Home ಅಂಕಣ ಬೊಗಸೆಗೆ ದಕ್ಕಿದ್ದು-75 : ಸುಳ್ಳೇಂದ್ರರ ದೇಶದಲ್ಲಿ ಭ್ರಷ್ಟಚಾರ ವಿರೋಧಿ ಸತ್ಯೇಂದ್ರರ ಕಗ್ಗೊಲೆ!

ಬೊಗಸೆಗೆ ದಕ್ಕಿದ್ದು-75 : ಸುಳ್ಳೇಂದ್ರರ ದೇಶದಲ್ಲಿ ಭ್ರಷ್ಟಚಾರ ವಿರೋಧಿ ಸತ್ಯೇಂದ್ರರ ಕಗ್ಗೊಲೆ!

0

“..ಮೋದಿ ಆಡಳಿತದಲ್ಲಿ ಈ ಕಾರ್ಪೋರೇಟ್ ಲಂಚ ವ್ಯವಸ್ಥೆಯನ್ನೇ ಪಿಎಂ ಕೇರ್ಸ್ ಮತ್ತು ಚುನಾವಣಾ ಬಾಂಡ್ ಮುಂತಾದವುಗಳ ಮೂಲಕ ಸಾಂಸ್ಥೀಕರಣಗೊಳಿಸಲಾಗಿದೆ ಮತ್ತು ಅಪಾರದರ್ಶಕಗೊಳಿಸಲಾಗಿದೆ..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ಸುಳ್ಳೇಂದ್ರನ ದೇಶದ ಬಹುತೇಕ ಯುವಕರಿಗೆ ಸತ್ಯೇಂದ್ರ ದುಬೆಯವರ ಕತೆ ಗೊತ್ತಿರಲಾರದು. ಸ್ವಲ್ಪ ಹಳಬರಿಗೆ ಅದು ನೆನಪಿರಲಾರದು. ಅದು ಭಾರತದ ಕೇವಲ ಒಬ್ಬ ಪ್ರಾಮಾಣಿಕ, ಸುಶಿಕ್ಷಿತ ವ್ಯಕ್ತಿಯ ದುರಂತವಲ್ಲ; ಭಾರತದಲ್ಲಿ ಭ್ರಷ್ಟಾಚಾರವು ಹೇಗೆ ಒಂದು ಅಪಾಯಕಾರಿ ಸ್ವಯಂಪೋಷಕ, ಪರಭಕ್ಷಕ ಮಾಫಿಯಾದಂತೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಒಂದು ಜ್ವಲಂತ ನಿದರ್ಶನವಾಗಿದೆ. ಐಐಟಿ ಕಾನ್ಪುರ ಪದವೀಧರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯುವ ಎಂಜಿನಿಯರ್ ಆಗಿದ್ದ ದುಬೆ, 2002ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಭಾರತದ ಪ್ರಧಾನಿ ಆಗಿದ್ದ ಸಂದರ್ಭದಲ್ಲಿ- ಗೋಲ್ಡನ್ ಕ್ವಾಡ್ರಿಲ್ಯಾಟರಲ್ ಹೆದ್ದಾರಿ ಯೋಜನೆಯಲ್ಲಿ ಹೇಗೆ ಸಾರ್ವಜನಿಕ ಹಣವನ್ನು ಭಾರೀ ಪ್ರಮಾಣದಲ್ಲಿ ಲೂಟಿ ಮಾಡಲಾಗುತ್ತಿದೆ ಎಂಬುದನ್ನು ಬಹಿರಂಗಪಡಿಸಲು ಹಲವಾರು ಬೆದರಿಕೆಗಳಿಗೆ ಜಗ್ಗದೆ, ನೇರವಾಗಿ ಪ್ರಧಾನಮಂತ್ರಿ ಕಚೇರಿಗೇ ವಿವರವಾದ ಗುಪ್ತ ಪತ್ರವೊಂದನ್ನು ಬರೆದರು. ಸರಕಾರವು ತನ್ನನ್ನು ರಕ್ಷಿಸುತ್ತದೆ; ಭ್ರಷ್ಟಾಚಾರಿಗಳನ್ನು ಶಿಕ್ಷಿಸುತ್ತದೆ ಎಂದು ಅವರು ಬಲವಾಗಿ ನಂಬಿದ್ದರು. ನಮಗೆ ಬಾಲ್ಯದಿಂದಲೂ “ದುಷ್ಟ ಸಂಹಾರಕ, ಶಿಷ್ಟ ರಕ್ಷಕ ದೇವರ” ಬಗ್ಗೆ ನಂಬಿಕೆ ಇಡಲು ಕಲಿಸಲಾಗುತ್ತದೆ ಅಲ್ಲವೇ?! ಬದಲಾಗಿ, ಅವರು ನಂಬಿದ್ದ ಪ್ರಧಾನಿ ಕಚೇರಿಯಿಂದಲೇ ಅವರ ಗುರುತು ಸೋರಿಕೆಯಾಯಿತು. ಅವರನ್ನು ನವೆಂಬರ್ 2003ರಲ್ಲಿ ಬಿಹಾರದ ಗಯಾದಲ್ಲಿ ಬೀದಿಬದಿಯ ಚಾಯ್‌ವಾಲಾನ ಅಂಗಡಿಯಲ್ಲಿ ಚಹಾ ಕುಡಿಯುತ್ತಿದ್ದಾಗ ಗುಂಡಿಕ್ಕಿ ಕೊಲ್ಲಲಾಯಿತು!

​ಈ ರೀತಿಯ “ಭ್ರಷ್ಟಾಚಾರ ವಿರೋಧಿ ನಿರ್ಮೂಲನ” ಮಾದರಿಯು ನಮ್ಮ ಕೊಳೆತ ವ್ಯವಸ್ಥೆಯ ವಿಶೇಷ ಸ್ವಭಾವವಾಗಿಬಿಟ್ಟಿದೆ. ಇನ್ನೊಂದು ಪ್ರಕರಣವನ್ನು ನೆನಪಿಸಬೇಕೆಂದರೆ, 2005ರಲ್ಲಿ ಉತ್ತರ ಪ್ರದೇಶದಲ್ಲಿ ಕಲಬೆರಕೆ ಇಂಧನವನ್ನು ಮಾರಾಟ ಮಾಡುತ್ತಿದ್ದ ಪೆಟ್ರೋಲ್ ಪಂಪನ್ನು ಸೀಲ್ ಮಾಡಿದ್ದಕ್ಕಾಗಿ ಐಐಎಂ ಲಕ್ನೋದ ಪದವೀಧರ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧಿಕಾರಿ ಷಣ್ಮುಗಂ ಮಂಜುನಾಥ್ ಅವರ ಗತಿಯೂ ಇದೇ ಆಗಿತ್ತು. ಅವರ ಮೇಲೆ ಆರು ಸುತ್ತು ಗುಂಡುಹಾರಿಸಿ ಕೊಂದು ಸಂದೇಶವೊಂದನ್ನು ದೇಶದಾದ್ಯಂತ ರವಾನಿಸಲಾಯಿತು. “ಬೇಕಾದರೆ, ಪಾಲು ಪಡೆದು- ನಾಯಿಯಂತೆ ನಾವು ಹೇಳಿದಂತೆ ಕಣ್ಣು ಮುಚ್ಚಿ ಕೆಲಸ ಮಾಡಿ; ಇಲ್ಲವೇ, ನಾಯಿಯಂತೆ ಸಾಯಿರಿ!” ಈ ರೀತಿಯಾಗಿ ಭ್ರಷ್ಟಾಚಾರವನ್ನು ವಿರೋಧಿಸಿದ ಪ್ರಾಮಾಣಿಕ ಅಧಿಕಾರಿಗಳನ್ನು, ಪತ್ರಕರ್ತರನ್ನು, ಮಾಹಿತಿ ಹಕ್ಕು ಕಾರ್ಯಕರ್ತರನ್ನು; ಕೊನೆಗೆ ನ್ಯಾಯಾಧೀಶರನ್ನು ಕೂಡಾ- ರಾಜಾರೋಷವಾಗಿ ಗುಂಡಿಕ್ಕಿ, ವಾಹನ ಹರಿಸಿ ಕೊಂದ ಹಲವಾರು ಉದಾಹರಣೆಗಳನ್ನು ಇಲ್ಲಿ ಕೊಡಬಹುದು. ಇವರೆಲ್ಲರೂ ತಮ್ಮ ಕರ್ತವ್ಯ ನಿರ್ವಹಿಸಿದಕ್ಕಾಗಿ ಸಾಯಲಿಲ್ಲ; ಪ್ರಾಮಾಣಿಕತೆಯನ್ನು ತನ್ನ ಅಕ್ರಮ ಲಾಭಕ್ಕೆ ಬೆದರಿಕೆ ಎಂದು ಪರಿಗಣಿಸುವ ಪ್ರಬಲವಾದ ದುಷ್ಟ ವ್ಯವಸ್ಥೆಯು ಅವರನ್ನು ಹತ್ಯೆ ಮಾಡಿ ನಿವಾರಿಸಿತು.

​ಭಾರತದಲ್ಲಿ ಭ್ರಷ್ಟಾಚಾರವನ್ನು ಪ್ರಪ್ರತ್ಯೇಕ ಲಂಚಗಳ ಸರಣಿಗಳಾಗಿ ನೋಡಿದರೆ- ಅದರ ಇಡೀ ಸಂರಂಚನೆಯನ್ನೇ ತಪ್ಪಾಗಿ ಅರ್ಥೈಸಿಕೊಂಡಂತಾಗುತ್ತದೆ. ವಾಸ್ತವದಲ್ಲಿ, ಇದು ಒಂದು ಅತ್ಯಾಧುನಿಕವಾದ “ಮಾಫಿಯಾ ವ್ಯವಸ್ಥೆ”. ಹಣ, ಅಧಿಕಾರ, ಲಾಭ ಮತ್ತು ನಿಮ್ಮ ಮೌನ ಮಾತ್ರವೇ ಚಲಾವಣೆಯ ಕರೆನ್ಸಿಗಳಾಗಿರುವ ಒಂದು ಮುಚ್ಚಿದ ವ್ಯವಸ್ಥೆ. ಬೇರೆ ಯಾವುದಕ್ಕೂ ಇದರಲ್ಲಿ ಪ್ರವೇಶವಿಲ್ಲ. ಈ ವ್ಯವಸ್ಥೆಯು ಅಧಿಕಾರಶಾಹಿ ಕೆಂಪು ಪಟ್ಟಿಯ ಅಡಿಪಾಯದ ಮೇಲೆ ಕಟ್ಟಲಾಗಿರುವ ಸಿರಿತನದ ಅರಮನೆ. ಬೀದಿಯ ಮಟ್ಟದಿಂದ ಅಧಿಕಾರದ ಅತ್ಯುನ್ನತ ಹಂತಕ್ಕೆ ಹಣವನ್ನು ಹೀರುವ ಪಂಪ್ ಅಳವಡಿಸಲಾದ ಹೀರುಗೊಳವೆಗಳ ಜಾಲ.​

ಅಧಿಕಾರಶಾಹಿಯ ಟೋಲ್-ಗೇಟ್‌
​ಈ ಮಾಫಿಯಾ ವ್ಯವಸ್ಥೆಯ ಮೂಲವು ಭಾರತೀಯ ಅಧಿಕಾರಶಾಹಿ ವ್ಯವಸ್ಥೆಯ ಉದ್ದೇಶಪೂರ್ವಕ ಸಂಕೀರ್ಣತೆಯಲ್ಲಿದೆ. ಸರಾಸರಿ ನಾಗರಿಕನಿಗೆ, ರಾಜ್ಯದೊಂದಿಗಿನ ಪ್ರತಿಯೊಂದು ಸರಕಾರಿ ವ್ಯವಹಾರವನ್ನು- ಅದು ಪಂಚಾಯತ್, ತಾಲ್ಲೂಕು ಕಚೇರಿ ಅಥವಾ ಆರ್‌ಟಿಓ ಆಗಿರಲಿ – ಅಡಚಣೆಯ ಮಾರ್ಗವಾಗಿ ರೂಪುಗೊಳಿಸಲಾಗಿದೆ. ರಾಜಸತ್ತೆಯಿಂದ ಹಿಡಿದು, ಬ್ರಿಟಿಷ್ ರಾಜ್ ಮತ್ತು ನಂತರದ ಪ್ರಜಾತಂತ್ರದಲ್ಲಿ ಇದು ಬಲಗೊಳ್ಳುತ್ತಾಬಂದಿದೆ. ಈ ಕಾರ್ಯವಿಧಾನದ ಕುರಿತು ಜನಸಾಮಾನ್ಯರಲ್ಲಿ ಇರುವ ಅಜ್ಞಾನವನ್ನು ಅಧಿಕಾರಿಗಳು, ಅವರ ದಲ್ಲಾಳಿಗಳು- ರಾಜಕಾರಣಿಗಳ ಪ್ರೋತ್ಸಾಹ ಮತ್ತು ಪ್ರಚೋದನೆಯಂತೆ ತಮ್ಮ ಅಸ್ತ್ರವನ್ನಾಗಿ ಅಭಿವೃದ್ಧಿಪಡಿಸಿದ್ದಾರೆ. ಯಾವುದೇ ಒಂದು ಸರಕಾರಿ ಕೆಲಸವನ್ನು ನಾಗರಿಕನು ಏಕಾಂಗಿಯಾಗಿ ಮಾಡಿಸಿಕೊಳ್ಳಲು ಸಾಧ್ಯವಾಗದಷ್ಟು ಸಂಕೀರ್ಣವಾಗಿ, ಅಪಾರದರ್ಶಕವನ್ನಾಗಿ ಮಾಡಿದಾಗ, ಆ ಕುರಿತು ಏನನ್ನೂ ತಿಳಿಯದ ನಾಗರಿಕರಿಗೆ ಮಧ್ಯವರ್ತಿಯ ಮೊರೆಹೋಗುವುದು ಅಥವಾ ಲಂಚ ನೀಡುವುದೇ ಏಕೈಕ ದಾರಿಯಾಗುತ್ತದೆ.

​ಇದೊಂದು ವ್ಯವಸ್ಥಿತ ವಸೂಲಿ. ಎಲ್ಲಾ ಅಧಿಕಾರಿಗಳು ಸಾರಾಸಗಟಾಗಿ ಲಂಚವನ್ನು ಬಯಸುತ್ತಾರೆ ಎಂದಲ್ಲ; ಬದಲಾಗಿ ವ್ಯವಸ್ಥೆಯೇ ಕಾರ್ಯನಿರ್ವಹಿಸಲು ಅದನ್ನು ಬಯಸುತ್ತದೆ. ವಿಳಂಬಗಳು ಮತ್ತು ಜನರನ್ನು ಕಂಬದಿಂದ ಕಂಬಕ್ಕೆ ಅಲೆಸುವುದು ಅದಕ್ಷತೆಯ ಕಾರಣದಿಂದ ಅಲ್ಲ; ಅವು ಸುಲಿಗೆಯ ಸಾಧನಗಳಾಗಿವೆ. ತಮ್ಮ ಮೂಲಭೂತ ಹಕ್ಕಿಗಾಗಿ ನಾಗರಿಕರನ್ನು ಸವೆಸಿ, ಸವೆಸಿ ಲಂಚವನ್ನು “ಸೇವಾ ಶುಲ್ಕ”ವಾಗಿ ಕೊಡುವಂತೆ ಅಟಕಾಯಿಸುವ ವಂಚನಾ ಜಾಲವಾಗಿದೆ. ಪ್ರತಿಯೊಬ್ಬ ಓದುಗರಿಗೆ ಒಂದಲ್ಲ; ಹಲವಾರು ರೀತಿಗಳಲ್ಲಿ ಇದು ಅನುಭವಕ್ಕೆ ಬಂದಿರುವುದರಿಂದ ಈ ಧಾರಾವಾಹಿಯನ್ನು ಇಲ್ಲಿ ಪುನರಾವರ್ತನೆ ಮಾಡುವುದು ಮೂರ್ಖತನ. ಅಂಗೈ ಹುಣ್ಣಿಗೆ ಕನ್ನಡಿ ಏಕೆ ಎಂಬ ಕ್ಲೀಷೆಯಂತೆ!

ವಂಚನೆಗೆಂದೇ ಮೂಲಸೌಕರ್ಯ!
​ಈ ಮಾಫಿಯಾದ ಕಣ್ಣಿಗೆ ರಾಚುವ ಮತ್ತು ಜನರಿಗೆ ಮಾರಕವಾದ ನಿದರ್ಶನಗಳು ಲೋಕೋಪಯೋಗಿ ಇಲಾಖೆ (PWD) ಮತ್ತು ಇತರ ನಿರ್ಮಾಣ ಯೋಜನೆಗಳಲ್ಲಿ ಸಿಗುತ್ತವೆ. ಇವೆಲ್ಲವೂ ರಾತ್ರಿ ಹೊತ್ತಿನಲ್ಲಿ ನಡೆಯುವ ಹೊಂಚು ಕಳ್ಳತನಗಳಲ್ಲ; ರಾಜಾರೋಷವಾಗಿ ನಡೆಯುತ್ತಿರುವ ಹಗಲುದರೋಡೆಗಳು! ಜನರು ಇವುಗಳನ್ನು ಕಣ್ಣಾರೆ ನೋಡಬಹುದು. ಉದಾಹರಣೆಗೆ ಬಿಹಾರದಲ್ಲಿ ಇತ್ತೀಚೆಗೆ ಸಂಭವಿಸಿದ ಸೇತುವೆ ಕುಸಿತಗಳ ಸರಣಿ. ಅಲ್ಲಿ 2024 ಮತ್ತು 2025ರಲ್ಲಿ ಒಂದು ಡಜನ್‌ಗಿಂತಲೂ ಹೆಚ್ಚು ಸೇತುವೆಗಳು- ಕೆಲವು ನಿರ್ಮಾಣ ಹಂತದಲ್ಲಿದ್ದಾಗಲೇ, ಕೆಲವು ಪೂರ್ಣಗೊಂಡ ವಾರಗಳಲ್ಲಿ ಕುಸಿದವು ಎಂದರೆ ಈ ಬ್ರಹ್ಮಾಂಡ ಭ್ರಷ್ಟಾಚಾರ ಎಷ್ಟು ಭಯಾನಕವಾಗಿದೆ ಎಂದು ಗೊತ್ತಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಚಾಪೆ ಹಾಸಿದಂತೆ ನಿರ್ಮಿಸಲಾದ ರಸ್ತೆಗಳು, ವಾರದೊಳಗೆ ಕಿತ್ತುಹೋದ ಕಾಮಗಾರಿಗಳ ಸಾವಿರಾರು ಉದಾಹರಣೆಗಳನ್ನು ನಾವು ನಿತ್ಯವೂ ನೋಡುತ್ತೇವೆ.

​ಈ ವ್ಯವಸ್ಥೆಯಲ್ಲಿ, ಕಾಮಗಾರಿ ಗುತ್ತಿಗೆಯನ್ನು ಅತ್ಯಂತ ಸಮರ್ಥರಿಗೆ ನೀಡಲಾಗುವುದಿಲ್ಲ, ಗುತ್ತಿಗೆ ಹಣದಲ್ಲಿ ಹೆಚ್ಚಿನ ಶೇಕಡಾವಾರು ಮೊತ್ತವನ್ನು “ಹಿಂತಿರುಗಿಸಬಲ್ಲವರಿಗೆ” ನೀಡಲಾಗುತ್ತದೆ. ಉದಾಹರಣೆಗೆ ಒಂದು ಯೋಜನೆಯು 100 ಕೋಟಿ ರೂ. ಮೌಲ್ಯದ್ದಾಗಿದ್ದರೆ, ಒಂದೇ ಒಂದು ಇಟ್ಟಿಗೆ ಹಾಕುವ ಮೊದಲು 30-40 ಶೇಕಡಾ ಹಣವನ್ನು ಹಿಂತಿರುಗಿಸಲಾಗುತ್ತದೆ. ಈ ಹಣವನ್ನು ಎಂಜಿನಿಯರ್‌ಗಳು, ಸ್ಥಳೀಯ ರಾಜಕಾರಣಿಗಳು ಮತ್ತು ಗುತ್ತಿಗೆದಾರರ ನಡುವೆ ವಿತರಿಸಲಾಗುತ್ತದೆ. “ಪ್ರಾಮಾಣಿಕ” ಎನಿಸಿಕೊಂಡ ಜನಪ್ರತಿನಿಧಿಯೊಬ್ಬ ಲಂಚ ಕೇಳಬೇಕಾಗಿಲ್ಲ! ನಿಗದಿತ ಶೇಕಡಾವಾರು ಮನೆ ಬಾಗಿಲಿಗೇ “ಪ್ರಾಮಾಣಿಕ”ವಾಗಿ ಬಂದು ಬೀಳುತ್ತದೆ. ಗುಣಮಟ್ಟದ ಬಗ್ಗೆ ಮಾತನಾಡದಿದ್ದರೆ, ಅಷ್ಟೇ ಸಾಕು. ಈ ವ್ಯವಸ್ಥೆಯಿಂದ ಕೆಲಸ “ಅಡೆತಡೆಯಿಲ್ಲದೇ” ಸಾಗುತ್ತದೆ. ಇದು ನಡೆಯದಿದ್ದರೆ, ಹಣ ಬಿಡುಗಡೆ ಆಗುವುದಿಲ್ಲ; ಬಿಲ್ಲು ಪಾಸಾಗುವುದಿಲ್ಲ; ಗುಣಮಟ್ಟದ ಕಾಮಗಾರಿಯಲ್ಲೂ ದೋಷ ಹುಡುಕಲಾಗುತ್ತದೆ. ಈ “ಹೂಡಿಕೆ”ಯನ್ನು ಮರುಪಡೆಯಲು, ಗುತ್ತಿಗೆದಾರರು ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸುತ್ತಾರೆ – ತುಕ್ಕು ಹಿಡಿದ ಕಬ್ಬಿಣ, ಕಳಪೆ ಸಿಮೆಂಟ್ ಮತ್ತು ಕುಶಲತೆ ಇಲ್ಲದ ಅಗ್ಗದ ಕಾರ್ಮಿಕರು. ಇದರ ಫಲಿತಾಂಶವೆಂದರೆ, ಕಲ್ಲಿನ ಕೋಟೆಯಂತೆ ಕಾಣುವ, ಆದರೆ ಮರಳಿನ ಕೋಟೆಯಷ್ಟು ಗಟ್ಟಿಮುಟ್ಟಾದ ನಿರ್ಮಾಣಗಳು!

ಲಂಬವಾದ ಹೀರುಗೊಳವೆಯ ಜಾಲ
ಲಂಚದ “ಮಾಫಿಯಾ ವ್ಯವಸ್ಥೆ”ಯು ಶ್ರೇಣೀಕೃತವಾಗಿದೆ. ಆರ್‌ಟಿಒ ಅಥವಾ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪಡೆದ ಲಂಚವು ಕೆಳಮಟ್ಟದಲ್ಲಿ, ಅಧಿಕಾರಿಯೊಂದಿಗೆ ಉಳಿಯುವುದಿಲ್ಲ. ಗಮನಾರ್ಹ ಭಾಗವು ಮೇಲಕ್ಕೆ, ಮೇಲಕ್ಕೆ ಹರಿದು “ಗುರಿ” ಸೇರುತ್ತದೆ. ಇದು ಸ್ಥಿರ ದರದ ಆರ್ಥಿಕತೆ! ಇವೆಲ್ಲವೂ ಓದುಗರಿಗೆ ಗೊತ್ತಿಲ್ಲದ ವಿಷಯವಲ್ಲ. ಆದರೂ, ಅವುಗಳ ಹಂತಗಳನ್ನು ವ್ಯವಸ್ಥಿತವಾಗಿ ಗುರುತಿಸುವುದು ಅಗತ್ಯ.

ಸರ್ಕಾರಿ ಉದ್ಯೋಗಗಳು: ಅನೇಕ ರಾಜ್ಯಗಳಲ್ಲಿ, ಶಿಕ್ಷಕರು, ಪೊಲೀಸ್ ಕಾನ್‌ಸ್ಟೆಬಲ್‌ಗಳು ಅಥವಾ ಸಬ್-ಇನ್‌ಸ್ಪೆಕ್ಟರ್‌ಗಳಂತಹ ಹುದ್ದೆಗಳಿಗೆ ನಿಗದಿತ ಮಾರುಕಟ್ಟೆ ದರ ಇರುತ್ತದೆ. ಒಬ್ಬ ಅಭ್ಯರ್ಥಿಯು ಲಕ್ಷ-ಕೋಟಿಗಳನ್ನು ಉದ್ಯೋಗವನ್ನು ಖರೀದಿಸುತ್ತಾನೆ. ನಂತರ ಹಾಲು ಕರೆಯುವ ಹಂತ. ಸರಕಾರಿ ಉದ್ಯೋಗ ಪಡೆದವರು ತಮ್ಮ ಆರಂಭಿಕ ಹೂಡಿಕೆಯನ್ನು ಮರಳಿ ಪಡೆಯಲು ವ್ಯವಸ್ಥೆಯ ಮೂಲಕ ಜನರ “ಹಾಲು” ಕರೆಯಬೇಕು. ಆರಂಭಿಕ ವಸೂಲಿಯ ನಂತರ ನಿಗದಿತವಾಗಿ ಲಾಭಪಡೆಯುತ್ತಾ, ಮೇಲಿನವರಿಗೆ ನಿಗದಿತ ಕಪ್ಪ ಸಲ್ಲಿಸುತ್ತಾಬರಬೇಕು.

ನಂತರ ಬರುವುದು ​ರಕ್ಷಣಾ ಶುಲ್ಕ: “ಲಾಭದಾಯಕ” ಹುದ್ದೆಯನ್ನು (ಹೆಚ್ಚಿನ ಲಂಚದ ಹರಿದುಬರುವ) ಹುದ್ದೆಗಳನ್ನು ಪಡೆಯಲು ಅಥವಾ ಉಳಿಸಿಕೊಳ್ಳಲು, ಅಧಿಕಾರಿ ತಮ್ಮ ಉನ್ನತ ಅಧಿಕಾರಿಗಳಿಗೆ ನಿಗದಿತ ಮಾಸಿಕ “ಗೌರವಧನ” ಸಲ್ಲಿಸಬೇಕು. ಪ್ರತಿಯೊಂದು ಪ್ರದೇಶದ, ಪ್ರತಿಯೊಂದು ಹುದ್ದೆಗೂ ನಿಗದಿತ ದರವಿದೆ. ಈ ವ್ಯವಸ್ಥೆಯಿಂದ ದೂರ ಉಳಿಯಬಯಸುವ ಅಧಿಕಾರಿಗಳು ಎಷ್ಟೇ ದಕ್ಷರಾಗಿದ್ದರೂ ಕಿರುಕುಳ, ವರ್ಗಾವಣೆಯ ಶಿಕ್ಷೆಗೆ ಗುರಿಯಾಗಿ, ಒಂದಲ್ಲ ಒಂದು ಹಂತದಲ್ಲಿ ಶರಣಾಗಬೇಕಾಗುತ್ತದೆ. ಕೆಲವರು ಯದ್ವಾತದ್ವಾ ಬಾಚಿ ಪ್ರಜಾಪೀಡಕರಾದರೆ, ಇನ್ನು ಕೆಲವರು ಕೊಟ್ಟಷ್ಟು ಮಾತ್ರ ಇಸಿದುಕೊಂಡು, ಪ್ರಾಮಾಣಿಕರು ಎನಿಸಿಕೊಳ್ಳುತ್ತಾರೆ! ಇದರಲ್ಲೂ ವಿಧಗಳಿವೆ: ಕೆಲವರು ಸಾಮಾನ್ಯ ಜನರಿಂದ ವಸೂಲಿ ಮಾಡದೇ, ದೊಡ್ಡ ಕುಳಗಳೊಂದಿಗೆ ಮಾತ್ರ ವ್ಯವಹಾರ ಮಾಡಿ, ಜನರ ಕಣ್ಣಿನಲ್ಲಿ ಪ್ರಾಮಾಣಿಕರು ಎನಿಸಿಕೊಳ್ಳುತ್ತಾರೆ.

ಕಾರ್ಪೊರೇಟ್-ರಾಜಕೀಯ ನೆಕ್ಸಸ್
​ಈ ಪಿರಮಿಡ್‌ನ ತುದಿಯಲ್ಲಿ ರಾಜಕೀಯ ವ್ಯವಸ್ಥೆ ಇದೆ. ಕೆಳಗಿನಿಂದ ಸೆಳೆಯಲಾದ ಅಪಾರ ಮೊತ್ತದ ಹಣವನ್ನು ಚುನಾವಣಾ ನಿಧಿಗೆ ವರ್ಗಾಯಿಸಲಾಗುತ್ತದೆ. ಆಧುನಿಕ ಭಾರತೀಯ ಚುನಾವಣೆಗಳು ಅತ್ಯಂತ ದುಬಾರಿಯಾಗಿದ್ದು, ಮತಕೊಳ್ಳುವ ಮಾರುಕಟ್ಟೆಗಳಾಗಿವೆ. ಇದಕ್ಕೆ ಬೇಕಾಗುವ ನಗದಿನ ಭಾರೀ ಪ್ರಮಾಣದ ಅವಶ್ಯಕತೆಯು ಕಾರ್ಪೊರೇಟ್‌ಗಳೊಂದಿಗೆ “ಕೊಡು-ಕೊಳ್ಳು” ವ್ಯವಹಾರದಿಂದ ಬರುತ್ತದೆ. ಭ್ರಷ್ಟಾಚಾರದ ಸಾಂಸ್ಥೀಕರಣವಾಗುತ್ತದೆ. ಇಲ್ಲಿಯೂ ಪಕ್ಷಕ್ಕಾಗಿ ಭ್ರಷ್ಟಾಚಾರ ಮಾಡುವ ಮತ್ತು ವೈಯಕ್ತಿಕ ಸಂಪತ್ತು ಕೂಡಿಹಾಕುವ ವಿವಿಧ ರೀತಿಯ ರಾಜಕಾರಣಿಗಳು ಸಿಗುತ್ತಾರೆ.

ಕಾರ್ಪೊರೇಟ್‌ಗಳು ಪಕ್ಷಗಳಿಗೆ ಹಣಕಾಸು ಒದಗಿಸುತ್ತವೆ (ಸಾಮಾನ್ಯವಾಗಿ ಅಪಾರದರ್ಶಕ ಮಾರ್ಗಗಳ ಮೂಲಕ), ಮತ್ತು ಪ್ರತಿಯಾಗಿ ಕಾನೂನುಗಳನ್ನು ಮುರಿಯಲು, ಲಾಭಮಾಡಿಕೊಳ್ಳಲು ಅವರಿಗೆ ಅವಕಾಶ ಮಾಡಿಕೊಡಲಾಗುತ್ತದೆ; ಅವರಿಗೆ ಅನುಕೂಲಕರ ಯೋಜನೆಗಳನ್ನು, ಧೋರಣೆಗಳನ್ನು ರೂಪಿಸಲಾಗುತ್ತದೆ, ಜನರನ್ನು ಒಕ್ಕಲೆಬ್ಬಿಸಿ ಅವರಿಗೆ ಮೂರುಕಾಸಿನ ಬೆಲೆಗೆ ದಾನಮಾಡಲಾಗುತ್ತದೆ. ಭ್ರಷ್ಟಾಚಾರ-ವಿರೋಧಿ ಸಂಸ್ಥೆಗಳನ್ನೇ ಅಪವಿತ್ರಗೊಳಿಸಲಾಗುತ್ತದೆ. ಸರಕಾರಗಳು ಬಿದ್ದಾಗ ಅಥವಾ ಬಹುಮತ ಕಡಿಮೆಯಾದಾಗ, ಈ ಸಂಗ್ರಹವಾದ ಸಂಪತ್ತನ್ನು “ರಾಜಕೀಯ ಕುದುರೆ ವ್ಯಾಪಾರ”ಕ್ಕೆ ಬಳಸಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಮತದಾರ ಪ್ರಭುಗಳು ವಹಿವಾಟಿನಲ್ಲಿ  ಸ್ವತಃ ಮಾರಿಹೋದ ಅಥವಾ ಮೋಸಹೋದ ಬರೇ ವೀಕ್ಷಕರಾಗಿರುತ್ತಾರೆ! ಒಂದು ಕ್ಷಣ ಯೋಚಿಸಿದರೆ ನೂರಾರು “ಆನಿ-ಬಾನಿ” ವ್ಯವಹಾರಗಳು ಕಣ್ಣಮುಂದೆ ಹಾದುಹೋಗುತ್ತವೆ.

​ಸತ್ಯೇಂದ್ರ ದುಬೆ ಮತ್ತು ಮಂಜುನಾಥ್ ಷಣ್ಮುಗಂ ಅವರ ಕೊಲೆಗಳು ಆಕಸ್ಮಿಕಗಳಲ್ಲ; ಅವು ಈ ಭ್ರಷ್ಟ ವ್ಯವಸ್ಥೆಯ ನಿರ್ವಹಣೆಯ ಕ್ರೂರ ಕಾರ್ಯಾಚರಣೆಗಳು. ಈ ಮಾಫಿಯಾವು ಒಂದೇ ಒಂದು ಚಕ್ರವನ್ನು ಬೇರೆಡೆಗೆ ತಿರುಗಿಸಲು ಬಿಡುವುದಿಲ್ಲ. ಇದನ್ನು ಮುರಿಯಲು ವಿಸಿಲ್ ಬ್ಲೋವರ್ ಪ್ರೊಟೆಕ್ಷನ್ ಆಕ್ಟ್ (ಇದು ಅನುಷ್ಠಾನದಲ್ಲಿ ದುರ್ಬಲವಾಗಿ ಉಳಿದಿದೆ) ನಂತಹ ಕಾನೂನುಗಳಿಗಿಂತ ಹೆಚ್ಚಿನದುದರ ಅಗತ್ಯವಿದೆ; ಇದಕ್ಕೆ “ದ್ವಾರಪಾಲಕ” ಅಧಿಕಾರಶಾಹಿಯ ಭೂತವನ್ನು ಮೂಲದಲ್ಲೇ ಕಿತ್ತುಹಾಕುವ ಅಗತ್ಯವಿದೆ. ಪ್ರತಿಭಟನೆಯ ಜೊತೆಗೆ, ಉದ್ದೇಶಪೂರ್ವಕವಾಗಿ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುವವರೆಗೆ ಅದು ಈ ದೇಶದ ಸಂಪತ್ತು ಮತ್ತು ಅದರ ಅತ್ಯುತ್ತಮ ಮನಸ್ಸುಗಳನ್ನು ಕಬಳಿಸುವ ಪರಭಕ್ಷಕ ಯಂತ್ರದಂತೆ ಕೆಲಸ ಮುಂದುವರಿಸಲಿದೆ.

ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿರುವಂತೆ ಕಾಣುತ್ತದೆಯೇ? ಮೋದಿ ಆಡಳಿತದಲ್ಲಿ ಈ ಕಾರ್ಪೋರೇಟ್ ಲಂಚ ವ್ಯವಸ್ಥೆಯನ್ನೇ ಪಿಎಂ ಕೇರ್ಸ್ ಮತ್ತು ಚುನಾವಣಾ ಬಾಂಡ್ ಮುಂತಾದವುಗಳ ಮೂಲಕ ಸಾಂಸ್ಥೀಕರಣಗೊಳಿಸಲಾಗಿದೆ ಮತ್ತು ಅಪಾರದರ್ಶಕಗೊಳಿಸಲಾಗಿದೆ. ಕಳೆದ ಕಂತಿನಲ್ಲಿ ಮತ್ತು ಇಲ್ಲಿ ಹೇಳಿರುವುದು ಆ ಕುರಿತು ಮುಂದೆ ಗಮನ ಸೆಳೆಯಲು ಪೀಠಿಕೆ ಮಾತ್ರ

You cannot copy content of this page

Exit mobile version