ದೇಶಕ್ಕೆ ರೈತರು ನೀಡುವ ಕೊಡುಗೆಗಳನ್ನು ಆಚರಿಸಲು ವಿವಿಧ ದೇಶಗಳಲ್ಲಿ ರೈತರ ದಿನವನ್ನು ವಾರ್ಷಿಕವಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಇದನ್ನು ಡಿಸೆಂಬರ್ 23 ರಂದು ಆಚರಿಸಲಾಗುತ್ತದೆ. ಈ ದಿನದ ಅಂಗವಾಗಿ ರೈತ ಬದುಕಿನ ಕುರಿತು ಮಂಜುನಾಥ್ ಅಮಲಗೊಂದಿಯವರ ಬರಹ ನಿಮ್ಮ ಓದಿಗಾಗಿ
ನಮ್ಮದು ಕೃಷಿ ಕುಟುಂಬ, ಕೃಷಿ ಅಂದ ಮೇಲೆ ಗೊತ್ತಾಲ್ಲ ಖುಷಿ ಜೊತೆಗೆ ಕಹಿ ವಿಷಯಗಳೂ ಸೇರಿ ಸಮ್ಮೇಳನವಾಗಿರುತ್ತವೆ. ವ್ಯವಸಾಯ ಮನೆ ಮಂದಿಯೆಲ್ಲಾ ಸಾಯ(ಸಹಾಯ!) ಎಂಬ ವಾಕ್ಯವನ್ನು ಕೃಷಿಕರ ಬಾಯಿಂದ ಕೇಳುತ್ತಿರುತ್ತೇವೆ. ಹಾಗೆಯೇ ನಮ್ಮ ಮನೆಯಲ್ಲೂ ಕೃಷಿಗೆ ತಮ್ಮ ತಮ್ಮ ಸಹಾಯವನ್ನು ಕೂಡಿಸಿ ವ್ಯವಸಾಯವೆಂಬ ಬಂಡಿಯನ್ನು ಓಡಿಸುತ್ತಿದ್ದರು. ಮನೆ ಸದಸ್ಯರ ಜೊತೆ ನಮ್ಮನೆಯಲ್ಲಿ ಒಂದು ಜೊತೆ ಎತ್ತುಗಳು ಸಹ ನಮ್ಮ ಕೃಷಿಗೆ ಪೂರ್ಣ ಪ್ರಮಾಣದಲ್ಲಿ ಹೆಗಲು ಕೊಟ್ಟಿದ್ದವು.
2008 ರ ಮಾರ್ಚ್/ಏಪ್ರಿಲ್ ತಿಂಗಳಲ್ಲಿ ನಮ್ಮೂರ ಹತ್ತಿರ ನಡೆಯುವ ಮಧುಗಿರಿ ತಾಲ್ಲೂಕಿನ ಬಡವನಹಳ್ಳಿ ರಂಗಧಾಮ ದನಗಳ ಜಾತ್ರೆ ನಡೆಯುತ್ತಿತ್ತು. ನಮ್ಮಪ್ಪ ಈ ಜಾತ್ರೆಯಲ್ಲಿ ಎತ್ತುಗಳನ್ನು ಹೆಚ್ಚು ಬೆಲೆಗೆ ಮಾರಾಟ ಮಾಡಲು ಹೆಚ್ಚು ಶ್ರಮವಹಿಸುತ್ತಿದ್ದರು. ಮಾರ್ನಾಮಿ ಹಬ್ಬದ ಸಮಯದಲ್ಲಿ ಹಸಿ ಹುಲ್ಲನ್ನು ಚೆನ್ನಾಗಿ ಮೇಯಿಸುವುದು ನಮ್ಮಪ್ಪನ ಪರ್ಮೆಂಟ್ ಕಾಯಕ, ನಾವು ಬೆಳಿಗ್ಗೆ ಶಾಲೆಗೆ ಹೋಗುವುದರೊಳಗೆ ದಿಣ್ಣೆಯ ಹಸಿ ಹುಲ್ಲನ್ನು ತಂದಾಕಿ ಹೋಗಲೇಬೇಕು, ಇಲ್ಲದಿದ್ದರೆ ಸಂಜೆ ಶಾಲೆಯಿಂದ ಬಂದ ಕೂಡಲೇ ನಮ್ಗೆ ಕಡ್ಡಿ ಕರ್ಪೂರವಿಲ್ಲದೆ ಪೂಜೆ ಆಗುತ್ತಿದ್ದವು. ಆಗಾಗಿ ನಾನು ಮತ್ತು ನನ್ನ ತಮ್ಮ ಬೆಳಿಗ್ಗೆ 5:30 ಕ್ಕೆ ಎದ್ದು ದನಗಳ ಸಗಣಿ ತಿಪ್ಪೆಗೆ ಸಾಗಿಸಿದ ತಕ್ಷಣವೇ ಕೊಡ್ಲು ಹಿಡಿದುಕೊಂಡು, ಹಳೇ ಸೈಕಲ್ ತೆಗೆದುಕೊಂಡು ದಿಣ್ಣೆಯ ಕಡೆ ಓಡುತ್ತಿದ್ದೆವು.
ನಮ್ಮಪ್ಪ 4 ಗಂಟೆ ಗೆ ಎದ್ದು ಮನೆ ಮುಂದಿನ ಅಟ್ಟದ ಮೇಲೆ ಕುಳಿತು ಸಜ್ಜೆ ಕಡ್ಡಿಯನ್ನು ದನಗಳ ಬಾಯಿಗೆ ಕೊಟ್ಟು ತಿನ್ನಿಸುತ್ತಿದ್ದರು. ತಿನ್ನದಿದ್ದರೆ ಕಟ್ಬಾಯಿಗೆ ಹಾಕಿ ತುರುಕುತ್ತಿದ್ದರು. ಎತ್ತುಗಳು ನಾ ಒಲ್ಲೆ ಎಂದರೂ ಬಿಡೆನು ನಿನ್ನ ಎಂಬತೆ ತುರುಕುವುದೇ ಇವರ ಕರ್ಮ. ಇನ್ನೂ ನಾವು ಒಂದರಿಂದ ಎರಡು ಕಿ.ಮೀ ದೂರದ ದಿಣ್ಣೆ ಹೊಲಕ್ಕೆ ಹೋಗಿ ಹುಲ್ಲು ಕಿತ್ತು ಹೊರೆ ಕಟ್ಟಿ, ಸೈಕಲ್ ಮೇಲೆ ಇಟ್ಟುಕೊಂಡು ಬರುವುದೇ ರೋಚಕ ಕಥೆ.

ಸೈಕಲ್ನ ಹಿಂದಿನ ಕ್ಯಾರಿಯರ್ ಮೇಲೆ ಒಂದು ಹೊರೆ, ಮಧ್ಯೆದಲ್ಲಿ ಒಂದು ಹೊರೆ ಇಟ್ಟುಕೊಂಡು ತಳ್ಳಿಕೊಂಡು ಬರುತ್ತಿದ್ದೆವು. ಇಳಿಜಾರು ಬಂದರೆ ಸರದಿಯಲ್ಲಿ ಸೈಕಲ್ ಮೇಲೆ ಕೂತು ಉಳಿದವರು ಹಿಂದೆ ತಳ್ಳಿಬಿಡುವುದು. ಹೀಗೆ ಇಳಿಜಾರಿನಲ್ಲಿ ಎರಡು ಹೊರೆ ಇರುವ ಸೈಕಲ್ ಮೇಲೆ ಕೂತು ಹೋಗುವುದೇ ಒಂದು ತರದ ಮಜವಿತ್ತು. ಹೀಗೆ ಹೋಗುವಾಗ ಎಷ್ಟೋ ಬಾರಿ ರಸ್ತೆ ಬದಿಯ ಚರಂಡಿಗೆ ಮುಗ್ಗರಿದ್ದೂ ಉಂಟನ್ನಿ. ಒಟ್ಟಾರೆ ಹುಲ್ಲಿನ ಹೊರೆ ಮನೆಗೆ ಸಾಗಿಸಿ ಅರ್ಧಂಭರ್ಧ ಹಲ್ಲು ತಿಕ್ಕಿ, ಕೈಕಾಲ್ ತೊಳೆದು ಶಾಲೆಯ ಕಡೆ ಹೆಜ್ಜೆ ಹಾಕುತ್ತಿದ್ದೆವು.
ಹಿಂದಿನ ದಿನ ಮೇಷ್ಟ್ರು ಕೊಟ್ಟ ಪ್ರಶ್ನೆಯನ್ನು ಕಂಠಪಾಠ ಮಾಡಲು ಸಮಯ ಸಿಗಲಿಲ್ಲವಾದಾಗ ರಸ್ತೆಯುದ್ದಕ್ಕೂ ಓದಿಕೊಂಡು ಹೋಗಿ ನಮ್ಮ ಲೈನ್ ಲೀಡರ್ ಗೆ ಒಪ್ಪಿಸಿ ನಿಟ್ಟುಸಿರು ಬಿಡುತ್ತಿದ್ದೆವು. ಕೆಲವು ಬಾರಿ ಲೈನ್ ಲೀಡರ್ ಗೆ ಕೆಲ ಆಮಿಷಗಳನ್ನು ಒಡ್ಡಿ ಪುಸಲಾಯಿಸಿ ಮೇಷ್ಟ್ರು ಕೊಡುವ ಕಜ್ಜಾಯ(ಏಟು) ದಿಂದ ತಪ್ಪಿಸಿಕೊಳ್ಳುತ್ತಿದ್ದೆವು. ಇರಲಿ ಇದು ದೊಡ್ಡ ಕಥೆ. ಇನ್ನು ನಮ್ಮ ಮನೆಯ ಎತ್ತುಗಳ ಕಡೆ ಬರೋಣ.
ನಮ್ಮ ಎತ್ತುಗಳನ್ನು ಸುಗ್ಗಿಯ ಸಮಯದಲ್ಲಿ ಹಿಡಿಯುವುದೇ ಕಷ್ಟವಾಗುತ್ತಿತ್ತು. ಅದೆನೂ ಒಂದು ಗಾದೆನೇ ಇದೆಯಲ್ಲಾ “ಗೌರಿ ಹಬ್ಬದಲ್ಲಿ ಹೆಂಡ್ತಿ ಮಾತಾಡಿಸ್ಬೇಡ, ಮಾರ್ನಾಮಿ ಹಬ್ಬದಲ್ಲಿ ದನಗಳನ್ನು ಮಾತನಾಡಿಸಬೇಡ ಎಂದು. ಮಾತನಾಡಿಸಿದರೆ ನೀವ್ ನೀವಾಗಿ ಉಳಿಯಲ್ಲ ಅಷ್ಟೇ. ಅಂದರೆ ಎತ್ತುಗಳು ಮಾರ್ನಾಮಿ ಆಸು ಪಾಸಿನಲ್ಲಿ ಹಸಿಹುಲ್ಲು ತಿಂದು ಅಷ್ಟು ಪವರ್ ಪುಲ್ ಆಗಿರುತ್ತವೆ ಎಂದರ್ಥ. ಹೀಗೆ ನಮ್ ಎತ್ತುಗಳನ್ನು ಮಾರ್ನಾಮಿಯಿಂದ ಯುಗಾದಿ ವರೆಗೂ ಹುಲ್ಲು, ಕಡಲೇಬೀಜದ ಹಿಂಡಿ, ಬೂಸಾ ಹಾಕಿ ಬೆಳೆಸುತ್ತಿದ್ದರು.
ಕೆಲವು ಬಾರಿ ಎಲೆಕ್ಷನ್ ಬಂದರೆ ಬೇಡವೆಂದರೂ ರಾಜಕಾರಣಿಗಳು ಕೊಡುತ್ತಿದ್ದ ಎಣ್ಣೆ ಪಾಕಿಟ್ ಗಳಲ್ಲಿದ್ದ ಮದ್ಯವನ್ನು ದನಗಳ ಬಾಯಿಗೆ ಬಿದಿರಿನ ಗೊಟ್ಟದ ಮೂಲಕ ಎತ್ತಿದ್ದು ನೆನಪಿದೆ. ಕಾರಣ ಹುಲ್ಲನ್ನು ಜಾಸ್ತಿ ತಿನ್ನುವುದಕ್ಕೆ ಎಂದು ಹೇಳುತ್ತಿದ್ದರು. ಅದು ಎಷ್ಟು ಸರಿತಪ್ಪು ನನಗಂತೂ ಗೊತ್ತಿಲ್ಲ. ಅಂತೂ ಯುಗಾದಿ ಕಳೆದು ರಾಮ್ನಾಮಿ ಹಬ್ಬದೊಳಗೆ ಎತ್ತುಗಳು ಪಳಗುಟ್ಟುವಂತಾಗುತ್ತಿದ್ದವು. ಆ ವರ್ಷವೂ ಬಲು ಕಟ್ಟು ಮಸ್ತಾದ ಎತ್ತುಗಳನ್ನು ಬೆಳೆಸಿತ್ತು ನಮ್ಮಪ್ಪ.
ಬಡವನಹಳ್ಳಿ ಜಾತ್ರೆಗೆ ಮಾರಲು ಹೋಗಿ ಇದ್ದ ಎತ್ತುಗಳನ್ನು ಹೆಚ್ಚು ಬೆಲೆಗೆ ಮಾರಿ, ಒಂದು ವಾರದಲ್ಲಿ ಜಾತ್ರೆಯೆಲ್ಲಾ ಸಿದುಕಿ, ದನಗಳಲ್ಲಿರುವ ಪಟ್ಟೆಸುಳಿ, ಗೂಬೆ ಸುಳಿ, ನೆತ್ತಿ ಸುಳಿ, ಬಾಲದ ಸುಳಿ ಹೀಗೆ ಇಲ್ಲಬಲ್ಲದ ಸುಳಿಗಳನ್ನು ರೀಸರ್ಚ್ ಮಾಡಿ, ಕಾಲಿನ ಗೊರಸೆ, ಹಲ್ಲುಗಳನ್ನು ನೋಡಿ ಕೊನೆಗೂ ಒಂದು ಜೊತೆ ಎತ್ತುಗಳನ್ನು ತಂದರು. ನಂತರ ನಮ್ಮಪ್ಪನ ಕಾಯಕ ಶುರುವಾಯಿತು. ಪ್ರತಿ ಸಲ ಎತ್ತುಗಳನ್ನು ತಂದಾಗ ಎತ್ತುಗಳಿಗೆ ಮಡಿಕೆ(ನೇಗಿಲು) ಕಲಿಸುವು, ಎತ್ತಿನಗಾಡಿ ಕಲಿಸುವುದು ಮುಖ್ಯಕಾರ್ಯ.
ಹಿಂದಿನ ವರ್ಷದ ಎತ್ತುಗಳು ಎತ್ತಿನ ಗಾಡಿಯಲ್ಲಿ ನಿಪುಣವಾಗಿದ್ದವು. ಆದರೆ ಈ ಜಾತ್ರೆಯಲ್ಲಿ ತಂದ ಎತ್ತುಗಳು ಎತ್ತಿನಗಾಡಿಯ ಕಡೆ ತಲೆಯನ್ನೂ ಹಾಕಿರಲಿಲ್ಲ. ಆಗಾಗಿ ನಾನು ನನ್ನ ತಮ್ಮ, ಅಪ್ಪ ಸೇರಿ ಎತ್ತುಗಳನ್ನು ಹಿಡಿದುಕೊಂಡು ಗಾಡಿಯನ್ನು ಕಲಿಸಲು ಓದೆವು. ಆಗ ನಮ್ಮತ್ರ ಟೈರ್ ಗಾಡಿ ಇತ್ತು. ಇದಕ್ಕೂ ಮೊದಲು ಕಟ್ಟಿಗೆ ಗಾಡಿ ಇತ್ತು, ಅದಕ್ಕೆ ಆಗಾಗ ಅಳಿ ಬಿಡಿಸುವುದು ಕಷ್ಟಕಾರ್ಯವೆಂದು ಕೆಲವು ವರ್ಷಗಳ ಹಿಂದೆ ಕಟ್ಟಿಗೆ ಗಾಡಿ ಮಾರಿ ಟೈರ್ ಗಾಡಿ ತಂದಿದ್ದೆವು. ಟೈರ್ ಗಾಡಿಗೆ ಹ್ಯಾಂಡ್ ಬ್ರೇಕ್ ಹಾಕಿಸುವುಕ್ಕೂ ನಮ್ಮಪ್ಪನ ಜೊತೆ ಕೆಲವರು ಚರ್ಚೆ ಮಾಡಿದ್ರು. ಆಗ ನಮ್ಮಪ್ಪ ಡೌನ್ ನಲ್ಲಿ ನಾವು ಬ್ರೇಕ್ ಹಾಕಿದರೆ ದನಗಳು ಮುಗ್ಗರಿಸುತ್ತವೆ ಬೇಡವೆಂದಿದ್ದರು. ಆಗಾಗಿ ಎತ್ತುಗಳನ್ನು ನಿಯಂತ್ರಿಸಿ ಬ್ರೇಕ್ ಹಾಕುವ ಗಾಡಿಯಾಗಿಯೇ ಉಳಿದಿತ್ತು.
ಆ ಗಾಡಿಯನ್ನು ಕಲಿಸಲು ಹೊಸದಾದ ಎತ್ತುಗಳ ಜೊತೆ ಹೋದೆವು. ಆ ಎತ್ತುಗಳು ಸ್ವಲ್ಪ ಬೆದರುತ್ತಿದ್ದವು. ಆದರೂ ನಮ್ಮಪ್ಪ ನನ್ನ ತಮ್ಮನಿಗೆ ಹೇಳುತ್ತಾ, “ಹೇ ಬರ್ರೋ ಅವೇನ್ ಮಾಡ್ತಾವೆ, ಇಂತಹ್ವನನ್ನು ಎಷ್ಟ್ ನೋಡಿಲ್ಲ ನಾನು, ಸ್ವಲ್ಪ ದೂರ ಊರೀಂದಾಚೆಗೆ ಹೋಗಿ, ದಿಣ್ಣೆಗೆ ಕಡೆ ಹೋಗಿ ಉಕ್ಕೆಗೆ(ಉಳುಮೆ ಮಾಡಿದ ನೆಲ) ಹಾಕೋಣ, ಮೆತ್ತಗಾದರೆ ಸುಮ್ಮನಾಗ್ತವೆ ಎಂದರು. ಆಗಲಿ ಎಂದು ಟೈರ್ ಗಾಡಿಯ ಮೂಕು ಹಿಡಿದು ಎತ್ತಿ, ಎತ್ತುಗಳ ಹೆಗಲಿಗೆ ಏರಿಸಿಯೇ ಬಿಟ್ಟೆವು.
ಶುರುವಾಯಿತು ನಮ್ಮ ಉಳಿವು ಅಳಿವಿನ ಆಟ. ನಾನು ಎಡಗಡೆಯ ಎತ್ತಿನ ಕಡೆ ಕಡ್ಗೂಟ ಹಿಡಿದುಕೊಂಡೆ, ನಮ್ಮಪ್ಪ ಬಲಗಡೆ ಎತ್ತಿನ ಕಡ್ಗೂಟ ಹಿಡಿದುಕೊಂಡರು. ನನ್ನ ತಮ್ಮ ಗಾಡಿಯ ಮೇಲೆ ಚಾಲಕನಾಗಿ ಕುಳಿತನು. ಚಕ್ರಗಳು ಸ್ವಲ್ಪ ದೂರ ಉರುಳಿದವು. ಆಗ ಎತ್ತುಗಳಿಗೆ ಹೊಸ ಕಲಿಕೆಯಾದ್ದರಿಂದ ಭಯ, ಆತಂಕ, ತಳಮಳ ಎಲ್ಲವೂ ಶುರುವಾದವು. ಸ್ವಲ್ಪ ದೂರ ಬಂದ ತಕ್ಷಣವೇ ಕಣ್ಣಿ ಹಾಕಿಕೊಂಡವು. ಆದರೂ ನಮ್ಮಪ್ಪ ಬಿಡದೆ, ” ಲೇ ನೀನ್ ಹಗ್ಗ ಲೂಸ್ ಬಿಡಬೇಡ, ಬಿಗಿಯಾಗಿ ಹಿಡಿಕೊ, ಅದ್ಹೆಂಗೆ ಕಣ್ಣಿ ಹಾಕ್ಕೊಳ್ತಾವೆ ನಾನು ನೋಡ್ತಿನಿ” ಎಂದು ನನ್ನ ತಮ್ಮನಿಗೆ ಹೇಳುತ್ತಾ, ಬಲಗಡೆಯ ಎತ್ತಿಗೆ ನಾಲ್ಕು ಚಚ್ಚಿದರು. ಅದು ಬೇದಿ ಮಾಡಿಕೊಂಡ ಹಾಗೆಯೇ ಸಗಣಿ ಇಟ್ಟುಕೊಂಡು ನೊಗಕ್ಕೆ ಹೆಗಲು ಕೊಟ್ಟಿತು.
ಮತ್ತೆ ಸ್ವಲ್ಪ ದೂರ ಚಕ್ರಗಳು ಉರಳಿದವು. ನನ್ನ ಕಡೆಯ ಎತ್ತು ಮತ್ತೆ ಕಣ್ಣಿ ಹಾಕಿಕೊಂಡಿತು. ನಮ್ಮಪ್ಪನಿಗೆ ಸಿಟ್ಟು ನೆತ್ತಿಗೇರಿದ್ದು ನೋಡಿದ್ರೆ, ಅವರ ಮುಖದಲ್ಲಿ ಕೆಂಡ ಸುರಿದಾಗೆ ಆಗಿ ನಿಗಿನಿಗಿ ಹುರಿಯುವಂತೆ ಕಾಣಿಸುತ್ತಿತ್ತು. ಆ ಸಿಟ್ಟನ್ನೆಲ್ಲಾ ನನ್ನ ಮೇಲೆ (ನನ್ನನ್ನು ಬೈದು) ಮತ್ತು ನನ್ನ ಕಡೆಗಿದ್ದ ದನಗಳಿಗೆ ಬಡಿದು ತೀರಿಸಿಕೊಂಡರು. ಮತ್ತೆ ಎರಡೂ ಎತ್ತುಗಳ ಮೇಲೆ ನೊಗವನ್ನು ಏರಿಸಿದೆವು. ಹೀಗೆ ಊರ ಮಧ್ಯೆ ಗಾಡಿ ಸಾಗುತ್ತಿತ್ತು. ಅಲ್ಲಿ ನಿಂತಿದ್ದ ಜನರು ನಮ್ಮ ಪಡಿಪಾಟಲುಗಳನ್ನು ನೋಡುತ್ತಿದ್ದರು. ಇದ್ಯಾವುದೂ ನಮಗೆ ಪರಿವೇ ಇರಲಿಲ್ಲ.
ಗಾಡಿ ಊರ ಮಧ್ಯೆ ಸಾಗುತ್ತಿರಬೇಕಾದರೆ ಎತ್ತುಗಳು ರಸ್ತೆ ಬಿಟ್ಟು ಕೆಳಗಿನ ಕೇರಿಯ ಕೆಂಪಣ್ಣನ ಮನೆಯ ಮುಂದಿದ್ದ ತೆಂಗಿನ ಮರಕ್ಕೆ ಹೋಗಿ ಮೂಕಿನಿಂದ ಗುದ್ದಿಯೇ ಬಿಟ್ಟವು. ಆಗ ಗಾಡಿಯನ್ನು ಹಿಂದಕ್ಕೆ ತಳಿ ರಸ್ತೆಗೆ ತಂದೆವು. ಅಂತೂ ಊರ ಹೊರಗಡೆ ಬಂದು ನಮ್ಮೂರಿನ ಕತ್ತಾಳಿ ಗೇಟ್ ಕಡೆ ಗಾಡಿ ಸಾಗಿತು. ಹೀಗೆ ಹೇಗೂ ರಸ್ತೆಯಲ್ಲಿ ಎದುರಿಗೆ ಬರುತ್ತಿದ್ದ ವಾಹನಗಳಿಂದ ಎತ್ತುಗಳು ಬೆದರದಂತೆ ಎರಡೂ ಕಡೆ ನಾನು ನಮ್ಮಪ್ಪ ಸೆಕ್ಯುರಿಟಿ ವಿತ್ ಬ್ರೇಕರ್ ಆಗಿ ಎತ್ತುಗಳ ಪಕ್ಕದಲ್ಲೇ ಕಡ್ಗೂಟವನ್ನು ಹಿಡಿದುಕೊಂಡು ಹೋಗುತ್ತಿದ್ದೆವು.
ಇನ್ನೇನು ಕತ್ತಾಳಿ ಗೇಟ್ ಹತ್ತಿರ ಹತ್ತಿರ ಚಕ್ರಗಳು ಉರುಳುತ್ತಿವೆ. ನಮ್ಮ ಗಾಡಿಯ ಹಿಂದೆ ಒಂದು ಲಾರಿ ಬಂದಿತು. ರಸ್ತೆ ಚಿಕ್ಕದಾಗಿದ್ದು, ಆಚೆ ಈಚೆ ಬೇಲಿ ಬೆಳೆದುಕೊಂಡಿತ್ತು. ಆಗಾಗಿ ಲಾರಿಯವರು ದಾರಿ ಬಿಡುವಂತೆ ಆರನ್ ಮಾಡಿದರು. ಇದರಿಂದ ಎತ್ತುಗಳು ಬೆದರಿದ್ದು ಕಂಡುಬಂದವು. ಆಗ ಗಾಡಿ ನಿಲ್ಲಿಸಿ ಲಾರಿ ಹೋಗುವುದಕ್ಕೆ ಅನುವು ಮಾಡಿಕೊಡಲಾಯಿತು.
ಲಾರಿ ಮುಂದೆ ಸಾಗಿತು. ಆದರೆ ಎತ್ತುಗಳು ಭಯದಿಂದ ನಿಟ್ಟುಸಿರು ಬಿಡುತ್ತಾ, ನಾವೆಲ್ಲೂ ಸಾವಿನ ಹಾದಿಯಲ್ಲಿ ಇದ್ದೇವೆ ಎಂಬಂತೆ ಹೆದರಿಕೊಂಡತೆ ಕಾಣುತ್ತಿದ್ದವು. ಆಗ ನಮ್ಮಪ್ಪ “ಆ ವಡಿ” ಎಂದು ದನಗಳ ಹಗ್ಗವನ್ನು ಹಿಡಿದು ಗಾಡಿಯ ಮೇಲೆ ಕೂರಿದ್ದ ನನ್ನ ತಮ್ಮನಿಗೆ ಸೂಚನೆಯಿತ್ತರು. ಅವನು “ಖ” ಅಂದಿದ್ದೇ ತಡ ಎತ್ತುಗಳು ಸ್ವಲ್ಪ ದೂರ ಹೋಗಿ ನಮ್ಮಪ್ಪನ ಕಡೆ ಇದ್ದ ಬೇಲಿಯೊಳಕ್ಕೆ ಹೋಗುವಂತೆ ಬೇಲಿಗೆ ಉಜ್ಜುತ್ತಾ ವೇಗವಾಗಿ ಓಡತೊಡಗಿದವು. ಆಗ ನಮ್ಮಪ್ಪ ಬೇಲಿಯ ಕಡೆ ಕಾಣದಾದರು. ಎತ್ತುಗಳು ಸ್ವಲ್ಪ ದೂರದಲ್ಲೇ ಓಡುತ್ತಿವೆ. ನಮ್ಮಪ್ಪ ಬಲಗಡೆ ಎತ್ತಿನ ಕಡೆ ಇಲ್ಲ. ನಾನು ಎಡಗಡೆ ಇದ್ದೇನೆ. ಗಾಡಿಯನ್ನು ನಿಲ್ಲಿಸಲು ಏನು ಮಾಡಬೇಕೆಂದು ತೋಚಲಿಲ್ಲ. ಆ ಕಡೆ ಈ ಕಡೆ ಬದುಗಳು, ಚರಂಡಿಗಳಿವೆ.
ನನ್ನ ತಮ್ಮ ಹಗ್ಗ ಹಿಡಿದು ಎಳೆದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ನಮ್ಮ ಕಥೆ ಮುಗಿಯಿತು ಎಂದುಕೊಂಡು, ನನಗರಿವಿಲ್ಲದಂತೆಯೇ ನನ್ನ ಕಡೆಯ ಎತ್ತಿನ ಮೂಗುದಾರ ಹಿಡಿದು ಎಳೆದೆನು, ಸ್ವಲ್ಪ ನಿಯಂತ್ರಣವಾದ ಕೂಡಲೇ ನನ್ನ ತಮ್ಮ ಅವನ ಸಾಮರ್ಥ್ಯವನ್ನೆಲ್ಲಾ ಉಪಯೋಗಿಸಿ ಹಗ್ಗವನ್ನು ಎಳೆದು ಹಿಡಿದನು. ಆಗ ನಾನು ಅಡ್ಡ ಹೋಗಿ ಎರಡೂ ಎತ್ತುಗಳ ಮೂಗುದಾರ ಹಿಡಿದು ಜಗ್ಗಿ ನಿಲ್ಲಿಸಿಬಿಟ್ಟೆ. ಹೇಗೂ ಗಾಡಿ ನಿಂತಿತು. ಕೂಡಲೇ ನಾನು ನನ್ನ ತಮ್ಮ ಮೂಕು ಹಿಡಿದು, ಎತ್ತುಗಳ ಕಡ್ಗೂಟದ ಕಣ್ಣಿಗಳನ್ನು ಬಿಚ್ಚಿ ಮೂಕನ್ನು ನೆಲಕ್ಕೆ ಬಿಟ್ಟೆವು. ಕೂಡಲೇ ನಾನು ನಮ್ಮಪ್ಪನನ್ನು ನೋಡಲು ಬೇಲಿಯ ಕಡೆ ಓಡಿದೆ, ನನ್ನ ತಮ್ಮ ಎತ್ತುಗಳ ಹಗ್ಗವನ್ನು ಗಾಡಿ ನೊಗಕ್ಕೆ ಕಟ್ಟಿ ನಿಟ್ಟುಸಿರು ಬಿಟ್ಟುಕೊಂಡು ಬಂದನು.
ನಮ್ಮಪ್ಪ ರಸ್ತೆ ಪಕ್ಕದಲ್ಲಿದ್ದ ಹೊಲದ ಬದುವಿನ ಬೇಲಿಯೊಳಗೆ ಬಿದ್ದು, ಎದುರುಸಿರು ಬಿಡುತ್ತಿದ್ದರು. ಪ್ರಜ್ಞೆ ತಪ್ಪಿದ್ದು ನಮಗರಿವಿಗೆ ಬಂದಿತು. ಇಬ್ಬರೂ ಅವರನ್ನು ಎತ್ತಿಕೊಂಡು ರಸ್ತೆಯ ಬದಿ ಕೂರಿಸಿದರೂ ಅವರು ಏನೇನೂ ಆಲಾಪಿಸುತ್ತಿದ್ದರು. ಕುಡಿಸಲು ನೀರೂ ಇಲ್ಲದ ಪರಿಸ್ಥಿತಿ. ಪ್ರಜ್ಞೆ ಇಲ್ಲದಿದ್ದರೂ ನೋಡು ನೋಡುತ್ತಿದ್ದಂತೆಯೇ ವಾಂತಿಯನ್ನು ಮಾಡಿ ಬಿಟ್ಟರು. ಆಗ ಸ್ವಲ್ಪ ಎಚ್ಚರಿಕೆಯಾಗಿತು ಅನಿಸುತ್ತೆ. ಕೂರಲು ಆಗದೇ ಮಲಗಲೂ ಆಗದೇ ಇರುವ ಪರಿಸ್ಥಿತಿ ನೋಡಿದಾಗ ಏನಾಗಿರಬಹುದೆಂದು ತೋಚಲಿಲ್ಲ. ಆಗ ನಮಗೆ ಹೃದಯದಲ್ಲಿ ಒಂದೇ ಸಮನೆ ಜಾಗಟೆ ಬಡಿದಂಗಾಗುತ್ತಿತ್ತು. ಏನೂ ಮಾಡಲು ದಿಕ್ಕೆ ತೋಚದಾಗಿತು. ಕೂಡಲೇ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸಾಗಿಸುವುದಾಗಿ ನಿರ್ಧರಿಸಿದೆವು. ಅಷ್ಟರೊಳಗೆ ಅಪ್ಪಂಗೆ ಎಚ್ಚರವಾಗಿ “ಎತ್ತುಗಳನ್ನು ರೊಪ್ಪದತ್ರ ಕಟ್ಟಾಕಿ, ಹಂಚಿನಮನೆ ರಂಗಮ್ಮ ರವರ ಹಸುಗಳನ್ನು ಹಿಡಿದುಕೊಂಡು ಬಾ ಅವುಗಳಿಂದ ಗಾಡಿ ಹೊಡೆದುಕೊಂಡು ಹೋಗೋಣ ಎಂದು ಹೇಳಿದರು.
ತಮ್ಮ ಕೂಡಲೇ ಆ ನಮ್ಮ ಅಡ್ನಾಡಿ ಎತ್ತುಗಳ ಹಗ್ಗವನ್ನು ಹಿಡಿದು ಮನೆ ಕಡೆ ಅವಸರದಲ್ಲಿ ನಡೆದನು. ಅಪ್ಪನಿಗೆ ತಲೆಸುತ್ತು ಬಂದರೂ ಮಲಗದೇ, ಯಾರಾದ್ರೂ ನೋಡಿದರೆ ನಮ್ಮ ಬಂಡವಾಳ ಬಯಲಾಗುತ್ತದೆ ಹಾಗೂ ಅವಮಾನವಾಗುತ್ತದೆ ಅಂತನೇನೂ ತಿಳಿದು ಸ್ವಲ್ಪ ಕೈಕಾಲು ಸರಿಸಿ ಕೂತರು. ಈ ಅವಗಡ ಕೆಲವೇ ಸೆಕೆಂಡ್ಗಳಲ್ಲಿ ನಡೆದು ಹೋಗಿತ್ತು. ನಮ್ಮಪ್ಪ ಬೇಲಿಯಲ್ಲಿದ್ದ ಬದುವಿಗೆ ನಡು ಬೆನ್ನು ಕೊಟ್ಟು ಬಿದ್ದಿದ್ದರಿಂದ ಸ್ಪೈನಲ್ಕಾರ್ಡ್(ಮಧ್ಯ ಬೆನ್ನುಮೂಳೆ) ಗೆ ಸರಿಯಾದ ಏಟು ಬಿದ್ದಿತ್ತು. ಆಗಾಗಿ ಉಸಿರಾಡಲು ತುಂಬಾ ಕಷ್ಟಪಡುತ್ತಿದ್ದರು.
“ಅಪ್ಪನು ಗಾಡಿಯಲ್ಲಿ ಮಲಗಿದ್ದ ಪರಿಸ್ಥಿತಿ ನೋಡಿ ನನಗೆ ಕಣ್ಣಲ್ಲಿ ನೀರು ತುಂಬಿಕೊಂಡು ದುಃಖವಾಯಿತು. ಎಂದೂ ಸಹ ಬೇರೆಯವರಿಗೆ ಕೈಯೊಡ್ಡದೆ, ಸ್ವಾಭಿಮಾನಿ ರೈತನಾಗಿ, ಶ್ರಮಪಟ್ಟು ಭೂತಾಯಿಯನ್ನು ನಂಬಿ ದುಡಿದ ಜೀವವಿದು. ಈ ಸ್ಥಿತಿಯನ್ನು ನಾವು ಎಂದು ನೋಡುತ್ತೇವೆಂದು ಕನಸು ಮನಸ್ಸಿನಲ್ಲೂ ಅನಿಸಿರಲಿಲ್ಲ. ಆದರೆ ಆಗಬೇಕಾದದ್ದು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲವಲ್ಲ ಎಂದು ಮನಸ್ಸಿನಲ್ಲೇ ಅಂದುಕೊಂಡು ನಿಟ್ಟುಸಿರು ಬಿಡುವುದರೊಳಗೆ ಗಾಡಿ ಊರಿನೊಳಗೆ ಸಾಗುತ್ತಿತ್ತು. ಸ್ವಲ್ಪ ಸಮಯದಲ್ಲೇ ಮನೆ ಸೇರಿದೆವು.”
ಆದರೆ ಗಾಡಿ ರಸ್ತೆಯಲ್ಲೇ ನಿಂತಿದೆ. ತಮ್ಮನು ಹಸುಗಳನ್ನು ಒಡೆದುಕೊಂಡು ಬರುವುದನ್ನೇ ಕಾಯುತ್ತಾ, ದಾರಿ ಕಡೆ ಪದೇ ಪದೇ ನೋಡುತ್ತಿದ್ದೆವು. ನಮ್ಮೂರಿನಲ್ಲಿ ಹಂಚಿನಮನೆಯ ರಂಗಮ್ಮರವರ ಹಸುಗಳು ಎಂದರೆ ಗಜಗಳ ತರ ಕಟ್ಟುಮಸ್ತಾದ ದೇಹದಿಂದ ಕಂಗೊಳಿಸುತ್ತಾ, ತಮ್ಮ ಕಣ್ಣುಗಳಲ್ಲಿ ಒಳಪನ್ನು ತುಂಬಿಕೊಂಡಿದ್ದವು. ಅದಕ್ಕೆ ನಮ್ಮ ಹಳ್ಳಿಕಾರ್ ತಳಿಯನ್ನು ನಾನು ಬಹಳ ಇಷ್ಟಪಡುವುದಕ್ಕೆ ಮೂಲ ಕಾರಣ. ಹಾಗೂ ಅವುಗಳನ್ನು ನಾನು ಬಹಳ ಇಷ್ಟಡುತ್ತಿದೆನು, ನೋಡಿದಾಗಲೆಲ್ಲಾ ಜೀವನದಲ್ಲಿ ಇಂತಹ ಹಸುಗಳನ್ನು ಒಂದು ಸಾರಿಯಾದರೂ ಸಾಕಬೇಕೆಂಬ ಆಸೆ ಹುಟ್ಟುತ್ತಿತ್ತು. ಆದರೆ ನಮ್ಮಪ್ಪನ ಎತ್ತುಗಳ ಮೋಹದಿಂದ ಇಲ್ಲಿಯವರೆಗೂ ಸಾಧ್ಯವಾಗಿಲ್ಲ.
ಅದು ಏನೇ ಇರಲಿ, ನನ್ನ ತಮ್ಮನು ಬೇಗ ಹಸುಗಳನ್ನು ಒಡೆದುಕೊಂಡು ಬಂದನು. ಆಗ ಗಾಡಿ ಮೂಕನ್ನು ಎತ್ತಿ ಊರಿನ ಕಡೆಯ ರಸ್ತೆಗೆ ತಿರುಗಿಸಿದೆವು, ಹಸುಗಳಿಗೆ ಗೊತ್ತಾಯಿತೆನೂ ನಮ್ಮನ್ನು ಗಾಡಿಗೆ ವೋಡುತ್ತಿದ್ದಾರೆಂದು, ಅವುಗಳೇ ಬೇಗ ಸರಸರನೆ ಬಂದು ನೊಗಕ್ಕೆ ಹೆಗಲು ಕೊಟ್ಟವು. ಆಗ ನಮ್ಮಪ್ಪನನ್ನು ಗಾಡಿಯಲ್ಲಿ ಕೂರಿಸಲು ಪ್ರಯತ್ನ ಮಾಡಿದೆವು. ಅಪ್ಪನು ನಮ್ಮ ಸಹಾಯದಿಂದ ಎದ್ದು ಗಾಡಿಯೊಳಗೆ ಬಂದು ಕುಳಿತರು, ಆದರೆ ಕೂರಲು ಕಷ್ಟಕರವಾದ್ದರಿಂದ ಗಾಡಿಯಲ್ಲೇ ಮಲಗಿಬಿಟ್ಟರು. ತಮ್ಮನು ಗಾಡಿಯನ್ನು ಮುಂದೆ ಹೋಗುವಂತೆ ಹಸುಗಳಿಗೆ “ಖ” ಎಂದು ಉಚ್ಚರಿಸಿದ ಕೂಡಲೇ ಆನೆಗಳಿಗೆ ಕಟ್ಟಿದ ರಥದಂತೆ ಗಾಡಿಯು ಮುಂದೆ ಸಾಗಿತು.
ಅಪ್ಪನು ಗಾಡಿಯಲ್ಲಿ ಮಲಗಿದ್ದ ಪರಿಸ್ಥಿತಿ ನೋಡಿ ನನಗೆ ಕಣ್ಣಲ್ಲಿ ನೀರು ತುಂಬಿಕೊಂಡು ದುಃಖವಾಯಿತು. ಎಂದೂ ಸಹ ಬೇರೆಯವರಿಗೆ ಕೈಯೊಡ್ಡದೆ, ಸ್ವಾಭಿಮಾನಿ ರೈತನಾಗಿ, ಶ್ರಮಪಟ್ಟು ಭೂತಾಯಿಯನ್ನು ನಂಬಿ ದುಡಿದ ಜೀವವಿದು. ಈ ಸ್ಥಿತಿಯನ್ನು ನಾವು ಎಂದು ನೋಡುತ್ತೇವೆಂದು ಕನಸು ಮನಸ್ಸಿನಲ್ಲೂ ಅನಿಸಿರಲಿಲ್ಲ. ಆದರೆ ಆಗಬೇಕಾದದ್ದು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲವಲ್ಲ ಎಂದು ಮನಸ್ಸಿನಲ್ಲೇ ಅಂದುಕೊಂಡು ನಿಟ್ಟುಸಿರು ಬಿಡುವುದರೊಳಗೆ ಗಾಡಿ ಊರಿನೊಳಗೆ ಸಾಗುತ್ತಿತ್ತು. ಸ್ವಲ್ಪ ಸಮಯದಲ್ಲೇ ಮನೆ ಸೇರಿದೆವು.
ನಾನು ಮತ್ತು ತಮ್ಮನು ಹಸುಗಳ ಕಡಗೂಟ ಕಳಚಿದೆವು. ನಾನು ಮೂಕು ಹಿಡಿದು ನೆಲಕ್ಕೆ ಬಿಟ್ಟೆ. ತಮ್ಮನು ಹಸುಗಳನ್ನು ಬಿಟ್ಟುಬರಲು ಹೋದನು. ಗಾಡಿಯಲ್ಲಿ ಮಲಗಿದ್ದ ಅಪ್ಪ ನಿಧಾನವಾಗಿ ಎದ್ದು, ಮನೆಯ ಮುಂದೆ ಎತ್ತುಗಳಿಗೆ ಜೋಳದ ಕಟ್ಟಿ ತಿನ್ನಿಸಲು ನಿರ್ಮಿಸಿದ್ದ ನಾಲ್ಕು ಅಡಿ ಎತ್ತರದ ಅಟ್ಟದ ಕಡೆ ನಡೆದರು. “ರಗ್ಗು ತಂದು ಹಾಸೋ” ಎಂದು ಮುಖದಲ್ಲಿ ನರಳುತ್ತಾ ನೋವಿನಿಂದ ನುಡಿದರು. ಆಗ ನಾನು ರಗ್ಗು ತಂದು ಹಾಸಿದೆನು, ಅದರ ಮೇಲೆ ಮಲಗಿದರು.
ಅಮ್ಮನು ಬೇರೆಯವರ ಹೊಲದ ಕೆಲಸಕ್ಕೆ ಹೋಗಿದ್ದರು. ಆದರೂ ಆ ದಿನ ಬೇಗ ಬಂದರು. ಮನೆಯೊಳಗೆ ಬಂದು ಈ ಘಟನೆಯನ್ನು ನಮ್ಮಿಂದ ತಿಳಿದು ಅವಸರದಿಂದ ಹೊರನಡೆದರು. ಎದ್ದೇಳು ಆಸ್ಪತ್ರೆಗೆ ಹೋಗೋಣವೆಂದು ಅಪ್ಪನನ್ನು ಎಬ್ಬಿಸುವ ಪ್ರಯತ್ನವನ್ನು ಮಾಡಿದರು. ಆದರೆ ನಮ್ಮಪ್ಪ ಸ್ವಲ್ಪ ಕೋಪಿಷ್ಟರಾಗಿದ್ದರಿಂದ ನನಗೇನೂ ಆಗಿಲ್ಲವೆಂದು ನಮ್ಮಮ್ಮನನ್ನು ಬೈದರು. ಆಗ ನಮ್ಮ ದೊಡ್ಡಪ್ಪನ ಮಗ ಮತ್ತು ನಮ್ಮೂರಿನ ಹನುಮಂತಣ್ಣ ಬಂದು ಆಸ್ಪತ್ರೆಗೆ ಹೋಗಲು ಅರಸಾಹಸ ಮಾಡಿ ಎಬ್ಬಿಸಿದರು. ಅವರ ಹಿರೋಹೊಂಡದಲ್ಲಿ ಕೂರಿಸಿಕೊಂಡು ದೊಡ್ಡಾಲದಮರದಲ್ಲಿ(ಈಗ ಹನುಮಂತನಗರ ಎನ್ನುತ್ತಾರೆ) ಇರುವ ಆಸ್ಪತ್ರೆಗೆ ಬಂದರು.
ಅಂದು ನಮ್ಮ ದುರಾದೃಷ್ಟಕ್ಕೆ ಯಾವ ಆಸ್ಪತ್ರೆಯಲ್ಲೂ ಡಾಕ್ಟರ್ ಇರಲಿಲ್ಲ. ಅಷ್ಟರೊಳಗೆ ಅಲ್ಲೆ ಅಂಬುಲೆನ್ಸ್ ಗೆ ಪೋನ್ ಮಾಡಿ ಕರೆಸಿಕೊಂಡು ಕಳ್ಳಂಬೆಳ್ಳದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ನೋವಿನ ಎಂಜಕ್ಷನ್ ಕೊಟ್ಟ ಡಾಕ್ಟರ್ ಹೇಳಿದ್ದು, ಬೆನ್ನುಮೂಳೆಗೆ ಬಲವಾದ ಹೊಡೆತ ಬಿದ್ದಿದೆ ಆಗಾಗಿ ತುಮಕೂರಿನ ಕೀಲುಮೂಳೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು. ಆಗ ನಮ್ಮಮ್ಮ ಮತ್ತಿಬ್ಬರು ಸೇರಿ ಅದೇ ಅಂಬುಲೆನ್ಸ್ ನಲ್ಲೇ ತುಮಕೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದರು.
ನಾನು ಮಸುಗತ್ತಲಲ್ಲೆ ಸೈಕಲ್ ತೆಗೆದುಕೊಂಡು ದೊಡ್ಡಾಲದಮರಕ್ಕೆ ಬಂದು, ಪೋನ್ ಮಾಡಿದಾಗ ಆಸ್ಪತ್ರೆಗೆ ದಾಖಲಾಗಿದ್ದಾಗಿ ಹೇಳಿದ್ದರು. ಆಗ ಮತ್ತೆ ಮನೆ ಕಡೆ ಹೊರಟು ಬಂದೆನು. ಅಷ್ಟರೊಳಗೆ ತಮ್ಮನು ಆ ಎತ್ತುಗಳು ಕೊಟ್ಟಿಗೆಗೆ ಕಟ್ಟಾಕಿ ನಮ್ಮಗಾಗಿ ಕಾಯುತ್ತಿದ್ದನು. ಆಗ ಇಬ್ಬರೂ ಬೆಳಿಗ್ಗೆ ಮಾಡಿದ್ದ ಅನ್ನವನ್ನು ಉಂಡು ಮಲಗಿದೆವು. ಬೆಳಿಗ್ಗೆ ಎದ್ದು ಪೋನ್ ಮಾಡಿ ವಿಚಾರಿಸಿದಾಗ, ಬೆನ್ನುಮೂಳೆಯು ಸಿಡಿದಿದೆ, ಮೆಡಿಷನ್ ನಲ್ಲೇ ಸರಿಪಡಿಲಾಗುತ್ತದೆ ಎಂದು ಡಾಕ್ಟರ್ ಹೇಳಿದ್ದಾರೆಂದು ತಿಳಿಸಿದರು. ಕೊನೆಗೂ ಅಪ್ಪನು ಎಂಟು ದಿನ ಆಸ್ಪತ್ರೆಯಲ್ಲಿ ಇದ್ದು ಹುಷಾರಾಗಿ ಬಂದರು.
ಈಗಲೂ ಸ್ವಲ್ಪ ನೋವು ಆಗಾಗ ಕಾಣಿಸಿಕೊಳ್ಳುತ್ತಿರುತ್ತದೆ. ಹೆಚ್ಚು ಕೆಲಸ ಮಾಡಲು ಆಗಲ್ಲ. ಆದರೂ ನಾನು ಬೇರೆ ಕಡೆ ಕೆಲಸಕ್ಕೆ ಹೋಗುವುದರಿಂದ ಕೃಷಿ ಕೆಲಸವನ್ನೆಲ್ಲಾ ಅವರೇ ಮಾಡುವ ಪರಿಸ್ಥಿತಿ ಎದುರಾಗಿದೆ. ಆಗಾಗ ತಿಂಗಳುಗಳಿಗೊಮ್ಮೆ ಆಸ್ಪತ್ರೆಗೆ ತೋರಿಸಿಕೊಳ್ಳಲಾಗುತ್ತಿದೆ ಮತ್ತು ನೋವಾದಾಗ ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಘಟನೆಯು ನನ್ನಲ್ಲಿ ಎತ್ತಿನಗಾಡಿಯ ಬಗ್ಗೆ ಭಯ ಹುಟ್ಟಿಸಿತು. ಅಂದಿನಿಂದ ಎತ್ತಿನ ಗಾಡಿಯಲ್ಲಿ ಬೆದರುವ ದನಗಳನ್ನು ನೋಡಿದರೆ ತುಂಬಾ ಭಯವಾಗುತ್ತದೆ.
ಇಲ್ಲಿ ನಾನು ನಿಮಗೆ ಹೇಳಬೇಕಾದ ಇನ್ನೊಂದು ದುಃಖಕರ ಸಂಗತಿ ಎಂದರೆ ಈ ಘಟನೆ ನಡೆದ ಒಂದೇ ವರ್ಷದಲ್ಲಿ ನಮ್ಮನೆಯ ಕೃಷಿಯ ಬೆನ್ನೆಲುಬಾಗಿದ್ದ ನನ್ನ ತಮ್ಮನು ಮರದ ಮೇಲಿಂದ ಬಿದ್ದು ಮರಣ ಹೊಂದಿದನು. ಇದನ್ನೆಲ್ಲಾ ನೋಡಿದ ನನಗೆ ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ, ಮದುವೆಗೂ ಮಸಣಕೋ ಹೋಗೆಂದ ಮಂಕುತಿಮ್ಮ ಎಂಬ ಡಿವಿಜಿಯವರ ಕಗ್ಗ ನೆನಪಿಗೆ ಬಂದು ಇದನ್ನೆಲ್ಲಾ ಬರೆಯಬೇಕೆನಿಸಿತು.
ಮಂಜುನಾಥ್ ಅಮಲಗೊಂದಿ
(ಲೇಖಕರು)