Home ಅಂಕಣ ಬಾಲಕಿ ಜೊತೆ ಬಿಎಸ್ ವೈ ಹೀನಕೃತ್ಯ; ಪೋಕ್ಸೋ ಆರೋಪಿ ಬಿಎಸ್ ವೈ ಅಭಿಮಾನೋತ್ಸವ! ಮೇ 20...

ಬಾಲಕಿ ಜೊತೆ ಬಿಎಸ್ ವೈ ಹೀನಕೃತ್ಯ; ಪೋಕ್ಸೋ ಆರೋಪಿ ಬಿಎಸ್ ವೈ ಅಭಿಮಾನೋತ್ಸವ! ಮೇ 20 ರಂದು ಸುಪ್ರಿಂ ಕೋರ್ಟ್ ನಲ್ಲಿ ಭವಿಷ್ಯ ನಿರ್ಧಾರ?

0

ಅಭಿಮಾನೋತ್ಸವದ ಬೆನ್ನಲ್ಲೇ ಬಿಎಸ್‌ವೈ ಪೋಕ್ಸೋ ಕೇಸ್ ಮತ್ತೆ ಜೀವಂತ!
ಪತ್ರಕರ್ತ ನವೀನ್ ಸೂರಿಂಜೆಯವರ ಬರಹದಲ್ಲಿ ನವೀನ್ ಸೂರಿಂಜೆ

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ 50 ವರ್ಷಗಳ ರಾಜಕೀಯ ಜೀವನವನ್ನು ಪೂರೈಸಿದ ಹಿನ್ನಲೆಯಲ್ಲಿ ಮೇ 9, 2026 ರಂದು ಚಿತ್ರದುರ್ಗದ ಮಾದಾರ ಚೆನ್ನಯ್ಯನವರ ಗುರುಪೀಠದ ಮೈದಾನದಲ್ಲಿ “ಬಿಎಸ್‌ವೈ ಅಭಿಮಾನೋತ್ಸವ” ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇದಾಗಿ ಸರಿಯಾಗಿ 11 ದಿನಗಳ ನಂತರ, ಅಂದರೆ ಮೇ 20 ರಂದು ಬಿ ಎಸ್ ಯಡಿಯೂರಪ್ಪ ವಿರುದ್ದದ ಪೋಕ್ಸೋ ಪ್ರಕರಣ ಸುಪ್ರಿಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ಬಿ ಎಸ್ ಯಡಿಯೂರಪ್ಪರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿ ಪರವಾಗಿ ಹಿರಿಯ ವಕೀಲ ಎಸ್ ಬಾಲನ್ ಅವರು ‘ತಡೆಯಾಜ್ಞೆ ತೆರವು ಅರ್ಜಿ’ ಸಲ್ಲಿಸಿದ್ದು ಮೇ 20 ರಂದೇ ವಿಚಾರಣೆಗೆ ಬರುವ ಸಾಧ್ಯತೆ ಇದೆ.

2024 ಮಾರ್ಚ್ 14 ರಂದು, ಬೆಂಗಳೂರಿನ ಸದಾಶಿವನಗರ ಪೊಲೀಸರು 17 ವರ್ಷದ ಬಾಲಕಿಯ ಪರವಾಗಿ ಆಕೆಯ ತಾಯಿ ನೀಡಿದ  ಲೈಂಗಿಕ ದೌರ್ಜನ್ಯ ಆರೋಪದ ದೂರಿನ ಆಧಾರದಲ್ಲಿ ಮಾಜಿ ಸಿಎಂ ಬಿ ಎಸ್ ವೈ ವಿರುದ್ದ ಎಫ್ಐಆರ್ ದಾಖಲಿಸಿದ್ದರು. ಪ್ರಾರಂಭದಲ್ಲಿ ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದ ಪೊಲೀಸರು, ಪತ್ರಕರ್ತ ಶ್ರೇಯಸ್ ಮಧ್ಯಪ್ರವೇಶದ ಬಳಿಕ ಅನಿವಾರ್ಯವಾಗಿ ಎಫ್ಐಆರ್ ದಾಖಲಿಸಬೇಕಾಯಿತು. ನಂತರ ಪ್ರಕರಣವನ್ನು ಸಿಐಡಿ ವರ್ಗಾಯಿಸಲಾಯಿತು. ಆದರೆ ಸಿಐಡಿ ಪೊಲೀಸರು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ದ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಸಂತ್ರಸ್ತ ಬಾಲಕಿಯ ತಾಯಿ ಜನವಾದಿ‌ ಮಹಿಳಾ ಸಂಘಟನೆಯ ಮೂಲಕ ನನ್ನನ್ನು ಸಂಪರ್ಕಿಸಿದರು. ನಾನು ವಕೀಲ ಎಸ್ ಬಾಲನ್ ಅವರೊಂದಿಗೆ ತಾಯಿಯನ್ನು ಭೇಟಿ ಮಾಡಿಸಿ, ಪೋಕ್ಸೋ ಪ್ರಕರಣದ ತನಿಖೆಗೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಯಿತು. ರಿಟ್ ಅರ್ಜಿ ಸಲ್ಲಿಸಿದ ಎರಡೇ ದಿನದಲ್ಲಿ ಸಂತ್ರಸ್ತೆ ಬಾಲಕಿಯ ತಾಯಿ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಬಗ್ಗೆ ಜನವಾದಿ ಮಹಿಳಾ ಸಂಘಟನೆಯು ಪ್ರತ್ಯೇಕ ದೂರು ದಾಖಲಿಸಿದೆ.

ಹೈಕೋರ್ಟ್ ನಲ್ಲಿ ಎಸ್ ಬಾಲನ್ ಅವರು ರಿಟ್ ಅರ್ಜಿ ಸಲ್ಲಿಸುತ್ತಿದ್ದಂತೆ, ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಪೊಲೀಸರು ಬಿ ಎಸ್ ಯಡಿಯೂರಪ್ಪಗೆ ನೋಟಿಸ್ ನೀಡಿದರು‌. ಸಿಐಡಿ ನೀಡಿದ ನೋಟಿಸ್ ಆಧಾರದಲ್ಲಿ ಪ್ರಕರಣ ರದ್ದುಕೋರಿ ಬಿ ಎಸ್ ಯಡಿಯೂರಪ್ಪ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಪ್ರಾರಂಭದಲ್ಲಿ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದರೂ ಪೋಕ್ಸೋ ಪ್ರಕರಣ ರದ್ದುಗೊಳಿಸಲು ನಿರಾಕರಿಸಿ, ನವೆಂಬರ್ 2025 ರಂದು ರದ್ದು ಅರ್ಜಿಯನ್ನು ವಜಾಗೊಳಿಸಿತ್ತು. ಹಾಗಾಗಿ ಬಿ ಎಸ್ ವೈ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ 24 ನವೆಂಬರ್ 2025 ರಂದು ಸುಪ್ರಿಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ ಬಿ ಎಸ್ ಯಡಿಯೂರಪ್ಪ ಸಧ್ಯ ಪ್ರಕರಣಕ್ಕೆ ತಡೆಯಾಜ್ಞೆ ಪಡೆದುಕೊಂಡಿದ್ದಾರೆ.

ಸುಪ್ರಿಂ ಕೋರ್ಟ್ ನೀಡಿದ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋರಿ ಸಂತ್ರಸ್ತ ಬಾಲಕಿಯ ಪರವಾಗಿ ಎಸ್ ಬಾಲನ್ ಸುಪ್ರಿಂ‌ ಕೋರ್ಟ್ ನಲ್ಲಿ ವಕಾಲತ್ತು ಸಲ್ಲಿಸಿದ್ದಾರೆ. ಈಗಾಗಲೇ ವಿವರವಾದ ತಡೆಯಾಜ್ಞೆ ತೆರವು ಅರ್ಜಿ ಸಿದ್ದಗೊಳಿಸಿದ್ದಾರೆ. ಮೇ 20 ರಂದು ಅದು ವಿಚಾರಣೆಗೆ ಬರುವ ಸಾಧ್ಯತೆ ಇದೆ.

“ತನ್ನ ಪುತ್ರಿಯ ವಿರುದ್ಧ ಪೋಕ್ಸೊ ಅಪರಾಧ ಎಸಗಿದ ಸಂಬಂಧಿ ವಿರುದ್ಧ ಎಫ್‌ಐಆರ್” ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸರಿಯಾದ ತನಿಖೆ ನಡೆಸುತ್ತಿಲ್ಲ. ಹಾಗಾಗಿ ಸಹಾಯ ಮಾಡಿ  ಎಂದು ತನ್ನ ಮಗಳನ್ನು ಕರೆದುಕೊಂಡು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪರ ಮನೆಗೆ ಹೋದಾಗ, ಅಲ್ಲಿ ಬಿಎಸ್ ವೈ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು.

2024ರ ಫೆಬ್ರವರಿ 2ರಂದು, ಅಪ್ರಾಪ್ತ ಬಾಲಕಿಯ ತಾಯಿಯು ತನ್ನ ಅಪ್ರಾಪ್ತ ಮಗಳ ಜೊತೆ ಆರೋಪಿಯಾದ ಯಡಿಯೂರಪ್ಪ ಅವರ ಮನೆಗೆ ಹೋಗುತ್ತಾರೆ. 9 ನಿಮಿಷಗಳ ಚರ್ಚೆಯ ಬಳಿಕ, ಯಡಿಯೂರಪ್ಪ ನವರು ಸಂತ್ರಸ್ತೆ ಬಾಲಕಿಯನ್ನು ಕೋಣೆಯ ಒಳಗಡೆ ಕರೆಯುತ್ತಾರೆ. ಮಗಳ ಜೊತೆ ತಾಯಿಯೂ ಎದ್ದು ನಿಂತಾಗ, ತಾಯಿಗೆ ಹೊರಗಡೆ ನಿಲ್ಲಲು ಹೇಳುತ್ತಾರೆ. 5 ನಿಮಿಷಗಳ ನಂತರ ಸಂತ್ರಸ್ತೆ ಬಾಲಕಿಯು ಯಡಿಯೂರಪ್ಪರ ಕೋಣೆಯಿಂದ ಹೊರ ಬಂದು  “ಅವರು (ಬಿಎಸ್ ವೈ) ತಮ್ಮ ಕೈ ನನ್ನ ಶರ್ಟಿನ ಒಳಗೆ ಹಾಕಿದರು”  ಎಂದು ತಾಯಿಗೆ ಹೇಳುತ್ತಾಳೆ.

‘ನನ್ನ ಮಗಳಿಗೆ ಯಾಕೆ ಹೀಗೆ ಮಾಡಿದಿರಿ ?’ ಎಂದು ಸಂತ್ರಸ್ತ ಬಾಲಕಿಯ ತಾಯಿ ಬಿಎಸ್ ಯಡಿಯೂರಪ್ಪರನ್ನು ಪ್ರಶ್ನಿಸಿದಾಗ ‘ನಾನು ಆಕೆಯ ಮೇಲೆ ರೇಪ್ ಆಗಿದ್ದು ನಿಜವೇ ಎಂದು ಪರೀಕ್ಷಿಸಿದೆ ಅಷ್ಟೆ’ ಎಂದು ಬಿ ಎಸ್ ಯಡಿಯೂರಪ್ಪ ಉತ್ತರಿಸಿದ್ದಾರೆ.

15/03/2024 ರಂದು ಸಂತ್ರಸ್ತ ಬಾಲಕಿ ವೈದ್ಯಕೀಯ ತಪಾಸಣೆಯ ಸಂದರ್ಭದ ಹೇಳಿಕೆ ನೀಡಿದ್ದು ಅದು ಹೀಗಿದೆ  :
“ಯಡಿಯೂರಪ್ಪ ಅವರು ಕೊಠಡಿಗೆ ಕರೆಯಿಸಿಕೊಂಡು ಒಳಗಡೆ ಚಿಲಕ ಹಾಕಿದರು. ಅಲ್ಲಿ ಕೆಲವು ಪ್ರಶ್ನೆಗಳು ಕೇಳಿದರು. ನಂತರ ಎಡಗೈಯನ್ನು ನನ್ನ ಬಟ್ಟೆಯೊಳಗೆ ಹಾಕಿದರು. ನಾನು ತಳ್ಳಿದ ಮೇಲೆ ಅವರು ಬಾಗಿಲು ತೆರೆಯಲು ಒಪ್ಪಿಕೊಂಡರು. ತಾಯಿಯ ಬಳಿಗೆ ಬಂದು ಈ ವಿಷಯ ತಿಳಿಸಿದೆ.” ಎಂದು ವೈದ್ಯರ ಮುಂದೆ ಹೆಣ್ಣು ಮಗು ಹೇಳಿದ್ದು ಅದು ದಾಖಲಾಗಿದೆ.

16/03/2024 ರಂದು ಸಂತ್ರಸ್ತ ಬಾಲಕಿಯು ಸಿಐಡಿ ಡಿವೈಎಸ್ ಪಿ  ಮುಂದೆ ಹಾಜರಾಗಿ  161 ಸಿಆರ್ ಪಿಸಿ ಅಡಿಯಲ್ಲಿ ಹೇಳಿಕೆ ನೀಡಿದ್ದು, ಅದು ಹೀಗಿದೆ :
“02.02.2024 ರಂದು ಬೆಳಿಗ್ಗೆ 11 ರಿಂದ 12.30 ರ ಮಧ್ಯೆ ಯಡಿಯೂರಪ್ಪ ಅವರು ಬಾಗಿಲಿನ ಬಳಿ ನಿಂತು ನನಗೆ ಒಳಗೆ ಹೋಗಲು ಸೂಚಿಸಿದರು. ನಂತರ ಅವರೇ ಒಳಗೆ ಬಂದು ಬಾಗಿಲು ಬೀಗ ಹಾಕಿದರು. ಆ ಕೋಣೆಯಲ್ಲಿ ಸೋಫಾ ಮತ್ತು ಟೀ ಟೇಬಲ್ ಇತ್ತು. ನಾನು ನಿಂತಿದ್ದಾಗ ಅವರು ನನ್ನ ಹತ್ತಿರ ಬಂದು, ಹಿಂದಿನ ಪೋಕ್ಸೊ ಪ್ರಕರಣದ ಬಗ್ಗೆ ಪ್ರಶ್ನೆ ಮಾಡಿದರು. ಈ ನಡುವೆ, ಅವರ ಎಡಗೈ ನನ್ನ ಶರ್ಟಿನೊಳಗೆ ಹಾಕಿ, ನನ್ನ ಬಲ ಬದಿಯ ಎದೆಯನ್ನು ಕಿವುಚಿದರು. ನಾನು ಅವರ ಕೈ ತಳ್ಳಿದ ನಂತರ, ಅವರು ಬಾಗಿಲು ತೆರೆದರು. ಹೊರಬಂದು ತಾಯಿಯ ಬಳಿ ಅಳುತ್ತಾ ಹೇಳಿದೆನು”  ಎಂದು ದಾಖಲಾಗಿದೆ.

ಸಂತ್ರಸ್ತ ಬಾಲಕಿಯ ತಾಯಿ ನೀಡಿದ್ದು, ಯಡಿಯೂರಪ್ಪ ಅವರೊಂದಿಗೆ ತಾನು ಮಾತನಾಡಿದ್ದು, ಅದನ್ನು ರೆಕಾರ್ಡ್ ಮಾಡಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. “ಅಪ್ಪಾಜಿ, ಏನು ಮಾಡಿದ್ದೀರಿ? ನೀವು ನನ್ನ ಮಗಳನ್ನು ಏನು ಮಾಡಿದಿರಿ?” ಎಂದು ಬಾಲಕಿಯ ತಾಯಿ ಪ್ರಶ್ನಿಸಿದ್ದಾರೆ.
ಯಡಿಯೂರಪ್ಪನವರು ಇದಕ್ಕೆ ಉತ್ತರಿಸುತ್ತಾ, ‘ನಿಮ್ಮ ಮಗಳಿಗೆ ರೇಪ್ ಆಗಿದೆಯೋ, ಇಲ್ಲವೋ ಎಂದು ಚೆಕ್ ಮಾಡಿದೆ” ಎಂದಿದ್ದಾರೆ. ತಾಯಿಯು ಸ್ವಲ್ಪ ಜೋರಾದ ಸ್ವರದಲ್ಲಿ ಕೇಳಿದಾಗ, ‘ಬನ್ನಿ ಕುಳಿತುಕೊಳ್ಳಿ, ಮಾತಾಡೋಣ’  ಎಂದು ಯಡಿಯೂರಪ್ಪ ಹೇಳಿದರು.

ಈ ಮಧ್ಯೆ ಯಡಿಯೂರಪ್ಪ ಆಪ್ತ ರುದ್ರೇಶ್ ಎಂಬಾತ ತನ್ನ ಮೊಬೈಲ್ ಸಂಖ್ಯೆ 9945849*** ಸಂಖ್ಯೆಯಿಂದ ಸಂತ್ರಸ್ತೆ ಬಾಲಕಿಯ ತಾಯಿಗೆ ಕರೆ ಮಾಡಿ ಭೇಟಿಯಾಗಿ ಮಾತನಾಡಲು ಹೇಳಿದರು. ರುದ್ರೇಶ್ ನನ್ನು ಭೇಟಿಯಾದಾಗ ಆತನ ಬಿ ಎಸ್ ಯಡಿಯೂರಪ್ಪನವರ ಪುತ್ರರಾದ ಬಿ ವೈ ವಿಜಯೇಂದ್ರ ಮತ್ತು ಬಿ ವೈ ರಾಘವೇಂದ್ರರನ್ನು ಭೇಟಿಯಾಗುವಂತೆ ಒತ್ತಾಯಿಸಿದರು. ನಂತರ ರುದ್ರೇಶ್ ಮತ್ತು ಮರಿಸ್ವಾಮಿಯವರು ಹಣದ ಕಂತೆಗಳನ್ನು ಸಂತ್ರಸ್ತ ಬಾಲಕಿಯ ತಾಯಿಗೆ ನೀಡಲು ಮುಂದಾಗಿದ್ದು, ತಾಯಿ ಹಣ ಪಡೆಯಲು ನಿರಾಕರಿಸಿದ್ದಾರೆ. ಇವೆಲ್ಲವೂ ವಿಡಿಯೋ ಚಿತ್ರೀಕರಣಗೊಂಡಿದೆ.

ಎಲ್ಲಾ ದಾಖಲೆಗಳೊಂದಿಗೆ ಸುಪ್ರಿಂ‌ಕೊರ್ಟ್ ನಲ್ಲಿ ತಡೆಯಾಜ್ಞೆ ತೆರವು ಅರ್ಜಿ ಸಲ್ಲಿಸಲಿದ್ದು, ಈಗಾಗಲೇ ಎಸ್ ಬಾಲನ್ ವಕಾಲತ್ತು ಸಲ್ಲಿಸಿದ್ದಾರೆ. ಮೇ 09 ರಂದು ನಡೆಯುವ ಅಭಿಮಾನೋತ್ಸವ ಬಿಎಸ್ ವೈ ರಾಜಕೀಯದ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ.‌ ಆದರೆ 11 ದಿನಗಳ ಅಂತರದಲ್ಲಿ ನಡೆಯುವ ಸುಪ್ರಿಂ ಕೋರ್ಟ್ ವಿಚಾರಣೆಯೇ ಬಿ ಎಸ್ ವೈ ಮತ್ತು ಬಿಜೆಪಿ ಮೇಲೆ ಪರಿಣಾಮ‌ ಬೀರುವ ಸಾಧ್ಯತೆ ಇದೆ.

You cannot copy content of this page

Exit mobile version