ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಇಪ್ಪತ್ತನೆಯ ಲೇಖನ
ಸ್ವಾತಂತ್ರ್ಯ ಹೋರಾಟಗಾರ, ಪ್ರಖರ ಭಾಷಣಕಾರ, ಖ್ಯಾತ ವಕೀಲ, ಕಾರ್ಮಿಕ ಸಂಘಟಕ, ಸಮರ್ಥ ಆಡಳಿತಗಾರ ಮತ್ತು ಜನಪ್ರಿಯ ಸಂಸದರಾಗಿದ್ದರು ಪಿ. ಗೋವಿಂದ ಮೆನನ್
ಭಾರತ ಸ್ವತಂತ್ರಗೊಂಡ ನಂತರವೂ ರಾಜಪ್ರಭುತ್ವದಲ್ಲಿದ್ದ ತಿರುವಾಂಕೂರು-ಕೊಚ್ಚಿ (ಈಗಿನ ಕೇರಳ) ಸಂಸ್ಥಾನದ ಪ್ರಧಾನಿಯಾಗಿದ್ದ ಪನಂಬಿಳ್ಳಿ ಗೋವಿಂದ ಮೆನನ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು. ಜೊತೆಗೆ ಪ್ರಖರ ಭಾಷಣಕಾರ, ಖ್ಯಾತ ವಕೀಲ, ಕಾರ್ಮಿಕ ಸಂಘಟಕ, ಸಮರ್ಥ ಆಡಳಿತಗಾರ ಮತ್ತು ಉತ್ತಮ ಸಂಸದರಾಗಿದ್ದರು.
ಶಾಲಾ ವಿದ್ಯಾಭ್ಯಾಸದ ಕಾಲದಲ್ಲಿಯೇ ಅವರು ಸಾರ್ವಜನಿಕ ಭಾಷಣ ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. 1922 ರಲ್ಲಿ ರವೀಂದ್ರನಾಥ ಟಾಗೋರರು ಕೇರಳಕ್ಕೆ ಭೇಟಿ ನೀಡಿದ್ದರು. ಅವರು ಚಾಲಕ್ಕುಡಿ ದಾರಿಯಾಗಿ ಆಲುವಾಗೆ ಹೋಗುತ್ತಿದ್ದಾಗ ಮೆನನ್ ಮತ್ತು ಗೆಳೆಯರು ಟಾಗೋರರ ಭೇಟಿಗೆಂದು ಹೊರಟಿದ್ದರು. ಇದನ್ನು ಅರಿತ ಶಾಲಾ ಅಧ್ಯಾಪಕರು ಅವರಿಗೆ ಶಿಕ್ಷೆ ನೀಡಿದ್ದರು.
ಅಕ್ಟೋಬರ್ 1, 1908 ರಲ್ಲಿ ಕೇರಳದ ತ್ರಿಶೂರ್ ಜಿಲ್ಲೆಯ ಕಕ್ಕಾಡ್ ಎಂಬಲ್ಲಿ ಗೋವಿಂದ ಮೆನನ್ ಅವರ ಜನನ. ತ್ರಿಶೂರಿನ ಸೇಂಟ್ ಥಾಮಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ. ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಕೂಡ ಆ ಕಾಲದಲ್ಲಿಯೇ.
ನಂತರ ತಿರುಚ್ಚಿಯ ಸೇಂಟ್ ಜೋಸೆಫ್ ಕಾಲೇಜಿನಿಂದ ಭೌತಶಾಸ್ತ್ರದಲ್ಲಿ ಆನರ್ಸ್ ಪದವಿ ಪಡೆದುಕೊಂಡು ಮದ್ರಾಸಿನ ಕಾನೂನು ಕಾಲೇಜಿನಲ್ಲಿ ಕಾನೂನು ಅಧ್ಯಯನ ಮಾಡುತ್ತಾರೆ. ವ್ಯಾಸಂಗ ಮುಗಿಸಿದ ಮೇಲೆ ಕೆಳ ನ್ಯಾಯಾಲಯಗಳಲ್ಲಿ ಮತ್ತು ಕೇರಳದ ಉಚ್ಛ ನ್ಯಾಯಾಲಯದಲ್ಲಿಯೂ ಕೆಲಸ ಮಾಡುತ್ತಾರೆ.
ಸ್ವಾತಂತ್ರ್ಯ ಚಳವಳಿಯಲ್ಲಿ ವಹಿಸಿದ ಪಾತ್ರ
ವಿದ್ಯಾರ್ಥಿಯಾಗಿದ್ದ ಮೆನನ್ ರಾಜಕಾರಣದಲ್ಲಿ ಅದಾಗಲೇ ತೊಡಗಿಸಿಕೊಂಡಿದ್ದರು. ಕೇರಳದಲ್ಲಿ ನಡೆದ ಜಾತಿ ವಿರೋಧಿ ಹೋರಾಟವಾದ ವೈಕ್ಕಂ ಸತ್ಯಾಗ್ರಹದಲ್ಲಿ (1924-1925) ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಗುರುವಾಯೂರ್ ಸತ್ಯಾಗ್ರಹದಲ್ಲಿ (1931-1932) ಪಾಲ್ಗೊಂಡ ನಂತರ ಅವರು ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗುತ್ತಾರೆ.
ವೈಕಂ ಮತ್ತು ಗುರುವಾಯೂರ್ ಸತ್ಯಾಗ್ರಹಗಳು ರಾಜಪ್ರಭುತ್ವವಿದ್ದ ತಿರುವಾಂಕೂರು (ಇಂದಿನ ಕೇರಳ) ಸಂಸ್ಥಾನದಲ್ಲಿ ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯದ ವಿರುದ್ಧ ನಡೆದ ಅಹಿಂಸಾತ್ಮಕ ಚಳುವಳಿಗಳಾಗಿದ್ದವು. ಈ ಚಳುವಳಿಗಳು ಮುಖ್ಯವಾಗಿ ಕೆಳಜಾತಿ ಹಿಂದೂಗಳಿಗೆ ದೇವಾಲಯ ಪ್ರವೇಶದ ಹಕ್ಕುಗಳ ಮೇಲೆ ಕೇಂದ್ರೀಕರಿಸಿದ್ದವು.
ಸ್ವತಃ ಮಹಾತ್ಮಾ ಗಾಂಧಿಯವರು 1925 ರಲ್ಲಿ ವೈಕಂ ಸಂದರ್ಶಿಸಿದ್ದರು. ಕೊನೆಗೂ ತಿರುವಾಂಕೂರು ಸರಕಾರವು ಕೆಳಜಾತಿಗಳ ಜನರ ಬಳಕೆಗೆಂದು ವೈಕಂ ದೇವಸ್ಥಾನದ ಬಳಿ ಹೊಸ ರಸ್ತೆಯನ್ನು ನಿರ್ಮಿಸುತ್ತದೆ. ಆದರೆ ಆ ರಸ್ತೆ ಕೂಡ ವೈಕಂ ದೇವಸ್ಥಾನಕ್ಕಿಂತ ಬಹಳ ದೂರದಲ್ಲಿಯೇ ಇತ್ತು. ದೇವಸ್ಥಾನಕ್ಕೆ ಕೆಳಜಾತಿಗಳ ಪ್ರವೇಶಕ್ಕಿದ್ದ ನಿಷೇಧ ಹಾಗೆಯೇ ಮುಂದುವರಿಯಿತು.
ನಂತರ ಮಹಾತ್ಮಾ ಗಾಂಧೀಜಿಯವರ ಮಧ್ಯಪ್ರವೇಶ ನಡೆದು, ರಾಜಪ್ರತಿನಿಧಿಯಾಗಿದ್ದ ಸೇತು ಲಕ್ಷ್ಮಿ ಬಾಯಿ ಅವರೊಂದಿಗೆ ರಾಜಿ ಸಂಧಾನ ನಡೆಯುತ್ತದೆ. ಸತ್ಯಾಗ್ರಹದಲ್ಲಿ ಬಂಧಿಸಲ್ಪಟ್ಟಿದ್ದ ಎಲ್ಲರನ್ನೂ ಬಿಡುಗಡೆ ಮಾಡಿ ವೈಕಂ ಮಹಾದೇವ ದೇವಸ್ಥಾನಕ್ಕೆ ಹೋಗುವ ಸಾರ್ವಜನಿಕ ರಸ್ತೆಯನ್ನು ಎಲ್ಲ ಜಾತಿಯ ಜನರಿಗೂ ತೆರೆದು ಕೊಡಲಾಗುತ್ತದೆ. ಆದರೂ ಕೂಡ ಪೂರ್ವದ ರಸ್ತೆಯನ್ನು ಲಕ್ಷ್ಮಿ ಬಾಯಿ ನಿರಾಕರಿಸುತ್ತಾರೆ. ಇ.ವಿ. ರಾಮಸ್ವಾಮಿ ಪೆರಿಯಾರ್ ಸಹಿತ ಹಲವರು ಈ ಸಂಧಾನವನ್ನು ತೀಕ್ಷ್ಣವಾಗಿ ಟೀಕಿಸಿದ್ದರು.
1936 ರ ದೇವಾಲಯ ಪ್ರವೇಶ ಘೋಷಣೆಗೆ ಈ ಚಳುವಳಿಗಳು ಪ್ರಮುಖ ಕಾರಣಗಳಾಗಿದ್ದವು. ಆ ಮೂಲಕ ಎಲ್ಲ ಹಿಂದೂಗಳಿಗೂ ತಿರುವಾಂಕೂರು ಸಂಸ್ಥಾನದಲ್ಲಿ ದೇವಾಲಯ ಪ್ರವೇಶಕ್ಕೆ ಅವಕಾಶ ದೊರೆಯುತ್ತದೆ. ಇದು ಕೇರಳದಲ್ಲಿ ಜಾತಿ ವ್ಯವಸ್ಥೆಯನ್ನು ಪ್ರಶ್ನಿಸುವಲ್ಲಿ ಮತ್ತು ಸಾಮಾಜಿಕ ನ್ಯಾಯವನ್ನು ಬೆಂಬಲಿಸುವಲ್ಲಿ ಮಹತ್ವದ ಹೆಜ್ಜೆಯಾಗಿತ್ತು.
ಮೆನನ್ ಅವರು ಕೊಚ್ಚಿ ರಾಜ್ಯ ಪ್ರಜಾಮಂಡಲಂ ಎಂಬ ಸಂಘಟನೆಯ ಪ್ರವರ್ತಕರಲ್ಲಿ ಒಬ್ಬರಾಗಿದ್ದರು. ಅದು ಜವಾಬ್ದಾರಿಯುತ ಸರಕಾರ ಸ್ಥಾಪಿಸುವ ಉದ್ಧೇಶವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದ ಸಂಘಟನೆಯಾಗಿತ್ತು. ಮೆನನ್ ಅದರ ಪ್ರಮುಖ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು. ಮೆನನ್ ಅವರು ಕೇರಳ ನಾಸ್ತಿಕ ಸಂಘದ ಮೊದಲ ಖಜಾಂಜಿಯೂ ಆಗಿದ್ದರು. ರಾಜಕಾರಣದಲ್ಲಿ ಸಕ್ರಿಯರಾಗಿದ್ದ ಅವರು ನಂತರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರುತ್ತಾರೆ.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಗಳಲ್ಲಿ ಮೆನನ್ ಸದಸ್ಯರಾಗಿ ಕೆಲಸ ಮಾಡಿದ್ದರು. ವಿದೇಶಿ ಬಟ್ಟೆಗಳ ಬಹಿಷ್ಕಾರ ಸಹಿತ ಹಲವು ಚಳುವಳಿಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದರು.
ಸಂಸದರಾಗಿ
1935 ರಲ್ಲಿ ತನ್ನ 27 ನೇ ವಯಸ್ಸಿನಲ್ಲಿ ಕೊಚ್ಚಿ ಶಾಸನಸಭೆಗೆ ಆಯ್ಕೆಯಾಗುವ ಮೂಲಕ ಗೋವಿಂದ ಮೆನನ್ ಅವರ ರಾಜಕೀಯ ಬದುಕಿಗೆ ಬಹಳ ದೊಡ್ಡ ತಿರುವು ದೊರೆಯುತ್ತದೆ. 1938 ರಲ್ಲಿ ಅವರು ಆ ಸ್ಥಾನಕ್ಕೆ ಮರು ಆಯ್ಕೆಯಾಗುತ್ತಾರೆ. ಆದರೆ 1942 ರಲ್ಲಿ ಬ್ರಿಟಿಷ್ ಕೊಚ್ಚಿ ಸರಕಾರದ ದಮನಕಾರಿ ನೀತಿಗಳನ್ನು ಪ್ರತಿಭಟಿಸಿ ಶಾಸನಸಭೆಗೆ ರಾಜೀನಾಮೆ ನೀಡುತ್ತಾರೆ. ಅದೇ ವರ್ಷ ಕ್ವಿಟ್ ಇಂಡಿಯಾ ಹೋರಾಟಕ್ಕೆ ಧುಮುಕುತ್ತಾರೆ. ಅದಕ್ಕಾಗಿ ಅವರನ್ನು ರಕ್ಷಣಾ ನಿಯಮಗಳ ಅಡಿಯಲ್ಲಿ ಬಂಧಿಸಿ ವಿಯ್ಯೂರು ಕೇಂದ್ರ ಕಾರಾಗೃಹದಲ್ಲಿ ಹತ್ತು ತಿಂಗಳ ಕಾಲ ಇರಿಸಲಾಗುತ್ತದೆ.
1946 ರಲ್ಲಿ ಮೆನನ್ ಮತ್ತೆ ಕೊಚ್ಚಿ ವಿಧಾನಸಭೆಗೆ ಆಯ್ಕೆಯಾಗುತ್ತಾರೆ. ಈ ಸಲ ಎರ್ನಾಕುಲಂ ಕ್ಷೇತ್ರದಿಂದ ಪ್ರಜಾಮಂಡಲಂ ಅಭ್ಯರ್ಥಿಯಾಗಿ ಗೆಲ್ಲುತ್ತಾರೆ. ಸೆಪ್ಟೆಂಬರ್ 1946 ರಲ್ಲಿ ಅವರನ್ನು ಆಹಾರ ಸಚಿವರನ್ನಾಗಿ ನೇಮಿಸಲಾಗುತ್ತದೆ.
ಭಾರತ ಸ್ವತಂತ್ರಗೊಳ್ಳುವುದರೊಂದಿಗೆ, 1947 ಆಗಸ್ಟ್ ತಿಂಗಳಲ್ಲಿ ರಾಜಪ್ರಭುತ್ವದಲ್ಲಿದ್ದ ತಿರುವಾಂಕೂರು-ಕೊಚ್ಚಿ ಸಂಸ್ಥಾನದ ಮೊದಲ ಪ್ರಧಾನಮಂತ್ರಿಯಾಗಿ ಮೆನನ್ ಅಧಿಕಾರಕ್ಕೇರುತ್ತಾರೆ. ಆದರೆ, 17 ಅಕ್ಟೋಬರ್ 1947 ರಂದು ಪೊಲೀಸರು ನಡೆಸಿದ ಲಾಠಿ ಚಾರ್ಜ್ ಕಾರಣದಿಂದ ನೈತಿಕ ಹೊಣೆ ಹೊತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ.
ಈ ನಡುವೆ, ಮೆನನ್ ಅವರು ಕೊಚ್ಚಿ ರಾಜಪ್ರಭುತ್ವದ ಪ್ರತಿನಿಧಿಯಾಗಿ ಭಾರತದ ಸಂವಿಧಾನ ಸಭೆಗೆ ಅದಾಗಲೇ ಆಯ್ಕೆಯಾಗಿದ್ದರು. ಅಲ್ಲಿ ಅವರು ನಡೆಸುವ ಕೆಲವು ಅಮೂಲ್ಯ ಕೆಲಸಗಳ ಕಾರಣದಿಂದ ರಾಷ್ಟ್ರೀಯ ರಾಜಕಾರಣದಲ್ಲಿ ಹೆಸರು ಗಳಿಸುತ್ತಾರೆ. ಶಾಸನಸಭೆಯ ಸ್ಟೀರಿಂಗ್ ಕಮಿಟಿಯ ಸದಸ್ಯರಾಗಿಯೂ ಮೆನನ್ ಕೆಲಸ ಮಾಡುತ್ತಾರೆ.
1948 ರಲ್ಲಿ ಅವರು ಪುನಹ ಕೊಚ್ಚಿ ವಿಧಾನಸಭೆಗೆ ಆಯ್ಕೆಯಾಗುತ್ತಾರೆ. ಇ. ಇಕ್ಕಂಡ ವಾರಿಯರ್ ಅವರ ಸಂಪುಟದಲ್ಲಿ ಸಚಿವ ಸಂಪುಟಕ್ಕೂ ಸೇರ್ಪಡೆಗೊಳ್ಳುತ್ತಾರೆ. ಕೊಚ್ಚಿ ಮತ್ತು ತಿರುವಾಂಕೂರು ಸಂಸ್ಥಾನಗಳ ಏಕೀಕರಣಕ್ಕಾಗಿ ರೂಪಿಸಿದ್ದ ಸಮಿತಿಯ ಸದಸ್ಯರಾಗಿ ಕೂಡ ಅವರು ಸೇವೆ ಸಲ್ಲಿಸುತ್ತಾರೆ.
1949 ರಲ್ಲಿ ತಿರುವಾಂಕೂರು-ಕೊಚ್ಚಿ ರಾಜ್ಯದ ಉದಯವಾಗುತ್ತದೆ. ಅದರಲ್ಲಿ ಟಿ.ಕೆ. ನಾರಾಯಣ ಪಿಳ್ಳೆ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಕೊಚ್ಚಿಯ ಆಹಾರ ಮತ್ತು ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸುತ್ತಾರೆ.
1950-52 ರ ಅವಧಿಯಲ್ಲಿ ತಾತ್ಕಾಲಿಕ ಪಾರ್ಲಿಮೆಂಟಿನಲ್ಲಿ ಚುನಾಯಿತ ಸದಸ್ಯರಾಗಿದ್ದರು ಗೋವಿಂದ ಮೆನನ್. 1952 ರಲ್ಲಿ ವಯಸ್ಕರ ಮತದಾನದ ಮೂಲಕ ನಡೆದ ಮೊಟ್ಟ ಮೊದಲ ಚುನಾವಣೆಯಲ್ಲಿ ತಿರುವಾಂಕೂರು-ಕೊಚ್ಚಿ ಶಾಸನಸಭೆಗೆ ಅವರು ಪುನಹ ಚುನಾಯಿತರಾಗುತ್ತಾರೆ. ಆನಪರಂಬಿಲ್ ಜೋಸೆಫ್ ಜಾನ್ ಅವರ ಸಚಿವ ಸಂಪುಟದಲ್ಲಿ ಹಣಕಾಸು ಸಚಿವರೂ ಆಗುತ್ತಾರೆ.
ತಿರುವಾಂಕೂರು ಮತ್ತು ಕೊಚ್ಚಿ ಒಕ್ಕೂಟವಾಗಿ, 1954 ರ ಸಾರ್ವತ್ರಿಕ ಚುನಾವಣೆಯ ನಂತರ ಮೆನನ್ ಅವರು ಕೇರಳ ಅಸೆಂಬ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗುತ್ತಾರೆ. 1955-56 ರಲ್ಲಿ ಒಂದು ವರ್ಷದ ಅವಧಿಗೆ ಅವರು ತಿರುವಾಂಕೂರು-ಕೊಚ್ಚಿ ರಾಜ್ಯದ ಮುಖ್ಯಮಂತ್ರಿಯಾಗಿಯೂ ಆಯ್ಕೆಯಾಗುತ್ತಾರೆ.
1957 ರಲ್ಲಿ ರಾಜ್ಯಗಳ ಮರುವಿಂಗಡನೆಯ ನಂತರ ಕೇರಳ ವಿಧಾನಸಭೆಗೆ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಗೋವಿಂದ ಮೆನನ್ ಸೋಲುತ್ತಾರೆ. ಆದರೆ, 1962 ರಲ್ಲಿ ಕೇರಳದ ಮುಕುಂದಪುರಂ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗುತ್ತಾರೆ. 1970 ರಲ್ಲಿ ತನ್ನ ಮರಣದವರೆಗೂ ಅವರು ಆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಜನವರಿ 24, 1966 ರಂದು ಇಂದಿರಾ ಗಾಂಧಿಯವರ ಸರಕಾರದಲ್ಲಿ ಆಹಾರ, ಕೃಷಿ, ಸಮುದಾಯ ಅಭಿವೃದ್ಧಿ ಮತ್ತು ಸಹಕಾರ ಖಾತೆಗಳ ರಾಜ್ಯ ಸಚಿವರಾಗಿ ನೇಮಿಸಲ್ಪಡುತ್ತಾರೆ. 1967 ರ ಸಾರ್ವತ್ರಿಕ ಚುನಾವಣೆಯಲ್ಲಿ ಕೇರಳದಿಂದ ಮರು ಆಯ್ಕೆಯಾಗಿದ್ದ ಏಕೈಕ ಕಾಂಗ್ರೆಸ್ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಮೆನನ್ ಪಾತ್ರರಾಗಿದ್ದರು.
ಮಾರ್ಚ್ 13, 1967 ರಂದು ಅವರನ್ನು ಕಾನೂನು ಸಚಿವರನ್ನಾಗಿ ನೇಮಿಸಲಾಗುತ್ತದೆ. ಆಗಸ್ಟ್ 22, 1967 ರಂದು ಕಾನೂನು ಸಚಿವಾಲಯದ ಜೊತೆಗೆ ಸಮಾಜ ಕಲ್ಯಾಣ ಸಚಿವಾಲಯದ ಜವಾಬ್ದಾರಿಯನ್ನೂ ನೀಡಲಾಗುತ್ತದೆ. ಅದರ ನಂತರ ಅವರನ್ನು ಕಾನೂನು ಮತ್ತು ರೈಲ್ವೇ ಸಂಪುಟ ಸಚಿವರನ್ನಾಗಿ ನೇಮಿಸಲಾಗುತ್ತದೆ (1969-1970).
ಸಾರ್ವಜನಿಕ ವ್ಯವಹಾರಗಳ ವಿಷಯದಲ್ಲಿ ಮೆನನ್ ಹಲವು ತರದ ಪಾತ್ರಗಳನ್ನು ನಿರ್ವಹಿಸಿದ್ದರು. ಬಡಬಗ್ಗರ ಏಳಿಗೆಗಾಗಿ ಕೆಲಸ ಮಾಡಿದ್ದರು. ಶಿಕ್ಷಕರನ್ನು ಮೇಲೆತ್ತುವ ಕೆಲಸ ಮಾಡಿದ್ದರು. 1961 ರ ಮೂರನೇ ಹಣಕಾಸು ಆಯೋಗದ ಸದಸ್ಯರಾಗಿದ್ದರು. ಕೇರಳದ ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರನ್ ಅವರಿಗೆ ರಾಜಕೀಯ ಸಲಹೆಗಾರರೂ ಆಗಿದ್ದರು.
1969 ರಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಯಾಗುವಾಗ ಮೆನನ್ ಇಂದಿರಾ ಗಾಂಧಿಯವರ ಪರ ವಹಿಸಿದ್ದರು. ಮೆನನ್ ತನ್ನ ಕೊನೆಗಾಲದ ತನಕವೂ ಕಾಂಗ್ರೆಸ್ಸಿಗರೇ ಆಗಿದ್ದರು. ಮೆನನ್ ಅವರು 23 ಮೇ 1970 ರಂದು ತನ್ನ 62 ನೇ ವಯಸ್ಸಿನಲ್ಲಿ ನವದೆಹಲಿಯಲ್ಲಿ ಹಠಾತ್ತನೆ ನಿಧನರಾದರು.
2006 ರಲ್ಲಿ ಪನಂಬಿಳ್ಳಿ ಗೋವಿಂದ ಮೆನನ್ ಅವರ ಜನ್ಮಶತಮಾನೋತ್ಸವ ಆಚರಣೆಯನ್ನು ಅಂದಿನ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಉದ್ಘಾಟಿಸಿದ್ದರು. ಮೆನನ್ ಅವರ ಸ್ಮರಣಾರ್ಥ ಚಾಲಕುಡಿಯಲ್ಲಿ ಪನಂಬಿಳ್ಳಿ ಮೆಮೊರಿಯಲ್ ಸರಕಾರಿ ಕಾಲೇಜನ್ನು ನಿರ್ಮಿಸಲಾಗಿದೆ. ಲೋಕಸಭಾ ಸಚಿವಾಲಯವು ದೇಶಕ್ಕೆ ಅವರು ನೀಡಿದ ಕೊಡುಗೆಗಳನ್ನು ಕುರಿತು 1990 ರಲ್ಲಿ ಒಂದು ಪ್ರಬಂಧವನ್ನೂ ಪ್ರಕಟಿಸಿದೆ.
ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.
