ಗೋರಖ್‌ಪುರ (ಉತ್ತರ ಪ್ರದೇಶ): ಗೋರಖ್‌ಪುರದ ಪಿಪ್ರೈಚ್ ಪ್ರದೇಶದಲ್ಲಿ ಹನುಮಾನ್ ದೇವಾಲಯವೊಂದರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಮಹಿಳೆಯರ ಮೇಲೆ ಮಾಂಸದ ತುಂಡುಗಳನ್ನು ಎಸೆದ ಆರೋಪದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಈ ಘಟನೆ ಸೋಮವಾರ ಸಂಜೆ ಪಿಪ್ರೈಚ್ ರೈಲ್ವೆ ನಿಲ್ದಾಣದ ಬಳಿಯ ಸಂಕಟ್ ಮೋಚನ್ ಹನುಮಾನ್ ದೇವಸ್ಥಾನದಲ್ಲಿ ನಡೆದಿದೆ. ಆರೋಪಿ 35 ವರ್ಷದ ಉಮೇಶ್ ಯಾದವ್, ಆರತಿ ಸಮಯದಲ್ಲಿ ಮಹಿಳೆಯರ ಮೇಲೆ ಮಾಂಸದ ತುಂಡುಗಳನ್ನು ಎಸೆದಿದ್ದಾನೆ, ಇದರಿಂದ ಭಕ್ತರಲ್ಲಿ ಭೀತಿ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಸ್ಥಳೀಯರು ಯಾದವ್‌ನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆತ ಅಮಲಿನಲ್ಲಿ ಇದ್ದಂತೆ ಕಾಣುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಉಮೇಶ್ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾನೆ. ಒಂದು ಹಂತದಲ್ಲಿ, ಸ್ಥಳೀಯ ಮಾಂಸ ವ್ಯಾಪಾರಿಯೊಬ್ಬರು ಹೀಗೆ ಮಾಡಲು ಹೇಳಿದ್ದಾರೆ ಎಂದು ಆತ ಹೇಳಿಕೊಂಡಿದ್ದಾನೆ” ಎಂದು ಸ್ಥಳಕ್ಕೆ ಭೇಟಿ ನೀಡಿದ ಚೌರಿ ಚೌರಾ ಸರ್ಕಲ್ ಆಫೀಸರ್ ಅನುರಾಗ್ ಸಿಂಗ್ ತಿಳಿಸಿದರು.
ನಂತರ, ಇತರ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಪೊಲೀಸ್ ಠಾಣೆಯ ಮುಂದೆ ಜನಸಮೂಹ ಜಮಾಯಿಸಿತು. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿ ಜನರನ್ನು ಸಮಾಧಾನಪಡಿಸಿದರು. ಯಾದವ್ ಇತ್ತೀಚೆಗೆ ಹೈದರಾಬಾದ್‌ನಿಂದ ಮನೆಗೆ ಮರಳಿದ್ದು, ಅಲ್ಲಿ ಆತ ಬಣ್ಣ ಹಚ್ಚುವ ಮತ್ತು ಡೈಯಿಂಗ್ ಕೆಲಸ ಮಾಡುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.