ತಮಿಳುನಾಡಿನ ಖ್ಯಾತ ಹೋಟೆಲ್ ಸರಣಿ ಮಾಲಿಕರನ್ನು ಸಾರ್ವಜನಿಕ ಸಭೆಯಲ್ಲಿ ಪ್ರಶ್ನೆ ಕೇಳಿದರು ಎನ್ನುವ ಕಾರಣಕ್ಕೆ ಕೇಂದ್ರ ಹಣಕಾಸು ಸಚಿವೆ ತಾನಿದ್ದಲ್ಲಿಗೆ ಕರೆಯಿಸಿಕೊಂಡು ಕ್ಷಮೆ ಕೇಳುವಂತೆ ಮಾಡಿರುವುದು ಈಗ ಚರ್ಚೆಗೆ ಈಡಾಗಿದೆ. ತನ್ನ ದರ್ಪದ ನಡವಳಿಕೆಗೆ ಹೆಸರಾಗಿರುವ ಸಚಿವೆ ಈ ಮೂಲಕ ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ವಿವರಗಳನ್ನು ನೋಡುವುದಾದರೆ ಬುಧವಾರ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಸಂವಾದದ ನಡುವೆ ತಮಿಳುನಾಡಿನ ಖ್ಯಾತ ರೆಸ್ಟೋರೆಂಟ್ ಚೈನ್ ಅನ್ನಪೂರ್ಣದ ಮಾಲಿಕರಾದ ಶ್ರೀನಿವಾಸನ್ ಎನ್ನುವವರು “ಮೇಡಂ ದಯವಿಟ್ಟು ಏಕರೂಪದ ಜಿಎಸ್‌ಟಿ ಜಾರಿಗೆ ತನ್ನಿ, ನೀವು ಒಂದೊಂದು ವಸ್ತುವಿನ ಮೇಲೆ ಒಂದೊಂದು ರೀತಿಯ ಜಿಎಸ್‌ಟಿ ಹೇರಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ. ಕ್ರೀಮ್ ಮತ್ತು ಬನ್ ಎರಡನ್ನೂ ಬೇರೆ ಬೇರೆ ಕೊಂಡರೆ ಯಾವುದೇ ಟ್ಯಾಕ್ಸ್ ಇಲ್ಲ, ಆದರೆ ಕ್ರೀಮ್ ತೆಗೆದುಕೊಂಡರೆ 18 ಪರ್ಸೆಂಟ್ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಇದಕ್ಕಾಗಿ ಜನರು ನಮ್ಮ ಬಳಿ ಕ್ರೀಮ್ ಮತ್ತು ಬನ್ ಎರಡನ್ನೂ ಬೇರೆ ಬೇರೆ ಕೊಡಿ ಅದನ್ನು ನಾವೇ ಹಚ್ಚಿಕೊಳ್ಳುತ್ತೇವೆ ಎನ್ನುತ್ತಾರೆ” ಎಂದು ಹೇಳಿದರು.
ಇದನ್ನು ಕೇಳಿದ ಸಭೆ ನಗೆಗಡಲಿನಲ್ಲಿ ತೇಲಿತು. ನಂತರವೂ ಶ್ರೀನಿವಾಸನ್ ಅವರ ಮಾತು ಮುಂದುವರೆಯುತ್ತದೆ. ಸಭೆಯ ವೇದಿಕೆಯಲ್ಲಿದ್ದ ನಿರ್ಮಲಾ ಸೀತರಾಮ್ ಕೂಡಾ ನಕ್ಕು ಅವರ ಪ್ರಶ್ನೆಗೆ ಉತ್ತರ ಹೇಳಿ ಸುಮ್ಮನಾಗುತ್ತಾರೆ. ಆದರೆ ಅದು ಇಲ್ಲಿಗೆ ಮುಗಿಯುವುದಿಲ್ಲ.
ಇದೀಗ ಹರಿದಾಡುತ್ತಿರುವ ವಿಡಿಯೋದಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಸೀತಾರಾಮನ್ ಅವರು ಮನೆಯೊಂದರಲ್ಲಿ ಭೇಟಿಯಾಗಿದ್ದು, ಅವರು ದೈನೇಸಿಯಾಗಿ “ಮೇಡಂ ದಯವಿಟ್ಟು ನನ್ನನ್ನು ಕ್ಷಮಿಸಿ, ನಾನು ಯಾವುದೇ ಪಕ್ಷಕ್ಕೆ ಸೇರಿದವನಲ್ಲ, ನಾನೊಬ್ಬ ವ್ಯಾಪಾರಿ” ಎಂದು ಬೇಡಿಕೊಳ್ಳುತ್ತಿರುವುದು ಕಾಣುತ್ತಿದೆ. ಎರಡೂ ವಿಡಿಯೋಗಳನ್ನು ಕಾಂಗ್ರೆಸ್ ಪಕ್ಷದ ಕೇರಳ ವಿಭಾಗವು ತನ್ನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡು ನಿರ್ಮಲಾ ಸೀತಾರಾಮನ್ ಅವರ ದರ್ಪವನ್ನು ಟೀಕಿಸಿದೆ.
ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಸಚಿವೆಯ ನಡೆಯ ಕುರಿತು ಬಹಳಷ್ಟು ಟೀಕೆ ವ್ಯಕ್ತವಾಗುತ್ತಿದೆ. ಈ ಕುರಿತು ಇದುವರೆಗೆ ಸಚಿವೆ ನಿರ್ಮಲಾ ಸೀತಾರಾಮನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.