ಉತ್ತರಕಾಶಿ: ಬಿಜೆಪಿ ಡಬಲ್ ಇಂಜಿನ್ ಸರ್ಕಾರವಿರುವ ರಾಜ್ಯಗಳಲ್ಲಿ ಪತ್ರಕರ್ತರಿಗೂ ರಕ್ಷಣೆ ಇಲ್ಲದಂತಾಗಿದೆ. ಸತ್ಯಗಳನ್ನು ನಿರ್ಭೀತಿಯಿಂದ ಹೊರಹಾಕುವ ಪರ್ಯಾಯ ಮಾಧ್ಯಮಗಳ ಮೇಲೆ ಆಶ್ಚರ್ಯಕರ ರೀತಿಯಲ್ಲಿ ದಾಳಿಗಳು ಹೆಚ್ಚುತ್ತಿವೆ.
ಇತ್ತೀಚೆಗೆ, ಉತ್ತರಾಖಂಡದ ಪ್ರಸಿದ್ಧ ಪತ್ರಕರ್ತ ರಾಜೀವ್ ಪ್ರತಾಪ್ ಸಿಂಗ್ ಅವರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಅವರು ಕಳೆದ ಸೆಪ್ಟೆಂಬರ್ 18 ರಂದು ಕಣ್ಮರೆಯಾಗಿದ್ದರು, ಮತ್ತು ಮರುದಿನ ಅವರ ಕಾರು ಭಾಗೀರಥಿ ನದಿಯ ಸಮೀಪದಲ್ಲಿ ಪತ್ತೆಯಾಗಿತ್ತು. ನಂತರ ಹತ್ತು ದಿನಗಳ ನಂತರ, ಅಂದರೆ ಸೆಪ್ಟೆಂಬರ್ 28 ರಂದು, ಅವರ ಮೃತದೇಹವು ಉತ್ತರಕಾಶಿಯ ಕೆರೆಯೊಂದರಲ್ಲಿ ದೊರೆತಿದೆ.
ಸರ್ಕಾರಿ ಆಸ್ಪತ್ರೆಯಲ್ಲಿನ ದಯನೀಯ ಪರಿಸ್ಥಿತಿಗಳನ್ನು ತಮ್ಮ ವರದಿಗಳ ಮೂಲಕ ಹೊರಗೆಡಹಿದ್ದ ರಾಜೀವ್ ಅವರು ಈ ರೀತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದರಿಂದ ಪತ್ರಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಅವರನ್ನು ಖಂಡಿತವಾಗಿಯೂ ಕೊಲೆ ಮಾಡಿ ಇಲ್ಲಿ ಎಸೆದಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತ ರಾಜೀವ್ ಪ್ರತಾಪ್ ಸಿಂಗ್ ಅವರ ಸಾವಿನ ಬಗ್ಗೆ ತಕ್ಷಣವೇ ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಬಿಜೆಪಿ ಆಡಳಿತದಲ್ಲಿ ಇಂದು ಪ್ರಾಮಾಣಿಕ ಪತ್ರಿಕೋದ್ಯಮವು ಭಯ ಮತ್ತು ಅಭದ್ರತೆಯ ನೆರಳಿನಲ್ಲಿ ಬದುಕುತ್ತಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.