ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಇಪ್ಪತ್ತಮೂರನೆಯ ಲೇಖನ
ಪಶ್ಚಿಮ ಬಂಗಾಳದ ಬೆರ್ಹಾಂಪುರ ಕ್ಷೇತ್ರದಿಂದ ಸತತ ಏಳು ಬಾರಿ ಲೋಕ ಸಭೆಗೆ ಚುನಾಯಿತರಾಗಿದ್ದ ಚೌಧರಿ 1952 ರಿಂದ 1984 ರವರೆಗೆ ಕೆಳಮನೆಯ ಸದಸ್ಯರಾಗಿದ್ದರು. ಜುಲೈ 1987 ಮತ್ತು ಆಗಸ್ಟ್ 1993 ರಲ್ಲಿ ಎರಡು ಬಾರಿ ರಾಜ್ಯಸಭೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ತ್ರಿದಿಬ್ ಕುಮಾರ್ ಚೌಧರಿ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು, ಶ್ರೇಷ್ಠ ಸಂಸದೀಯ ಪಟು ಮತ್ತು ದಂತಕಥೆಯಂತಿದ್ದ ಕ್ರಾಂತಿಕಾರಿ ಸಮಾಜವಾದಿ ನಾಯಕ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಅವರು ಸುಮಾರು 12 ವರ್ಷಗಳ ಕಾಲ ಬ್ರಿಟಿಷರ ಜೈಲುಗಳಲ್ಲಿಯೂ 19 ತಿಂಗಳುಗಳ ಕಾಲ ಪೋರ್ಚುಗೀಸರ ಜೈಲುಗಳಲ್ಲಿಯೂ ಕಳೆದಿದ್ದರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಂಸದರಾಗಿದ್ದ ಅವರು, ಭಾರತದ ಸಂಸದೀಯ ರಾಜಕಾರಣದ ಸುವರ್ಣ ಯುಗದ ಪ್ರತೀಕವಾಗಿದ್ದರು. ಅವರೊಬ್ಬ ಪ್ರತಿಭಾನ್ವಿತ ಭಾಷಣಗಾರ ಮತ್ತು ಅದ್ಭುತ ಬರಹಗಾರರೂ ಆಗಿದ್ದರು. ದೇಶ ಸೇವೆಯ ಏಕೈಕ ಗುರಿಯೊಂದಿಗೆ ತಮ್ಮ ಬದುಕನ್ನು ರಾಷ್ಟ್ರೀಯ ಬದುಕಿನೊಂದಿಗೆ ವಿಲೀನಗೊಳಿಸಿಕೊಂಡಿದ್ದರು.
1911 ಡಿಸೆಂಬರ್ 13 ರಂದು ಢಾಕಾದಲ್ಲಿ (ಈಗಿನ ಬಾಂಗ್ಲಾದೇಶ) ಚೌಧರಿ ಅವರ ಜನನ. ಅವರು ಮುರ್ಷಿದಾಬಾದ್ ಮತ್ತು ಬೆರ್ಹಾಂಪುರಗಳಲ್ಲಿ ಶಿಕ್ಷಣ ಪಡೆದರು. 1920 ಮತ್ತು 1930 ರ ದಶಕಗಳಲ್ಲಿ ಸಾಮ್ರಾಜ್ಯಶಾಹಿ ವಿರೋಧಿ, ರಾಷ್ಟ್ರೀಯತಾವಾದಿ ಹೋರಾಟಗಳೆಲ್ಲ ಅಸಹಕಾರ ಚಳುವಳಿ ಮೊದಲಾದ ರೀತಿಯಲ್ಲಿ ಸ್ಪೋಟಗೊಳ್ಳುತ್ತಿದ್ದ ಕಾಲದಲ್ಲಿ ಅವರು ಹದಿಹರೆಯಕ್ಕೆ ಕಾಲಿಡುತ್ತಿದ್ದರು.
1931 ರಲ್ಲಿ ಅವರನ್ನು ಬಂಧಿಸಿ ಬಂಗಾಳದ ಮಿಡ್ನಾಪುರ ಜಿಲ್ಲೆಯ ಹಿಜ್ಲಿ ಜೈಲಿನಲ್ಲಿ ಇರಿಸಲಾಗಿತ್ತು. ನಂತರ 1937 ರವರೆಗೆ ಅವರನ್ನು ರಾಜಸ್ಥಾನದ ಡಿಯೋಲಿ ಜೈಲಿನಲ್ಲಿ ಇರಿಸಲಾಗಿತ್ತು. ಇದಾದ ನಂತರ 1940 ರ ಹೊತ್ತಿಗೆ ಆಗ ಹೊಸದಾಗಿ ರೂಪುಗೊಂಡಿದ್ದ ರಿವಲ್ಯುಷನರಿ ಸೋಷ್ಯಲಿಸ್ಟ್ ಪಾರ್ಟಿ (ಆರ್‌ಎಸ್‌ಪಿ) ಮತ್ತು ಅನುಶೀಲನ್ ಮಾರ್ಕ್ಸಿಸ್ಟ್ ಸಂಘಟನೆಯ ಹಲವು ನಾಯಕರುಗಳ ಜೊತೆಗೆ ಚೌಧರಿ ಬಂಧನಕ್ಕೊಳಗಾಗಿದ್ದರು.
ಬ್ರಿಟಿಷ್ ಸರಕಾರದ ಭಾರತ ರಕ್ಷಣಾ ನಿಯಮಗಳ ಅಡಿಯಲ್ಲಿ ಸುಭಾಷ್ ಚಂದ್ರ ಬೋಸ್ ಜೊತೆಗೆ ಚೌಧರಿಯವರನ್ನೂ ಬಂಧಿಸಲಾಗಿತ್ತು. ಬೋಸರ ಯುದ್ಧ ವಿರೋಧಿ ಚಟುವಟಿಕೆಗಳು ಮತ್ತು ಬ್ರಿಟಿಷ್ ಸರಕಾರದ ವಿರುದ್ಧ ತಕ್ಷಣದ ಕಾರ್ಯಾಚರಣೆಗಳು ಅವರ ಮೇಲೆ ಹೊರಿಸಿದ್ದ ಪ್ರಮುಖ ಆರೋಪಗಳು. 1940 ರಿಂದ 1946 ರವರೆಗಿನ ಯುದ್ಧ ಕಾಲದಲ್ಲಿ ಚೌಧರಿಯವರನ್ನು ಹಿಜ್ಲಿ ವಿಶೇಷ ಜೈಲು, ಢಾಕಾ ಜೈಲು ಮತ್ತು ಡಮ್‌ಡಮ್ ಜೈಲುಗಳಲ್ಲಿ ಭದ್ರತೆಯೊಂದಿಗೆ ಇರಿಸಲಾಗಿತ್ತು.
1930 ರ ದಶಕದ ಉತ್ತರಾರ್ಧದ ಜೈಲುವಾಸಗಳು ಕ್ರಾಂತಿಕಾರಿಗಳಿಗೆ ಒಂದು ರೀತಿಯಲ್ಲಿ ಮರು ಶಿಕ್ಷಣ ಮತ್ತು ಸೈದ್ಧಾಂತಿಕ ಪರಿವರ್ತನೆಯ ಕಾಲವಾಗಿತ್ತು. ಚೌಧರಿಯೂ ಸೇರಿದಂತೆ ಆ ಕಾಲದಲ್ಲಿ ಬಂಧಿತರಾಗಿದ್ದ ಬಹುತೇಕರು, ಹಲವು ವರ್ಷಗಳ ಅಧ್ಯಯನ ಮತ್ತು ದೀರ್ಘ ರಾಜಕೀಯ ಚರ್ಚೆಗಳ ನಂತರ ವರ್ಗ ಹೋರಾಟ ಮತ್ತು ಸಾಮೂಹಿಕ ಹೋರಾಟದಲ್ಲಿ ನಂಬಿಕೆಯಿಟ್ಟು ಸಮಾಜವಾದಿಗಳಾಗಿ ಅಥವಾ ಮಾರ್ಕ್ಸ್‌ವಾದಿ-ಲೆನಿನ್‌ವಾದಿಗಳಾಗಿ ಹೊರ ಬಂದಿದ್ದರು.
ಆರ್‌ಎಸ್‌ಪಿ ಪಕ್ಷವನ್ನು ಕಟ್ಟವುಲ್ಲಿ ಚೌಧರಿ ಬಹಳ ದೊಡ್ಡ ಪಾತ್ರ ವಹಿಸಿದ್ದರು. ಸ್ವಾತಂತ್ರ್ಯಾ ನಂತರ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವರು ಆರ್‌ಎಸ್‌ಪಿಯನ್ನು ಬೆಳೆಸಿದ್ದರು. ಲೆನಿನ್‌ರ ಪ್ರಸಿದ್ಧ ಹೇಳಿಕೆಯಾದ “ಕ್ರಾಂತಿಕಾರಿ ಸಿದ್ಧಾಂತವಿಲ್ಲದೆ ಕ್ರಾಂತಿಕಾರಿ ಪಕ್ಷಗಳು ಇರಲು ಸಾಧ್ಯವಿಲ್ಲ” ಎಂಬುದನ್ನು ಚೌಧರಿಯವರು “ಕ್ರಾಂತಿಕಾರಿ ಪಕ್ಷವಿಲ್ಲದೆ ಕ್ರಾಂತಿಕಾರಿ ಸಿದ್ಧಾಂತವೂ ಇರಲು ಸಾಧ್ಯವಿಲ್ಲ” ಎಂದು ತರ್ಕಿಸಿದ್ದರು.
ಅಂದಿನ ಭಾರತದಲ್ಲಿ ಸರಿಯಾದ ಕ್ರಾಂತಿಕಾರಿ ಸಿದ್ದಾಂತವೆಂದರೆ ಸಮಾಜವಾದಿ ಸಿದ್ಧಾಂತ ಎಂದು ಅವರು ನಂಬಿದ್ದರು. ಭಾರತಕ್ಕೆ ಐತಿಹಾಸಿಕ ತುರ್ತಾಗಿ ಬೇಕಾಗಿದ್ದ ಸಮಾಜೋ-ಆರ್ಥಿಕ ಪುನರ್‍ರಚನೆಯು ಸಮಾಜವಾದಿ ಪರಿವರ್ತನೆಯ ಮೂಲಕ ಮಾತ್ರವೇ ಸಾಧ್ಯ ಎಂಬುದು ಅವರ ನಂಬಿಕೆಯಾಗಿತ್ತು. ಅದು ಕಾರ್ಮಿಕ ವರ್ಗದ ಕ್ರಾಂತಿಕಾರಿ ಸಿದ್ಧಾಂತವೆಂಬುದು ಅವರ ವಾದವಾಗಿತ್ತು.
ಅದ್ಭುತ ಸಂಸದೀಯ ಪಟು
ಪಶ್ಚಿಮ ಬಂಗಾಳದ ಬೆರ್ಹಾಂಪುರ ಕ್ಷೇತ್ರದಿಂದ ಸತತ ಏಳು ಬಾರಿ ಲೋಕ ಸಭೆಗೆ ಚುನಾಯಿತರಾಗಿದ್ದ ಚೌಧರಿ 1952 ರಿಂದ 1984 ರವರೆಗೆ ಕೆಳಮನೆಯ ಸದಸ್ಯರಾಗಿದ್ದರು. ಜುಲೈ 1987 ಮತ್ತು ಆಗಸ್ಟ್ 1993 ರಲ್ಲಿ ಎರಡು ಬಾರಿ ರಾಜ್ಯಸಭೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. 1997 ಡಿಸೆಂಬರ್ 21 ರಂದು ನಿಧನರಾಗುವ ತನಕವೂ ಅವರು ರಾಜ್ಯಸಭೆಯ ಸದಸ್ಯರಾಗಿದ್ದರು. ಸಂಸತ್ತಿನಲ್ಲಿ ಅವರು ಆರ್‌ಎಸ್‌ಪಿಯ ನಾಯಕರಾಗಿದ್ದರು.
ಮೊದಲ ಲೋಕಸಭೆಯಲ್ಲಿ ಸಂಸದರಾಗಿದ್ದುಕೊಂಡೇ ಅವರು ಪೋರ್ಚುಗೀಸ್ ವಸಾಹುತುಶಾಹಿಯ ಕೈಯಿಂದ ಗೋವಾವನ್ನು ವಿಮೋಚನೆಗೊಳಿಸುವ ಗೋವಾ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ತೊಡಗಿಸಿಕೊಂಡಿದ್ದರು. 1955 ಜುಲೈ ತಿಂಗಳಲ್ಲಿ ಸ್ವಯಂ ಸೇವಕರ ಒಂದು ತಂಡದೊಂದಿಗೆ ಗೋವಾ ಪ್ರವೇಶಿಸುವ ಅವರನ್ನು ಪೋರ್ಚುಗೀಸ್ ಅಧಿಕಾರಿಗಳು ಬಂಧಿಸಿ 12 ವರ್ಷಗಳ ಜೈಲು ಶಿಕ್ಷೆ ವಿಧಿಸುತ್ತಾರೆ. ಆದರೆ 19 ತಿಂಗಳ ಜೈಲುಶಿಕ್ಷೆಯ ನಂತರ 1957 ರಲ್ಲಿ ನಡೆದ ಎರಡನೇ ಲೋಕಸಭೆಯ ಚುನಾವಣೆಯ ಮುನ್ನಾದಿನ ಅವರನ್ನು ಬಿಡುಗಡೆ ಮಾಡಲಾಗುತ್ತದೆ.
ಆಗಿನ ಪ್ರಧಾನಮಂತ್ರಿ ಮತ್ತು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಜವಾಹರಲಾಲ್ ನೆಹರು, ಚೌಧರಿ ಅವರನ್ನು “ನ್ಯಾಷನಲ್ ಹೀರೋ” ಎಂದು ಕರೆದಿದ್ದರು. ಅವರ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ನಿಲ್ಲಿಸದಿರಲು ಕೂಡ ನೆಹರೂ ತೀರ್ಮಾನಿಸಿದ್ದರು.
1974 ರಲ್ಲಿ ಐದನೇ ಅವಧಿಗೆ ಸಂಸದರಾಗಿದ್ದಾಗ ಅವರನ್ನು ಬಹುಪಾಲು ಎಲ್ಲ ವಿರೋಧ ಪಕ್ಷಗಳು ಸೇರಿಕೊಂಡು ರಾಷ್ಟ್ರಪತಿ ಅಭ್ಯರ್ಥಿಯಾಗಿ ಫಕ್ರುದ್ದೀನ್ ಅಲಿ ಅಹ್ಮದ್ ವಿರುದ್ಧ ನಿಲ್ಲಿಸಿದ್ದವು. ಚೌಧರಿ ಅದರಲ್ಲಿ ಸೋಲುತ್ತಾರಾದರೂ, ಆ ಚುನಾವಣೆ ನಡೆದ ರೀತಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗುತ್ತದೆ.
ತುರ್ತು ಪರಿಸ್ಥಿತಿ ಸಮಯದಲ್ಲಿ ಅದಕ್ಕೆದುರಾಗಿದ್ದ ಪಕ್ಷಗಳ ವಕ್ತಾರರಂತೆ ಚೌಧರಿ ಕಾರ್ಯನಿರ್ವಹಿಸಿದ್ದರು.
ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಷಯಗಳ ಕುರಿತು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅವರು ಮಾಡಿದ ಭಾಷಣಗಳಿಂದ ಅವರಿಗೆ ವಿಭಿನ್ನ ವಿಷಯಗಳ ಮೇಲೆ ಇದ್ದ ಸಂಪೂರ್ಣ ಗ್ರಹಿಕೆ, ಅವುಗಳನ್ನು ವಿಶ್ಲೇಷಿಸುವ ಶಕ್ತಿ, ಅವುಗಳ ಕುರಿತ ತಳಮಟ್ಟದ ಅರಿವು ಮತ್ತು ಅಪ್ರತಿಮ ಮಾತುಗಾರಿಕೆಯನ್ನು ನಾವು ಗುರುತಿಸಬಹುದು. ಲಕ್ಷಾಂತರ ದುಡಿಯುವ ವರ್ಗದ ಪ್ರತಿನಿಧಿಯಾಗಿದ್ದ ಅವರು ಬಡಬಗ್ಗರ ಮತ್ತು ದಮನಿತರ ಆಶಾಕಿರಣವಾಗಿದ್ದರು. ನಿಜದಲ್ಲಿ, ಜನಸಾಮಾನ್ಯರ ಪ್ರಜಾಪ್ರಭುತ್ವಾತ್ಮಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ವಿಸ್ತರಿಸಲೆಂದು ಅವರು ಹೋರಾಡಿದ್ದರು. ಜನಸಾಮಾನ್ಯರ ಮೇಲಿನ ಯಾವುದೇ ರೀತಿಯ ದಬ್ಬಾಳಿಕೆಗಳನ್ನು ಸಹಿಸಲು ಮುಂದಾಗದೆ ಅದರ ವಿರುದ್ಧ ಕಾದಾಡಿದರು.
ಸಂಸತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಚೌಧರಿ ಬಹಳ ಸಕ್ರಿಯರಾಗುತ್ತಿದ್ದರು. ನಿರುದ್ಯೋಗ, ಆಹಾರದ ಕೊರತೆ, ಚಹಾ ಉದ್ಯಮದ ಕಾರ್ಮಿಕರ ಸಮಸ್ಯೆಗಳು, ಸೆಣಬು ಮಿಲ್ಲಿನ ಕಾರ್ಮಿಕರ ಸಮಸ್ಯೆಗಳು, ವಿದೇಶಾಂಗ ನೀತಿ, ಕೃಷಿ ನೀತಿ ಮೊದಲಾಗಿ ಹಲವಾರು ಸಂಗತಿಗಳ ಕುರಿತು ಅವರು ಪ್ರಶ್ನೆಗಳನ್ನು ಎತ್ತಿದ್ದರು. ಚೌಧರಿ ಅವರು ಸಂಸತ್ತಿನ ಎಲ್ಲಾ ತಂತ್ರಗಳಲ್ಲಿ ಮತ್ತು ರೀತಿನೀತಿಗಳಲ್ಲಿ ಬಹಳ ನಿಪುಣರಾಗಿದ್ದರು. ಹಾಗಾಗಿಯೇ ಹಲವಾರು ವಿಷಯಗಳ ಕುರಿತು ತಮ್ಮ ದೃಷ್ಟಿಕೋನಗಳನ್ನು ಮಂಡಿಸಲು ಅವರು ಸಾಧ್ಯವಿದ್ದ ಎಲ್ಲ ದಾರಿಗಳನ್ನು ಬಳಸಿಕೊಳ್ಳುತ್ತಿದ್ದರು. ಸ್ಪೆಷಲ್ ಮೆನ್ಷನ್ಸ್, ಕಾಲಿಂಗ್ ಅಟೆನ್ಷನ್, ಹಾಫ್ ಆನ್ ಅವರ್ ಡಿಸ್ಕಶನ್ಸ್, ಅಡ್ಜರ್ನ್‌ಮೆಂಟ್ ಮೋಷನ್ಸ್ ಮೊದಲಾಗಿ ಎಲ್ಲ ಸಾಧ್ಯತೆಗಳನ್ನು ಅವರು ಬಳಸುತ್ತಿದ್ದರು.
ಪೂರ್ವ ಪಾಕಿಸ್ತಾನದ (ಈಗಿನ ಬಾಂಗ್ಲಾದೇಶದ) ಜನರ ಸಂಕಷ್ಟಗಳ ಕುರಿತು ಅವರು ಮತ್ತೆಮತ್ತೆ ಮಾತನಾಡುತ್ತಿದ್ದರು. ಅವರ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳನ್ನು ಸಂರಕ್ಷಿಸಲು ಹಾಗೂ ಅವರ ಕುರಿತು ಜಾಗತಿಕ ಅಭಿಪ್ರಾಯ ರೂಪುಗೊಳಿಸಲು ಭಾರತ ಮುಂದಾಗಬೇಕೆಂದು ಅವರು ಒತ್ತಿ ಹೇಳುತ್ತಿದ್ದರು.
ಪ್ರಮುಖ ಕಾರ್ಮಿಕ ನಾಯಕ
ಕಾರ್ಮಿಕರು, ರೈತರು, ಯುವಜನರು ಮತ್ತು ವಿದ್ಯಾರ್ಥಿಗಳ ಆಪ್ತರಾಗಿದ್ದ ಚೌಧರಿ ವಿವಿಧ ಕಾರ್ಮಿಕ ಸಂಘಗಳು ಮತ್ತು ಕಾರ್ಮಿಕ ಕಲ್ಯಾಣ ಸಂಘಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಆರ್‌ಎಸ್‌ಪಿಯ ಕಾರ್ಮಿಕ ಸಂಘಟನೆಯಾಗಿದ್ದ ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಯುಟಿಯುಸಿ) ಸಂಘಟನೆಯಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದರು.
ಒಬ್ಬ ಅದ್ಭುತ ಬರಹಗಾರನಾಗಿ ಕೂಡ ಚೌಧರಿ ಹೆಸರು ಪಡೆದಿದ್ದರು. ಅವರು ಆರ್‌ಎಸ್‌ಪಿಯ ಸೈದ್ಧಾಂತಿಕ ಪತ್ರಿಕೆಯಾಗಿದ್ದ ಕಾಲ್‌ನ ಸಂಪಾದಕರಾಗಿದ್ದರು. 1950 ರ ದಶಕದಲ್ಲಿ ಪ್ರಥಮ ಮುದ್ರಣಗೊಂಡಿದ್ದ, ಗೋವಾ ಚಳುವಳಿಯ ಕುರಿತು ಬಂಗಾಳಿಯಲ್ಲಿ ಬರೆದ ನೈನ್ಟೀನ್ ಮಂಥ್ಸ್ ಇನ್ ಸಲಜಾರ್ ಜೈಲ್ ಬಹಳ ದೊಡ್ಡ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಬಂಗಾಳಿ ಸಾಹಿತ್ಯ-ಸಾಂಸ್ಕೃತಿಕ ಪತ್ರಿಕೆಯಾಗಿದ್ದ ಕ್ರಾಂತಿಯಲ್ಲಿ ನಿಹಾರ್ ರಂಜನ್ ರಾಯ್ ಜೊತೆಗೆ ಜಂಟಿ ಸಂಪಾದಕನಾಗಿ ಹಲವು ವರ್ಷ ಕೆಲಸ ಮಾಡಿದ್ದರು.
ಆ ಕಾಲದ ಸಮಸ್ಯೆಗಳ ಕುರಿತು ಆರ್‌ಎಸ್‌ಪಿಯ ದೃಷ್ಟಿಕೋನಗಳನ್ನು ವಿವರಿಸುವ ಹಲವು ರಾಜಕೀಯ ಮತ್ತು ಚರ್ಚಾತ್ಮಕ ಬರಹಗಳನ್ನು ಚೌಧರಿ ಬರೆದಿದ್ದರು. ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಆರ್‌ಎಸ್‌ಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವರು 1970 ರಲ್ಲಿ “ಆರ್‌ಎಸ್‌ಪಿ ಯಾಕೆ ಬೇಕು? (ಇಂದಿನ ಭಾರತದಲ್ಲಿ ಕ್ರಾಂತಿಕಾರಿ ಸಮಾಜವಾದಿ ಪಕ್ಷದ ಅಗತ್ಯತೆ)” ಮತ್ತು 1985 ರಲ್ಲಿ “ಆರ್‌ಎಸ್‌ಪಿಯ ನಾಲ್ಕೂವರೆ ದಶಕಗಳು” ಎಂಬ ಎರಡು ಲೇಖನಗಳನ್ನು ಬರೆದಿದ್ದರು.
1997 ಡಿಸೆಂಬರ್ 21 ರಂದು ತಮ್ಮ 86 ನೇ ವಯಸ್ಸಿನಲ್ಲಿ ಅವರು ನಿಧನರಾದರು. ನಿಧನರಾಗುವಾಗ ಅವರು ರಾಜ್ಯಸಭಾ ಸದಸ್ಯರಾಗಿದ್ದರು ಮತ್ತು ಸಂಸತ್ತಿನಲ್ಲಿ ಆರ್‌ಎಸ್‌ಪಿಯ ನಾಯಕರಾಗಿದ್ದರು.
ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.
