ಉತ್ತರಾಖಂಡ: ಉತ್ತರ ಭಾರತದ ರಾಜ್ಯಗಳಲ್ಲಿ ಭಾರೀ ಮಳೆಯು ಅನಾಹುತಗಳನ್ನು ಸೃಷ್ಟಿಸುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರಾಖಂಡ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ.
ಈ ಮಳೆಯಿಂದಾಗಿ ನದಿಗಳು, ತೊರೆಗಳು ಮತ್ತು ಹಳ್ಳಗಳು ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿವೆ. ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಭೂಕುಸಿತಗಳು ಸಂಭವಿಸುತ್ತಿವೆ.
ಭಾರತೀಯ ಹವಾಮಾನ ಇಲಾಖೆ (IMD) ಉತ್ತರಾಖಂಡ ರಾಜ್ಯಕ್ಕೆ ರೆಡ್ ಅಲರ್ಟ್ ಘೋಷಿಸಿದೆ. ಗುಡುಗು ಮತ್ತು ಮಿಂಚುಗಳೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಹಿನ್ನೆಲೆಯಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಶಾಲೆಗಳಿಗೆ ರಜೆ ಮತ್ತು ರಸ್ತೆಗಳು ಬಂದ್
IMD ಎಚ್ಚರಿಕೆಯ ನಂತರ, ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ಮೇಘಸ್ಫೋಟ ಮತ್ತು ಆಕಸ್ಮಿಕ ಪ್ರವಾಹದ ದೃಷ್ಟಿಯಿಂದ ಪೌರಿ ಗರ್ಹ್ವಾಲ್, ಉತ್ತರಕಾಶಿ, ಚಮೋಲಿ, ರುದ್ರಪ್ರಯಾಗ, ನೈನಿತಾಲ್, ಉಧಮ್ ಸಿಂಗ್ ನಗರ, ಅಲ್ಮೋರಾ, ಚಂಪಾವತ್, ಪಿಥೋರಗಢ್, ಮತ್ತು ಬಾಗೇಶ್ವರ ಜಿಲ್ಲೆಗಳಲ್ಲಿ 12ನೇ ತರಗತಿವರೆಗಿನ ಎಲ್ಲಾ ಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.
ಭಾರೀ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಹಲವೆಡೆ ರಸ್ತೆಗಳು ಮತ್ತು ಸೇತುವೆಗಳು ಕೊಚ್ಚಿಹೋಗಿವೆ. ಅನೇಕ ಮನೆಗಳು ಹಾನಿಗೊಳಗಾಗಿವೆ. ಭೂಕುಸಿತದಿಂದಾಗಿ ಹಲವು ರಸ್ತೆಗಳು ಬಂದ್ ಆಗಿವೆ.
ಕಾಂಚನ್ ಗಂಗಾ, ಭನೇರ್‌ಪಾನಿ, ಕಾಮೆಡ್, ಮತ್ತು ಥಾನಾ ಥರಾಲಿ ಪ್ರದೇಶಗಳ ಅನೇಕ ರಸ್ತೆಗಳನ್ನು ಮುಚ್ಚಲಾಗಿದೆ ಎಂದು ಚಮೋಲಿ ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿ ಅಪಾಯಕಾರಿಯಾಗಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.