ತೀರ್ಥಹಳ್ಳಿ: ಧರೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತ ಕುಟುಂಬಗಳಿಗೆ ಮಾನವೀಯ ನೆಲೆಯಲ್ಲಿ ತಕ್ಷಣದ ನೆರವು ನೀಡಬೇಕು. ಸಂತ್ರಸ್ತ ರಮೇಶ್ ಕುಟುಂಬಕ್ಕೆ ಶಾಶ್ವತ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ನಿವೇಶನ ಒದಗಿಸಿ ಮನೆ ನಿರ್ಮಿಸಿಕೊಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣಾಭಿವೃದ್ಧಿ ಸಭಾಂಗಣದಲ್ಲಿ ತಾಲೂಕಿನ ಬರ ಹಾಗೂ ಅತಿವೃಷ್ಟಿ ಪರಿಸ್ಥಿತಿ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ಸಂತ್ರಸ್ತ ಕುಟುಂಬ ಮುಂದಿನ ನಾಲ್ಕರಿಂದ ಆರು ತಿಂಗಳು ಬಾಡಿಗೆ ಮನೆಯಲ್ಲಿ ವಾಸವಿರಬೇಕಾದ ಪರಿಸ್ಥಿತಿ ಎದುರಾದರೆ, ಆ ಅವಧಿಯ ಬಾಡಿಗೆ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸಂಕಷ್ಟದಲ್ಲಿರುವ ಕುಟುಂಬಕ್ಕೆ ಯಾವುದೇ ವಿಳಂಬವಿಲ್ಲದೆ ಆಡಳಿತಾತ್ಮಕ ನೆರವು ದೊರೆಯಬೇಕು ಎಂದು ಸಚಿವರು ಸೂಚಿಸಿದರು.
ಭೂಕುಸಿತ ಪ್ರದೇಶಗಳ ಮರುಪರಿಶೀಲನೆ
ತೀರ್ಥಹಳ್ಳಿ ತಾಲೂಕಿನಲ್ಲಿ ಈ ಹಿಂದೆ ತಜ್ಞರ ತಂಡ ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಮಾಹಿತಿ ಇದೆ. ಆ ವರದಿಯನ್ನು ಆಧಾರವಾಗಿಟ್ಟುಕೊಂಡು ಪ್ರಸಕ್ತ ಪರಿಸ್ಥಿತಿಯಲ್ಲಿ ಮತ್ತೆ ಅಪಾಯದ ಸ್ಥಳಗಳನ್ನು ಗುರುತಿಸಬೇಕು. ಯಾವ ಪ್ರದೇಶಗಳಲ್ಲಿ ತುರ್ತು ಮುನ್ನೆಚ್ಚರಿಕಾ ಕ್ರಮ ಅಗತ್ಯವಿದೆ ಎಂಬುದರ ಕುರಿತು ಶುಕ್ರವಾರ ಸಂಜೆಯೊಳಗೆ ವರದಿ ಸಲ್ಲಿಸುವಂತೆ ತಹಸೀಲ್ದಾರ್‌ಗೆ ಸಚಿವರು ಸೂಚಿಸಿದರು.
ಅಗತ್ಯವಿರುವ ಕ್ರಮಗಳ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಭೂಕುಸಿತದಿಂದ ಯಾವುದೇ ಸಾವು-ನೋವು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶಿಥಿಲ ಶಾಲಾ ಕಟ್ಟಡಗಳ ಬಗ್ಗೆ ಎಚ್ಚರಿಕೆ
ತಾಲೂಕಿನ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು ತಕ್ಷಣ ಪರಿಶೀಲಿಸಿ ಅಗತ್ಯ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಶಾಲೆ ಹಾಗೂ ಅಂಗನವಾಡಿ ಮಕ್ಕಳನ್ನು ಅಪಾಯಕಾರಿ ಕಟ್ಟಡಗಳಲ್ಲಿ ಕೂರಿಸಬಾರದು ಎಂದು ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ ಸಚಿವರು, ಯಾವುದೇ ಅನಾಹುತ ಸಂಭವಿಸಿದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಕಟ್ಟಡಗಳ ದುರಸ್ತಿಗೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವ ಕುರಿತು ಗಮನಹರಿಸುವುದಾಗಿ ಅವರು ತಿಳಿಸಿದರು.
ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ನೋಟ್‌ಬುಕ್
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ದ್ವಿತೀಯ ಪಿಯುಸಿವರೆಗೆ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ಹಾಗೂ ನೋಟ್‌ಬುಕ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಮಧು ಬಂಗಾರಪ್ಪ ಹೇಳಿದರು.
ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ವಿತರಿಸಲು ರಾಜ್ಯ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ವಿತರಿಸುವ ಸಾಮಗ್ರಿಗಳಲ್ಲಿ ಯಾವುದೇ ಗುಣಮಟ್ಟದ ಕೊರತೆ ಕಂಡುಬಂದರೆ ತಕ್ಷಣ ಇಲಾಖೆಯ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಳೆ ಮಾಪನ ಕೇಂದ್ರಗಳ ಮಾಹಿತಿ ರೈತರಿಗೆ ತಲುಪಲಿ
ಪ್ರತಿ ಗ್ರಾಮ ಪಂಚಾಯಿತಿಯಲ್ಲಿರುವ ಮಳೆ ಮಾಪನ ಕೇಂದ್ರಗಳು ನಿರಂತರವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಪ್ರತಿದಿನದ ಮಳೆಯ ಪ್ರಮಾಣದ ನಿಖರ ಮಾಹಿತಿಯನ್ನು ಸಂಗ್ರಹಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಳೆ ಮಾಪನದ ನಿಖರ ಮಾಹಿತಿ ಆಧರಿಸಿಯೇ ಬೆಳೆಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ದೊರೆಯಲು ಸಾಧ್ಯವಾಗುತ್ತದೆ. ತಪ್ಪು ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಪ್ರತಿದಿನದ ಮಳೆಯ ಪ್ರಮಾಣದ ಮಾಹಿತಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದರು.
ಅಪಾಯಕಾರಿ ಮರಗಳ ತೆರವಿಗೆ ಸೂಚನೆ
ತಾಲೂಕಿನ ರಸ್ತೆಗಳ ಇಕ್ಕೆಲಗಳಲ್ಲಿ, ಶಾಲೆ, ಅಂಗನವಾಡಿ, ಸರ್ಕಾರಿ ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿರುವ ಅಪಾಯಕಾರಿ ಮತ್ತು ದುರ್ಬಲ ಮರಗಳನ್ನು ಗುರುತಿಸಿ ತಕ್ಷಣ ತೆರವುಗೊಳಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥಗೌಡ, ಉಪವಿಭಾಗಾಧಿಕಾರಿ ಸತ್ಯನಾರಾಯಣ, ತಹಸೀಲ್ದಾರ್ ರಂಜಿತ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶೈಲಾ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ್ ಶೆಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
