Home ಆರೋಗ್ಯ ಭಾರತಕ್ಕೆ ಎಬೋಲಾ ಭೀತಿ? ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ, ಕೇಂದ್ರದಿಂದ ಹೊಸ ಮಾರ್ಗದರ್ಶಿ ಜಾರಿ

ಭಾರತಕ್ಕೆ ಎಬೋಲಾ ಭೀತಿ? ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ, ಕೇಂದ್ರದಿಂದ ಹೊಸ ಮಾರ್ಗದರ್ಶಿ ಜಾರಿ

0

ವಿಶ್ವ ಆರೋಗ್ಯ ಸಂಸ್ಥೆ (WHO) ಎಬೋಲಾ ವೈರಸ್ ಹರಡುವಿಕೆಯನ್ನು ಜಾಗತಿಕ ತುರ್ತು ಪರಿಸ್ಥಿತಿ ಎಂದು ಘೋಷಿಸಿದ ಬೆನ್ನಲ್ಲೇ, ಕೇಂದ್ರ ಆರೋಗ್ಯ ಸಚಿವಾಲಯವು ದೇಶದ ಎಲ್ಲಾ ರಾಜ್ಯಗಳು ಮತ್ತು ವಿಮಾನ ನಿಲ್ದಾಣಗಳಿಗೆ ಬಿಗಿ ಮಾರ್ಗದರ್ಶಕಗಳನ್ನು ಜಾರಿಗೊಳಿಸಿದೆ.

ಕಾಂಗೋ, ಉಗಾಂಡಾ ಮತ್ತು ದಕ್ಷಿಣ ಸುಡಾನ್‌ನಂತಹ ಎಬೋಲಾ ಪೀಡಿತ ದೇಶಗಳಿಂದ ಭಾರತಕ್ಕೆ ಬರುವ ಅಥವಾ ಆ ದೇಶಗಳ ಮೂಲಕ ಪ್ರಯಾಣಿಸುವ ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲು ನಿರ್ದೇಶಿಸಲಾಗಿದೆ. 

ಜ್ವರ, ವಾಂತಿ, ತೀವ್ರ ಸುಸ್ತು, ದೇಹದ ಒಳಗೆ ಅಥವಾ ಹೊರಗೆ ಅನಿರೀಕ್ಷಿತ ರಕ್ತಸ್ರಾವದಂತಹ ಲಕ್ಷಣಗಳು ಕಂಡುಬಂದರೆ ಪ್ರಯಾಣಿಕರು ಇಮಿಗ್ರೇಷನ್ ಪ್ರಕ್ರಿಯೆಗಿಂತ ಮುಂಚಿತವಾಗಿಯೇ ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. 

ಭಾರತಕ್ಕೆ ಬಂದ 21 ದಿನಗಳ ಒಳಗಾಗಿ ಇಂತಹ ಲಕ್ಷಣಗಳು ಕಾಣಿಸಿಕೊಂಡರೂ ತಕ್ಷಣವೇ ವೈದ್ಯಕೀಯ ನೆರವು ಪಡೆಯಲು ಮತ್ತು ಪ್ರಯಾಣದ ಇತಿಹಾಸವನ್ನು ಹಂಚಿಕೊಳ್ಳಲು ಸೂಚನೆ ನೀಡಲಾಗಿದೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿಗಳು ಈಗಾಗಲೇ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದು, ಸಮಗ್ರ ಕಣ್ಗಾವಲು ವ್ಯವಸ್ಥೆ (IDSP) ಅಡಿಯಲ್ಲಿ ಜ್ವರ ಪ್ರಕರಣಗಳ ಮೇಲೆ ನಿಗಾ ಇಡಲು ತಿಳಿಸಿದ್ದಾರೆ.

 ಅನುಮಾನಾಸ್ಪದ ಪ್ರಕರಣಗಳ ನಿರ್ವಹಣೆಗೆ ಪ್ರತ್ಯೇಕ ಐಸೊಲೇಶನ್ ವಾರ್ಡ್‌ಗಳು, ಸೂಕ್ತ ವೈದ್ಯಕೀಯ ಉಪಕರಣಗಳು (PPE ಕಿಟ್‌ಗಳು) ಮತ್ತು ಲ್ಯಾಬ್ ತಪಾಸಣಾ ಸೌಲಭ್ಯಗಳನ್ನು ಸಜ್ಜುಗೊಳಿಸಲು ಎಸ್‌ಒಪಿ (SOP) ಬಿಡುಗಡೆ ಮಾಡಲಾಗಿದೆ. 

ಸದ್ಯಕ್ಕೆ ಭಾರತದಲ್ಲಿ ಯಾವುದೇ ಎಬೋಲಾ ಪ್ರಕರಣ ಪತ್ತೆಯಾಗಿಲ್ಲ ಮತ್ತು ಮುನ್ನೆಚ್ಚರಿಕಾ ಕ್ರಮವಾಗಿ ಈ ಬಿಗಿ ನಿಯಮಗಳನ್ನು ಜಾರಿಗೊಳಿಸಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

You cannot copy content of this page

Exit mobile version