ಗಾಜಾ ಯುದ್ಧವನ್ನು ಕೊನೆಗೊಳಿಸಲು 20 ಅಂಶಗಳ ಶಾಂತಿ ಯೋಜನೆಯನ್ನು ಮಂಡಿಸಿದ ಒಂದು ದಿನದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಮಾಸ್‌ಗೆ ಮತ್ತೊಂದು ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ತನ್ನ ಯೋಜನೆಯನ್ನು ಒಪ್ಪಿಕೊಳ್ಳುವಂತೆ ಇಲ್ಲವಾದರೆ ತೀವ್ರ ಪರಿಣಾಮಗಳನ್ನು ಎದುರಿಸುವಂತೆ ಹಮಾಸ್ ಗುಂಪಿಗೆ ಕರೆ ನೀಡಿದ್ದಾರೆ.
ಇಸ್ರೇಲ್ ಸೇರಿದಂತೆ ಎಲ್ಲಾ ಮುಸ್ಲಿಂ ರಾಷ್ಟ್ರಗಳು, ಅರಬ್ ರಾಷ್ಟ್ರಗಳ ಈ ಯೋಜನೆ ಪರವಾಗಿ ಸಹಿ ಹಾಕಿವೆ. ನಾವು ಹಮಾಸ್‌ಗಾಗಿ ಕಾಯುತ್ತಿದ್ದೇವೆ. ಹಮಾಸ್ ಅದನ್ನು ಒಪ್ಪದಿದ್ದರೆ ಪ್ಯಾಲೆಸ್ಟೈನ್ ಗೆ ಅದು ತುಂಬಾ ದುಃಖಕರ ಅಂತ್ಯವಾಗಲಿದೆ” ಎಂದು ಟ್ರಂಪ್ ಶ್ವೇತಭವನದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.
“ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಲು ಹಮಾಸ್‌ಗೆ 3-4 ದಿನಗಳ ಕಾಲಾವಕಾಶವಿದೆ. ಇಲ್ಲದಿದ್ದರೆ – ಇಸ್ರೇಲ್ ತನಗೆ ಬೇಕಾದುದನ್ನು ಮಾಡುತ್ತದೆ” ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹಮಾಸ್, ಇತರ ಪ್ಯಾಲೆಸ್ಟೈನ್ ನಾಯಕರೊಂದಿಗೆ ಸಮಾಲೋಚಿಸಿ ತನ್ನ ನಿರ್ಧಾರ ತಿಳಿಸಲಾಗುವುದು ಎಂದು ಪ್ರತಿಕ್ರಿಯಿಸಿದೆ.
ಹೋರಾಟವನ್ನು ಕೊನೆಗೊಳಿಸುವುದು, ಪ್ಯಾಲೆಸ್ಟೀನಿಯನ್ನರಿಗೆ ಮಾನವೀಯ ನೆರವು ನೀಡುವುದು ಮತ್ತು ಗಾಜಾದಲ್ಲಿ ಶಾಂತಿ ಪುನರ್ನಿರ್ಮಾಣದ ಭರವಸೆಗಾಗಿ ಹಮಾಸ್ ಪರಿಣಾಮಕಾರಿಯಾಗಿ ಶರಣಾಗಬೇಕು ಮತ್ತು ನಿಶ್ಯಸ್ತ್ರಗೊಳಿಸಬೇಕು ಎಂದು ಟ್ರಂಪ್ ಪ್ರಸ್ತಾವನೆಯು ಕರೆ ನೀಡಿದೆ.
ಅಮೇರಿಕಾದ 20 ಅಂಶಗಳ ಪ್ರಸ್ತಾವನೆಯಲ್ಲಿ ಗಾಜಾದಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸುವುದು, ಉಳಿದ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದು ಮತ್ತು ಇಸ್ರೇಲಿ ಪಡೆಗಳನ್ನು ಹಿಂತೆಗೆದುಕೊಳ್ಳುವುದು ಸೇರಿವೆ.
ಹಮಾಸ್ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕು ಮತ್ತು ಯಾವುದೇ ರೂಪದಲ್ಲಿ ಗಾಜಾವನ್ನು ಆಳಲು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರಸ್ತಾವನೆಯು ಹೇಳುತ್ತದೆ . ಇದಲ್ಲದೆ, ಬಂಧಿತರಾಗಿರುವ ನೂರಾರು ಪ್ಯಾಲೆಸ್ಟೀನಿಯನ್ನರನ್ನು ಇಸ್ರೇಲ್ ಬಿಡುಗಡೆ ಮಾಡುತ್ತದೆ.
ಇದಲ್ಲದೆ, ಪ್ಯಾಲೆಸ್ಟೀನಿಯನ್ನರು ಹಸಿವು ಮತ್ತು ಕ್ಷಾಮಕ್ಕೆ ಒಳಗಾಗಿರುವ ಗಾಜಾಗೆ ಪೂರ್ಣ ಸಹಾಯವನ್ನು ತಕ್ಷಣವೇ ಕಳುಹಿಸಲಾಗುವುದು. ಟ್ರಂಪ್ ಅವರ ಯೋಜನೆ ಭವಿಷ್ಯದ ಪ್ಯಾಲೆಸ್ಟೈನ್ ರಾಷ್ಟ್ರಕ್ಕೆ ಬಾಗಿಲು ತೆರೆದಿದ್ದರೂ, ಇಸ್ರೇಲ್ ಪ್ರಧಾನಿ ನೆತನ್ಯಾಹು ಇದನ್ನು ತಳ್ಳಿಹಾಕಿದ್ದು, ಇಸ್ರೇಲ್ ಪ್ಯಾಲೆಸ್ಟೈನ್ ಸೃಷ್ಟಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.