ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಕಿಮ್ಮನೆ ರತ್ನಾಕರ್ ಅವರು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರ ವಿರುದ್ಧ ತೀವ್ರ ಆರೋಪಗಳ ಸುರಿಮಳೆ ಸುರಿಸಿದರು. ಸರ್ಕಾರಿ ವೇದಿಕೆಯ ದುರ್ಬಳಕೆಯಿಂದ ಹಿಡಿದು ಹುಲಿಕಲ್ ಘಾಟ್ ದುರಂತ ಮತ್ತು ಡಿ-ಲಿಮಿಟೇಶನ್ ವಿಚಾರದವರೆಗೆ ಅವರು ಶಾಸಕ ಜ್ಞಾನೇಂದ್ರರನ್ನು ತರಾಟೆಗೆ ತೆಗೆದುಕೊಂಡರು.
ಸರ್ಕಾರಿ ವೇದಿಕೆಯಲ್ಲಿ ಅವಹೇಳನ: ಖಂಡನೆ
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ಸಂಪೂರ್ಣ ಅಸಹನೀಯ ಎಂದು ಕಿಮ್ಮನೆ ರತ್ನಾಕರ್ ಖಂಡಿಸಿದರು. ಸರ್ಕಾರಿ ಕಾರ್ಯಕ್ರಮವನ್ನು ಪಕ್ಷದ ರಾಜಕೀಯ ವೇದಿಕೆಯನ್ನಾಗಿ ಬಳಸಿಕೊಳ್ಳುವ ಜ್ಞಾನೇಂದ್ರರ ನಡೆ ಸಂವಿಧಾನದ ಮೌಲ್ಯಗಳಿಗೆ ವಿರುದ್ಧ ಎಂದು ಅವರು ಹೇಳಿದರು.
“ಅದು ಸರ್ಕಾರಿ ವೇದಿಕೆ ಎಂಬ ವಿವೇಕ ಜ್ಞಾನೇಂದ್ರರಿಗೆ ಇರಬೇಕು. ಕಾಂಗ್ರೆಸ್ ನಾಯಕರನ್ನು ಹಾಗೂ ಸರ್ಕಾರದ ಪ್ರತಿನಿಧಿಗಳನ್ನು ‘ಲಫಂಗ’ ಎಂದು ಕರೆಯುವುದು ಅವರ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜೊತೆಗೆ, ಆರೆಸ್ಸೆಸ್ ಸಿದ್ಧಾಂತದ ಭಾಗವಾಗಿರುವ “ಚಿಂತನ ಗಂಗಾ” ಪುಸ್ತಕದ ಕುರಿತು ಜ್ಞಾನೇಂದ್ರರು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ ಅವರು, ದಲಿತರನ್ನು ‘ಪಂಚಮರು’ ಎಂದು ಪರಿಗಣಿಸುವ ಸಿದ್ಧಾಂತವನ್ನು ಜ್ಞಾನೇಂದ್ರ ಅನುಸರಿಸುತ್ತಾರೆಯೇ ಎಂದು ಪ್ರಶ್ನಿಸಿದರು.
ಖರ್ಗೆ ವಿರುದ್ಧದ ಹೇಳಿಕೆ, ಜ್ಞಾನೇಂದ್ರ ದಲಿತ ವಿರೋಧಿ ನಿಲುವು: ಕಿಮ್ಮನೆ
ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಜ್ಞಾನೇಂದ್ರ ನೀಡಿದ ಹೇಳಿಕೆ ಕೇವಲ ರಾಜಕೀಯ ಟೀಕೆ ಅಲ್ಲ, ಅದು ದಲಿತ ಸಮುದಾಯದ ವಿರುದ್ಧದ ಅಸಡ್ಡೆಯ ಸಂಕೇತ ಎಂದು ಕಿಮ್ಮನೆ ರತ್ನಾಕರ್ ಆರೋಪಿಸಿದರು.
“ಇಂದು ಸ್ವಚ್ಛ ಭಾರತ ಅಭಿಯಾನವನ್ನು ಮುಂದುವರಿಸುತ್ತಿರುವುದು ದಲಿತ ಸಮುದಾಯವೇ. ಇಂತಹ ಸಾಮಾಜಿಕ ಅಸಮಾನತೆಯನ್ನು ನಿವಾರಿಸಲು ಡಾ. ಬಿ.ಆರ್. ಅಂಬೇಡ್ಕರ್ ಹೋರಾಡಿದ್ದಾರೆ. ಇಂದಿಗೂ ಆ ಹೋರಾಟ ಮುಂದುವರೆದಿದೆ. ಇದರ ಅರಿವು ಇದ್ದಿದ್ದರೆ ಖರ್ಗೆಯವರ ಬಗ್ಗೆ ಇಂತಹ ಹೇಳಿಕೆ ಬರುತ್ತಿರಲಿಲ್ಲ” ಎಂದು ಅವರು ಹೇಳಿದರು.
ಹುಲಿಕಲ್ ಘಾಟ್ ದುರಂತ: ಕಾಂಟ್ರಾಕ್ಟರ್ ಜ್ಞಾನೇಂದ್ರ ಸಂಬಂಧಿ ಎಂದ ಕಿಮ್ಮನೆ
ಹುಲಿಕಲ್ ಘಾಟ್ ದುರಂತದ ಕುರಿತು ಪ್ರತಿಕ್ರಿಯಿಸಿದ ಕಿಮ್ಮನೆ ರತ್ನಾಕರ್, ಈ ದುರಂತಕ್ಕೆ ನೇರ ಕಾರಣ ಕಾಂಟ್ರಾಕ್ಟರ್ ಸಿ.ವಿ. ಚಂದ್ರಶೇಖರ್ ಎಂದು ಆರೋಪಿಸಿದರು. ಉಕ್ತ ಕಾಂಟ್ರಾಕ್ಟರ್ ಶಾಸಕ ಆರಗ ಜ್ಞಾನೇಂದ್ರ ಅವರ ಸಂಬಂಧಿ (ಜ್ಞಾನೇಂದ್ರ ಅಕ್ಕನ ಮಗ) ಎಂದು ಅವರು ಗಂಭೀರ ಆರೋಪ ಮಾಡಿದರು.
“ಬೇರೆ ಯಾರಾದರೂ ಈ ಸ್ಥಳದಲ್ಲಿ ಇದ್ದಿದ್ದರೆ ಜ್ಞಾನೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಸ್ವಂತ ಸಂಬಂಧಿಕರ ವಿಷಯ ಬಂದಾಗ ಮೌನ ವಹಿಸಿದ್ದಾರೆ” ಎಂದು ಅವರು ಕಿಡಿಕಾರಿದರು.
ಅಕಸ್ಮಾತ್ ಹುಲಿಕಲ್ ಘಾಟ್ ದುರಂತದಲ್ಲಿ ಅಲ್ಪಸಂಖ್ಯಾತ ಸಮುದಾಯದ ಕಾಂಟ್ರಾಕ್ಟರ್ ಈ ಘಟನೆಯಲ್ಲಿ ತೊಡಗಿಸಿಕೊಂಡಿದ್ದರೆ ಜ್ಞಾನೇಂದ್ರ ಅದನ್ನೇ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದರು ಎಂದು ಅವರು ಆರೋಪಿಸಿದರು.
ಡಿ-ಲಿಮಿಟೇಶನ್: ದೇಶ ವಿಭಜನೆಯ ಎಚ್ಚರಿಕೆ
ಡಿ-ಲಿಮಿಟೇಶನ್ ವಿಚಾರದಲ್ಲಿ ತೀವ್ರ ಆತಂಕ ವ್ಯಕ್ತಪಡಿಸಿದ ಕಿಮ್ಮನೆ ರತ್ನಾಕರ್, ಇದು ಬಿಜೆಪಿಯ “ಒಂದು ಮತ, ಒಂದು ಸರ್ಕಾರ” ಎಂಬ ಧೋರಣೆಯ ಭಾಗ ಎಂದು ಆರೋಪಿಸಿದರು. ಧರ್ಮದ ಆಧಾರದ ಮೇಲೆ ದೇಶ ಕಟ್ಟುವ ಮನಸ್ಥಿತಿಯ ಫಲವೇ ಈ ನಿರ್ಧಾರ ಎಂದು ಅವರು ಹೇಳಿದರು.
“ಡಿ-ಲಿಮಿಟೇಶನ್‌ನಿಂದ ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ಅಪಾಯಕಾರಿ ಅಂತರ ಉಂಟಾಗಲಿದೆ. ಮುಂದಿನ ದಿನಗಳಲ್ಲಿ ದೇಶ ವಿಭಜನೆಯ ಸ್ಥಿತಿ ಬಂದರೆ ಅದರ ಸಂಪೂರ್ಣ ಹೊಣೆ ಬಿಜೆಪಿ ಮೇಲೆ ಬೀಳಲಿದೆ” ಎಂದು ಅವರು ಗಂಭೀರ ಎಚ್ಚರಿಕೆ ನೀಡಿದರು.
