ಗುವಾಹಟಿ: ಅಸ್ಸಾಂನ ಪ್ರಖ್ಯಾತ ಗಾಯಕ ಜುಬಿನ್ ಗಾರ್ಗ್ (52) ಅವರು ಶುಕ್ರವಾರ ಸಿಂಗಾಪುರದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಘಟನೆ ನಡೆದ ಸಮಯದಲ್ಲಿ ಅವರು 17 ಜನರೊಂದಿಗೆ ವಿಹಾರ ನೌಕೆಯಲ್ಲಿ (ಕ್ರೂಸ್ ಶಿಪ್) ಸಮುದ್ರ ಪ್ರಯಾಣ ಮಾಡುತ್ತಿದ್ದರು ಎಂದು ಸಿಂಗಾಪುರದಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಜುಬಿನ್ ಅವರು ಲೈಫ್ ಜಾಕೆಟ್ ಧರಿಸದೆ ಸಮುದ್ರದಲ್ಲಿ ಈಜಲು ಹೋಗಿದ್ದರು. ಆ ವೇಳೆ ಅವರು ಅಪಘಾತಕ್ಕೆ ಈಡಾದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಆರಂಭದಲ್ಲಿ, ಜುಬಿನ್ ಅವರು ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ಮಾಡುತ್ತಿದ್ದಾಗ ಮೃತಪಟ್ಟರು ಎಂದು ಸುದ್ದಿ ಹರಡಿತ್ತು. ಆದರೆ, ನಂತರ ನಾರ್ತ್ ಈಸ್ಟ್ ಫೆಸ್ಟಿವಲ್ ಸಂಘಟಕರು ಆ ವದಂತಿಗಳನ್ನು ಅಲ್ಲಗಳೆದರು. ವಿಹಾರ ನೌಕೆಯಲ್ಲಿ ಅಪಘಾತಕ್ಕೊಳಗಾದ ಜುಬಿನ್ ಅವರನ್ನು ಸಿಂಗಾಪುರ್ ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅಲ್ಲಿ ಅವರು ಮೃತಪಟ್ಟರು ಎಂದು ಸಂಘಟಕರು ಸ್ಪಷ್ಟಪಡಿಸಿದ್ದಾರೆ.
ನಾರ್ತ್ ಈಸ್ಟ್ ಫೆಸ್ಟಿವಲ್‌ನಲ್ಲಿ ಭಾಗವಹಿಸಲು ಜುಬಿನ್ ಗಾರ್ಗ್ ಅವರು ಬುಧವಾರ ಸಿಂಗಾಪುರಕ್ಕೆ ತೆರಳಿದ್ದರು.
‘ಯಾ ಅಲಿ__…’ ಎಂಬ ಹಿಂದಿ ಹಾಡಿನ ಮೂಲಕ ಅವರು ದೇಶಾದ್ಯಂತ ಜನಪ್ರಿಯರಾದರು. ಅವರು ಗದರ್, ದಿಲ್ ಸೇ, ಡೋಲಿ ಸಜಾಕೆ ರಖನಾ, ಫಿಜಾ, ಕಾಂಟೆ, ಜಿಂದಗಿ ಸೇರಿದಂತೆ ಹಲವು ಚಿತ್ರಗಳಿಗೆ ಧ್ವನಿ ನೀಡಿದ್ದರು. ಅಲ್ಲದೆ, ಹಲವಾರು ಚಲನಚಿತ್ರಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ ಮತ್ತು ಕೆಲವು ಸಿನಿಮಾಗಳನ್ನು ನಿರ್ದೇಶಿಸಿ, ಅವುಗಳಲ್ಲಿ ನಟಿಸಿದ್ದಾರೆ ಕೂಡ.
ಜುಬಿನ್ ಗಾರ್ಗ್ ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್‌ನ ಅಗ್ರ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.