ದೆಹಲಿ: ಚುನಾವಣಾ ಆಯೋಗವು (EC) ಒಬ್ಬ ವಾಚ್‌ಮ್ಯಾನ್‌ನಂತೆ (ಕಾವಲುಗಾರ) ನಸುಕಿನ ಜಾವ ಎದ್ದು, ಕಳ್ಳತನವನ್ನು ನೋಡಿ ಆ ಕಳ್ಳರನ್ನೇ ರಕ್ಷಿಸಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಗಿ ಟೀಕಿಸಿದ್ದಾರೆ.
ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿರುವವರನ್ನು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಕ್ಷಿಸುತ್ತಿದ್ದಾರೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದ ಅವರು, ಈ ಕುರಿತು ಮಾಡಿದ ಸಣ್ಣ ವಿಡಿಯೋವನ್ನು ಶುಕ್ರವಾರ ‘ಎಕ್ಸ್’ (X) ನಲ್ಲಿ ಹಂಚಿಕೊಂಡು ಹೊಸ ಪೋಸ್ಟ್ ಹಾಕಿದ್ದಾರೆ.
“ನಸುಕಿನ ನಾಲ್ಕು ಗಂಟೆಗೆ ಏಳುವುದು, 36 ಸೆಕೆಂಡುಗಳಲ್ಲಿ ಇಬ್ಬರು ಮತದಾರರನ್ನು ತೆಗೆದುಹಾಕುವುದು. ಮತ್ತೆ ಮಲಗುವುದು – ಈ ರೀತಿಯಾಗಿ ಮತಗಳ ಕಳ್ಳತನ ನಡೆಯುತ್ತಿದೆ” ಎಂದು ಆ ಪೋಸ್ಟ್‌ನಲ್ಲಿ ಅವರು ಉಲ್ಲೇಖಿಸಿದ್ದಾರೆ. ಅವರು ಚುನಾವಣಾ ಆಯೋಗವನ್ನು ‘ಚುನಾವಣಾ ಚೌಕಿದಾರ್’ (ಕಾವಲುಗಾರ) ಎಂದು ಕರೆದಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪ್ರತಿಕ್ರಿಯೆ
ರಾಹುಲ್ ಗಾಂಧಿಯವರು ಚುನಾವಣಾ ಆಯೋಗದ ಮೇಲೆ ಆರೋಪಗಳನ್ನು ಮಾಡುವ ಮೂಲಕ ಉದ್ದೇಶಪೂರ್ವಕವಾಗಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ರವಶಂಕರ್ ಪ್ರಸಾದ್ ಆರೋಪಿಸಿದ್ದಾರೆ. ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಈ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ರಾಹುಲ್ ಅವರು ‘ಅರ್ಬನ್ ನಕ್ಸಲೈಟ್’ನಂತೆ ಮಾತನಾಡುತ್ತಿದ್ದಾರೆ ಮತ್ತು ಅವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವಿಸ್ ಟೀಕಿಸಿದರು.
ಪೋಲೀಸರಿಗೆ ದೂರು ನೀಡಲು ಮುಂದಾದ ನಾಗರಿಕ
ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿಯವರು ತಮ್ಮ ಫೋನ್ ಸಂಖ್ಯೆಯನ್ನು ಹೇಳಿದ್ದರಿಂದ ನೂರಾರು ಕರೆಗಳು ಬರುತ್ತಿವೆ ಎಂದು ಪ್ರಯಾಗ್‌ರಾಜ್‌ನ ಅಂಜನಿ ಮಿಶ್ರಾ ಎಂಬುವವರು ತಿಳಿಸಿದ್ದಾರೆ. “ಗುರುವಾರ ಸಂಜೆಯಿಂದ 300 ಕ್ಕೂ ಹೆಚ್ಚು ಕರೆಗಳು ಬಂದಿವೆ. ನನ್ನ ತಾಳ್ಮೆ ಕೆಟ್ಟುಹೋಗಿದೆ. ಈ ಸಂಖ್ಯೆಯನ್ನು ನಾನು 15 ವರ್ಷಗಳಿಂದ ಬಳಸುತ್ತಿದ್ದೇನೆ. ಹಾಗಾಗಿ, ರಾಹುಲ್ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ” ಎಂದು ಅವರು ಹೇಳಿದ್ದಾರೆ.