ದೆಹಲಿ: ಲಡಾಖ್ ಜನರನ್ನು ದೇಶದ್ರೋಹಿಗಳೆಂದು ಬಿಂಬಿಸುತ್ತಿರುವುದಕ್ಕೆ ಹಲವು ಹಿರಿಯ ಸೇನಾ ಮತ್ತು ಪೊಲೀಸ್ ಮಾಜಿ ಅಧಿಕಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರಚಾರವು ಗಂಭೀರವಾದ ರಾಷ್ಟ್ರೀಯ ಭದ್ರತಾ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಲಡಾಖ್ ಚಳುವಳಿಯನ್ನು ಕೀಳಾಗಿಸಲು ಬಿಜೆಪಿ ಪರ ಸಾಮಾಜಿಕ ಮಾಧ್ಯಮಗಳು ಮತ್ತು ಸರ್ಕಾರದ ಕೆಲವು ವಲಯಗಳು ತೀವ್ರವಾಗಿ ಪ್ರಯತ್ನಿಸುತ್ತಿವೆ. ಈ ಚಳುವಳಿಯು ಪಾಕಿಸ್ತಾನ ಅಥವಾ ಇತರ ವಿದೇಶಿ ಶಕ್ತಿಗಳಿಂದ ಪ್ರಭಾವಿತವಾಗಿದೆ ಎಂದು ಅವು ಆರೋಪಿಸಿವೆ. ಆದರೆ, ಈ ವಾದವನ್ನು ಹಲವರು ಖಂಡಿಸಿದ್ದಾರೆ ಮತ್ತು ಇಂತಹ ಸುಳ್ಳು ಪ್ರಚಾರ ಮಾಡಬಾರದೆಂದು ಸಲಹೆ ನೀಡಿದ್ದಾರೆ.
ಲಡಾಖ್‌ನ ಜನಸಂಖ್ಯೆ ಮೂರು ಲಕ್ಷಕ್ಕಿಂತ ಕಡಿಮೆ ಇದ್ದರೂ, ಅದು ಸಾವಿರಾರು ಸೇನಾಧಿಕಾರಿಗಳು, ಸೈನಿಕರು ಮತ್ತು ಮಾಜಿ ಸೈನಿಕ ಸಿಬ್ಬಂದಿಗೆ ತವರು. ಇತ್ತೀಚೆಗೆ ನಡೆದ ಪೊಲೀಸ್ ಗೋಲಿಬಾರ್‌ನಲ್ಲಿ ಕಾರ್ಗಿಲ್ ಯುದ್ಧ ವೀರ ಸೆವಾಂಗ್ ತಾರ್ಚಿನ್ ಮೃತಪಟ್ಟಿದ್ದಾರೆ. ಅವರ ತಂದೆ ಕೂಡ ಸೇನೆಯಲ್ಲಿ ಗೌರವ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದರು.
ಲಡಾಖ್ ನಿವಾಸಿಗಳ ವಿರುದ್ಧ ನಡೆಯುತ್ತಿರುವ ಈ ದುಷ್ಪ್ರಚಾರವನ್ನು ಬಿಜೆಪಿ ಪರ ಮಾಜಿ ಮೇಜರ್ ಜನರಲ್ ಜಿ.ಡಿ. ಬಕ್ಷಿ ಸಹ ತಪ್ಪೆಂದು ಹೇಳಿದ್ದಾರೆ. ಅತ್ಯಂತ ಪ್ರಮುಖ ಮತ್ತು ಕಾರ್ಯತಂತ್ರದ ಗಡಿನಾಡಿನಲ್ಲಿ ವಾಸಿಸುತ್ತಿರುವ ಈ ಸಾಹಸಿ ಮತ್ತು ದೇಶಭಕ್ತ ಜನರನ್ನು ದೇಶವು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ. “ಲಡಾಖ್ ಜನರ ಬೇಡಿಕೆಗಳು ವಿಪರೀತವಾದದ್ದೇನಲ್ಲ. ಅವರು ಸಂವಿಧಾನದ ಆರನೇ ಶೆಡ್ಯೂಲ್ ಅನ್ನು ಬಯಸುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ? ಬಿಜೆಪಿಯೂ ಅದಕ್ಕೆ ಭರವಸೆ ನೀಡಿತ್ತು. ಅದನ್ನು ಏಕೆ ನೀಡಬಾರದು?” ಎಂದು ಅವರು ಪ್ರಶ್ನಿಸಿದರು.
ಅತ್ಯಂತ ನಿಷ್ಠಾವಂತ ದೇಶಭಕ್ತರನ್ನು ನಮ್ಮಿಂದ ದೂರ ಮಾಡಿದರೆ, ದೇಶವು ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಮಾಜಿ ಲೆಫ್ಟಿನೆಂಟ್ ಜನರಲ್ ಜಿ.ಎಸ್. ಪನಗ್ ಎಚ್ಚರಿಸಿದರು. ಸ್ವಾಯತ್ತತೆ ನೀಡುವುದಾಗಿ ನೀಡಿದ ಭರವಸೆಯನ್ನು ಗಾಳಿಗೆ ತೂರಿದ ಕಾರಣಕ್ಕಾಗಿಯೇ ಈ ಪ್ರದೇಶದಲ್ಲಿ ಉಗ್ರವಾದಿ ಚಟುವಟಿಕೆಗಳು ಹೆಚ್ಚಿವೆ ಎಂದು ಬಿಎಸ್‌ಎಫ್ ಮಾಜಿ ಪೊಲೀಸ್ ಮಹಾನಿರ್ದೇಶಕ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.
ಆರನೇ ಶೆಡ್ಯೂಲ್ ದೇಶ ವಿರೋಧಿಯಾಗಿದ್ದರೆ, ಬಿಜೆಪಿ ಅದನ್ನು ತನ್ನ 2019 ರ ಚುನಾವಣಾ ಪ್ರಣಾಳಿಕೆಯಲ್ಲಿ ಏಕೆ ಸೇರಿಸಿತು ಎಂದು ಹಲವರು ಪ್ರಶ್ನಿಸಿದರು. ಇತ್ತೀಚೆಗೆ ನಡೆದ ಹಿಂಸಾಚಾರದಲ್ಲಿ ತಮ್ಮ ಮಗ ತಾರ್ಚಿನ್ ಅವರನ್ನು ಕಳೆದುಕೊಂಡ ಮಾಜಿ ಸೇನಾಧಿಕಾರಿಯ ವಿಡಿಯೋವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಪ್‌ಲೋಡ್ ಮಾಡಿದ್ದಾರೆ.
ಚರ್ಚೆಗಳಿಂದ ಮಾತ್ರ ಪರಿಹಾರ: ಲೆಫ್ಟಿನೆಂಟ್ ಗವರ್ನರ್
ಕೇಂದ್ರದೊಂದಿಗೆ ಚರ್ಚೆಯಿಂದ ದೂರವಿರುವ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಲೇಹ್ ಅಪೆಕ್ಸ್ ಬಾಡಿ (LAB) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (KDA) ಗಳಿಗೆ ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಕವಿಂದರ್ ಗುಪ್ತಾ ಸೂಚಿಸಿದ್ದಾರೆ. ಬುಧವಾರ ಲಡಾಖ್ ಆಂದೋಲನ ಗುಂಪುಗಳೊಂದಿಗೆ ನಡೆದ ಸಭೆಯ ಸಂದರ್ಭದಲ್ಲಿ, ಯಾವುದೇ ಸಮಸ್ಯೆಗೆ ಚರ್ಚೆಯ ಮೂಲಕ ಮಾತ್ರ ಪರಿಹಾರ ಸಿಗುತ್ತದೆ ಎಂದು ಅವರು ಹೇಳಿದರು.
ಸೆಪ್ಟೆಂಬರ್ 24 ರ ಹಿಂಸಾಚಾರದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ಪರಿಸರವಾದಿ ಸೋನಂ ವಾಂಗ್‌ಚುಕ್ ಸೇರಿದಂತೆ ಬಂಧಿತರನ್ನು ಬಿಡುಗಡೆ ಮಾಡಬೇಕು ಎಂದು ವಿವಿಧ ಸಂಘಟನೆಗಳು ಬೇಡಿಕೆ ಇಡುತ್ತಿವೆ.