Home ರಾಜಕೀಯ ಮಮತಾ ಬ್ಯಾನರ್ಜಿ ಕಾರಿನ ಮೇಲಿನ ದಾಳಿ ಸಿಎಂ ಸುವೇಂಧು ಅಧಿಕಾರಿ ಸೂಚನೆಯಂತೆ ನಡೆದಿದೆ: ಟಿಎಂಸಿ ಸಂಸದ...

ಮಮತಾ ಬ್ಯಾನರ್ಜಿ ಕಾರಿನ ಮೇಲಿನ ದಾಳಿ ಸಿಎಂ ಸುವೇಂಧು ಅಧಿಕಾರಿ ಸೂಚನೆಯಂತೆ ನಡೆದಿದೆ: ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಆರೋಪ

0

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಾರಿನ ಮೇಲೆ ನಡೆದ ದಾಳಿಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ತೃಣಮೂಲ ಕಾಂಗ್ರೆಸ್ (TMC) ಸಂಸದರಾದ ಕಲ್ಯಾಣ್ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಭಾನುವಾರ ಆರೋಪಿಸಿದ್ದಾರೆ. ಉತ್ತರ 24 ಪರಗಣದಲ್ಲಿ ಪೋಲಿಸ್ ವಶದಲ್ಲಿದ್ದಾಗ ಮೃತಪಟ್ಟ ಟಿಎಂಸಿ ಕಾರ್ಯಕರ್ತನ ಕುಟುಂಬವನ್ನು ಭೇಟಿಯಾಗಲು ಮಮತಾ ಬ್ಯಾನರ್ಜಿ ತೆರಳುತ್ತಿದ್ದಾಗ ಅವರ ಕಾರಿನ ಮೇಲೆ ಕಲ್ಲು ಮತ್ತು ಇತರ ವಸ್ತುಗಳನ್ನು ತೂರಲಾಗಿದೆ. ಈ ಸಂದರ್ಭದಲ್ಲಿ ಟಿಎಂಸಿ ಸಂಸದರಾದ ಕಲ್ಯಾಣ್ ಬ್ಯಾನರ್ಜಿ ಮತ್ತು ಡೋಲಾ ಸೇನ್ ಅವರು ಮಮತಾ ಅವರ ಜೊತೆಯಲ್ಲಿದ್ದರು.

ಈ ಘಟನೆಯನ್ನು ಕೊಲೆ ಯತ್ನ ಎಂದು ಬಣ್ಣಿಸಿರುವ ಕಲ್ಯಾಣ್ ಬ್ಯಾನರ್ಜಿ, ಮಮತಾ ಬ್ಯಾನರ್ಜಿ ಅವರನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಘಟನೆಯ ಸಮಯದಲ್ಲಿ ಪೋಲಿಸರು ಮೂಕಪ್ರೇಕ್ಷಕರಾಗಿದ್ದರು ಎಂದು ದೂರಿದ ಅವರು, “ಕಾರಿನ ಮೇಲೆ ನಿರಂತರವಾಗಿ ಕಲ್ಲುಗಳನ್ನು ತೂರಲಾಗುತ್ತಿತ್ತು. ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ,” ಎಂದಿದ್ದಾರೆ.

ಘಟನಾ ಸ್ಥಳದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರಿದ್ದರು ಮತ್ತು ಪೋಲಿಸರ ಸಮ್ಮುಖದಲ್ಲೇ ಈ ಘಟನೆ ನಡೆದಿದೆ ಎಂದು ಕಲ್ಯಾಣ್ ಬ್ಯಾನರ್ಜಿ ಆರೋಪಿಸಿದ್ದಾರೆ. “ನೂರಾರು ಬಿಜೆಪಿ ಕಾರ್ಯಕರ್ತರು ಅಲ್ಲಿದ್ದರು ಮತ್ತು ಪೋಲಿಸರು ಕೇವಲ ಮೂಕಪ್ರೇಕ್ಷಕರಾಗಿ ನಿಂತಿದ್ದರು. ಖಂಡಿತವಾಗಿಯೂ ಈ ಘಟನೆಯು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ಅವರ ಸೂಚನೆಯ ಮೇರೆಗೆ ನಡೆದಿದೆ,” ಎಂದು ಅವರು ಪ್ರತಿಪಾದಿಸಿದ್ದಾರೆ.

ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಾಜಕೀಯ ಹಿಂಸಾಚಾರವನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಿದ್ದು, ಮೃತ ಕಾರ್ಯಕರ್ತನ ಕುಟುಂಬವನ್ನು ಭೇಟಿಯಾಗಲು ತೆರಳುತ್ತಿದ್ದ ಮಮತಾ ಬ್ಯಾನರ್ಜಿಯವರ ಮೇಲೆ “ಕ್ರೂರವಾಗಿ ದಾಳಿ” ಮಾಡಲಾಗಿದೆ ಎಂದು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಅಭಿಷೇಕ್ ಬ್ಯಾನರ್ಜಿ, ಈ ಘಟನೆಯು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಂಪೂರ್ಣ ವೈಫಲ್ಯವನ್ನು ತೋರಿಸುತ್ತದೆ ಎಂದು ಬರೆದಿದ್ದಾರೆ. “ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳುತ್ತಿದ್ದ ರಾಜ್ಯದ ಮಾಜಿ ಮುಖ್ಯಮಂತ್ರಿಯ ಮೇಲೆಯೇ ಬಿಜೆಪಿ ಕಳುಹಿಸಿದ ಗೂಂಡಾಗಳು ಭೀಕರವಾಗಿ ದಾಳಿ ಮಾಡಿದ್ದಾರೆ,” ಎಂದು ಎಎನ್‌ಐ ವರದಿ ಮಾಡಿದೆ. ಪೋಲಿಸರ ನಡವಳಿಕೆಯನ್ನು ಪ್ರಶ್ನಿಸಿದ ಅವರು, ಇದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿ ಎಂದಿದ್ದಾರೆ.

ಕಾನೂನು ಸುವ್ಯವಸ್ಥೆ ಪ್ರಶ್ನಿಸಿದ ಡೋಲಾ ಸೇನ್

ರಾಜ್ಯಸಭಾ ಸಂಸದೆ ಡೋಲಾ ಸೇನ್ ಮಾತನಾಡಿ, ಪೋಲಿಸ್ ವಶದಲ್ಲಿದ್ದಾಗ ಮೃತಪಟ್ಟ ಟಿಎಂಸಿ ಕಾರ್ಯಕರ್ತನ ಕುಟುಂಬವನ್ನು ಭೇಟಿಯಾಗಲು ಮಮತಾ ಬ್ಯಾನರ್ಜಿ ತೆರಳಿದ್ದರು. ಅವರನ್ನು ತಡೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. “ನಮ್ಮ ಕಾರ್ಯಕರ್ತ ಪೋಲಿಸ್ ವಶದಲ್ಲಿದ್ದಾಗ ಮೃತಪಟ್ಟಿದ್ದಾನೆ, ಇದು ಲಾಕಪ್ ಡೆತ್‌ನಂತೆಯೇ ಸರಿ. ಅವರ ಪತ್ನಿ ಕೌನ್ಸಿಲರ್. ನ್ಯಾಯದ ತತ್ವದಂತೆ ನಮ್ಮ ನಾಯಕಿ ಮಮತಾ ಬ್ಯಾನರ್ಜಿ ಆ ಕುಟುಂಬವನ್ನು ಭೇಟಿಯಾಗಬಾರದಿತ್ತೇ?” ಎಂದು ಕೇಳಿದ್ದಾರೆ.

ಮಮತಾ ಬ್ಯಾನರ್ಜಿ ಅವರ ವಾಹನದ ಮೇಲೆ ಇಟ್ಟಿಗೆ ಮತ್ತು ಕಲ್ಲುಗಳನ್ನು ತೂರಲಾಗಿದೆ ಎಂದು ಡೋಲಾ ಸೇನ್ ಆರೋಪಿಸಿದ್ದು, ಬಿಜೆಪಿ ಗೂಂಡಾಗಳು ಮತ್ತು ಪೋಲಿಸರು ಮುಂಭಾಗದಲ್ಲೇ ನಿಂತು ಇಟ್ಟಿಗೆ-ಕಲ್ಲುಗಳನ್ನು ತೂರಿದ್ದರಿಂದ ದೀದಿ ಕಾರಿನ ಗ್ಲಾಸ್ ಒಡೆದು ಹೋಗಿದೆ ಎಂದಿದ್ದಾರೆ. ಇದೊಂದು ರಾಜಕೀಯ ಕಾರ್ಯಕ್ರಮವಾಗಿರಲಿಲ್ಲ, ಕೇವಲ ಸಾಂತ್ವನ ಹೇಳುವ ಭೇಟಿಯಾಗಿತ್ತು ಎಂದಿದ್ದಾರೆ.

ಪೋಲಿಸರ ಎದುರೇ ತಮ್ಮ ಕಾರಿನ ಮೇಲೆ ಬೃಹತ್ ಕಲ್ಲುಗಳನ್ನು ತೂರಲಾಗಿದೆ. ಈ ದಾಳಿಯಲ್ಲಿ ತಮಗೆ ಗಂಭೀರ ಗಾಯಗಳಾಗುವ ಅಥವಾ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿತ್ತು ಎಂದು ಮಮತಾ ಬ್ಯಾನರ್ಜಿ ಸ್ವತಃ ಆರೋಪಿಸಿದ್ದಾರೆ. “ಕಿಟಕಿಗಳು ತೆರೆದಿದ್ದರೆ ನನ್ನ ತಲೆ ಒಡೆದು ಹೋಗುತ್ತಿತ್ತು. ನಾವೆಲ್ಲರೂ ಸತ್ತುಹೋಗಬಹುದಿತ್ತು. ಪೋಲಿಸರು ಬಿಜೆಪಿಗೆ ರಕ್ಷಣೆ ನೀಡುತ್ತಿದ್ದಾರೆ,” ಎಂದು ಅವರು ಕಿಡಿಕಾರಿದ್ದಾರೆ.

ಆದರೆ, ಈ ದಾಳಿಯಲ್ಲಿ ಬಿಜೆಪಿಯ ಯಾವುದೇ ಪಾತ್ರವಿಲ್ಲ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಶಮಿಕ್ ಭಟ್ಟಾಚಾರ್ಯ ಸ್ಪಷ್ಟಪಡಿಸಿದ್ದು, ಮಮತಾ ಬ್ಯಾನರ್ಜಿ ಅವರ ವಾಹನದ ಮೇಲೆ ಕಲ್ಲು ತೂರಿರುವುದನ್ನು ಖಂಡಿಸಿದ್ದಾರೆ.

You cannot copy content of this page

Exit mobile version