ಸೌಜನ್ಯ ತಾಯಿ ಕುಸುಮಾವತಿ ಅವರು ಧರ್ಮಸ್ಥಳ ಪ್ರಕರಣದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಧರ್ಮಸ್ಥಳ ನಿವಾಸಿ ಸಿ.ಕೆ.ಚಂದ್ರು ಎಂಬವರು ಎಸ್.ಐ.ಟಿ.ಗೆ ದೂರು ನೀಡಿದ್ದಾರೆ. ಇತ್ತೀಚೆಗೆ ಕುಸುಮಾವತಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಧರ್ಮಸ್ಥಳ ಹೆಗ್ಗಡೆ ಕುಟುಂಬವನ್ನು ಇಕ್ಕಟ್ಟಿಗೆ ಸಿಕ್ಕಿಸುವ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
“ಸೌಜನ್ಯ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಧರ್ಮಸ್ಥಳದ ಧೀರಜ್ ಜೈನ್, ಮಲಿಕ್ ಜೈನ್ ಮತ್ತು ಉದಯ್ ಜೈನ್ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಯಿತು. ಈ ವ್ಯಕ್ತಿಗಳು ತಮ್ಮ ಹೇಳಿಕೆಗಳನ್ನು ತನಿಖಾಧಿಕಾರಿಗೆ ನೀಡಿದ್ದರು, ಮತ್ತು ಸೂಕ್ತ ಪರಿಗಣನೆಯ ನಂತರ, ಗೌರವಾನ್ವಿತ ನ್ಯಾಯಾಧೀಶರು ಅವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಆದರೂ ಅವರನ್ನು ಮತ್ತೆ ತನಿಖೆಯ ಒಳಗೆ ತರುವ ಪ್ರಯತ್ನ ಕುಸುಮಾವತಿ ಮಾಡಿದ್ದಾರೆ ಎಂದು ಎಸ್ಐಟಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸೌಜನ್ಯ ಪ್ರಕರಣದಲ್ಲಿ ಅವರನ್ನು ಮುಕ್ತಗೊಳಿಸಲಾಯಿತು. ನ್ಯಾಯಾಂಗ ತೀರ್ಪಿನ ಹೊರತಾಗಿಯೂ ಕುಸುಮಾವತಿ ಇತ್ತೀಚಿನ ದಿನಗಳಲ್ಲಿ ವಿವಿಧ ಯೂಟ್ಯೂಬ್ ಚಾನೆಲ್‌ಗಳ ಮುಂದೆ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಮಾರ್ಚ್13 -2025 ರಂದು, ಯೂಟ್ಯೂಬ್ ಒಂದರ ವೀಡಿಯೊದಲ್ಲಿ ಅವರು ತಮ್ಮ ಪತಿ ದಿ. ಚಂದಪ್ಪ ಗೌಡ ಅವರ ಸಾವಿನ ಬಗ್ಗೆ ಆಘಾತಕಾರಿ ಹೇಳಿಕೆಗಳನ್ನು ನೀಡಿ, ಅವರನ್ನು “ಗ್ಲೋ ಪಾಯ್ಸನ್” ನಿಂದ ಕೊಲ್ಲಲಾಗಿದೆ ಎಂದು ಆರೋಪಿಸಿದರು ಎಂದು ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.
ಸಿಕೆ ಚಂದ್ರು ಅವರು ನೀಡಿದ ದೂರಿನಲ್ಲಿ ಇನ್ನಷ್ಟು ಅಂಶಗಳನ್ನು ಒಳಗೊಂಡಂತೆ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.