ದೆಹಲಿ: ಬಾಂಗ್ಲಾದೇಶದಲ್ಲಿ ಬುಧವಾರ ರಾತ್ರಿ ನಡೆದ ಗುಂಪು ದಾಳಿಯಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿ ಮೃತಪಟ್ಟಿದ್ದಾರೆ. ಇತ್ತೀಚೆಗಷ್ಟೇ ದೀಪು ಚಂದ್ರ ದಾಸ್ ಎಂಬ ಹಿಂದೂ ಕಾರ್ಮಿಕನನ್ನು ದುಷ್ಕರ್ಮಿಗಳ ಗುಂಪು ಹತ್ಯೆ ಮಾಡಿ, ಶವಕ್ಕೆ ಬೆಂಕಿ ಹಚ್ಚಿದ್ದ ಭೀಕರ ಘಟನೆಯ ನೆನಪು ಮಾಸುವ ಮುನ್ನವೇ ಬಾಂಗ್ಲಾದೇಶದಲ್ಲಿ ಇಂತಹದ್ದೇ ಮತ್ತೊಂದು ಘಟನೆ ಸಂಭವಿಸಿದೆ.
ಪಂಗ್ಶಾ ಉಪಜಿಲ್ಲೆಯ ರಾಜಬರಿಯಲ್ಲಿ ಬುಧವಾರ ರಾತ್ರಿ ಅಮೃತ್ ಮೊಂಡಲ್ ಅಲಿಯಾಸ್ ಸಾಮ್ರಾಟ್ ಎಂಬ 29 ವರ್ಷದ ವ್ಯಕ್ತಿಯನ್ನು ಜನರ ಗುಂಪು ಹೊಡೆದು ಕೊಂದಿದೆ. ಸಾಮ್ರಾಟ್ ‘ಸಾಮ್ರಾಟ್ ವಾಹಿನಿ’ ಎಂಬ ಕ್ರಿಮಿನಲ್ ಗ್ಯಾಂಗ್‌ನ ನಾಯಕನಾಗಿದ್ದು, ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಎಂದು ಸ್ಥಳೀಯರು ಬಾಂಗ್ಲಾದೇಶದ ‘ದಿ ಡೈಲಿ ಸ್ಟಾರ್’ ಪತ್ರಿಕೆಗೆ ತಿಳಿಸಿದ್ದಾರೆ.
ಕಳೆದ ವರ್ಷ ಪ್ರಧಾನಿ ಶೇಖ್ ಹಸೀನಾ ಅವರು ದೇಶ ತೊರೆದ ನಂತರ ಸಾಮ್ರಾಟ್ ಕೂಡ ದೇಶ ಬಿಟ್ಟು ಓಡಿಹೋಗಿದ್ದನು. ಇತ್ತೀಚೆಗಷ್ಟೇ ತನ್ನ ಗ್ರಾಮಕ್ಕೆ ಮರಳಿದ್ದ ಈತ, ತನ್ನ ಗ್ಯಾಂಗ್‌ನ ಕೆಲವು ಸದಸ್ಯರನ್ನು ಕರೆದುಕೊಂಡು ಶಾಹಿದುಲ್ ಇಸ್ಲಾಂ ಎಂಬ ಗ್ರಾಮಸ್ಥನ ಮನೆಗೆ ಹೋಗಿ ಹಣಕ್ಕಾಗಿ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.
ಇವರನ್ನು ನೋಡಿ ಕಳ್ಳರೆಂದು ಭಾವಿಸಿದ ಮನೆಯವರು ಜೋರಾಗಿ ಕೂಗಿಕೊಂಡಾಗ, ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಸಾಮ್ರಾಟ್‌ನನ್ನು ಹಿಡಿದು ಮನಬಂದಂತೆ ಥಳಿಸಿದ್ದಾರೆ. ಗ್ಯಾಂಗ್‌ನ ಇತರ ಸದಸ್ಯರು ಪರಾರಿಯಾಗಿದ್ದು, ಸಾಮ್ರಾಟ್ ಮಾತ್ರ ಗ್ರಾಮಸ್ಥರಿಗೆ ಸಿಕ್ಕಿಬಿದ್ದಿದ್ದಾನೆ.
ಗುಂಪು ದಾಳಿಯಿಂದ ಸಾಮ್ರಾಟ್‌ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಿ ಆತ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಎಎಸ್‌ಪಿ ದೇಬ್ರತ ಸರ್ಕಾರ್ ತಿಳಿಸಿದ್ದಾರೆ. ಪಂಗ್ಶಾ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ಹತ್ಯೆ ಪ್ರಕರಣ ಸೇರಿದಂತೆ ಒಟ್ಟು ಎರಡು ಕೇಸುಗಳು ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
