ಐಜ್ವಾಲ್: ಸೆಪ್ಟೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಿಜೋರಾಂ ಮತ್ತು ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಐಜ್ವಾಲ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಮೊದಲು ಮಿಜೋರಾಂಗೆ ಭೇಟಿ ನೀಡಿ ಹೊಸ ಬೈರಾಬಿ-ಸೈರಾಂಗ್ ರೈಲ್ವೆ ಮಾರ್ಗವನ್ನು ಉದ್ಘಾಟಿಸಲಿದ್ದಾರೆ.
ಮಿಜೋರಾಂ ಸರ್ಕಾರದ ಅನೇಕ ಅಧಿಕಾರಿಗಳು, ಪ್ರಧಾನಿ ಭೇಟಿಯ ಬಗ್ಗೆ ಮಾಹಿತಿ ಸ್ವೀಕರಿಸಿದ್ದಾರೆ ಎಂದು ತಿಳಿಸಿದ್ದಾರೆ. ಐಜ್ವಾಲ್‌ನಿಂದ ಪ್ರಧಾನಿ ಮಣಿಪುರಕ್ಕೆ ವಿಮಾನದಲ್ಲಿ ತೆರಳಲಿದ್ದು, ಮೇ 2023 ರಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಮಣಿಪುರಕ್ಕೆ ಇದು ಅವರ ಮೊದಲ ಭೇಟಿಯಾಗಿದೆ.
ಆದಾಗ್ಯೂ, ಪ್ರಧಾನಿ ಅವರ ಭೇಟಿಯ ಅಂತಿಮ ವೇಳಾಪಟ್ಟಿಯನ್ನು ಇನ್ನೂ ಸ್ವೀಕರಿಸಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ, ಇಂಫಾಲ್ ಅಧಿಕಾರಿಗಳು ಈ ಭೇಟಿಯನ್ನು ದೃಢಪಡಿಸಿಲ್ಲ.
ಪ್ರಧಾನಿ ಭೇಟಿಗಾಗಿ ಸಿದ್ಧತೆಗಳನ್ನು ಪರಿಶೀಲಿಸಲು ಮಿಜೋರಾಂ ಮುಖ್ಯ ಕಾರ್ಯದರ್ಶಿ ಖಿಲ್ಲೆ ರಾಮ್ ಮೀನಾ ಅವರು ಸೋಮವಾರ ವಿವಿಧ ಇಲಾಖೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಭದ್ರತಾ ಕ್ರಮಗಳು, ಟ್ರಾಫಿಕ್ ನಿರ್ವಹಣೆ, ಸ್ವಾಗತ ಮತ್ತು ರಸ್ತೆ ಅಲಂಕಾರ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು ಎಂದು ಹೇಳಿಕೆ ತಿಳಿಸಿದೆ. ಐಜ್ವಾಲ್‌ನ ಲಮ್ಮೌಲ್‌ನಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಸರ್ಕಾರಿ ನೌಕರರು, ರೈತರು, ಮತ್ತು ವಿವಿಧ ಶಾಲೆಗಳು ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲು ವ್ಯವಸ್ಥೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
51.38 ಕಿ.ಮೀ ಉದ್ದದ ಈ ರೈಲ್ವೆ ಮಾರ್ಗವು ಕೇಂದ್ರ ಸರ್ಕಾರದ “ಆಕ್ಟ್ ಈಸ್ಟ್ ಪಾಲಿಸಿ” ಯ ಭಾಗವಾಗಿದೆ, ಇದು ಈಶಾನ್ಯ ಪ್ರದೇಶದಾದ್ಯಂತ ಸಂಪರ್ಕ ಮತ್ತು ಆರ್ಥಿಕ ಏಕೀಕರಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಹೊಸ ರೈಲ್ವೆ ಮಾರ್ಗವು ಐಜ್ವಾಲ್ ಅನ್ನು ಅಸ್ಸಾಂನ ಸಿಲ್ಚಾರ್ ಪಟ್ಟಣದ ಮೂಲಕ ದೇಶದ ಇತರ ಭಾಗಗಳಿಗೆ ಸಂಪರ್ಕಿಸುತ್ತದೆ.