Home ಇನ್ನಷ್ಟು ಕೋರ್ಟು - ಕಾನೂನು ನೀವು ಆರ್‌ಎಸ್‌ಎಸ್‌ ಕಾರ್ಯಕ್ರಮಗಳಿಗೆ ಹೋಗಿದ್ದೀರಿ, ವಿಚಾರಣೆಯಿಂದ ಹಿಂದೆ ಸರಿಯಿರಿ: ನ್ಯಾಯಾಧೀಶರ ಜೊತೆ ಕೇಜ್ರಿವಾಲ್ ವಾಗ್ವಾದ

ನೀವು ಆರ್‌ಎಸ್‌ಎಸ್‌ ಕಾರ್ಯಕ್ರಮಗಳಿಗೆ ಹೋಗಿದ್ದೀರಿ, ವಿಚಾರಣೆಯಿಂದ ಹಿಂದೆ ಸರಿಯಿರಿ: ನ್ಯಾಯಾಧೀಶರ ಜೊತೆ ಕೇಜ್ರಿವಾಲ್ ವಾಗ್ವಾದ

0

ದೆಹಲಿ ಮದ್ಯ ನೀತಿ ಹಗರಣದ ವಿಚಾರಣೆಯಿಂದ ಹಿಂದೆ ಸರಿಯುವಂತೆ ಹೈಕೋರ್ಟ್ ನ್ಯಾಯಾಧೀಶರಾದ ಸ್ವರ್ಣಕಾಂತ ಶರ್ಮಾ ಅವರಿಗೆ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನೇರವಾಗಿ ಮನವಿ ಮಾಡಿದ್ದಾರೆ. ನ್ಯಾಯಾಧೀಶರು ಆರ್‌ಎಸ್‌ಎಸ್ ಅನುಬಂಧ ಸಂಸ್ಥೆಯಾದ ‘ಅಧಿವಕ್ತಾ ಪರಿಷತ್’ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ನಾಲ್ಕು ಬಾರಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿರುವ ಕೇಜ್ರಿವಾಲ್, ಈ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತೀರ್ಪು ಹೊರಬರುವ ಬಗ್ಗೆ ತಮಗೆ ಬಲವಾದ ಅನುಮಾನವಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಿದ್ಧಾಂತವನ್ನು ವಿರೋಧಿಸುವ ತಮಗೆ ನ್ಯಾಯ ಸಿಗುವ ಬಗ್ಗೆ ನಂಬಿಕೆಯಿಲ್ಲದ ಕಾರಣ ಈ ಪ್ರಕರಣದ ವಿಚಾರಣೆಯನ್ನು ಬೇರೆ ಪೀಠಕ್ಕೆ ವರ್ಗಾಯಿಸಬೇಕು ಎಂದು ಅವರು ಒತ್ತಾಯಿಸಿದರು.

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಸೇರಿದಂತೆ 21 ಮಂದಿಗೆ ಈ ಹಿಂದೆ ಟ್ರಯಲ್ ಕೋರ್ಟ್ ಕ್ಲೀನ್ ಚಿಟ್ ನೀಡಿತ್ತು. ಸಿಬಿಐ ತನಿಖೆಯು ಸಂಪೂರ್ಣವಾಗಿ ವಿಶ್ವಾಸಾರ್ಹತೆ ಕಳೆದುಕೊಂಡಿದೆ ಎಂದು ಟ್ರಯಲ್ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಆದರೆ, ಈ ತೀರ್ಪನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು ಪ್ರಕರಣದ ಮರುಪರಿಶೀಲನೆಗಾಗಿ ಎಲ್ಲರಿಗೂ ನೋಟಿಸ್ ನೀಡಿದ್ದರು.

ಸೋಮವಾರ ನಡೆದ ವಿಚಾರಣೆಗೆ ಖುದ್ದಾಗಿ ಹಾಜರಾಗಿದ್ದ ಕೇಜ್ರಿವಾಲ್, “ನಾನು ಇಲ್ಲಿ ಆರೋಪಿಯಾಗಿ ನಿಂತಿಲ್ಲ, ಈಗಾಗಲೇ ನನ್ನನ್ನು ನಿರ್ದೋಷಿ ಎಂದು ಘೋಷಿಸಲಾಗಿದೆ. ಸಿಬಿಐ ತನಿಖೆಯನ್ನು ಟ್ರಯಲ್ ಕೋರ್ಟ್ ತಪ್ಪು ಎಂದು ಹೇಳಿದ್ದರೂ, ನೀವು ಅವರ ವಾದಗಳನ್ನೇ ಬೆಂಬಲಿಸುತ್ತಿರುವುದು ನನ್ನಲ್ಲಿ ಆತಂಕ ಮೂಡಿಸಿದೆ” ಎಂದು ನ್ಯಾಯಾಧೀಶರ ಮುಂದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಕುತೂಹಲಕಾರಿ ಸಂಗತಿಯೆಂದರೆ, ಕೇಜ್ರಿವಾಲ್ ಅವರ ವಾದ ಮಂಡನೆಯ ಶೈಲಿಯನ್ನು ಕಂಡು ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. “ನೀವು ಬಹಳ ಚೆನ್ನಾಗಿ ವಾದ ಮಂಡಿಸಿದ್ದೀರಿ, ನೀವು ಬೇಕಿದ್ದರೆ ವಕೀಲರೂ ಆಗಬಹುದು” ಎಂದು ನ್ಯಾಯಾಧೀಶರು ಹೇಳಿದಾಗ, ಕೋರ್ಟ್ ರೂಮ್‌ನಲ್ಲಿ ಲಘು ಹಾಸ್ಯದ ವಾತಾವರಣ ನಿರ್ಮಾಣವಾಯಿತು.

ಇದಕ್ಕೆ ಕಿರುನಗುವಿನೊಂದಿಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, “ಧನ್ಯವಾದಗಳು ಮೇಡಂ, ಆದರೆ ಸದ್ಯಕ್ಕೆ ನಾನು ಮಾಡುತ್ತಿರುವ ಕೆಲಸದ ಬಗ್ಗೆಯೇ ನನಗೆ ತೃಪ್ತಿಯಿದೆ” ಎಂದು ಹೇಳಿ ಮಾತು ಮುಗಿಸಿದರು. ಈ ವಿಚಾರಣೆಯ ಪಾರದರ್ಶಕತೆಯ ಬಗ್ಗೆ ತಮಗೆ ಅನುಮಾನವಿರುವುದರಿಂದ ಈಗಾಗಲೇ ಮುಖ್ಯ ನ್ಯಾಯಮೂರ್ತಿಗಳಿಗೂ ಪತ್ರ ಬರೆದಿರುವುದಾಗಿ ಕೇಜ್ರಿವಾಲ್ ಇದೇ ಸಂದರ್ಭದಲ್ಲಿ ತಿಳಿಸಿದರು.

You cannot copy content of this page

Exit mobile version