ಗುವಾಹಟಿ: ಗುಂಪು ಹಿಂಸಾಚಾರದಲ್ಲಿ ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಬೋಡೋ ಮತ್ತು ಆದಿವಾಸಿಗಳ ನಡುವೆ ಘರ್ಷಣೆ ಹಾಗೂ ಅಗ್ನಿಸ್ಪರ್ಶದಂತಹ ಘಟನೆಗಳು ನಡೆದಿದ್ದು, ಅಸ್ಸಾಂನ ಕೊಕ್ರಜಾರ್ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಕರಿಗಾಂವ್ ಮತ್ತು ಅದರ ಸುತ್ತಮುತ್ತಲಿನ ಪೀಡಿತ ಪ್ರದೇಶಗಳಲ್ಲಿ ಜಿಲ್ಲಾ ಆಡಳಿತದೊಂದಿಗೆ ಸೇನಾ ಸಿಬ್ಬಂದಿ ಗಸ್ತು ನಡೆಸಿದರು ಎಂದು ರಕ್ಷಣಾ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.
ವಿಶ್ವಾಸ ವೃದ್ಧಿಸುವ ಕ್ರಮಗಳ ಭಾಗವಾಗಿ, ಬುಧವಾರದಂದು ಸೇನೆಯು ಈ ಪ್ರದೇಶದಲ್ಲಿ ಪಥಸಂಚಲನ (ಫ್ಲ್ಯಾಗ್ ಮಾರ್ಚ್) ಕೂಡ ನಡೆಸಲಿದೆ ಎಂದು ಅವರು ಹೇಳಿದರು.
ಪ್ರಸ್ತುತ ಜಿಲ್ಲೆಯಲ್ಲಿ ಸೇನೆಯ ಒಟ್ಟು ನಾಲ್ಕು ತುಕಡಿಗಳಿವೆ ಎಂದು ವಕ್ತಾರರು ತಿಳಿಸಿದ್ದಾರೆ.
ಒಟ್ಟಾರೆ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಕೊಕ್ರಜಾರ್ ಮತ್ತು ನೆರೆಯ ಚಿರಾಂಗ್ ಜಿಲ್ಲೆಯಲ್ಲಿ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಪು ಹಿಂಸಾಚಾರ ಮತ್ತು ಘರ್ಷಣೆಗಳ ನಂತರ, ರ್ಯಾಪಿಡ್ ಆಕ್ಷನ್ ಫೋರ್ಸ್ (RAF) ಈಗಾಗಲೇ ಸ್ಥಳದಲ್ಲಿದ್ದು, ಸೇನೆಯನ್ನು ನಿಯೋಜಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಿಳಿಸಿದ್ದಾರೆ.
ಸೋಮವಾರ ರಾತ್ರಿ, ಕರಿಗಾಂವ್ ಹೊರಠಾಣೆ ವ್ಯಾಪ್ತಿಯ ಮಾನ್ಸಿಂಗ್ ರಸ್ತೆಯಲ್ಲಿ, ಮೂವರು ಬೋಡೋಗಳಿದ್ದ ವಾಹನವೊಂದು ಇಬ್ಬರು ಆದಿವಾಸಿಗಳಿಗೆ ಡಿಕ್ಕಿ ಹೊಡೆದಿತ್ತು ಎಂದು ಗೃಹ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆ ಮೂವರು ಬೋಡೋಗಳನ್ನು ನೆರೆಹೊರೆಯ ಆದಿವಾಸಿ ಗ್ರಾಮಸ್ಥರು ಥಳಿಸಿದ್ದು, ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಒಬ್ಬರು ಆಗಲೇ ಮೃತಪಟ್ಟರೆ, ಮತ್ತೊಬ್ಬರು ಮಂಗಳವಾರ ಸಾವಿಗೀಡಾಗಿದ್ದಾರೆ ಎಂದು ಅವರು ಹೇಳಿದರು. ಅಲ್ಲದೆ, ಗಾಯಗೊಂಡಿರುವ ಇತರ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.
ಮಂಗಳವಾರದಂದು ಬೋಡೋ ಮತ್ತು ಆದಿವಾಸಿ ಸಮುದಾಯಗಳು ಕರಿಗಾಂವ್ ಹೊರಠಾಣೆಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು, ಟೈರ್‌ಗಳನ್ನು ಸುಟ್ಟು, ಸರ್ಕಾರಿ ಕಚೇರಿಗೆ ಬೆಂಕಿ ಹಚ್ಚಿ, ಕರಿಗಾಂವ್ ಪೊಲೀಸ್ ಹೊರಠಾಣೆಯ ಮೇಲೆ ದಾಳಿ ನಡೆಸಿದ್ದರಿಂದ ಪರಿಸ್ಥಿತಿ ಉಲ್ಬಣಗೊಂಡಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಗುಂಪನ್ನು ಚದುರಿಸಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಸಿಡಿಸಿದರು. ಈ ವೇಳೆ ಕೆಲವು ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.
ದಾಳಿಯ ಭಯದಿಂದ ಕರಿಗಾಂವ್‌ನ ಹಲವು ಗ್ರಾಮಸ್ಥರು ಪಲಾಯನ ಮಾಡಿದ ನಂತರ, ಕೊಕ್ರಜಾರ್ ಜಿಲ್ಲಾ ಆಡಳಿತವು ಕರಿಗಾಂವ್ ಪ್ರೌಢಶಾಲೆ ಮತ್ತು ಗ್ವಾಜನ್‌ಪುರಿ ಅಮನ್‌ಪಾರಾ ಪ್ರೌಢಶಾಲೆಯಲ್ಲಿ ಎರಡು ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 ರ ಸೆಕ್ಷನ್ 163 ರ ಅಡಿಯಲ್ಲಿ ಕೊಕ್ರಜಾರ್ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಗೃಹ ಇಲಾಖೆಯು ಕೊಕ್ರಜಾರ್ ಮತ್ತು ಚಿರಾಂಗ್ ಜಿಲ್ಲೆಗಳಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಿದೆ.
