ಆರ್​ಟಿಐ ನಿಯಮಗಳ ತಿದ್ದುಪಡಿ ರದ್ದುಗೊಳಿಸದಿದ್ದರೆ ಜುಲೈ 5ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ: ಅಣ್ಣಾ ಹಜಾರೆ ಎಚ್ಚರಿಕೆ

ರಾಳೇಗಾಂವ್ ಸಿದ್ಧಿ: ಮಾಹಿತಿ ಹಕ್ಕು (RTI) ನಿಯಮಾವಳಿಗಳಿಗೆ ಮಹಾರಾಷ್ಟ್ರ ಸರ್ಕಾರ ತಂದಿರುವ ‘ಕಾನೂನುಬಾಹಿರ’ ತಿದ್ದುಪಡಿಗಳನ್ನು ತಕ್ಷಣವೇ ಹಿಂಪಡೆಯದಿದ್ದರೆ ಮುಂಬರುವ ಜುಲೈ 5ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.

ಜೂನ್ 12ರಂದು ಸರ್ಕಾರ ತಂದಿರುವ ತಿದ್ದುಪಡಿಗಳು ಮಾಹಿತಿ ಹಕ್ಕು ಕಾಯ್ದೆ-2005ರ ಆಶಯಗಳನ್ನು ಗಾಳಿಗೆ ತೂರಿವೆ ಮತ್ತು ಆಡಳಿತದಲ್ಲಿನ ಪಾರದರ್ಶಕತೆಯನ್ನು ಸಂಪೂರ್ಣವಾಗಿ ಹತ್ತಿಕ್ಕಲಿವೆ ಎಂದು ಅವರು ಕಿಡಿಕಾರಿದ್ದಾರೆ. ಈ ಕುರಿತು ಸೋಮವಾರವೇ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಸುದೀರ್ಘ ಪತ್ರ ಬರೆದಿರುವ ಹಜಾರೆ, “ಮಹಾರಾಷ್ಟ್ರ ಮಾಹಿತಿ ಹಕ್ಕು ನಿಯಮಾವಳಿ-2026” ಆರ್​ಟಿಐ ಕಾಯ್ದೆಯ ಹರಿತವನ್ನು ಕಡಿಮೆ ಮಾಡಲಿದ್ದು, ಜನಸಾಮಾನ್ಯರನ್ನು ಮಾಹಿತಿಯಿಂದ ವಂಚಿತರನ್ನಾಗಿ ಮಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅರ್ಜಿ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿರುವುದನ್ನು ತೀವ್ರವಾಗಿ ಆಕ್ಷೇಪಿಸಿರುವ ಅವರು, ಈ ಏರಿಕೆಗೆ ಯಾವುದೇ ತಾರ್ಕಿಕ ವಿವರಣೆ ಅಥವಾ ಹಣಕಾಸು ವಿಶ್ಲೇಷಣೆಯನ್ನು ಸರ್ಕಾರ ನೀಡಿಲ್ಲ ಎಂದಿದ್ದಾರೆ. “ಆರ್​ಟಿಐ ಎಂಬುದು ಸರ್ಕಾರಕ್ಕೆ ಆದಾಯ ತರುವ ಕಾಯ್ದೆಯಲ್ಲ. ಒಂದು ವೇಳೆ 20 ವರ್ಷಗಳ ನಂತರ ಅರ್ಜಿ ಶುಲ್ಕವನ್ನು ಹೆಚ್ಚಿಸುವುದೇ ಆದಲ್ಲಿ, ಮಾಹಿತಿ ನೀಡಲು ನಿರಾಕರಿಸುವ ಭ್ರಷ್ಟ ಅಧಿಕಾರಿಗಳಿಗೆ ವಿಧಿಸುವ ದಂಡದ ಪ್ರಮಾಣವನ್ನೂ ಅಷ್ಟೇ ಪ್ರಮಾಣದಲ್ಲಿ ಹೆಚ್ಚಿಸಬೇಕಲ್ಲವೇ?” ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಮಾಹಿತಿ ಕೋರಿ ಅರ್ಜಿ ಸಲ್ಲಿಸುವಾಗ ಗುರುತಿನ ಚೀಟಿಯನ್ನು (ID Proof) ಕಡ್ಡಾಯಗೊಳಿಸಿರುವುದನ್ನು ಹಜಾರೆ ತೀವ್ರವಾಗಿ ವಿರೋಧಿಸಿದ್ದಾರೆ. ಆರ್​ಟಿಐ ಕಾಯ್ದೆಯ ಸೆಕ್ಷನ್ 6(2) ರ ಪ್ರಕಾರ, ಮಾಹಿತಿ ಕೋರುವವರು ತಮ್ಮ ವೈಯಕ್ತಿಕ ವಿವರಗಳನ್ನು ಅಥವಾ ಮಾಹಿತಿ ಕೇಳಲು ಇರುವ ಕಾರಣಗಳನ್ನು ಬಹಿರಂಗಪಡಿಸುವ ಅಗತ್ಯವಿಲ್ಲ. ಇಂತಹ ಕಠಿಣ ನಿಯಮಗಳನ್ನು ಜಾರಿಗೆ ತರುವುದರಿಂದ ಸಮಾಜದಲ್ಲಿನ ಹಗರಣಗಳನ್ನು ಬಯಲಿಗೆಳೆಯುವ ವಿಷಲ್ ಬ್ಲೋವರ್ಸ್ (Whistleblowers) ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರ ಜೀವಕ್ಕೆ ನೇರ ಅಪಾಯ ಎದುರಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಇದರೊಂದಿಗೆ, ‘ಒಂದು ವಿಷಯಕ್ಕೆ ಒಂದೇ ಅರ್ಜಿ’ ಎಂಬ ಹೊಸ ನಿಯಮವನ್ನು ಅನಗತ್ಯ ಮತ್ತು ಸಾರ್ವಜನಿಕರಿಗೆ ಹೊರೆಯಾಗುವಂತದ್ದು ಎಂದು ಟೀಕಿಸಿರುವ ಅವರು, ಒಂದೇ ರೀತಿಯ ಅರ್ಜಿಗಳನ್ನು ಮರುಸಲ್ಲಿಸಿದರೆ ಅವುಗಳನ್ನು ನೇರವಾಗಿ ವಜಾಗೊಳಿಸುವ (Summary Closure) ಪ್ರಾವಿಧಾನವು ನಾಗರಿಕರಿಗೆ ಸಂಪೂರ್ಣ ಅಥವಾ ನವೀಕೃತ ಮಾಹಿತಿ ಸಿಗದಂತೆ ತಡೆಯುತ್ತದೆ ಎಂದಿದ್ದಾರೆ. ಈ ನಿಯಮಗಳು ವ್ಯವಸ್ಥೆಯ ವೈಫಲ್ಯಗಳನ್ನು ಸರಿಪಡಿಸುವ ಬದಲು ನಾಗರಿಕರ ಮೇಲೆಯೇ ಹೆಚ್ಚಿನ ಹೊರೆ ಹೊರಿಸುತ್ತಿವೆ. ಸಾರ್ವಜನಿಕ ಪ್ರಾಧಿಕಾರಗಳು ಸ್ವಯಂಪ್ರೇರಿತವಾಗಿ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಆರ್​ಟಿಐ ಕಾಯ್ದೆಯ ಸೆಕ್ಷನ್ 4 ಕಟ್ಟುನಿಟ್ಟಾಗಿ ಹೇಳುತ್ತದೆ. ಆದರೆ ಅದು ಸರಿಯಾಗಿ ಅನುಷ್ಠಾನಕ್ಕೆ ಬಾರದ ಕಾರಣವೇ ಜನರು ಅರ್ಜಿ ಸಲ್ಲಿಸುವಂತಾಗಿದೆ ಎಂದು ಅವರು ನೆನಪಿಸಿದ್ದಾರೆ.

ಸಾರ್ವಜನಿಕರೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಈ ತಿದ್ದುಪಡಿಗಳನ್ನು ತರಲಾಗಿದೆ ಎಂದು ಆರೋಪಿಸಿದ ಅವರು, “ಮಾಹಿತಿ ಪಡೆಯುವ ಪ್ರಕ್ರಿಯೆಯನ್ನು ಹೆಚ್ಚು ತಾಂತ್ರಿಕ, ದುಬಾರಿ ಮತ್ತು ಆಡಳಿತ ಕೇಂದ್ರಿತ ಮಾಡುವುದರಿಂದ ಪಾರದರ್ಶಕತೆ ಸಂಪೂರ್ಣವಾಗಿ ಕುಸಿಯುತ್ತದೆ,” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

“ಜೂನ್ 12 ರ ತಿದ್ದುಪಡಿಗಳನ್ನು ತಕ್ಷಣವೇ ರದ್ದುಗೊಳಿಸದಿದ್ದರೆ, ಜುಲೈ 5 ರಿಂದ ರಾಳೇಗಾಂವ್ ಸಿದ್ಧಿಯ ಯಾದವ್ ಬಾಬಾ ದೇವಸ್ಥಾನದಲ್ಲಿ ನನ್ನ ಪ್ರಾಣ ಹೋದರೂ ಸರಿ, ನಾನು ಉಪವಾಸ ಸತ್ಯಾಗ್ರಹವನ್ನು ಆರಂಭಿಸುವುದು ನಿಶ್ಚಿತ,” ಎಂದು ಹಜಾರೆ ತಮ್ಮ ಪತ್ರದಲ್ಲಿ ದೃಢವಾಗಿ ತಿಳಿಸಿದ್ದಾರೆ. ಅರ್ಜಿದಾರರ ಮೇಲೆ ಹೊಸ ನಿರ್ಬಂಧಗಳನ್ನು ಹೇರುವ ಬದಲು, ತಿದ್ದುಪಡಿಗಳನ್ನು ಹಿಂಪಡೆದು ಸ್ವಯಂಪ್ರೇರಿತ ಮಾಹಿತಿ ಬಹಿರಂಗಪಡಿಸುವಿಕೆ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು