ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ವೇಳೆ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸದೆ ಹಿನ್ನಡೆ ಉಂಟುಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ವಸತಿ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಂಡರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ವಿಶ್ವ ಮುಸ್ಲಿಂ ಪರಿಷತ್ ಸಂಸ್ಥಾಪಕ ಸುಭಾನ್ ಖಾನ್ ಎಚ್ಚರಿಸಿದ್ದಾರೆ.
ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹಮದ್ ಅವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಕೈಗೊಂಡಿರುವ ಶಿಸ್ತು ಕ್ರಮವು ಮುಸ್ಲಿಂ ಸಮುದಾಯದಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಈಗ ಜಮೀರ್ ಅಹಮದ್ ಅವರ ಮೇಲೂ ಕ್ರಮಕ್ಕೆ ಮುಂದಾದರೆ ಪಕ್ಷವು ಅದರ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.
ದಾವಣಗೆರೆಯಲ್ಲಿ ಸಾದಿಕ್ ಪೈಲ್ವಾನ್ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರಕ್ಕೂ ಈ ಮುಸ್ಲಿಂ ನಾಯಕರಿಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಮಾತು ಕೇಳಿ ಕಾಂಗ್ರೆಸ್ ಹೈಕಮಾಂಡ್ ಮುಸ್ಲಿಂ ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ಆರೋಪಿಸಿದರು.
“ಒಂದು ವೇಳೆ ಸಚಿವ ಜಮೀರ್ ಅಹಮದ್ ವಿರುದ್ಧ ಕ್ರಮ ಜರುಗಿಸಿದರೆ, ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಖಂಡಿತವಾಗಿಯೂ ಸೋಲನ್ನು ಅನುಭವಿಸಲಿದೆ,” ಎಂದು ಸುಭಾನ್ ಖಾನ್ ಎಚ್ಚರಿಕೆ ನೀಡಿದರು. ಈ ಮೂಲಕ ಜಿಲ್ಲಾ ರಾಜಕಾರಣದ ಕಿತ್ತಾಟವು ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಮತ್ತು ಮುಸ್ಲಿಂ ಸಮುದಾಯದ ನಡುವಿನ ಸಂಘರ್ಷಕ್ಕೆ ಕಾರಣವಾಗುವ ಲಕ್ಷಣಗಳು ಕಾಣುತ್ತಿವೆ.
ಇದೇ ವೇಳೆ, ಉಪಚುನಾವಣೆ ಸಂದರ್ಭದಲ್ಲಿ ತಾವು ಕೇರಳಕ್ಕೆ ಪ್ರವಾಸಕ್ಕೆ ಹೋಗಿರಲಿಲ್ಲ ಬದಲಿಗೆ ಪಕ್ಷದ ಕೆಲಸದ ಮೇಲೆಯೇ ಅಲ್ಲಿಗೆ ಹೋಗಿದ್ದೆ ಎಂದು ಸಚಿವ ಜಮೀರ್ ಅಹಮದ್ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆದರೂ ಸಮುದಾಯದ ಮುಖಂಡರು ಸಚಿವರ ಪರವಾಗಿ ಬ್ಯಾಟಿಂಗ್ ಮಾಡುವ ಮೂಲಕ ಪಕ್ಷಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಫರ್ವೇಜ್ ಮತ್ತು ಅಲ್ಲಾಭಕ್ಷ್ ಉಪಸ್ಥಿತರಿದ್ದರು.
