Home ದೇಶ ಕಾಕ್ರೋಚ್‌ ವಿವಾದ | NALSAR ಘಟಿಕೋತ್ಸವ ಸಮಾರಂಭಕ್ಕೆ ಸಿಜೆಐ ಸೂರ್ಯಕಾಂತ್ ಮುಖ್ಯ ಅತಿಥಿಯಾಗಿ ಬರುವುದನ್ನು ವಿರೋಧಿಸಿದ ಕಾನೂನು...

ಕಾಕ್ರೋಚ್‌ ವಿವಾದ | NALSAR ಘಟಿಕೋತ್ಸವ ಸಮಾರಂಭಕ್ಕೆ ಸಿಜೆಐ ಸೂರ್ಯಕಾಂತ್ ಮುಖ್ಯ ಅತಿಥಿಯಾಗಿ ಬರುವುದನ್ನು ವಿರೋಧಿಸಿದ ಕಾನೂನು ವಿವಿಯ 450 ವಿದ್ಯಾರ್ಥಿಗಳು

0

ಹೈದರಾಬಾದ್‌ನ ‘ನಾಲ್ಸಾರ್’ (NALSAR) ಕಾನೂನು ವಿಶ್ವವಿದ್ಯಾಲಯದ ಮುಂಬರುವ ಘಟಿಕೋತ್ಸವ ಸಮಾರಂಭಕ್ಕೆ ಸಂಬಂಧಿಸಿದಂತೆ ವಿವಾದವೊಂದು ಎದ್ದಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸುವುದಕ್ಕೆ ವಿಶ್ವವಿದ್ಯಾಲಯದ ಸುಮಾರು 450 ಕಾನೂನು ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. CJI ಸೂರ್ಯಕಾಂತ್ ಅವರನ್ನು ದೀಕ್ಷಾಂತ ಸಮಾರಂಭಕ್ಕೆ ಆಹ್ವಾನಿಸಬಾರದು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕುಲಪತಿ, ರಿಜಿಸ್ಟ್ರಾರ್ ಹಾಗೂ ಪ್ರಾಧ್ಯಾಪಕರಿಗೆ ಪತ್ರ ಬರೆದಿದ್ದಾರೆ.

ವಿರೋಧ ವ್ಯಕ್ತಪಡಿಸಿರುವವರಲ್ಲಿ ಎಲ್‌ಎಲ್‌ಬಿ (LLB) ಮತ್ತು ಎಲ್‌ಎಲ್‌ಎಮ್ (LLM) ಅಂತಿಮ ವರ್ಷದ ವಿದ್ಯಾರ್ಥಿಗಳೂ ಸೇರಿದ್ದಾರೆ. ಇತ್ತೀಚೆಗೆ ನೀಟ್ (NEET) ಪರೀಕ್ಷಾ ಅಕ್ರಮಗಳ ವಿರುದ್ಧ ನಡೆದ ಪ್ರತಿಭಟನೆಗಳ ವೇಳೆ ನಡೆದ ಪೋಲಿಸ್ ದೌರ್ಜನ್ಯದ ಕುರಿತ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ CJI ಸೂರ್ಯಕಾಂತ್ ಅವರು ನೀಡಿದ್ದ ಮೌಖಿಕ ಹೇಳಿಕೆಗಳನ್ನು ಉಲ್ಲೇಖಿಸಿ ವಿದ್ಯಾರ್ಥಿಗಳು ಈ ಕಠಿಣ ನಿಲುವು ತಳೆದಿದ್ದಾರೆ.

ಆದರೆ, NALSAR ವಿಶ್ವವಿದ್ಯಾಲಯವು ಇದುವರೆಗೆ ದೀಕ್ಷಾಂತ ಸಮಾರಂಭದ ದಿನಾಂಕವನ್ನು ಪ್ರಕಟಿಸಿಲ್ಲ ಅಥವಾ ಮುಖ್ಯ ಅತಿಥಿಗಳ ಹೆಸರನ್ನು ಅಧಿಕೃತವಾಗಿ ಖಚಿತಪಡಿಸಿಲ್ಲ. ಆದರೆ, ಕಳೆದ ಹಲವು ವರ್ಷಗಳಿಂದ ಹಾಲಿ ಸಿಜೆಐ ಅವರೇ NALSAR ಸಂಸ್ಥೆಯ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಭಾಷಣ ಮಾಡುವ ಪರಂಪರೆಯಿದೆ.

‘ಸಮಾರಂಭ ರದ್ದಾಗುವ ಸಾಧ್ಯತೆ’

ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆ ಮತ್ತು ವಿರೋಧವನ್ನು ಗಮನದಲ್ಲಿಟ್ಟುಕೊಂಡು ವಿಶ್ವವಿದ್ಯಾಲಯವು ಈ ವರ್ಷದ ದೀಕ್ಷಾಂತ ಸಮಾರಂಭವನ್ನೇ ರದ್ದುಗೊಳಿಸುವ ಸಾಧ್ಯತೆಯಿದೆ ಎಂದು ಹೆಸರು ಹೇಳಲಿಚ್ಛಿಸದ ಬೋಧಕ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಅಂತಿಮ ವರ್ಷದ ಎಲ್‌ಎಲ್‌ಬಿ ಬ್ಯಾಚ್‌ನ 70 ವಿದ್ಯಾರ್ಥಿಗಳು ಜುಲೈ 23ರಂದು ಆಡಳಿತ ಮಂಡಳಿಗೆ ಮೊದಲ ಮನವಿ ಸಲ್ಲಿಸಿದ್ದರು. ಜುಲೈ 25ರ ವೇಳೆಗೆ 2027, 2028, 2029, 2030 ಮತ್ತು 2031ನೇ ಬ್ಯಾಚ್‌ಗಳ ಸುಮಾರು 380 ವಿದ್ಯಾರ್ಥಿಗಳು ಈ ಮನವಿಗೆ ಬೆಂಬಲ ಸೂಚಿಸಿ ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ.

ಜುಲೈ 22ರಂದು ದೆಹಲಿಯಲ್ಲಿ ಜುಲೈ 20ರಂದು ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧ ನಡೆದ ಪೋಲಿಸ್ ದೌರ್ಜನ್ಯ ಮತ್ತು ಬಲಪ್ರಯೋಗದ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಪೋಲಿಸ್ ದೌರ್ಜನ್ಯಕ್ಕೆ ಸಂಬಂಧಿಸಿದ ವೀಡಿಯೊ ಸಾಕ್ಷ್ಯಗಳಿವೆ ಎಂದು ವಕೀಲರೊಬ್ಬರು ತಿಳಿಸಿದಾಗ, ಆ ವೀಡಿಯೊಗಳನ್ನು ನೋಡಲು ನಿರಾಕರಿಸಿದ್ದ CJI ಸೂರ್ಯಕಾಂತ್, ಕೋರ್ಟ್ ಸಮಯವನ್ನು ವ್ಯರ್ಥ ಮಾಡಬಾರದು ಎಂದು ಮೌಖಿಕವಾಗಿ ಹೇಳಿದ್ದರು.

ಈ ಹೇಳಿಕೆ ಬಂದ ಮರುದಿನವೇ ವಿದ್ಯಾರ್ಥಿಗಳು ಆಡಳಿತ ಮಂಡಳಿಗೆ ಮೊದಲ ಪತ್ರ ಬರೆದಿದ್ದರು. “ಪೋಲಿಸ್ ದೌರ್ಜನ್ಯದ ವಿರುದ್ಧದ ಅರ್ಜಿಯ ತುರ್ತು ವಿಚಾರಣೆಗೆ ಮಾನ್ಯ ಮುಖ್ಯ ನ್ಯಾಯಮೂರ್ತಿಗಳ ಪೀಠವು ಅನುಮತಿ ನೀಡದಿರುವುದು ನಮ್ಮಲ್ಲಿ ಕಳವಳವನ್ನುಂಟುಮಾಡಿದೆ. ಘಟಿಕೋತ್ಸವ ಸಮಾರಂಭವು ವಿಶ್ವವಿದ್ಯಾಲಯದ ಸಾಂವಿಧಾನಿಕ ಮೌಲ್ಯಗಳು, ನ್ಯಾಯದ ತಲುಪುವಿಕೆ ಹಾಗೂ ದೂರುಗಳ ಮೇಲಿನ ತಾರ್ಕಿಕ ಚಿಂತನೆಗಳನ್ನು ಪ್ರತಿಬಿಂಬಿಸುವ ವೇದಿಕೆಯಾಗಿದೆ. ಆದರೆ, ಪ್ರತಿಭಟನಾಕಾರರ ಮೇಲಿನ ಪೋಲಿಸ್ ದೌರ್ಜನ್ಯದ ಗಂಭೀರ ಆರೋಪಗಳನ್ನು ನಿರ್ಲಕ್ಷಿಸುವ ರೀತಿಯಲ್ಲಿ ನಡೆದುಕೊಂಡ ಗಣ್ಯರಿಂದ ಪದವಿ ಸ್ವೀಕರಿಸುವುದು NALSAR ಸಂಸ್ಥೆಯಲ್ಲಿ ನಮಗೆ ಕಲಿಸಿದ ಮೌಲ್ಯಗಳಿಗೆ ವಿರುದ್ಧವಾಗಿದೆ. ಆದ್ದರಿಂದ ವಿಶ್ವವಿದ್ಯಾಲಯವು ಮುಖ್ಯ ಅತಿಥಿಗಳ ಆಯ್ಕೆಯನ್ನು ಮರುಪರಿಶೀಲಿಸಬೇಕು,” ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದರು.

ಮುಂಬರುವ ವಿವಿಧ ಬ್ಯಾಚ್‌ಗಳ ವಿದ್ಯಾರ್ಥಿಗಳೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. 2030ರ ಬ್ಯಾಚ್ ಬರೆದ ಪತ್ರದಲ್ಲಿ, “ಮುಖ್ಯ ನ್ಯಾಯಮೂರ್ತಿಗಳು ‘ದಯವಿಟ್ಟು ನಮ್ಮ ಸಮಯ ಹಾಳುಮಾಡಬೇಡಿ, ನಮಗೆ ಈ ವೀಡಿಯೊ ನೋಡಲು ಸಮಯವಿಲ್ಲ’ ಎಂದು ಹೇಳಿರುವುದು ದಾಖಲೆಯಲ್ಲಿದೆ. ಈ ಹಿಂದೆ ಕೂಡ ಅವರು ಯುವಜನರನ್ನು ‘ವ್ಯವಸ್ಥೆಯ ಮೇಲಿನ ಪರಾವಲಂಬಿಗಳು ಮತ್ತು ಕಾಕ್ರೋಚ್‌ಗಳು’ ಎಂದು ಕರೆದಿದ್ದರು. ಭಾರತದ ಮುಖ್ಯ ನ್ಯಾಯಮೂರ್ತಿಗಳ ಇಂತಹ ನಡವಳಿಕೆಯು ನಮ್ಮ ಸಂವಿಧಾನದ ತತ್ವಗಳಿಗೆ ಹಾಗೂ NALSAR ನ ಮೌಲ್ಯಗಳಿಗೆ ಪೂರಕವಾಗಿಲ್ಲ,” ಎಂದು ಉಲ್ಲೇಖಿಸಲಾಗಿದೆ.

ಆದರೆ, ಕಾಕ್ರೋಚ್‌ ಹೇಳಿಕೆಗೆ ಸಂಬಂಧಿಸಿದಂತೆ ತನ್ನ ಹೇಳಿಕೆಯನ್ನು ಮಾಧ್ಯಮಗಳ ಒಂದು ವಿಭಾಗವು ತಪ್ಪಾಗಿ ಬಿಂಬಿಸಿದೆ ಎಂದು ಸಿಜೆಐ ಸೂರ್ಯಕಾಂತ್ ಅವರು ನಂತರ ಸ್ಪಷ್ಟನೆ ನೀಡಿದ್ದರು. ನಕಲಿ ಅಥವಾ ಕಪಟ ಪದವಿಗಳ ಮೂಲಕ ವಿವಿಧ ವೃತ್ತಿಗಳನ್ನು ಪ್ರವೇಶಿಸಿದವರನ್ನು ಉದ್ದೇಶಿಸಿ ಮಾತ್ರ ತಾವು ಆ ಮಾತುಗಳನ್ನು ಹೇಳಿದ್ದಾಗಿ ಅವರು ಸ್ಪಷ್ಟಪಡಿಸಿದ್ದರು.

You cannot copy content of this page

Exit mobile version