆ ಇರಾನ್ ಭರವಸೆ ನೀಡಿದೆ.

ಅಲ್ಲದೆ, ಭವಿಷ್ಯದಲ್ಲಿ ಉಂಟಾಗುವ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಜಂಟಿ ಕಾರ್ಯಪಡೆಯೊಂದನ್ನು ರಚಿಸಲು ನಿರ್ಧರಿಸಲಾಗಿದೆ. ಬಾಕಿ ಉಳಿದಿರುವ ಇತರ ಸಮಸ್ಯೆಗಳ ಕುರಿತು ಮುಂದಿನ 7 ದಿನಗಳಲ್ಲಿ ಮಾತುಕತೆ ಆರಂಭವಾಗಲಿದೆ.

 ಈ ಒಪ್ಪಂದದ ನಿಯಮಗಳಿಗೆ ಇರಾನ್ ಬದ್ಧವಾಗಿ ನಡೆದುಕೊಂಡರೆ, ಆ ದೇಶದ ಮೇಲಿರುವ ಆರ್ಥಿಕ ನಿರ್ಬಂಧಗಳನ್ನು ಅಮೆರಿಕ ಹಂತಹಂತವಾಗಿ ಹಿಂಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.

You cannot copy content of this page

Exit mobile version