Home ಅಂಕಣ ಸಂಸತ್ತಿನ ಪೂರ್ವಸೂರಿಗಳು – 21 : ಸ್ವಾತಂತ್ರ್ಯ ಹೋರಾಟಗಾರ, ಸಂಸದ, ಬರಹಗಾರ: ಎನ್.ಜಿ. ಗೋರೆ ಎಂಬ...

ಸಂಸತ್ತಿನ ಪೂರ್ವಸೂರಿಗಳು – 21 : ಸ್ವಾತಂತ್ರ್ಯ ಹೋರಾಟಗಾರ, ಸಂಸದ, ಬರಹಗಾರ: ಎನ್.ಜಿ. ಗೋರೆ ಎಂಬ ಬಹುಮುಖಿ ವ್ಯಕ್ತಿತ್ವ

0

ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಇಪ್ಪತ್ತೊಂದನೆಯ ಲೇಖನ

ಗೋರೆ ಒಬ್ಬ ಸಮೃದ್ಧ ಆದರೆ, ವಿಚಾರಶೀಲ ಮತ್ತು ಚಿಂತನಶೀಲ ಬರಹಗಾರರಾಗಿದ್ದರು.

ಎನ್.ಜಿ. ಗೋರೆ ಎಂದೇ ಜನಪ್ರಿಯರಾಗಿರುವ ನಾರಾಯಣ ಗಣೇಶ್ ಗೋರೆ, ಒಬ್ಬ ಜನಪ್ರೀತಿ ಗಳಿಸಿದ್ದ ಸಮಾಜ ಸೇವಕ, ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ, ಕಾರ್ಮಿಕ ಸಂಘಟಕ, ಜನಪ್ರಿಯ ಬರಹಗಾರ, ಸಂಸದ, ಜಾತ್ಯತೀತ ವ್ಯಕ್ತಿ ಮತ್ತು ರಾಜತಾಂತ್ರಿಕರಾಗಿದ್ದರು.

ಗಣೇಶ್ ಗೋವಿಂದ್ ಗೋರೆ ಅವರ ಮಗನಾಗಿ, 1907 ಜೂನ್ 15 ರಂದು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ದೇವಗಡ ತಾಲೂಕಿನ ಹಿಂಡಾಲ ಗ್ರಾಮದಲ್ಲಿ ಎನ್.ಜಿ. ಗೋರೆ ಅವರು ಜನಿಸಿದರು. ಅವರು ಮರಾಠಾ ಬ್ರಾಹ್ಮಣರ ಚಿತ್ಪಾವನ ಅಥವಾ ಕೊಂಕಣಸ್ತ ಜಾತಿಗೆ ಸೇರಿದವರು.

ಗೋರೆ ಪುಣೆಯಲ್ಲಿ ಬೆಳೆದರು. ನ್ಯೂ ಇಂಗ್ಲಿಷ್ ಸ್ಕೂಲ್, ಪುಣೆಯ ಫರ್ಗುಸನ್ ಕಾಲೇಜು ಮತ್ತು ಬಾಂಬೆ ವಿಶ್ವವಿದ್ಯಾಲಯದಲ್ಲಿ ತನ್ನ ಶಿಕ್ಷಣ ಪಡೆದಿದ್ದರು. 1925 ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಗೋರೆ, 1929 ರಲ್ಲಿ ಪದವಿ ಪಡೆಯುತ್ತಾರೆ. 1935 ರಲ್ಲಿ ಎಲ್ಎಲ್‌ಬಿ ಮುಗಿಸುತ್ತಾರೆ. ಬಾಲವಿಧವೆಯಾಗಿದ್ದ ಸುಮತಿಯನ್ನು ವಿವಾಹವಾಗುತ್ತಾರೆ.

ಸಮಾಜಸೇವಕರಾಗಿ ಗುರುತಿಸಿಕೊಂಡಿದ್ದ ಗೋರೆ 1928 ರಲ್ಲಿ ಮಹಾರಾಷ್ಟ್ರದಲ್ಲಿ ಯೂತ್ ಲೀಗ್‌ ಶಾಖೆಯನ್ನು ಪ್ರಾರಂಭಿಸಿದವರಲ್ಲಿ ಒಬ್ಬರು. ಯೌವ್ವನ ಕಾಲದಲ್ಲಿ ಮಹಾತ್ಮಾ ಗಾಂಧಿಯವರ ಬೋಧನೆಗಳಿಂದ ಪ್ರಭಾವಿತರಾಗಿದ್ದ ಗೋರೆ 1930 ರ ದಶಕದಲ್ಲಿ ಅರಣ್ಯ ಸತ್ಯಾಗ್ರಹ ಮತ್ತು ಉಪ್ಪು ಸತ್ಯಾಗ್ರಹ ಮೊದಲಾದ ಚಳುವಳಿಗಳ ಅಭಿಯಾನದಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು.

ಅಖಿಲ ಭಾರತ ಕಾಂಗ್ರೆಸ್‌ ಪಕ್ಷದ ಸದಸ್ಯರಾಗಿದ್ದ ಅವರು, 1934 ರಿಂದ ಕಾಂಗ್ರೆಸ್‌ ಸಮಾಜವಾದಿ ಪಕ್ಷದ ಸ್ಥಾಪಕ ಸದಸ್ಯರೂ ಆಗಿದ್ದರು. 1948 ರಲ್ಲಿ ಆ ಪಕ್ಷ ವಿಸರ್ಜನೆಯಾಗುವರೆಗೂ ಅದರ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಾಗಿದ್ದರು. 1948 ರ ಹೊತ್ತಿಗೆ ಕಾಂಗ್ರೆಸ್‌ ಜೊತೆಗೆ ಅದು ತನ್ನ ಸಂಬಂಧವನ್ನು ಕಡಿದುಕೊಳ್ಳುವ ಸಂದರ್ಭದಲ್ಲಿ ಗೋರೆ ಅದರ ಪ್ರಧಾನ ಕಾರ್ಯದರ್ಶಿಯಾಗಿದ್ದರು. 1953-54 ರ ಅವಧಿಯಲ್ಲಿ ಅವರು ಪ್ರಜಾ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಆಚಾರ್ಯ ನರೇಂದ್ರ ದೇವ, ಜಯಪ್ರಕಾಶ್ ನಾರಾಯಣ್, ಮಿನೂ ಮಸಾನಿ, ಅಚ್ಯುತ ಪಟವರ್ಧನ್ ಮತ್ತು ಎಸ್.ಎಂ. ಜೋಶಿ ಮೊದಲಾದವರ ನಿಕಟವರ್ತಿಯಾಗಿದ್ದ ಗೋರೆ, ಗಾಂಧಿಯವರ ನೇತೃತ್ವದಲ್ಲಿ ಹಲವಾರು ಸತ್ಯಾಗ್ರಹಗಳಲ್ಲಿ ಭಾಗವಹಿಸಿದ್ದರು. ಹಲವು ಸಲ ಬಂಧನಕ್ಕೂ ಒಳಗಾಗಿದ್ದರು. ಆಗಿನ ಹೈದರಾಬಾದ್‌ ಸಂಸ್ಥಾನದ ಗುಲ್ಬರ್ಗಾದಲ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಗೋರೆಯವರನ್ನು ಬಂಧಿಸಿ ಏಕಾಂತ ಬಂಧನದಲ್ಲಿಡಲಾಗಿತ್ತು. 1942 ರ ಕ್ವಿಟ್‌ ಇಂಡಿಯಾ ಹೋರಾಟದಲ್ಲೂ ಅವರು ಪಾಲ್ಗೊಂಡಿದ್ದರು. 1942 ರಲ್ಲಿ ಕಾಂಗ್ರೆಸ್‌ ಘೋಷಿಸಿದ ಈ ಐತಿಹಾಸಿಕ ಸಾಮೂಹಿಕ ಚಳುವಳಿಗೆ ಅವರು ಧುಮುಕಿದ್ದರು. 1941 ರಿಂದ 1946 ರವರೆಗೆ ಅವರು ಜೈಲಿನಲ್ಲಿಯೇ ಕಳೆದಿದ್ದರು. ಇದರ ನಡುವೆ ಕೇವಲ ನಾಲ್ಕು ತಿಂಗಳು ಮಾತ್ರ ಜೈಲಿನಿಂದ ಹೊರಗಿದ್ದರು. ಆಗಲೂ ಅವರು ಬ್ರಿಟಿಷರ ವಿರುದ್ಧ ಭೂಗತ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.

ಭೂಗತರಾಗಿದ್ದಾಗ ಅವರು ಅಣ್ಣಾಸಾಹೇಬ್ ಸಹಸ್ರಬುದ್ಧೆ ಮತ್ತು ಅಚ್ಯುತ ಪಟವರ್ಧನ್ ಅವರಂತಹ ಮಹಾನ್‌ ನಾಯಕರುಗಳ ಜೊತೆಗೆ ಕೆಲಸ ಮಾಡಿದ್ದರು. ಗೋರೆ ಕಾಂಗ್ರೆಸ್‌ ಸಮಾಜವಾದಿ ಪಕ್ಷದ ಪ್ರಮುಖ ಪ್ರಚಾರಕರಾಗಿದ್ದರು. 1947 ಫೆಬ್ರವರಿ 20 ರಂದು ಕೊಲಾಬಾ ಜಿಲ್ಲೆಯ ಪೆನ್‌ ಎಂಬಲ್ಲಿ ನಡೆದ ಒಂದು ಅನೌಪಚಾರಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ರಾಷ್ಟ್ರೀಯ ಸೇವಾ ದಳದ ಮೂಲಕ ಸಮಾಜವಾದಿ ಪಕ್ಷವನ್ನು ವಿಸ್ತರಿಸುವ ಕೆಲಸವನ್ನು ಕೈಗೊಳ್ಳುವಂತೆ ಸ್ವಯಂ ಸೇವಕರಿಗೆ ಕರೆ ನೀಡಿದ್ದರು.

ಅವರ ಬಹುತೇಕ ರಾಜಕೀಯ ಚಟುವಟಿಕೆಗಳು ರೈತರ ವಿಷಯದಲ್ಲಿ ಕೇಂದ್ರೀಕರಿಸಿದ್ದವು. ಕಾಂಗ್ರೆಸ್‌ ಸಮಾಜವಾದಿ ಪಕ್ಷದ ಕಾನ್ಪುರ ಅಧಿವೇಶನದಲ್ಲಿ ಗೋರೆ ಅವರು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸ್ವತಂತ್ರ ರೈತ ಸಂಘಗಳನ್ನು ಕಟ್ಟುವ ಕುರಿತು ನಿರ್ಣಯ ಮಂಡಿಸಿದ್ದರು. ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ಈ ಸಂಘಗಳು ಸಮಾವೇಶಗಳನ್ನು ನಡೆಸಿ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಮಾಡುವುದು ಈ ನಿರ್ಣಯದ ಉದ್ಧೇಶವಾಗಿತ್ತು. ರೈತರನ್ನು ಸ್ಥಳೀಯ ಮಟ್ಟದಲ್ಲಿ ಗಟ್ಟಿಯಾಗಿ ಸಂಘಟಿಸಿಕೊಂಡು ಹೋರಾಟಕ್ಕಿಳಿಯುವುದು ಕೂಡ ಗೋರೆ ಅವರ ಗುರಿಯಾಗಿತ್ತು.

1947 ರಲ್ಲಿ ಸಮಾಜವಾದಿಗಳು ಕಾಂಗ್ರೆಸ್‌ ತೊರೆದಿದ್ದ ಸೂಕ್ಷ್ಮ ಸಂದರ್ಭದಲ್ಲಿ ಎರಡೂ ಪಕ್ಷಗಳ ನಡುವಿದ್ದ ಬಿರುಕು ಮತ್ತು ಕಹಿತನವನ್ನು ನೀಗಿಸಲು ಗೋರೆ ಎರಡೂ ಪಕ್ಷಗಳ ನಡುವಿನ ಸಂದೇಶವಾಹಕರಾಗಿ ಕೆಲಸ ಮಾಡಿದ್ದರು. 1947 ಏಪ್ರಿಲ್‌ 6 ರಂದು ಅವರು ಹೊಸ ಸಮಾಜವಾದಿ ಪಕ್ಷದ ಧ್ವಜ ಹಿಡಿದ್ದರು. ಸುಮಾರು ಒಂದು ಸಾವಿರ ಜನರು ಸೇರಿದ್ದ ಸಭೆಯಲ್ಲಿ ಅವರು ಹೊಸ ಸಮಾಜವಾದಿ ಪಕ್ಷದ ಗುರಿಗಳನ್ನೂ ಕಾರ್ಯಕ್ರಮಗಳನ್ನೂ ಕುರಿತು ವಿವರಿಸುತ್ತಾರೆ. ಹೊಸ ಪಕ್ಷದ ಹೆಸರಿನಿಂದ “ಕಾಂಗ್ರೆಸ್‌” ಎಂಬ ಪದವನ್ನು ತೆಗೆದು ಹಾಕುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ, ಕಾಂಗ್ರೆಸ್‌ ಪಕ್ಷದ ಜೊತೆಗೆ ಯಾವುದೇ ರೀತಿಯ ವೈಮನಸ್ಸು ಇಲ್ಲವೆಂದು ಅವರು ಹೇಳುತ್ತಾರೆ.

ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಗೋರೆ ಅವರು ಎಡಪಂಥಿಯರೆಂದೇ ಗುರುರಿಸಿದ್ದರೂ, ಮಾರ್ಕ್ಸ್‌ ಮತ್ತು ಲೆನಿನ್‌ ಅವರುಗಳ ಮೇಲೆ ಅಪಾರ ಗೌರವಿಟ್ಟುಕೊಂಡಿದ್ದರೂ ಕಮ್ಯುನಿಸ್ಟರ ಜೊತೆಗೆ ಮಾತ್ರ ಹೊಂದಿಕೊಂಡಿರಲಿಲ್ಲ. ಪೋರ್ಚುಗೀಸ್‌ ಸಾಮ್ರಾಜ್ಯಶಾಹಿ ಹಿಡಿತದಿಂದ ಗೋವಾವನ್ನು ವಿಮೋಚನೆಗೊಳಿಸುವ ಹೋರಾಟದಲ್ಲಿ ಕೂಡ ಗೋರೆ ಭಾಗವಹಿಸಿದ್ದರು. ಅದಕ್ಕಾಗಿ ಅವರು ಕೆಲಕಾಲ ಅಗುವಾಡಾ ಜೈಲಿನಲ್ಲಿಯೂ ಕಳೆದಿದ್ದರು. ಗೋವಾದಲ್ಲಿ ಮೇ 1955 ರಲ್ಲಿ ಅವರು ಮೊದಲ ಗೋವಾ ಸತ್ಯಾಗ್ರಹಿಗಳ ರ್ಯಾಲಿಯನ್ನು ಮುನ್ನಡೆಸಿದ್ದರು. ಪೋರ್ಚುಗೀಸ್‌ ಸರಕಾರ ಅವರಿಗೆ ಹತ್ತು ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತಾದರೂ 1957 ರ ಫೆಬ್ರವರಿಯಲ್ಲಿ ಬಿಡುಗಡೆಗೊಳ್ಳುತ್ತಾರೆ. ಗೋವಾ ಸ್ವತಂತ್ರಗೊಂಡ ನಂತರವೂ ಅವರು ಹಲವಾರು ಬಾರಿ ಗೋವಾಗೆ ಭೇಟಿ ನೀಡಿ ತನ್ನ ಸಹವರ್ತಿಯಾಗಿದ್ದ ಪೀಟರ್‌ ಆಳ್ವಾರೆಸ್‌ ಅವರಿಗೆ ಬೆಂಬಲ ನೀಡಿದ್ದರು.

ದೇಶಪ್ರೇಮಿಯೂ ರಾಷ್ಟ್ರೀಯವಾದಿಯೂ ಆಗಿದ್ದ ಅವರು ವಿಶಾಲ ದೃಷ್ಟಿಕೋನವನ್ನು ಹೊಂದಿದ್ದರು. ಭಾರತದ ಸ್ವಾತಂತ್ರ್ಯವು ಜಾಗತಿಕತೆ ಮತ್ತು ವಿಶ್ವ ಒಕ್ಕೂಟದ ಭಾಗವಾಗುವ ಒಂದು ಮೆಟ್ಟಿಲು ಮಾತ್ರವೆಂದು ಅವರು ಪರಿಗಣಿಸಿದ್ದರು. ಸಾಮಾಜಿಕ ಸುಧಾರಣೆ ಮತ್ತು ಶಿಕ್ಷಣದ ಬಗ್ಗೆ ಪ್ರಗತಿಪರ ನಿಲುವುಗಳನ್ನು ಹೊಂದಿದ್ದ ಅವರು 1959 ರ ತಮ್ಮ ಇಂಗ್ಲೆಂಡ್ ಮತ್ತು ಯುರೋಪ್‌ ಭೇಟಿಯ ನಂತರ ಆ ನಿಲುವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಾರೆ.

ಗೋರೆ ಒಬ್ಬ ಅಪರಿಮಿತ ಓದಿನ ಮನುಷ್ಯರಾಗಿದ್ದರು. ಲೆನಿನ್‌, ಮಾರ್ಕ್ಸ್‌, ರಸ್ಕಿನ್‌, ಮಾವೋ ತ್ಸೆ ತುಂಗ್‌ ಮೊದಲಾದವರು ಅವರ ನೆಚ್ಚಿನ ಬರಹಗಾರರಾಗಿದ್ದರು. ಜಾತಿ, ಅಸ್ಪೃಶ್ಯತೆ ಮತ್ತು ಧರ್ಮಗಳನ್ನು ಅವರು ನಂಬುತ್ತಿರಲಿಲ್ಲ. ಬಹುತೇಕ ನಾಸ್ತಿಕರಂತೆಯೇ ಇದ್ದ ಅವರು ಸ್ಪಷ್ಟವಾದ ವಿಚಾರವಾದಿಯಾಗಿದ್ದರು. ಗಾಂಧೀಜಿಯವರ ಪ್ರಭಾವದಿಂದ ಕಾಂಗ್ರೆಸ್‌ ಸೇರಿದ್ದರಾದರೂ ಅವರ ರಾಜಕೀಯ ಮತ್ತು ಆರ್ಥಿಕ ದೃಷ್ಟಿಕೋನಗಳು ಜವಹರ್‌ಲಾಲ್‌ ನೆಹರೂ ಅವರಿಗೆ ಹತ್ತಿರವಾಗಿದ್ದವು.

ಸಾರ್ವಜನಿಕ ಬದುಕಿನಲ್ಲಿ ಗೋರೆ ಹಲವಾರು ಹುದ್ದೆಗಳನ್ನು ಏರಿದ್ದರು. ಪುಣೆ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಾರ್ಯದರ್ಶಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸದಸ್ಯ, ಕಾಂಗ್ರೆಸ್ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ, ಪ್ರಜಾ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು 1970 ರ ಹೊತ್ತಿಗೆ ಪಿಎಸ್‌ಪಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.

ಸಕ್ಕರೆ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ, ಪುಣೆ ವಿದ್ಯುತ್ ಸರಬರಾಜು ಕಂಪನಿಯ ನೌಕರರ ಸಂಘದ ಅಧ್ಯಕ್ಷ, ಹಿಂದ್ ಆಯಿಲ್ ಕಾಮಗರ್ ಸಭಾ (HMS) ಮತ್ತು ಭಾರತ ತೈಲ ಕಂಪೆನಿಗಳ ಡಿಪೋ ಸೂಪರಿಂಟೆಂಡೆಂಟ್‌ಗಳ ಸಂಘದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.

ಸಂಸದರಾಗಿ
ಪುಣೆ ಮುನ್ಸಿಪಲ್‌ ಕಾರ್ಪೋರೇಷನ್‌ಗೆ ಆಯ್ಕೆಯಾಗಿದ್ದ ಅವರು ಒಂದು ಅವಧಿಗೆ ಪುಣೆಯ ಮೇಯರ್‌ ಕೂಡ ಆಗಿದ್ದರು. 1957 ರಿಂದ 1962 ರ ತನಕ ಅವರು ಪುಣೆ ನಗರದಿಂದ ಎರಡನೇ ಲೋಕಸಭೆಗೆ ಚುನಾಯಿತರಾಗಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ದಿಗ್ಗಜ ಎನ್.ವಿ. ಗಾಡ್ಗಿಲ್‌ ಅವರನ್ನು ಸೋಲಿಸಿದ್ದರು. ಗಾಡ್ಗಿಲ್‌ ಕಾಂಗ್ರೆಸ್‌ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದರು. ಗೋರೆ ಸಂಯುಕ್ತ ಮಹಾರಾಷ್ಟ್ರ ಆಲ್‌ ಪಾರ್ಟಿ ಆರ್ಗನೈಸೇಷನ್‌ನ ಅಭ್ಯರ್ಥಿಯಾಗಿದ್ದರು. 1970 ರಿಂದ 1976 ರವರೆಗೆ ರಾಜ್ಯಸಭೆಯ ಸದಸ್ಯರಾಗಿದ್ದ ಅವರು 1977-79 ರಲ್ಲಿ ಬ್ರಿಟನ್‌ಗೆ ಭಾರತದ ಹೈಕಮಿಷನರ್ ಆಗಿಯೂ ಸೇವೆ ಸಲ್ಲಿಸಿದ್ದರು.

ಗೋರೆ ಒಬ್ಬ ಸಮೃದ್ಧ ಆದರೆ, ವಿಚಾರಶೀಲ ಮತ್ತು ಚಿಂತನಶೀಲ ಬರಹಗಾರರಾಗಿದ್ದರು.‌ ಮರಾಠಿಯಲ್ಲಿ ಹೆಚ್ಚಾಗಿ ಬರೆಯುತ್ತಿದ್ದರಾದರೂ ಇಂಗ್ಲಿಷ್‌ನಲ್ಲಿ ಕೂಡ ಅಷ್ಟೇ ಸಮರ್ಥವಾಗಿ ಬರೆಯಬಲ್ಲವರಾಗಿದ್ದರು. ಸಮಾಜವಾದಿ ಪತ್ರಿಕೆಯಾಗಿದ್ದ ಸಾಧನಾಗೆ ನಿಯಮಿತವಾಗಿ ಬರೆಯುತ್ತಿದ್ದರು. ಜನವರಿ 26 1981 ರಿಂದ ಜನವರಿ 12 1984 ರವರೆಗೆ ಅದರ ಸಂಪಾದಕರಾಗಿ ಕೂಡ ಕೆಲಸ ಮಾಡಿದ್ದರು.

ಅವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಬಹುತೇಕ ಪುಸ್ತಕಗಳು ಅವರ ಪ್ರಬಂಧಗಳು ಮತ್ತು ಸಣ್ಣಕತೆಗಳ ಪುಸ್ತಕಗಳು. ಆದರೆ, ಜನಸಾಮಾನ್ಯರ ರಾಜಕೀಯ ಶಿಕ್ಷಣ ಮತ್ತು ಸಮಾಜವಾದಿ ವಿಚಾರಗಳ ಪ್ರಚಾರಕ್ಕೆಂದು ಅವರು ಬರೆದ ಕೆಲವು ಪುಸ್ತಕಗಳು ಗಮನಾರ್ಹವಾಗಿವೆ. ಮರಾಠಿ ಬರವಣಿಗೆಯಲ್ಲಿ ಅವರು ತಮ್ಮದೇ ಆದ ವಿಶೇಷ ಶೈಲಿಯನ್ನು ಅಳವಡಿಸಿಕೊಂಡಿದ್ದರು.

“ಅಮೇರಿಕೇಚ್ಯ ಸಂಘ ರಾಜ್ಯಚ ಇತಿಹಾಸ” ಎಂಬುದು ಮರಾಠಿಯಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಇತಿಹಾಸದ ಬಗ್ಗೆ ಅವರು ಬರೆದ ಪುಸ್ತಕ.

ಜವಹರ್‌ಲಾಲ್‌ ನೆಹರೂ ಅವರ ಆತ್ಮಚರಿತ್ರೆಯನ್ನು ಮರಾಠಿ ಭಾಷೆಗೆ ಅನುವಾದಿಸಿದ್ದರು. ಸಮಾಜವಾದದ ಬಗ್ಗೆ ಒಂದು ಪುಸ್ತಕ ಬರೆದಿದ್ದರು. ಗಾಂಧಿಂಚೆನ್ ವಿವಿಧ ದರ್ಶನೀ (ಗಾಂಧೀಜಿಯ ವಿವಿಧ ಆಯಾಮಗಳು) ಇನ್ನೊಂದು ಪುಸ್ತಕ. ಸಾಮ್ರಾಜ್ಯಶಾಹಿ ಬಗ್ಗೆ ಒಂದು ಪುಸ್ತಕವನ್ನೂ ತನ್ನ ಜೈಲಿನ ಅನುಭವಗಳ ಕುರಿತು ಇನ್ನೊಂದು ಪುಸ್ತಕವನ್ನೂ ಅವರು ಬರೆದಿದ್ದರು. ಒಟ್ಟು ಅವರು ಬರೆದ ಪುಸ್ತಕಗಳ ಸಂಖ್ಯೆ ಇಪ್ಪತ್ತೈದಕ್ಕೂ ಹೆಚ್ಚು.

ಗೋರೆ 1993 ರಲ್ಲಿ ತನ್ನ 86 ನೇ ವಯಸ್ಸಿನಲ್ಲಿ ಪುಣೆಯಲ್ಲಿ ನಿಧನರಾದರು.

ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

You cannot copy content of this page

Exit mobile version