Home ದೇಶ ತಮಿಳುನಾಡು: ಅಮೋನಿಯಾ ಅನಿಲ ಸೋರಿಕೆ ದುರಂತ; 7 ವಲಸೆ ಕಾರ್ಮಿಕರ ಸಾವು, 40ಕ್ಕೂ ಹೆಚ್ಚು ಮಂದಿ...

ತಮಿಳುನಾಡು: ಅಮೋನಿಯಾ ಅನಿಲ ಸೋರಿಕೆ ದುರಂತ; 7 ವಲಸೆ ಕಾರ್ಮಿಕರ ಸಾವು, 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ

0

ಚೆನ್ನೈ : ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಪೆರಿಯಪಾಳ್ಯಂ ಸಮೀಪದ ಕಣ್ಣಿಗೈಪೇರ್‌ನಲ್ಲಿರುವ ಖಾಸಗಿ ಸೀಫುಡ್ ರಫ್ತು ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆಯಿಂದ ಸಂಭವಿಸಿದ ಭೀಕರ ದುರಂತದಲ್ಲಿ ಏಳು ಮಂದಿ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾರ್ಖಾನೆಯ ಆವರಣದಲ್ಲಿರುವ ವಸತಿಗೃಹದಲ್ಲಿ ಅಸ್ಸಾಂ, ಒಡಿಶಾ ಹಾಗೂ ಜಾರ್ಖಂಡ್ ಮೂಲದ ಸುಮಾರು 120 ವಲಸೆ ಕಾರ್ಮಿಕರು ವಾಸಿಸುತ್ತಿದ್ದರು. ಭಾನುವಾರ ಕಾರ್ಖಾನೆಗೆ ರಜೆ ಇದ್ದ ಕಾರಣ ಹೆಚ್ಚಿನ ಕಾರ್ಮಿಕರು ತಮ್ಮ ಕೊಠಡಿಗಳಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಇದೇ ವೇಳೆ ಪಕ್ಕದಲ್ಲಿದ್ದ ಸೀಫುಡ್ ಸಂಸ್ಕರಣಾ ಘಟಕದಿಂದ ಅಮೋನಿಯಾ ಅನಿಲ ಸೋರಿಕೆಯಾಗಿದ್ದು, ಕೆಲವೇ ಕ್ಷಣಗಳಲ್ಲಿ ಇಡೀ ಪ್ರದೇಶವನ್ನು ಆವರಿಸಿತು.

ಅನಿಲದ ತೀವ್ರತೆಗೆ ಸಿಲುಕಿದ ಕಾರ್ಮಿಕರು ಉಸಿರಾಟದ ತೊಂದರೆಯಿಂದ ತತ್ತರಿಸಿದ್ದು, ಕೆಲವರ ಬಾಯಿ ಮತ್ತು ಮೂಗಿನಿಂದ ರಕ್ತಸ್ರಾವ ಉಂಟಾಗಿದೆ. ಹಲವರು ಪ್ರಜ್ಞೆ ತಪ್ಪಿ ಬಿದ್ದಿದ್ದು, ಸ್ಥಳೀಯರು ಹಾಗೂ ಅಧಿಕಾರಿಗಳು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಕೈಗೊಂಡು ಸಂತ್ರಸ್ತರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಏಳು ಮಂದಿ ಮೃತಪಟ್ಟಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಒಂಬತ್ತು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಸ್ಟ್ಯಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೆರಿಯಪಾಳ್ಯಂ ಪೊಲೀಸರು, ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ, ಆರೋಗ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಜಿಲ್ಲಾಡಳಿತದ ಮನವಿಯ ಮೇರೆಗೆ ಅರಕ್ಕೋಣಂನಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ರಾಸಾಯನಿಕ ಮತ್ತು ಜೈವಿಕ ವಿಪತ್ತು ನಿರ್ವಹಣಾ ವಿಶೇಷ ತಂಡವನ್ನು ಕರೆಸಲಾಗಿದ್ದು, 30 ಸದಸ್ಯರ ತಂಡವು ಅನಿಲ ಸೋರಿಕೆ ನಿಯಂತ್ರಣ ಮತ್ತು ಪರಿಸ್ಥಿತಿ ನಿರ್ವಹಣೆಯಲ್ಲಿ ತೊಡಗಿದೆ.

ಈ ಮಧ್ಯೆ ದುರಂತದ ಕುರಿತು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ನಿರ್ದೇಶಕರು, ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಹಾಗೂ ಸಾರ್ವಜನಿಕ ಆರೋಗ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕರನ್ನೊಳಗೊಂಡ ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಲಾಗಿದೆ.

ಸಮಿತಿಯು 24 ಗಂಟೆಗಳೊಳಗೆ ಮಧ್ಯಂತರ ವರದಿ ಹಾಗೂ ಮೂರು ದಿನಗಳೊಳಗೆ ಅಂತಿಮ ವರದಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಐಟಿ ಸಚಿವರು ತಕ್ಷಣವೇ ತಿರುವಳ್ಳೂರಿಗೆ ಭೇಟಿ ನೀಡಿ, ಜಿಲ್ಲಾಡಳಿತದೊಂದಿಗೆ ಮಾತನಾಡಿ ಸಂತ್ರಸ್ತರಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸುವಂತೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.

ಅನಿಲ ಸೋರಿಕೆಗೆ ಕಾರಣವೇನು ಎಂಬ ಕುರಿತು ಪೆರಿಯಪಾಳ್ಯಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

You cannot copy content of this page

Exit mobile version