ದೆಹಲಿ, ಮೇ 22: ‘ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ)’ ಹೆಸರಿನಲ್ಲಿ ಆನ್‌ಲೈನ್ ವ್ಯಂಗ್ಯ (Satire) ಚಳವಳಿ ವೇದಿಕೆಯನ್ನು ಪ್ರಾರಂಭಿಸಿರುವ ಅಭಿಜೀತ್ ದೀಪ್ಕೆ, ತಮಗೆ ಈಗ ಕೊಲೆ ಬೆದರಿಕೆಗಳು ಬರುತ್ತಿರುವುದಾಗಿ ತಿಳಿಸಿದ್ದಾರೆ.
”ಸಿಜೆಪಿ ಖಾತೆಯನ್ನು ಮುಚ್ಚಿ ಬಿಜೆಪಿ ಸೇರಿದರೆ ಹಣ ಬರುತ್ತದೆ. ಇಲ್ಲದಿದ್ದರೆ ನೀನು ಅಮೆರಿಕದಲ್ಲಿದ್ದರೂ ನಿನ್ನನ್ನು ಕೊಲ್ಲುತ್ತೇವೆ” ಎಂದು ವ್ಯಕ್ತಿಯೊಬ್ಬ ತಮಗೆ ಬೆದರಿಕೆ ಹಾಕಿರುವುದಾಗಿ ತಿಳಿಸಿ, ಅದಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ಗಳನ್ನು ಅವರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಅಲ್ಲದೆ, ಭಾರತದಲ್ಲಿರುವ ದೀಪ್ಕೆ ಪೋಷಕರ ವಿಳಾಸ ತಮಗೆ ತಿಳಿದಿದೆ ಎಂದು ಮತ್ತೊಬ್ಬ ವ್ಯಕ್ತಿ ಬೆದರಿಕೆ ಹಾಕಿರುವ ವಿಡಿಯೋವನ್ನು ಸಹ ಅವರು ಪೋಸ್ಟ್ ಮಾಡಿದ್ದಾರೆ. ಅಮೆರಿಕದಲ್ಲಿ ತಮ್ಮ ಗ್ರಾಜುಯೇಷನ್ ಮುಗಿದಿದ್ದು, ಮುಂದಿನ ತಿಂಗಳು ಭಾರತಕ್ಕೆ ಬರಲು ಯೋಜಿಸಿರುವುದಾಗಿ ದೀಪ್ಕೆ ತಿಳಿಸಿದ್ದಾರೆ.
ಆದರೆ, ಹಿಂದೆ ಇದೇ ರೀತಿ ಸರ್ಕಾರದ ನೀತಿಗಳನ್ನು ಪ್ರಶ್ನಿಸಿದವರನ್ನು ಭಾರತಕ್ಕೆ ಬಂದ ತಕ್ಷಣ ಬಂಧಿಸಿದ ಘಟನೆಗಳನ್ನು ನೆನಪಿಸಿಕೊಂಡಿರುವ ಅವರು, ತಾವು ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದು ನೇರವಾಗಿ ತಿಹಾರ್ ಜೈಲಿಗೆ ಕಳುಹಿಸುತ್ತಾರೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
’ದಲಿತ ಕಾರ್ಡ್’ ಎಂದು ಟ್ರೋಲ್
’ಎಕ್ಸ್’ನಲ್ಲಿ ‘ಶಟಪ್ ಕೌನ್ಸೆಲ್’ ಎಂಬ ಯೂಸರ್‌ನೇಮ್ ಹೊಂದಿರುವ ವ್ಯಕ್ತಿಯೊಬ್ಬರು, ಮೀಸಲಾತಿ, ದಲಿತರ ಸಮಸ್ಯೆಗಳು ಮತ್ತು ಸಾಮಾಜಿಕ ನ್ಯಾಯದ ಕುರಿತು ಸಿಜೆಪಿಯ ನಿಲುವು ಏನು ಎಂದು ದೀಪ್ಕೆ ಅವರನ್ನು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ದೀಪ್ಕೆ, “ನಾನು ಸ್ವತಃ ದಲಿತ ಸಮುದಾಯಕ್ಕೆ ಸೇರಿದವನು. ಇದು ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತದೆ ಎಂದು ಭಾವಿಸುತ್ತೇನೆ” ಎಂದು ಬರೆದಿದ್ದರು.
ದೀಪ್ಕೆ ಈ ಮಾತು ಹೇಳಿದ ಮರುಕ್ಷಣದಿಂದಲೇ ಅವರ ಮೇಲೆ ಭಾರಿ ಟ್ರೋಲಿಂಗ್ ಶುರುವಾಗಿದೆ. “ಹಾಗಾದರೆ, ಸ್ವಯಂ ಘೋಷಿತ ಜೆನ್ ಜಿ (Gen Z) ನಾಯಕ ಪ್ರತಿಭೆಗೆ ವಿರೋಧಿ ಎಂದರ್ಥ” ಎಂದು ಒಬ್ಬರು ಕಮೆಂಟ್ ಮಾಡಿದರೆ, “ಬಂತು ನೋಡಿ ಡಿ ಕಾರ್ಡ್ (ದಲಿತ ಕಾರ್ಡ್)” ಎಂದು ಮತ್ತೊಬ್ಬರು ಟೀಕಿಸಿದ್ದಾರೆ.
ಇವೆಲ್ಲದರ ನಡುವೆ, ನೀಟ್ (NEET) ಪರೀಕ್ಷೆ ನಡೆಸುವಲ್ಲಿ ವಿಫಲರಾಗಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ದೀಪ್ಕೆ ಆನ್‌ಲೈನ್‌ನಲ್ಲಿ ಸಹಿ ಸಂಗ್ರಹ ಆಂದೋಲನವನ್ನು ಪ್ರಾರಂಭಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸಿಜೆಪಿ ಫಾಲೋವರ್ಸ್‌ಗಳ ಸಂಖ್ಯೆ ಶುಕ್ರವಾರ ಸಂಜೆಯ ವೇಳೆಗೆ 2 ಕೋಟಿ ದಾಟಿದೆ.
