ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಭಾರತದ ನಾಗಾಲೋಟ ಮುಂದುವರೆದಿದೆ. ಈಗಾಗಲೇ ಚೀನಾ ಮತ್ತು ಜಪಾನ್ ವಿರುದ್ಧ ಜಯ ಸಾಧಿಸಿದ್ದ ಭಾರತ, ಈಗ ಕಜಕಿಸ್ತಾನವನ್ನು ಸೋಲಿಸಿದೆ.
ಮೊದಲ ಎರಡು ಪಂದ್ಯಗಳನ್ನು ಗೆದ್ದಿದ್ದರೂ ತನ್ನ ಮಟ್ಟಕ್ಕೆ ತಕ್ಕಂತೆ ಆಡದಿದ್ದ ಭಾರತ, ಮೂರನೇ ಪಂದ್ಯದಲ್ಲಿ ಅಬ್ಬರಿಸಿದೆ. ಬಿಹಾರದ ರಾಜ್ಗೀರ್‌ನಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಭಾರತ 15-0 ಅಂತರದಿಂದ ಕಜಕಿಸ್ತಾನವನ್ನು ಮಣಿಸಿದೆ.
ಈ ಗೆಲುವಿನೊಂದಿಗೆ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ ಸೂಪರ್-4 ಹಂತಕ್ಕೆ ಪ್ರವೇಶಿಸಿದೆ.
ಭಾರತ ತಂಡದ ಪರ ಅಭಿಷೇಕ್ (5ನೇ, 8ನೇ, 20ನೇ, 59ನೇ ನಿಮಿಷಗಳಲ್ಲಿ) ನಾಲ್ಕು ಗೋಲು ಗಳಿಸಿದರೆ, ಸುಖ್‌ಜೀತ್ ಸಿಂಗ್ (15, 32, 38ನೇ ನಿಮಿಷ) ಮತ್ತು ಜುಗ್ರಾಜ್ ಸಿಂಗ್ (24, 31, 47ನೇ ನಿಮಿಷಗಳಲ್ಲಿ) ತಲಾ ಮೂರು ಗೋಲುಗಳನ್ನು ಗಳಿಸಿದರು. ಹರ್ಮನ್‌ಪ್ರೀತ್ (26ನೇ ನಿಮಿಷ), ಅಮಿತ್ ರೋಹಿದಾಸ್ (29ನೇ ನಿಮಿಷ), ರಾಜೀಂದರ್ ಸಿಂಗ್ (32ನೇ ನಿಮಿಷ), ಸಂಜಯ್ ಸಿಂಗ್ (54ನೇ ನಿಮಿಷ) ಮತ್ತು ದಿಲ್‌ಪ್ರೀತ್ (55ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರು.
ಈ ಪಂದ್ಯದಲ್ಲಿ ಭಾರತ ಸರಾಸರಿ ಪ್ರತಿ 4 ನಿಮಿಷಕ್ಕೆ ಒಂದು ಗೋಲು ಗಳಿಸಿದ್ದು ವಿಶೇಷ. ಗ್ರೂಪ್-ಎನಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಜಯ ಗಳಿಸಿದ ಭಾರತ, ಅಗ್ರಸ್ಥಾನದೊಂದಿಗೆ ಸೂಪರ್-4ಗೆ ಅರ್ಹತೆ ಪಡೆದಿದೆ.
ಗ್ರೂಪ್-ಎಯಿಂದ ಎರಡನೇ ಸ್ಥಾನ ಪಡೆದ ಚೀನಾ ಕೂಡ ಸೂಪರ್-4 ಹಂತಕ್ಕೆ ಅರ್ಹತೆ ಗಳಿಸಿದೆ. ಸೋಮವಾರ ಜಪಾನ್ ವಿರುದ್ಧ ನಡೆದ ಪಂದ್ಯದಲ್ಲಿ ಚೀನಾ 2-2 ಗೋಲುಗಳೊಂದಿಗೆ ಡ್ರಾ ಮಾಡಿಕೊಂಡಿತು. ಈ ಎರಡೂ ತಂಡಗಳು ಸಮಾನ ಅಂಕ ಗಳಿಸಿದ್ದರೂ, ಗೋಲುಗಳ ಅಂತರದಲ್ಲಿ ಚೀನಾ ಮೇಲುಗೈ ಸಾಧಿಸಿ ಸೂಪರ್-4 ಹಂತದ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.