ಶಿವಮೊಗ್ಗದಲ್ಲಿ ಉಗ್ರ ಸಂಘಟನೆ ಜೊತೆಗೆ ನಂಟು ಹೊಂದಿದ ಆರೋಪದ ಮೇಲೆ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸರಿಂದ ಮೂವರ ಮೇಲೆ ಕೇಸು ದಾಖಲಾಗಿದೆ ಅದರಲ್ಲಿ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಬಂದಿತರಲ್ಲಿ ಒಬ್ಬ ಶಿವಮೊಗ್ಗದ ಸಿದ್ದೇಶ್ವರ ನಗರದ ಯಾಸಿನ್, ಮತ್ತು ಮಂಗಳೂರು ಮೂಲದ ಮಾಜ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಶಂಕಿತ ತೀರ್ಥಹಳ್ಳಿ ಮೂಲದ ಶಾಕಿರ್ ಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ಸಾವರ್ಕರ್ ಫ್ಲೆಕ್ಸ್ ವಿವಾದದ ಸಂದರ್ಭದಲ್ಲಿ ಗಾಂಧೀಬಜಾರಿನ ಪ್ರೇಮ್ ಸಿಂಗ್ ಮೇಲೆ ಚೂರಿ ಇರಿತ ಪ್ರಕರಣದ ತನಿಖೆ ವೇಳೆ ಇಂತಹ ಆಘಾತಕಾರಿ ಸುದ್ದಿ ಹೊರಬಂದಿದೆ. ಪ್ರೇಮ್ ಸಿಂಗ್ ಮೇಲೆ ಚೂರಿ ಇರಿತದ ಪ್ರಕರಣದ ಅಡಿಯಲ್ಲಿ ತನಿಖೆ ನಡೆಸುತ್ತಿದ್ದಾಗ ಜಬಿವುಲ್ಲಾ ಎಂಬ ವ್ಯಕ್ತಿಯ ಮೊಬೈಲ್ ಶೋಧಿಸುತ್ತಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತ ಇಬ್ಬರು ಮತ್ತು ತಲೆಮರೆಸಿಕೊಂಡಿರುವ ಒಬ್ಬ ವ್ಯಕ್ತಿ ನಿಷೇಧಿತ ಭಯೋತ್ಪಾದಕ ಸಂಘಟನೆ ಜೊತೆಗೆ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಿಷೇಧಿತ ಭಯೋತ್ಪಾದಕ ಸಂಘಟನೆ ಯಾವುದು ಎಂಬ ಪ್ರಶ್ನೆಗೆ ತನಿಖೆ ಇನ್ನೂ ಪ್ರಗತಿಯ ಹಂತದಲ್ಲಿದೆ. ಸಧ್ಯ ಇವಿಷ್ಟು ಪ್ರಾಥಮಿಕ ಹಂತದಲ್ಲಿ ಸಿಕ್ಕ ಮಾಹಿತಿ ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಮಾಹಿತಿ ನೀಡಿದ್ದಾರೆ.