ಇಂಫಾಲ್ : ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ಬೆಂಗಾವಲು ಪಡೆಯ (convoy) ಮೇಲೆ ನಡೆದ ಆಕಸ್ಮಿಕ ದಾಳಿಯಲ್ಲಿ ಇಬ್ಬರು ಯೋಧರು ಮೃತಪಟ್ಟಿದ್ದು, ಐವರಿಗೆ ಗಾಯಗಳಾಗಿವೆ.
ರಾಜಧಾನಿ ಇಂಫಾಲ್‌ನಿಂದ ಬಿಷ್ಣುಪುರಕ್ಕೆ ತೆರಳುತ್ತಿದ್ದ 33ನೇ ಅಸ್ಸಾಂ ರೈಫಲ್ಸ್‌ನ ಯೋಧರ ಮೇಲೆ ನಂಬೋಲ್ ಸಕಲ್ ಲಿಕಾಯ್ ಬಳಿ ಶುಕ್ರವಾರ ಸಂಜೆ ಓರ್ವ ಅಪರಿಚಿತ ವ್ಯಕ್ತಿ ಹಠಾತ್ ದಾಳಿ ನಡೆಸಿ ಗುಂಡು ಹಾರಿಸಿದ್ದಾನೆ.
ಈ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ದಾಳಿಯನ್ನು ಮಣಿಪುರದ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ತೀವ್ರವಾಗಿ ಖಂಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು, ಸರ್ಕಾರವು ಇಂತಹ ಕ್ರೂರ ಹಿಂಸಾತ್ಮಕ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿರೇನ್ ಸಿಂಗ್ ಸಹ ಈ ದಾಳಿಯನ್ನು ಖಂಡಿಸಿದ್ದು, ಇದು ರಾಜ್ಯಕ್ಕೆ ಒಂದು ಕ್ರೂರ ಹೊಡೆತ ಎಂದು ಬಣ್ಣಿಸಿದ್ದಾರೆ.