Thursday, June 13, 2024

ಸತ್ಯ | ನ್ಯಾಯ |ಧರ್ಮ

ದಲಿತ ಲೋಕದ ಅನರ್ಘ್ಯ ರತ್ನ : ಕುಮಾರ ಕಕ್ಕಯ್ಯ ಪೋಳ

ಮೇ 27 ಮತ್ತು 28 ರಂದು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜರುಗಲಿರುವ 9ನೆಯ ” ಮೇ ಸಾಹಿತ್ಯ ಮೇಳ”ದ ಪ್ರಧಾನ ವೇದಿಕೆಗೆ ಕುಮಾರ ಕಕ್ಕಯ್ಯ ಪೋಳ ಅವರ ಹೆಸರಿಡುವ ಮೂಲಕ ಅವರನ್ನು ಸ್ಮರಿಸಲಾಗುತ್ತಿದೆ – ಅನಿಲ ಹೊಸಮನಿ

ಕನ್ನಡ ಸಾಹಿತ್ಯ ಲೋಕಕ್ಕೆ  ಅಮೂಲ್ಯ ಕೊಡುಗೆ ನೀಡಿದವರಲ್ಲಿ ವಿಜಯಪುರದ ಕುಮಾರ ಕಕ್ಕಯ್ಯ ಪೋಳ ಅವರದು ತುಂಬಾ ಮಹತ್ವದ ಹೆಸರು. ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದ ಅಸ್ಪೃಶ್ಯ ಡೋಹರ ಕುಟುಂಬದಲ್ಲಿ ಜನಿಸಿದ ಭೀಮರಾಯ ಸಾಯಬಣ್ಣ ಪೋಳ ಅವರು “ಕುಮಾರ ಕಕ್ಕಯ್ಯ” ಎಂಬ ಕಾವ್ಯನಾಮದಿಂದಲೇ  ಚಿರಪರಿಚಿತರಾಗಿದ್ದಾರೆ.

ಚಾಂದಕವಟೆ, ಸಿಂದಗಿ ಮತ್ತು ವಿಜಾಪುರ ನಗರದಲ್ಲಿ ಎಸ್.ಎಸ್.ಎಲ್.ಸಿ. ವರೆಗೆ ಶಿಕ್ಷಣ ಪಡೆದ ಬಿ.ಎಸ್. ಪೋಳ ಅವರು 1954 ರಲ್ಲಿ ಕಂದಾಯ ಇಲಾಖೆ ಕಾರಕೂನರಾಗಿ ಸರಕಾರಿ ಸೇವೆಗೆ ಸೇರ್ಪಡೆಯಾಗಿ ತಹಶೀಲದಾರ ಹುದ್ದೆಯ ವರೆಗೆ ಭಡ್ತಿ ಹೊಂದಿ  1982 ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡು ಸಾಹಿತ್ಯ ಮತ್ತು ಸಮಾಜ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡರು.

1965 ರಿಂದಲೇ ಬರವಣಿಗೆಯನ್ನು ಆರಂಭಿಸಿದ ಕುಮಾರ ಕಕ್ಕಯ್ಯ ಪೋಳರು ಕನ್ನಡ, ಮರಾಠಿ, ಹಿಂದಿ, ಇಂಗ್ಲೀಷ್ ಭಾಷೆಗಳ ಅಧ್ಯಯನ ಮಾಡಿ ಆ ಭಾಷೆಗಳ ಮೇಲೆ ಹಿಡಿತವನ್ನು ಸಾಧಿಸುವ ಮುಖಾಂತರ ತಮ್ಮ ಸಾಹಿತ್ಯ ಕೃಷಿಯನ್ನು, ಆರಂಭಿಸಿದ ಅವರು ಕಥೆ, ಕಾದಂಬರಿ, ನಾಟಕ, ಪ್ರಬಂಧ, ಕಾವ್ಯ ಹಾಗು ವೈಚಾರಿಕ ಬರಹಗಳ ಮೂಲಕ ಕನ್ನಡ ಸಾಹಿತ್ಯದ ಮೇಲೆ ತಮ್ಮ ಛಾಪನ್ನು ಒತ್ತಿದರು.

ವೇದ, ಪುರಾಣ, ಸ್ಮೃತಿಗಳಲ್ಲದೆ, ಜೈನ, ಬೌದ್ಧ, ಪಾರಸಿ, ಕ್ರೈಸ್ತ, ಇಸ್ಲಾಂ, ಯಹೂದಿ, ಶಿಂಟೋ ಮುಂತಾದ ಧಾರ್ಮಿಕ ಸಾಹಿತ್ಯವನ್ನು ಅಳವಾಗಿ ಅಧ್ಯಯನ ಮಾಡಿದ್ದರು. ಬುದ್ಧ, ಬಸವ, ಅಂಬೇಡ್ಕರ್ ವಿಚಾರ ಧಾರೆಗಳ ಗಾಢ ಪ್ರಭಾವಕ್ಕೆ ಒಳಗಾಗಿದ್ದ ಅವರು ಈ ಮಹಾನ್ ಮಾನವತಾವಾದಿಗಳ ವೈಚಾರಿಕ ನೆಲೆಯಲ್ಲಿಯೇ ಸಾಹಿತ್ಯ ಕೃಷಿ ಮಾಡಿದುದು ಮಾತ್ರವಲ್ಲದೆ, ತಮ್ಮ ನಡೆನುಡಿಗಳಲ್ಲೂ ಅಳವಡಿಸಿಕೊಂಡು ತಮಗೆ ತಾವೇ ಮಾದರಿ ಎನಿಸಿದರು.

ತಮ್ಮ ವಿಚಾರ ಸಾಹಿತ್ಯದ ಮೂಲಕ ಸಮಾಜದ ಜಿಡ್ಡನ್ನು ತೊಳೆಯುವ ಪ್ರಯತ್ನ ಮಾಡಿದ ಕುಮಾರ ಕಕ್ಕಯ್ಯ ಪೋಳ ಅವರು, ದೇವರು ದೆವ್ವಗಳ ಹೆಸರಲ್ಲಿ ಮುಗ್ದ ದಲಿತರು ಮತ್ತು ಶೋಷಿತರು ಮೂಢ ನಂಬಿಕೆಗಳಿಗೆ ಬಲಿಯಾಗುತ್ತಿರುವುದನ್ನು ಕಂಡು ಮರುಗಿದರು ಮತ್ತು ಈ ಜನರಲ್ಲಿ ವೈಚಾರಿಕ ಜಾಗೃತಿ ಮೂಡಿಸಲು ಶ್ರಮಿಸಿದರು.

ಹೆಜ್ಜೆ ಹಜ್ಜೆಗೂ ಅಸ್ಪೃಶ್ಯತೆಯ ಬಿಸಿಯನ್ನು ಅನುಭವಿಸಿದ ಅವರು, ಮಡಿವಂತ ಸಮಾಜದ ಕೊಳಕುಗಳನ್ನು ತೊಳೆದು ಸಮಸಮಾಜ ಕಟ್ಟುವತ್ತ ಹೆಜ್ಜೆಯನ್ನು ಹಾಕಿದ ಬಸವಣ್ಣ ಮತ್ತು ಡಾ. ಅಂಬೇಡ್ಕರ್ ವಿಚಾರಗಳನ್ನು ತಮ್ಮ ಕ್ರಾಂತಿಕಾರಿ ಬರವಣಿಗೆಯ ಮೂಲಕ, ಸರಳ ಭಾಷೆಯಲ್ಲಿ ಜನರ ಮುಂದಿಡುವ ಪ್ರಯತ್ನ ಮಾಡಿದರು. 

ವರ್ಣ ವ್ಯವಸ್ಥೆಯಿಂದ ಒಡಗೂಡಿದ ಭಾರತೀಯ ಸಮಾಜದಲ್ಲಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಮುಗ್ಧ ಜನತೆಯ ಮೇಲೆ ನಡೆಯುತ್ತಿರುವ ಅನ್ಯಾಯ ಅತ್ಯಾಚಾರಗಳನ್ನು ಖಂಡತುಂಡವಾಗಿ ವಿರೋಧಿಸಿದ ಕುಮಾರ ಕಕ್ಕಯ್ಯ ಪೋಳ ಅವರು, ಪಟ್ಟಭದ್ರ ಹಿತಾಸಕ್ತಿಗಳು ದೇವರು ಮತ್ತು ಧರ್ಮಗಳನ್ನು ಹೇಗೆ ತಮ್ಮ ಸ್ವಹಿತಕ್ಕೆ ಬಳಸಿಕೊಂಡಿವೆ ಎಂಬುದನ್ನು ತಮ್ಮ ಬರಹಗಳ ಮೂಲಕ ತೆರೆದಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಅವರ ಮಹತ್ವದ ಕೃತಿ  “ಚಾತುರ್ವರ್ಣ ಧರ್ಮದರ್ಶನ” ಸಮಾಜದಲ್ಲಿ ಸಂಚಲನ ಮೂಡಿಸಿತು. ಸ್ವತಃ ಪೋಳ ಅವರಲ್ಲದೆ ಬೇರೆ ಬೇರೆ ಪ್ರಕಾಶಕರು ಈ ಕೃತಿಯನ್ನು ಪ್ರಕಟಿಸಿ ಅದು ಹೆಚ್ಚು ಹೆಚ್ಚು ಜನರನ್ನು ತಲುಪಿತು.

ಚಾತುರ್ವರ್ಣ ಧರ್ಮದರ್ಶನ ಕೃತಿಯನ್ನು ಪ್ರಕಟಿಸಿದ ನಂತರ ಕುಮಾರ ಕಕ್ಕಯ್ಯ ಪೋಳರು ಪಟ್ಟಭದ್ರರು, ಪುರೋಹಿತಶಾಹಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಅವರು ಮೂರು ತಿಂಗಳುಗಳ ಕಾಲ ವಿಜಾಪುರದಿಂದ ತಲೆಮರೆಸಿಕೊಳ್ಳಬೇಕಾಯಿತು. ಅವರಿಗೆ ಮತ್ತು ಅವರ ಕುಟುಂಬದವರಿಗೆ ನೂರಾರು ಬೆದರಿಕೆ ಪತ್ರಗಳು ಬಂದವು.

12ನೆಯ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ನ್ಯಾಯಕ್ಕಾಗಿ ನಡೆಸಿದ ಹೋರಾಟದಿಂದ ಅತ್ಯಂತ ಪ್ರಭಾವಿತರಾಗಿದ್ದ ಕುಮಾರ ಕಕ್ಕಯ್ಯ ಪೋಳರು ಬಸವ ಅನುಯಾಯಿಗಳಾದರು. ಜನರನ್ನು ಹಿಡಿದಿಟ್ಟ ಬಸವಣ್ಣನವರ ‘ವಚನಶೈಲಿ ಅವರಿಗೆ ಬಹು ಪ್ರಿಯವಾದ ಆಕರವಾಯಿತು. ಅದರಿಂದ ಪ್ರಭಾವಿತರಾದ ಪೋಳರು ವಚನ ಸಾಹಿತ್ಯ ಪ್ರಕಾರವನ್ನು ಜನಪ್ರಿಯಗೊಳಿಸಿದರು. “ಕುಮಾರ ಕಕ್ಕಯ್ಯನ ವಚನಗಳು” ಈ ನೆಲೆಯಲ್ಲಿ ಪ್ರಕಟವಾದ ಕೃತಿ. ವಚನಗಳ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದುವ ಪ್ರಯತ್ನವನ್ನು ಅವರು ಮಾಡಿದರು. 1979 ರಲ್ಲಿ ಮೊದಲ ಮುದ್ರಣ, ‘ಕುಮಾರ ಕಕ್ಕಯ್ಯನ, ವಚನಗಳು’ ಕೃತಿಯು ಹಲವು ಮರು ಮುದ್ರಣಗಳನ್ನು ಕಂಡಿದೆ. ಅವರ ಮತ್ತಷ್ಟು, ಅಪ್ರಕಟಿತ ವಚನಗಳನ್ನು ಸೇರಿಸಿದ ಸಮಗ್ರ ವಚನ ಸಂಪುಟವು 2006 ರಲ್ಲಿ ಮುದ್ರಣವನ್ನು ಕಂಡಿದೆ.

ಲೋಕದ ಹಿತವನ್ನೇ ಬಯಸಿದ್ದ ಬಸವಣ್ಣ ಮತ್ತು ಆತನ ಧರ್ಮವನ್ನು ಕೆಲವು ಹಿತಾಸಕ್ತಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚುತ್ತಿರುವುದನ್ನು ಕಂಡು ಸಿಡಿಮಿಡಿಗೊಂಡ ಪೋಳರು “ಬಸವ ಧರ್ಮ ಯಾರ ಸೊತ್ತು” ಎಂಬ ಕೃತಿಯ ಮೂಲಕ ಅಂಥ ದುಷ್ಟ ಶಕ್ತಿಗಳ ವಿರುದ್ಧ ಧ್ವನಿಯೆತ್ತಿದರು. ಬಸವ ಧರ್ಮದ ನಿಜವಾದ ಅರ್ಥವನ್ನು ಎತ್ತಿ ಹಿಡಿಯುವ ಕೆಲಸವನ್ನು ಅವರು ಮಾಡಿದರು. ‘ಬಸವಧರ್ಮ ಯಾರ ಸೊತ್ತು?’ ಮತ್ತು ‘ಬಸವ ಧರ್ಮ ದರ್ಶನ’ ಕೃತಿಗಳ, ಮೂಲಕ ಬಸವಾನುಯಾಯಿಗಳಿಗೆ ಬಸವ ತತ್ವವನ್ನು ತಿಳಿಸಿಕೊಡುವ ಪ್ರಯತ್ನ ಅವರದಾಗಿತ್ತು.

ಸ್ವಾನುಭವವನ್ನು ಬರವಣಿಗೆಯಲ್ಲಿ ಹಿಡಿದಿಡುವ ಪ್ರಯತ್ನ ಮಾಡುತ್ತಲೇ ಸಾಹಿತ್ಯ ಲೋಕಕ್ಕೆ ಅಮೋಘ ಕಾಣಿಕೆಯನ್ನು ನೀಡಿರುವ ದಲಿತ ಸಾಹಿತಿಗಳಲ್ಲಿ ಮೊದಲಿನ ಸಾಲಿನಲ್ಲಿ ನಿಲ್ಲುವ ಕುಮಾರ ಕಕ್ಕಯ್ಯ ಪೋಳ ಅವರು ನಿಜಕ್ಕೂ ಒಬ್ಬ ಕ್ರಾಂತಿಕಾರಿ ಲೇಖಕರು, ಅವರ ಪ್ರತಿಯೊಂದು ಕೃತಿಯೂ ಉನ್ನತ  ಪ್ರಶಸ್ತಿಯಿಂದ ದೂರವೇ ಉಳಿದವು.  ಪ್ರಶಸ್ತಿಗಳ ಬೆನ್ನು ಹತ್ತದೆ ಬರವಣಿಗೆಯ ಮುಖಾಂತರ ಸಮಾಜ ಸುಧಾರಣೆಯ ತಮ್ಮ ಗುರಿಯತ್ತ ಮಾತ್ರ ಅವರು ಮುಖ ಮಾಡಿದ್ದರು.

‘ಧರ್ಮ ಕ್ರಾಂತಿ’ (1965), ‘ಇದು ನನ್ನ ಸಮಾಜ (1966), ‘ಸಮಾಜದ ತೊಡರಿಗೆ ಧರ್ಮದ ಕಗ್ಗಂಟು’ (1969). “ನಿಯತಿ ಶಾಸನ’ (1973), ‘ಕುಮಾರ ಕಕ್ಕಯ್ಯನ ವಚನಗಳು’ (1979), ‘ಮೂಕನ ಭಾಷಣ’  (1979), ‘ಬಸವ ಧರ್ಮ ಯಾರ ಸೊತ್ತು?” (1983), `ಬಸವ ಧರ್ಮದರ್ಶನ’ (1985), “ಶರಣರ ಸಮಗ್ರ ಕ್ರಾಂತಿ’ (1986). ‘ಚಾತುರ್ವರ್ಣ ಧರ್ಮದರ್ಶನ (1987), ‘ಧರ್ಮಗುರುಗಳ ಆವಾಂತರ ಅರ್ಥಾತ್ ಲಿಂಗಾಯತ ಧರ್ಮ ಸಂಸ್ಥಾಪಕರು ಯಾರು?’ (1988). ಇವು ಕುಮಾರ ಕಕ್ಕಯ್ಯ ಪೋಳರ ಮಹತ್ವದ ಕೃತಿಗಳು.  ಈ ಮೂಲಕ ಅವರು ಇಡೀ ಸಮಾಜವನ್ನು ಚಿಂತನೆಗೆ ತೊಡಗಿಸಿದ್ದಾರೆ. ನಮ್ಮ ಅಭಿಪ್ರಾಯಗಳನ್ನು ಸ್ಪಷ್ಟ ಧ್ವನಿಯಲ್ಲಿ ಪ್ರಸ್ತುತಪಡಿಸಿದ್ದಾರೆ. 

ಕುಮಾರ ಕಕ್ಕಯ್ಯ ಪೋಳರು ಕೇವಲ ಬರವಣಿಗೆಯಲ್ಲಿ ಮಾತ್ರವೇ ತೊಡಗಿರದೆ, ಸಾಮಾಜಿಕ ಕಾರ್ಯಗಳಲ್ಲಿ ಕೂಡಾ ಮುಂಚೂಣಿ ನಾಯಕರಾಗಿದ್ದರು. ದಲಿತರ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆಗಳನ್ನು ದಿಟ್ಟತನದಿಂದ ಖಂಡಿಸುವ, ಪ್ರತಿಭಟಿಸುವ ಛಾತಿಯೂ ಅವರಿಗಿತ್ತು.

ಸಾಮಾಜಿಕವಾಗಿ ಒಂದೇ ಅಸ್ಪೃಶ್ಯ ಜಾತಿಗಳನ್ನು ಒಂದೇ ವೇದಿಕೆಗೆ ತರುವ ನಿಟ್ಟಿನಲ್ಲಿ ಅವರು ಬಹುವಾಗಿ ಶ್ರಮಿಸಿದರು. ಅಸ್ಪೃಶ್ಯ ಸಮುದಾಯಗಳು ಪರಸ್ಪರರಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿರುವು’ದನ್ನು ಕಂಡು ದುಃಖಿತರಾಗುತ್ತಿದ್ದ ಅವರು ಈ ಜಾತಿಗಳ ಒಗ್ಗೂಡುವಿಕೆಗೆ ಅವಿರತ ಶ್ರಮ ವಹಿಸಿದರು. ಅದಕ್ಕಾಗಿ “ಪಂಚಮ ದಲಿತ ಪ್ರಗತಿ ಸಂಘ”ವನ್ನು ಹುಟ್ಟು ಹಾಕಿದರು. ಆದರೆ ಈ ದಿಸೆಯಲ್ಲಿ ಅವರ ಕನಸು ಕನಸಾಗಿಯೇ ಉಳಿಯಿತು.

ತಾವು ಬದುಕಿದ ದಿನಗಳನ್ನು ಅರ್ಥಪೂರ್ಣವಾಗಿಸಿದ ಕುಮಾರ ಕಕ್ಕಯ್ಯ ಪೋಳರು ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಕೃತಿಗಳು, ವಿಚಾರಗಳು ನಮ್ಮ ಮುಂದಿವೆ. ಅವರ ಸಾಹಿತ್ಯವನ್ನು ಓದುವ ಮೂಲಕ ನಾವು ಅದರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕಾಗಿದೆ. ಹೊಸ ಸಮಾಜವೊಂದರ ನಿರ್ಮಾಣದತ್ತ ಅವರಿಗಿದ್ದ ಮಿಡಿತವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.

ಇದೇ ಹಿನ್ನೆಲೆಯಲ್ಲಿ  ಮೇ ಸಾಹಿತ್ಯ ಮೇಳ”ದ ಪ್ರಧಾನ ವೇದಿಕೆಗೆ ಕುಮಾರ ಕಕ್ಕಯ್ಯ ಪೋಳ ಅವರ ಹೆಸರಿಡುವ ಮೂಲಕ ಅವರನ್ನು ಸ್ಮರಿಸಲಾಗುತ್ತಿದೆ.

ಅನಿಲ ಹೊಸಮನಿ

ಇದನ್ನೂ ಓದಿ-https://peepalmedia.com/may-sahitya-mela-bijapur-spirit-tukaram-chanchalakara/ http://ಮೇ ಸಾಹಿತ್ಯ ಮೇಳ | ಅಂಬೇಡ್ಕರ್’ ಚಳವಳಿಯ ಬಿಜಾಪುರದ ಚೇತನ ತುಕಾರಾಮ ಚಂಚಲಕರ

Related Articles

ಇತ್ತೀಚಿನ ಸುದ್ದಿಗಳು