Home ವಿದೇಶ ಕದನ ವಿರಾಮ ಹುಟ್ಟಿಸಿದ್ದ ಭರವಸೆಗಳನ್ನು ಹೊಸಕಿ ಹಾಕಿದ ಅಮೆರಿಕದ ಅಮಾನವೀಯ ಧೋರಣೆ

ಕದನ ವಿರಾಮ ಹುಟ್ಟಿಸಿದ್ದ ಭರವಸೆಗಳನ್ನು ಹೊಸಕಿ ಹಾಕಿದ ಅಮೆರಿಕದ ಅಮಾನವೀಯ ಧೋರಣೆ

0

ಕದನ ವಿರಾಮದ ಮೂಲಕ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಕಡಿಮೆಯಾಗಿ ಪರಿಸ್ಥಿತಿ ತಿಳಿಯಾಗಬಹುದು ಎಂದು ಇಡೀ ಜಗತ್ತು ಆಶಿಸುತ್ತಿದ್ದ ವೇಳೆಯಲ್ಲೇ, ಅಮೆರಿಕ ಮತ್ತೆ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿರುವುದು ಅತ್ಯಂತ ಅಮಾನವೀಯ ಮತ್ತು ಖಂಡನೀಯ. ಶಾಂತಿಯತ್ತ ಇಟ್ಟ ಹೆಜ್ಜೆಯನ್ನು ಮತ್ತೆ ಯುದ್ಧ ಮತ್ತು ಸಂಘರ್ಷದ ಕಡೆಗೆ ಎಳೆದುಕೊಂಡು ಹೋದ ದುಷ್ಟ ಹಾಗೂ ದುರಹಂಕಾರದ ಕ್ರಮ ಇದಾಗಿದೆ.

ಇರಾನ್ ಜನರು ತಮ್ಮ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರಿಗೆ ಅಂತಿಮ ವಿದಾಯ ಹೇಳುತ್ತಿರುವ ತೀವ್ರ ವಿಷಾದದ ವಾತಾವರಣದಲ್ಲೇ ಅಮೆರಿಕ ಈ ದಾಳಿ ನಡೆಸಿರುವುದು, ಅದಕ್ಕೆ ಕನಿಷ್ಠ ಮಾನವೀಯ ಪ್ರಜ್ಞೆ ಹಾಗೂ ರಾಜತಾಂತ್ರಿಕ ಸಂಯಮ ಇಲ್ಲದಿರುವುದಕ್ಕೆ ಸಾಕ್ಷಿಯಾಗಿದೆ.

ಯುದ್ಧಗಳಿಗೂ ಕೆಲವು ನೈತಿಕ ಗಡಿಗಳಿರುತ್ತವೆ. ಮರಣ, ದುಃಖ ಮತ್ತು ಅಂತ್ಯಸಂಸ್ಕಾರದ ಸಂದರ್ಭಗಳಲ್ಲಿ ಸಂಯಮ ಕಾಯ್ದುಕೊಳ್ಳುವುದು ನಾಗರಿಕ ಜಗತ್ತು ನಿರೀಕ್ಷಿಸುವ ಕನಿಷ್ಠ ಮಾನದಂಡ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇವೆಲ್ಲವನ್ನೂ ಗಾಳಿಗೆ ತೂರಿ, ಟರ್ಕಿ ಪ್ರವಾಸದಲ್ಲಿದ್ದೂ ಬೆದರಿಕೆ ಹಾಗೂ ದಾಳಿಗಳಿಗೆ ಮುಂದಾಗಿರುವುದು ಅವರ ಮಿತಿಯಿಲ್ಲದ ಅಹಂಕಾರವನ್ನು ತೋರಿಸುತ್ತದೆ. ಇರಾನ್ ನಾಯಕತ್ವವನ್ನು ಉದ್ದೇಶಿಸಿ ‘ನೀಚರು’, ‘ಉನ್ಮಾದಿಗಳು’, ‘ಉಗ್ರಗಾಮಿಗಳು’ ಎಂದು ಟ್ರಂಪ್ ಮಾಡಿರುವ ವಾಗ್ದಾಳಿಗಳು, ವಾಸ್ತವವಾಗಿ ಆ ಕ್ರೂರ ಮುಖಂಡನಿಗೇ ಅನ್ವಯಿಸುತ್ತವೆ.

ಒಂದೆಡೆ ಶಾಂತಿ ಮಾತುಕತೆಗಳು ನಡೆಯುತ್ತಿದ್ದಾಗಲೇ ಫೆಬ್ರವರಿ 28 ರಂದು ಅಮೆರಿಕ ಇರಾನ್ ಮೇಲೆ ಕ್ಷಿಪಣಿಗಳ ಮಳೆಗರೆದು ಆ ದೇಶದ ಸರ್ವೋಚ್ಚ ನಾಯಕ ಖಮೇನಿ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಹತ್ಯೆ ಮಾಡಿತ್ತು. ಇರಾನ್‌ನ ನಾಯಕತ್ವವನ್ನು ನಿರ್ಮೂಲನೆ ಮಾಡಿ, ಅಲ್ಲಿ ಅಸ್ಥಿರತೆಯನ್ನು ಸೃಷ್ಟಿಸಿ ಆ ದೇಶವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಬಹುದು ಎಂದು ವಾಷಿಂಗ್ಟನ್ ಭಾವಿಸಿತ್ತು.

ಆದರೆ ಅದು ಸಾಧ್ಯವಿಲ್ಲ ಎಂಬುದು ಇರಾನ್‌ನಿಂದ ಹಲವು ಬಾರಿ ತಕ್ಕ ಪ್ರತ್ಯುತ್ತರ ಪಡೆದ ನಂತರವೇ ಅದಕ್ಕೆ ಅರ್ಥವಾಯಿತು. ಈ ಯುದ್ಧದಿಂದ ಸಾಧಿಸಿದ್ದೇನು ಎಂಬ ಬಗ್ಗೆ ಅಮೆರಿಕದ ಒಳಗೂ ಮತ್ತು ಜಾಗತಿಕ ಮಟ್ಟದಲ್ಲೂ ತೀವ್ರ ಟೀಕೆಗಳು ವ್ಯಕ್ತವಾದವು.

ಚರ್ಚೆಗಳ ಮೂಲಕ ಇರಾನ್ ಅನ್ನು ಮಣಿಸಲು ಎಷ್ಟು ಪ್ರಯತ್ನಿಸಿದರೂ ಯಾವುದೇ ಫಲ ಸಿಗಲಿಲ್ಲ. ಗಡಿ ಒಪ್ಪಂದ ಏರ್ಪಟ್ಟ ನಂತರವೂ ಟ್ರಂಪ್ ಅಡೆತಡೆಯಿಲ್ಲದೆ ಆಧಿಪತ್ಯದ ಹೇಳಿಕೆಗಳನ್ನು ನೀಡುತ್ತಾ ಶಾಂತಿ ಪ್ರಕ್ರಿಯೆಗೆ ಧಕ್ಕೆ ತರುತ್ತಲೇ ಬಂದರು. ಹೋರ್ಮುಜ್ ಜಲಸಂಧಿಯನ್ನು ವಶಪಡಿಸಿಕೊಳ್ಳುತ್ತೇವೆ ಎಂದು ಅಮೆರಿಕ ಜಂಬ ಕೊಚ್ಚಿಕೊಂಡಾಗ, “ಇದು ನಿಮ್ಮ ಆಟದ ಮೈದಾನವಲ್ಲ” ಎಂದು ಇರಾನ್ ಗಟ್ಟಿಯಾಗಿಯೇ ಎಚ್ಚರಿಸಿತ್ತು.

ಆದರೂ ತನ್ನ ವಕ್ರಬುದ್ಧಿ ಬದಲಿಸದ ಅಮೆರಿಕ, ಶಾಂತಿ ಒಪ್ಪಂದವನ್ನು ಮುರಿದು ಇರಾನ್ ಮೇಲೆ ದಾಳಿ ನಡೆಸಿದೆ. ಅಲ್ಲದೆ ದಾಳಿ ಮುಂದುವರಿಸುವುದಾಗಿ ನಿರ್ಲಜ್ಜವಾಗಿ ಘೋಷಿಸಿದೆ. ಇರಾನ್ ಕೂಡ ತಾವು ಇದಕ್ಕೆ ಸೂಕ್ತ ಉತ್ತರವನ್ನೇ ನೀಡಲಿದ್ದೇವೆ ಎಂದು ಎಚ್ಚರಿಸಿದೆ.

ಭೌಗೋಳಿಕವಾಗಿ ಅಥವಾ ಭೌತಿಕ ನಷ್ಟದ ದೃಷ್ಟಿಯಿಂದ ನೋಡಿದರೆ ಅಮೆರಿಕದ ಈ ಕ್ರೂರ ದಾಳಿ ಇರಾನ್‌ಗೆ ಮಾತ್ರ ಸೀಮಿತವಾಗಿರಬಹುದು. ಆದರೆ ವಾಸ್ತವವಾಗಿ ಇದು ವಾಷಿಂಗ್ಟನ್ ಇಡೀ ಜಗತ್ತಿನ ಜನರ ಮೇಲೆ ನಡೆಸುತ್ತಿರುವ ದಾಳಿಯಾಗಿದೆ. ಟ್ರಂಪ್ ಅವರ ಯುದ್ಧೋನ್ಮಾದದ ಪರಿಣಾಮವನ್ನು ಹಲವು ದೇಶಗಳ ಆರ್ಥಿಕತೆ ಮತ್ತು ಸಾಮಾನ್ಯ ಜನರು ಅನುಭವಿಸಬೇಕಾಗಿ ಬಂದಿದೆ.

ಇದರ ಪ್ರಭಾವ ಭಾರತದ ಮೇಲೆ ಮತ್ತಷ್ಟು ತೀವ್ರವಾಗಿರಲಿದೆ. ದೇಶಕ್ಕೆ ಅಗತ್ಯವಿರುವ ಕಚ್ಚಾ ತೈಲದಲ್ಲಿ ಶೇ 85 ಕ್ಕಿಂತ ಹೆಚ್ಚು ಭಾಗವನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಸಂಘರ್ಷದಿಂದಾಗಿ ಕಚ್ಚಾ ತೈಲದ ಬೆಲೆ ಹೆಚ್ಚಾದಾಗಲೆಲ್ಲಾ ದೇಶದ ವಿದೇಶಿ ವಿನಿಮಯ ಮೀಸಲು, ಆಮದು ವೆಚ್ಚ ಮತ್ತು ಹಣದುಬ್ಬರದ ಮೇಲೆ ನೇರ ಪರಿಣಾಮ ಬೀರುತ್ತದೆ.

ಈಗಾಗಲೇ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರು ತತ್ತರಿಸಿದ್ದಾರೆ. ಷೇರು ಮಾರುಕಟ್ಟೆಗಳು ತಲ್ಲಣಗೊಂಡು ಹೂಡಿಕೆದಾರರ ಲಕ್ಷಾಂತರ ಕೋಟಿ ರೂಪಾಯಿ ಸಂಪತ್ತು ಆವಿಯಾಗಿದೆ. ಭಾರತದಿಂದ ರಫ್ತಾಗುವ ಅಕ್ಕಿ, ಔಷಧಗಳು, ಎಂಜಿನಿಯರಿಂಗ್ ಉತ್ಪನ್ನಗಳು, ಜವಳಿ, ರಾಸಾಯನಿಕಗಳು ಮತ್ತು ಮಾಂಸದ ಉತ್ಪನ್ನಗಳ ಮೇಲೆಯೂ ಇದು ಗಂಭೀರ ಪರಿಣಾಮ ಬೀರಲಿದೆ. ಉದ್ವಿಗ್ನತೆ ಹೀಗೆಯೇ ಮುಂದುವರಿದರೆ ಜಾಗತಿಕ ಜನಜೀವನ ಮತ್ತಷ್ಟು ದುಸ್ತರವಾಗಲಿದೆ.

ಅಮೆರಿಕದ ಸಾಮ್ರಾಜ್ಯಶಾಹಿ ಮತ್ತು ಆಧಿಪತ್ಯದ ಧೋರಣೆ ಇಡೀ ಜಗತ್ತಿಗೆ ಎಷ್ಟು ಅಪಾಯಕಾರಿ ಎಂಬುದನ್ನು ಪ್ರಸ್ತುತ ಇತಿಹಾಸವು ಪದೇ ಪದೇ ನೆನಪಿಸುತ್ತಿದೆ. ಆದ್ದರಿಂದ ಭಾರತವು ಈ ವಿಷಯದಲ್ಲಿ ಮೌನ ಮುರಿದು ಟ್ರಂಪ್ ಅವರ ನೀತಿಗಳನ್ನು ಖಂಡಿಸಬೇಕು. ಇಂತಹ ದುಷ್ಟ ದಾಳಿಗಳು ಜಾಗತಿಕ ಶಾಂತಿ ಮತ್ತು ನಾಗರಿಕರ ಜೀವನಕ್ಕೆ ಮಾರಕ ಎಂಬುದನ್ನು ಗಟ್ಟಿಯಾಗಿ ಧ್ವನಿಸಬೇಕಾಗಿದೆ.

ಇರಾನ್‌ನ ಆರ್ಥಿಕ ಸಂಪನ್ಮೂಲಗಳು ಮತ್ತು ತೈಲ ವ್ಯವಹಾರದ ಮೇಲೆ ಪೆತ್ತನ ಚಲಾಯಿಸಬೇಕೆಂಬ ಅಮೆರಿಕದ ದುಷ್ಟ ಸಂಚು ಫಲಿಸುವುದಿಲ್ಲ ಎಂಬುದನ್ನು ಕಳೆದ ನಾಲ್ಕು ತಿಂಗಳ ಯುದ್ಧದ ಅನುಭವ ಸ್ಪಷ್ಟಪಡಿಸಿದೆ. ವಾಸ್ತವವಾಗಿ ಇರಾನ್ ಮೇಲಿನ ದಾಳಿ ಮತ್ತು ಅದರ ನಂತರದ ಬೆಳವಣಿಗೆಗಳು ಅಮೆರಿಕಕ್ಕೆ ಒಂದು ದೊಡ್ಡ ಪಾಠವಾಗಿದೆ. ಆ ಅನುಭವದಿಂದ ಅದು ಬುದ್ಧಿ ಕಲಿಯಬೇಕಿದೆ. ತನ್ನ ಆಧಿಪತ್ಯದ ರಾಜಕಾರಣಕ್ಕೆ ಸ್ವಸ್ತಿ ಹಾಡಬೇಕಿದೆ.

ಜಗತ್ತಿಗೆ ತಾನೊಬ್ಬನೇ ‘ದೊಡ್ಡಣ್ಣ’, ತಾನೇ ಅಂತಿಮ ತೀರ್ಪುಗಾರ ಎಂಬ ಭ್ರಮೆಯನ್ನು ಬಿಡಬೇಕಾಗಿದೆ. ಸಾರ್ವಭೌಮ ದೇಶಗಳ ಗೌರವವನ್ನು, ಅಂತರರಾಷ್ಟ್ರೀಯ ಕಾನೂನುಗಳನ್ನು ಮತ್ತು ಬಹುಪಕ್ಷೀಯ ರಾಜತಾಂತ್ರಿಕತೆಯನ್ನು ಗೌರವಿಸುವುದನ್ನು ಕಲಿಯಬೇಕು. ಯುದ್ಧಗಳು ಎಂದಿಗೂ ವಿಜೇತರನ್ನು ಸೃಷ್ಟಿಸುವುದಿಲ್ಲ; ಅವು ಕೇವಲ ಹೊಸ ಸಂತ್ರಸ್ತರನ್ನು ಸೃಷ್ಟಿಸುತ್ತವೆಯಷ್ಟೆ. ಜಗತ್ತಿಗೆ ಈಗ ಬೇಕಿರುವುದು ಅಮೆರಿಕದ ಶಕ್ತಿ ಪ್ರದರ್ಶನವಲ್ಲ, ಬದಲಿಗೆ ಶಾಂತಿ ಪ್ರದರ್ಶನ.

You cannot copy content of this page

Exit mobile version