ತಮ್ಮದೇ ಸಿನೆಮಾದ ಪ್ರಿ ರಿಲೀಸ್ ಈವೆಂಟ್ ನಲ್ಲಿ ಕನ್ನಡ ಭಾಷೆಯನ್ನು ತುಚ್ಛವಾಗಿ ಕಂಡ ನಟ ಕಮಲ್ ಹಾಸನ್ ವಿರುದ್ಧ ಕರ್ನಾಟಕದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಚೆನ್ನೈನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತಿನ ಭರದಲ್ಲಿ ‘ತಮಿಳಿನಿಂದಲೇ ಕನ್ನಡ ಹುಟ್ಟಿದ್ದು..’ ಎಂಬ ಮಾತು ಈಗ ಕನ್ನಡಿಗರ ಸ್ವಾಭಿಮಾನಕ್ಕೆ ಕಿಚ್ಚು ಹಚ್ಚಿದಂತಾಗಿದೆ.
ಕನ್ನಡದ ನಟ ಶಿವರಾಜ್ ಕುಮಾರ್ ಕೂಡಾ ಅತಿಥಿಯಾಗಿ ಉಪಸ್ಥಿತರಿದ್ದ ‘ಥಗ್ ಲೈಫ್’ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ನಟ ಕಮಲ್ ಹಾಸನ್ ‘ತಮಿಳಿನಿಂದಲೇ ಕನ್ನಡ ಹುಟ್ಟಿದ್ದು’ ಎನ್ನುವ ಹೇಳಿಕೆ ನೀಡಿದ್ದಾರೆ. ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕದಲ್ಲಿ ಕಮಲ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದು ಅವರ ಮುಂದಿನ ಸಿನಿಮಾಗೆ ದೊಡ್ಡ ಹೊಡೆತ ಎಂಬ ಮಾತುಗಳು ಕೇಳಿ ಬಂದಿವೆ.
ಸಾಮಾಜಿಕ ಜಾಲತಾಣದಲ್ಲಿ ನಟ ಕಮಲ್ ಹಾಸನ್ ವಿರುದ್ಧ ಟೀಕೆ ವ್ಯಕ್ತವಾಗಿದೆ. ‘ಕರ್ನಾಟಕದಲ್ಲಿ ಥಗ್ ಲೈಫ್ ರಿಲೀಸ್ ಮಾಡಲು ಬಿಡುವುದಿಲ್ಲ’ ಎಂದು ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ.
ಮಣಿರತ್ನಂ ನಿರ್ದೇಶನದಲ್ಲಿ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಜೂ.5ರಂದು ತೆರೆ ಕಾಣುತ್ತಿದೆ. ಅದರ ಪ್ರಚಾರ ಕಾರ್ಯಕ್ಕಾಗಿ ಕಮಲ್ ಹಾಸನ್ ಮತ್ತು ಚಿತ್ರತಂಡ ಮಂಗಳವಾರ ಬೆಂಗಳೂರಿಗೆ ಬಂದಿತ್ತು. ಇದರ ಬೆನ್ನಲ್ಲೇ ಅವರು ಶನಿವಾರ ಮಾತನಾಡಿದ ವಿಡಿಯೊ ಹರಿಬಿಟ್ಟ ನಂತರ ವಿವಾದ ಸೃಷ್ಟಿಯಾಗಿದೆ. ಆದರೆ ಹೆಗಡೆ ನಗರದಲ್ಲಿ ನಡೆದ ಚಿತ್ರದ ಪ್ರಚಾರ ಕಾರ್ಯಕ್ಕೆ ಯಾವುದೇ ತೊಂದರೆ ಆಗಲಿಲ್ಲ.