Home ಇನ್ನಷ್ಟು ಕೋರ್ಟು - ಕಾನೂನು ಅರವಿಂದ ಕೇಜ್ರಿವಾಲ್:‌ ಕಡೆಗೂ ಸಿಕ್ಕಿತು ಜಾಮೀನು!

ಅರವಿಂದ ಕೇಜ್ರಿವಾಲ್:‌ ಕಡೆಗೂ ಸಿಕ್ಕಿತು ಜಾಮೀನು!

0

ಮದ್ಯ ನೀತಿ ಹಗರಣದ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ಕೊನೆಗೂ ಜಾಮೀನು ಸಿಕ್ಕಿದೆ. ಸಿಬಿಐ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಆರು ತಿಂಗಳು ಜೈಲಿನಲ್ಲಿ ಕಳೆದ ಬಳಿಕ ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. 10 ಲಕ್ಷ ಬಾಂಡ್ ಸಲ್ಲಿಸುವಂತೆ ಮತ್ತು ಪ್ರಕರಣದ ಬಗ್ಗೆ ಹೊರಗೆ ಮಾತನಾಡದಂತೆ ಷರತ್ತು ವಿಧಿಸಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಮದ್ಯ ನೀತಿ ಪ್ರಕರಣದಲ್ಲಿ ಸಿಬಿಐ ಬಂಧನವನ್ನು ಪ್ರಶ್ನಿಸಿ ಈ ಹಿಂದೆ ಕೇಜ್ರಿವಾಲ್ ಸುಪ್ರೀಂ ಕೋರ್ಟಿನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.

ಮದ್ಯ ನೀತಿಗೆ ಸಂಬಂಧಿಸಿದ ಸಿಬಿಐ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಆದರೆ, ಸಿಬಿಐ ಬಂಧನ ಸಿಂಧುವಾಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ಎರಡೂ ಅರ್ಜಿಗಳ ತೀರ್ಪು ನೀಡಿದೆ. ತಮ್ಮ ಬಂಧನವನ್ನು ಪ್ರಶ್ನಿಸಿ, ಕೇಜ್ರಿವಾಲ್ ಕೇಂದ್ರ ತನಿಖಾ ದಳ ದಾಖಲಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿರುವುದನ್ನು ಪ್ರಶ್ನಿಸಿ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.

ನ್ಯಾಯಮೂರ್ತಿ ಉಜ್ವಲ್ ಭುಯಾನ್ ಕೂಡ ಪೀಠದಲ್ಲಿದ್ದರು. 5ರಂದು ಕೇಜ್ರಿವಾಲ್ ಅರ್ಜಿಗಳ ಕುರಿತು ಈಗಾಗಲೇ ಎರಡೂ ಕಡೆಯ ವಾದ ಆಲಿಸಿದ ಪೀಠ, ಕೇಜ್ರಿವಾಲ್ ಅರ್ಜಿಯ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ತೀರ್ಪು ಹೊರಬಿದ್ದಿದೆ. ಇಡಿ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಈ ಹಿಂದೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಲಿಕ್ಕರ್ ಪಾಲಿಸಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಬಂಧಿಸಿತ್ತು. ಇಡಿ ವಶದಲ್ಲಿದ್ದ ಅವರನ್ನು ಜೂನ್ 26 ರಂದು ಸಿಬಿಐ ಬಂಧಿಸಿತ್ತು. ಜುಲೈ 12ರಂದು ಇಡಿ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.

You cannot copy content of this page

Exit mobile version