ದೇಶದಲ್ಲಿ ತೈಲ ಬೆಲೆ ಏರಿಕೆ ಸರಣಿ ಮುಂದುವರಿದಿದ್ದು, ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳು ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಮತ್ತೊಮ್ಮೆ ಹೆಚ್ಚಿಸಿವೆ. ಕಳೆದ 10 ದಿನಗಳಲ್ಲಿ ನಡೆದಿರುವ ಮೂರನೇ ಬೆಲೆ ಏರಿಕೆ ಇದಾಗಿದೆ.
ಹೊಸ ದರ ಪರಿಷ್ಕರಣೆಯ ಪ್ರಕಾರ, ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 87 ಪೈಸೆ ಮತ್ತು ಡೀಸೆಲ್ ಬೆಲೆಯಲ್ಲಿ 91 ಪೈಸೆ ಏರಿಕೆ ಮಾಡಲಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನತೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರ ಏರಿಕೆ ಕಂಡಿದ್ದು, ಇದರ ನೇರ ಪರಿಣಾಮ ದೇಶೀಯ ಇಂಧನ ದರಗಳ ಮೇಲೆ ಬೀರುತ್ತಿದೆ. ಕಳೆದ ಮೇ 15ರಂದು ತೈಲ ಕಂಪನಿಗಳು ಬರೋಬ್ಬರಿ 3 ರೂಪಾಯಿ ಹೆಚ್ಚಳ ಮಾಡಿದ್ದವು.
ಅದಾದ ನಂತರ ಮೇ 19ರಂದು ಎರಡನೇ ಬಾರಿಗೆ ಸುಮಾರು 90 ಪೈಸೆ ಏರಿಕೆ ಮಾಡಲಾಗಿತ್ತು. ಇದೀಗ ಕೇವಲ ಮೂರೇ ದಿನಗಳ ಅಂತರದಲ್ಲಿ ಮತ್ತೊಮ್ಮೆ ಇಂಧನ ದರವನ್ನು ಹೆಚ್ಚಿಸಲಾಗಿದೆ. ಮೇ 15ರಿಂದೀಚೆಗೆ ಒಟ್ಟಾರೆಯಾಗಿ ಲೀಟರ್‌ಗೆ ಸುಮಾರು 4.80 ರೂಪಾಯಿಯಷ್ಟು ಹೊರೆ ಗ್ರಾಹಕರ ಮೇಲೆ ಬಿದ್ದಂತಾಗಿದೆ.
ಈ ತಾಜಾ ದರ ಏರಿಕೆಯ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 98.64 ರೂಪಾಯಿಯಿಂದ 99.51 ರೂಪಾಯಿಗೆ ತಲುಪಿದ್ದರೆ, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 91.58 ರೂಪಾಯಿಯಿಂದ 92.49 ರೂಪಾಯಿಗೆ ಏರಿಕೆಯಾಗಿದೆ.
ಜಾಗತಿಕವಾಗಿ ಕಚ್ಚಾ ತೈಲ ದರಗಳು ಪ್ರತಿ ಬ್ಯಾರೆಲ್‌ಗೆ 120 ಡಾಲರ್ ದಾಟುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಇಂಧನ ಬೆಲೆಗಳು ಮತ್ತಷ್ಟು ಹೆಚ್ಚಾಗುವ ಆತಂಕ ಮೂಡಿದೆ.
