Home ರಾಜ್ಯ ಬಿಜೆಪಿ ನಾಯಕರ ಮಕ್ಕಳು RSS ಪ್ಯಾಂಟ್‌ ಹಾಕೋದು ವಿಜಯದಶಮಿಯಂದು ಮಾತ್ರ; ಬಡವರ ಮಕ್ಕಳ ಕೇಸುಗಳಿಗೆ ಅವರು...

ಬಿಜೆಪಿ ನಾಯಕರ ಮಕ್ಕಳು RSS ಪ್ಯಾಂಟ್‌ ಹಾಕೋದು ವಿಜಯದಶಮಿಯಂದು ಮಾತ್ರ; ಬಡವರ ಮಕ್ಕಳ ಕೇಸುಗಳಿಗೆ ಅವರು ಲಾಯರುಗಳನ್ನು ಕೂಡಾ ನೇಮಿಸುವುದಿಲ್ಲ: ಪ್ರಿಯಾಂಕ್‌ ಖರ್ಗೆ

0

ಬೆಂಗಳೂರು: “ಬಿಜೆಪಿಯವರ ಸಾಮಾಜಿಕ ಜಾಲತಾಣಗಳನ್ನು ಒಮ್ಮೆ ತೆಗೆದು ನೋಡಿ. ಅದರಲ್ಲಿ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಐದು ಬಾರಿ, ಸಿದ್ದರಾಮಯ್ಯ ಅವರ ಬಗ್ಗೆ ಐದು ಬಾರಿ ಹಾಗೂ ನನ್ನ ಬಗ್ಗೆ ಕನಿಷ್ಠ ಮೂರು ಬಾರಿಯಾದರೂ ಪೋಸ್ಟ್‌ಗಳನ್ನು ಹಾಕಿರುತ್ತಾರೆ. ಅಂದರೆ, ಬಿಜೆಪಿಯ ಐಟಿ ಸೆಲ್‌ನವರಿಗೆ ಸಂಬಳ ಸಿಗುತ್ತಿರುವುದೇ ನಮ್ಮ ಹೆಸರಿನಿಂದ. ಒಂದು ವೇಳೆ ಅವರು ನಮ್ಮ ಹೆಸರು ಹೇಳದಿದ್ದರೆ ಬಹುಶಃ ಅವರೆಲ್ಲರೂ ನಿರುದ್ಯೋಗಿಗಳಾಗುತ್ತಿದ್ದರು,” ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ರಾಜಕೀಯ ತಂತ್ರಗಳು ಹಾಗೂ ಯುವಕರನ್ನು ಬಳಸಿಕೊಳ್ಳುತ್ತಿರುವ ಧೋರಣೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ನನ್ನ ಪ್ರಶ್ನೆಗಳು ತಾರ್ಕಿಕವಾಗಿವೆ; ಅದಕ್ಕೆ ಅವರ ವಿಶೇಷ ಪ್ರೀತಿ!

“ನಾನು ಯಾವಾಗಲೂ ತಾರ್ಕಿಕವಾಗಿ ಹಾಗೂ ಸತ್ಯದ ಆಧಾರದ ಮೇಲೆ ಮಾತನಾಡುತ್ತೇನೆ. ನಾನು ಕೇಳಿರುವ ಯಾವುದೇ ಪ್ರಶ್ನೆಗಳು ಸಂವಿಧಾನ ವಿರೋಧಿಯಾಗಲೀ ಅಥವಾ ಅಸಂಬದ್ಧವಾಗಲೀ ಆಗಿಲ್ಲ. ಇದೇ ಕಾರಣಕ್ಕೆ ಬಿಜೆಪಿಯವರಿಗೆ ನನ್ನ ಮೇಲೆ ವಿಶೇಷ ಪ್ರೀತಿ ಇದೆ. ಕೇವಲ ಇಲ್ಲಿ ಮಾತ್ರವಲ್ಲ, ದೆಹಲಿ ಮಟ್ಟದಲ್ಲೂ ನನ್ನ ವಿರುದ್ಧ ದಾಖಲೆಗಳನ್ನು ಕಲೆಹಾಕಲಾಗುತ್ತಿದೆ. ‘ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನಂತರ ನೀನೇ ದೇಶದ ದೊಡ್ಡ ಗೃಹಮಂತ್ರಿ’ ಎಂದು ಅಮಿತ್ ಶಾ ಅವರಿಗೆ ಆರ್‌ಎಸ್‌ಎಸ್‌ನವರು ಹೇಳಿಕೊಂಡು ತಿರುಗುತ್ತಿದ್ದಾರೆ.

ಆದರೆ, ಇಷ್ಟೆಲ್ಲಾ ಇದ್ದರೂ ಪ್ರಿಯಾಂಕ್ ಖರ್ಗೆ ವಿರುದ್ಧ ನೀವೇನೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರ್‌ಎಸ್‌ಎಸ್‌ನವರೇ ಅಮಿತ್ ಶಾ ಅವರಿಗೆ ಕ್ಲಾಸ್ ತಗೊಂಡಿದ್ದಾರೆ. ಇನ್ನೇನು ಕೆಲವು ವಾರಗಳಲ್ಲಿ ನನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೂ ಅವರು ಅನುಮತಿ ಕೇಳಬಹುದು. ಇದೆಲ್ಲವೂ ಅವರ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಆಗಿದೆ,” ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.

ಕೋಮು ಗಲಭೆಗಳಲ್ಲಿ ಬಡವರ ಮಕ್ಕಳಷ್ಟೇ ಬಲಿ; ಬಿಜೆಪಿ ನಾಯಕರ ಮಕ್ಕಳಿದ್ದಾರಾ?

ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿರುವ ತಮಗೆ ಸಂಘ ಪರಿವಾರದಿಂದ ಯಾವುದೇ ಕಾನೂನು ನೆರವು ಸಿಗುತ್ತಿಲ್ಲ ಎಂದು ಹಿಂದುತ್ವ ಸಂಘಟನೆಗಳ ಕಾರ್ಯಕರ್ತರೇ ಬೇಸರ ವ್ಯಕ್ತಪಡಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಅವರ ಕಾರ್ಯಕರ್ತರು ಈಗಲಾದರೂ ಸತ್ಯವನ್ನು ಒಪ್ಪಿಕೊಳ್ಳುತ್ತಿರುವುದು ಸಂತೋಷದ ವಿಷಯ. ನಾನು ಇದನ್ನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ.

ಶಾಲು ಹೊದಿಸುವುದು, ಗೋಶಾಲೆಗೆ ಹೋಗುವುದು, ಗೋಮೂತ್ರ ಕುಡಿಯುವುದು ಮತ್ತು ಧರ್ಮ ರಕ್ಷಣೆ-ಗೋರಕ್ಷಣೆಯ ಹೆಸರಲ್ಲಿ ಬೀದಿಗೆ ಇಳಿಯುವ ಕೆಲಸಗಳನ್ನೆಲ್ಲಾ ಕೇವಲ ಬಡವರ ಮಕ್ಕಳಿಗಷ್ಟೇ ಸೀಮಿತಗೊಳಿಸಲಾಗಿದೆ. ಇಷ್ಟೊಂದು ಭಾಷಣ ಬಿಗಿಯುವ ಯಾವನಾದರೂ ಒಬ್ಬ ಬಿಜೆಪಿ ನಾಯಕನ ಮಗ ಆರ್‌ಎಸ್‌ಎಸ್‌ನಲ್ಲಿ ಪೂರ್ಣಾವಧಿ ಪ್ರಚಾರಕನಾಗಿ ಕೆಲಸ ಮಾಡುತ್ತಿದ್ದಾನಾ? ಎಂಬುದನ್ನು ತೋರಿಸಲಿ,” ಎಂದು ಸವಾಲು ಹಾಕಿದರು.

“ವಿಜಯದಶಮಿಯ ದಿನದಂದು ಬಂದು ಚಡ್ಡಿ-ಪ್ಯಾಂಟ್ ಹಾಕಿಕೊಂಡು ಓಡಾಡುವುದಲ್ಲ ಪೂರ್ಣಾವಧಿ ಕೆಲಸ ಎಂದರೆ. ದೇಶದಲ್ಲಿ ನಡೆಯುವ ಕೋಮು ಗಲಭೆಗಳಲ್ಲಿ ಸಾಯುತ್ತಿರುವವರು ಯಾರು? ಇವರ ಮಕ್ಕಳು ಅಲ್ಲಿಗೆ ಹೋಗುತ್ತಾರಾ? ಪರೇಶ್ ಮೇಸ್ತಾ ಸೇರಿದಂತೆ ಎಷ್ಟೋ ಯುವಕರ ಹೆಸರಿನಲ್ಲಿ ಇವರು ಚುನಾವಣೆ ಗೆದ್ದರು.

ಆದರೆ, ಆ ಬಳಿಕ ಮೃತಪಟ್ಟ ಬಡ ಯುವಕರ ಮನೆಗಳಿಗೆ ಇವರು ಹೋಗಿದ್ದಾರಾ? ಸಾವನ್ನಪ್ಪಿದ ಆ ಯುವಕರ ವಯಸ್ಸು ಕೇವಲ 22, 25 ಅಥವಾ 28 ವರ್ಷ ಇರಬಹುದು. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಾತ್ರ ಇವರಿಗೆ ಬಡವರ ಮಕ್ಕಳು ಬೇಕು,” ಎಂದು ಆಕ್ರೋಶ ಹೊರಹಾಕಿದರು.

ಯುವಕರು ಜಾಗೃತರಾಗಿ, ನರಕಕ್ಕೆ ಬೀಳಬೇಡಿ

“ಕೋಮು ಘರ್ಷಣೆಗಳಿಗೆ ಹಿಂದುಳಿದ ವರ್ಗಗಳ, ದಲಿತ ಹಾಗೂ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಯುವಕರನ್ನು ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಆರ್‌ಎಸ್‌ಎಸ್ ಅಥವಾ ಬಿಜೆಪಿಯವರು ಎಂದಾದರೂ ರೈತರ ಪರವಾಗಿ ಪ್ರತಿಭಟನೆ ನಡೆಸಿದ್ದನ್ನು ನೋಡಿದ್ದೀರಾ? ನಿರುದ್ಯೋಗ ಮತ್ತು ಬೆಲೆ ಏರಿಕೆಯ ಬಗ್ಗೆ ಅವರು ಮಾತನಾಡುತ್ತಾರಾ? ಇಲ್ಲ, ಅವರಿಗೆ ಬರೆ ಪ್ರಚೋದನೆ ನೀಡುವುದು ಮಾತ್ರ ಗೊತ್ತು.

ನನ್ನ ಮೇಲೆಯೇ ಬೆದರಿಕೆ ಹಾಕಿದ್ದ ಒಬ್ಬ ಆರ್‌ಎಸ್‌ಎಸ್ ಬೆಂಬಲಿಗನಿಗೆ ಕೊನೆಗೆ ಅವರ ಸಂಘಟನೆಯವರು ಒಂದು ಲಾಯರ್ ಕೂಡ ಕೊಡಲಿಲ್ಲ. ನಂತರ ಆತನ ತಾಯಿಯೇ ನನಗೆ ಫೋನ್ ಮಾಡಿ, ‘ನಮ್ಮ ಮಗನಿಗೆ ಯಾಕೆ ಇಂತಹ ಬುದ್ಧಿ ಬಂತೋ ಗೊತ್ತಿಲ್ಲ, ನಾವು ಅವನನ್ನು ಹೀಗೆ ಬೆಳೆಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದಾಗ ನಾನೇ ಸುಮ್ಮನಾದೆ,” ಎಂಬ ಘಟನೆಯನ್ನು ಸಚಿವರು ನೆನಪಿಸಿಕೊಂಡರು.

“ನಮ್ಮ ರಾಜ್ಯದ ಯುವ ಸ್ನೇಹಿತರಲ್ಲಿ ನಾನು ವಿನಂತಿಸುವುದೇನೆಂದರೆ, ದಯವಿಟ್ಟು ಇಂತಹ ಹಾದಿ ತಪ್ಪಿಸುವ ತಂಟೆಗೆ ಹೋಗಬೇಡಿ. ಬಿಜೆಪಿ ಅಥವಾ ಸಂಘ ಪರಿವಾರದ ನಾಯಕರ ಮಕ್ಕಳು ಯಾರೂ ಇಂತಹ ಘರ್ಷಣೆಗಳಲ್ಲಿ ಇರುವುದಿಲ್ಲ. ಅವರು ಬರೆ ನಿಮ್ಮನ್ನು ಮಾತ್ರ ನರಕಕ್ಕೆ ತಳ್ಳುತ್ತಾರೆ. ಒಮ್ಮೆ ನೀವು ಸಂಕಷ್ಟಕ್ಕೆ ಸಿಲುಕಿದರೆ ನಿಮ್ಮ ಸಹಾಯಕ್ಕೆ ಯಾರೂ ಬರುವುದಿಲ್ಲ.

ಈಗಲಾದರೂ ಜಾಗೃತರಾಗಿ, ಉತ್ತಮ ಉದ್ಯೋಗ ಹುಡುಕಿಕೊಂಡು ನಿಮ್ಮ ಕುಟುಂಬದವರಿಗೆ ಆಸರೆಯಾಗಿ,” ಎಂದು ಪ್ರಿಯಾಂಕ್ ಖರ್ಗೆ ಯುವಕರಿಗೆ ಕರೆ ನೀಡಿದರು. ಇದೇ ವೇಳೆ, ಈ ಹಿಂದೆ ಆರ್‌ಎಸ್‌ಎಸ್‌ನಲ್ಲಿದ್ದ ಮಹೇಂದ್ರ ಕುಮಾರ್ ಅವರು ಇಂತಹವರನ್ನು ‘ರಕ್ತಪಿಪಾಸುಗಳು’ ಎಂದು ಕರೆಯುತ್ತಿದ್ದನ್ನು ಸಚಿವರು ಉಲ್ಲೇಖಿಸಿದರು.

You cannot copy content of this page

Exit mobile version