ಮೈಸೂರು: ಧರ್ಮಸ್ಥಳ ಪ್ರವಾಸವನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿ ನಾಯಕರಿಗೆ ಈ ಹೋರಾಟಕ್ಕಾಗಿ ವಿದೇಶದಿಂದ ಹಣ ಬಂದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಹಿಂದೆ ಬಿಜೆಪಿ ಯಾಕೆ ಇಂತಹ ಯಾತ್ರೆ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೇ SIT ತನಿಖೆಯನ್ನು ಸ್ವಾಗತಿಸಿದ್ದಾರೆ ಮತ್ತು ಸತ್ಯ ಹೊರಬರಲಿ ಎಂದು ಹೇಳಿದ್ದಾರೆ. ಸೌಜನ್ಯ ಪ್ರಕರಣದ ತನಿಖೆಯಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಮೇಲ್ಮನವಿ ಸೌಜನ್ಯ ಕುಟುಂಬಕ್ಕೆ ಬಿಟ್ಟ ವಿಚಾರ:
ಸೌಜನ್ಯ ಪ್ರಕರಣದ ಮರು ತನಿಖೆ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಿಬಿಐ ಕೇಂದ್ರ ಸರ್ಕಾರದ ಕೈಕೆಳಗಿದೆ ಎಂದರು. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದು ಸೌಜನ್ಯ ಕುಟುಂಬದ ನಿರ್ಧಾರಕ್ಕೆ ಬಿಟ್ಟ ವಿಚಾರ. ಒಂದು ಕಡೆ ಬಿಜೆಪಿಯವರು ವೀರೇಂದ್ರ ಹೆಗ್ಗಡೆಗೆ ಜೈಕಾರ ಹಾಕಿ, ಇನ್ನೊಂದು ಕಡೆ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಮಹಿಳೆಯೊಬ್ಬರು ಈ ಪ್ರಕರಣದ ಬಗ್ಗೆ ಹೇಳಿಕೆ ನೀಡಿದ ಕುರಿತು, ಆ ಮಹಿಳೆ ಕೋರ್ಟ್ ಅಥವಾ ಸಿಬಿಐ ಮುಂದೆ ಯಾಕೆ ಹೇಳಿಕೆ ನೀಡಲಿಲ್ಲ ಎಂದು ಸಿಎಂ ಪ್ರಶ್ನಿಸಿದರು. ಸಾಕ್ಷಿ ತಿಳಿದಿದ್ದರೂ ಅದನ್ನು ಮುಚ್ಚಿಡುವುದು ಅಪರಾಧ ಎಂಬುದು ಅವರಿಗೆ ಗೊತ್ತಿದೆಯೇ ಎಂದು ಕೇಳಿದ ಸಿದ್ದರಾಮಯ್ಯ, ಇದು ಸೌಜನ್ಯ ಕುಟುಂಬಕ್ಕೆ ಸಂಬಂಧಿಸಿದ ವಿಚಾರ ಎಂದರು.
ಬಿಜೆಪಿಯ ಚಾಮುಂಡಿ ಬೆಟ್ಟ ಚಲೋ ವಿರುದ್ಧ ವಾಗ್ದಾಳಿ:
ಬಿಜೆಪಿ ನಾಯಕರ ‘ಚಾಮುಂಡಿ ಬೆಟ್ಟ ಚಲೋ’ ಕುರಿತು ಮಾತನಾಡಿದ ಅವರು, “ಮಾಡಲಿ ಬಿಡಿ, ನಾನು ಬೇಡ ಎನ್ನಲ್ಲ” ಎಂದರು. ಮಿರ್ಜಾ ಇಸ್ಮಾಯಿಲ್ ಮಹಾರಾಜರ ಜೊತೆಗೆ ಅಂಬಾರಿಯಲ್ಲಿ ಹೋಗುವಾಗ, ಮತ್ತು ನಿಸಾರ್ ಅಹಮದ್ ಉದ್ಘಾಟನೆ ಮಾಡುವಾಗ ಬಿಜೆಪಿಯವರು ಎಲ್ಲಿದ್ದರು ಎಂದು ಪ್ರಶ್ನಿಸಿದರು.
ಇದೇ ವೇಳೆ, ಬಾನು ಮುಷ್ತಾಕ್ ಒಬ್ಬ ಕನ್ನಡದ ಸಾಹಿತಿ, ಅವರಿಗೆ ಕನ್ನಡದ ಮೇಲೆ ಪ್ರೀತಿ ಇಲ್ಲದೆ ಬರೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು. ಬೇರೆ ಧರ್ಮದವರು ಅರಿಶಿನ-ಕುಂಕುಮ ಹಚ್ಚಿಕೊಳ್ಳಿ ಎಂದು ಹೇಳುವುದು ಸರಿಯಲ್ಲ. ಹಾಗೆಯೇ, ಬಾನು ಮುಷ್ತಾಕ್ ವಿರುದ್ಧ ಯಾವುದೇ ಫತ್ವಾ ಹೊರಡಿಸಿಲ್ಲ ಎಂದು ಧರ್ಮಗುರುಗಳು ಸ್ಪಷ್ಟನೆ ನೀಡಿದ್ದಾರೆ ಎಂದೂ ಸಿಎಂ ತಿಳಿಸಿದರು.