Wednesday, June 19, 2024

ಸತ್ಯ | ನ್ಯಾಯ |ಧರ್ಮ

ಅಸ್ಸಾಮಿನಲ್ಲೊಬ್ಬರು ಮಂಗಳೂರಿನ ಗಾಂಧೀವಾದಿ

ಅಸ್ಸಾಮಿನ ಜನರು ಭಂಡಾರಿಯವರಲ್ಲಿ ಓರ್ವ ಸಂತನನ್ನು ಕಂಡಿದ್ದಾರೆ. ಗಾಂಧಿಯ ಕರೆಗೆ ಓಗೊಟ್ಟು ಅಸ್ಸಾಮಿಗೆ ಧಾವಿಸಿ ತನ್ನ ಜೀವನದ ಬಹುತೇಕ ಕಾಲವನ್ನು ಜನಸೇವೆಗೆ ಮೀಸಲಿಟ್ಟ ಮಹಾ ಗಾಂಧೀವಾದಿ ಬೈಲು ಕೋಚಣ್ಣ ಭಂಡಾರಿಯವರು ಕರಾವಳಿಯ ಹೆಮ್ಮೆ.

ಅಸ್ಸಾಮಿನ ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕ ಮತ್ತು ಗಾಂಧಿ ಚಿಂತನೆಯ ಪ್ರಬಲ ಪ್ರತಿಪಾದಕರಲ್ಲಿ ‘ಬಿ.ಕೆ ಭಂಡಾರಿ’ಯವರ ಓರ್ವರು. ನಾನು ಈಶಾನ್ಯ ಭಾರತದ ಪ್ರವಾಸದಲ್ಲಿದ್ದಾಗ ಗುವಾಹಟಿಯ ಕಸ್ತೂರ್ಬಾ ಗಾಂಧಿ ಆಶ್ರಮದಲ್ಲಿ ಉಳಿದುಕೊಂಡಿದ್ದೆ. ಆ ಆಶ್ರಮದ ಗೋಡೆಯ ಮೇಲೆ ಅಸ್ಸಾಮಿನ ಮಹನೀಯರ ಭಾವಚಿತ್ರಗಳ ಮಧ್ಯೆ ಬಿ ಕೆ ಭಂಡಾರಿಯವರ ಚಿತ್ರವೂ ಇತ್ತು. ಕುತೂಹಲದಿಂದ ಅವರೆಲ್ಲರ ಬಗ್ಗೆ ಆಶ್ರಮವಾಸಿಗಳಲ್ಲಿ ಕೇಳುವಾಗ ಬಿ ಕೋಚಣ್ಣ ಭಂಡಾರಿಯವರ ಹೆಸರು ನನ್ನ ಕುತೂಹಲವನ್ನು ಕೆರಳಿಸಿತು. ಇದಂತು ಅಪ್ಪಟ ಕರಾವಳಿಯ ಬಂಟ ಸಮುದಾಯದ ಹೆಸರು !

ಆಶ್ರಮದಲ್ಲಿ ನಡೆದ ಕಾರ್ಯಕ್ರಮಕ್ಕೆ ಬಿ ಕೆ ಭಂಡಾರಿಯವರ ಮಗಳು ನಯನ್ ಭಂಡಾರಿ ಶರ್ಮ ಬಂದಿದ್ದರು. ಇವರು ಅಸ್ಸಾಮಿನ ಲೋಕೋಪಯೋಗಿ ಇಲಾಖೆಯಲ್ಲಿ ಮುಖ್ಯ ಇಂಜಿನೀಯರ್ ಆಗಿ ನಿವೃತ್ತಿ ಹೊಂದಿದವರು. ಕಾರ್ಯಕ್ರಮದಲ್ಲಿ ಮಂಗಳೂರಿನ ನಾನು ಇದ್ದದ್ದನ್ನು ಅರಿತ ಅವರು ತಮ್ಮ ತಂದೆ ಮಂಗಳೂರು ಸಮೀಪದವರು, ಮಹಾತ್ಮ ಗಾಂದಿಯವರು ಮಂಗಳೂರಿಗೆ ಬಂದಿದ್ದಾಗ ಅವರೊಂದಿಗೆ ಅಸ್ಸಾಮಿಗೆ ತಮ್ಮ ಪತ್ನಿಯೊಂದಿಗೆ ಬಂದು ಇಲ್ಲಿಯೇ ನೆಲೆಸಿದರು ಎಂದರು. ಮಂಗಳೂರಿನ ಬಜ್ಪೆಯ ಸಮೀಪದ ಬೈಲು ಕೋಚಣ್ಣ ಭಂಡಾರಿಯವರು ಅಸ್ಸಾಮಿನ ಓರ್ವ ರಾಷ್ಟ್ರೀಯ ಚಳುವಳಿಯ ಹೋರಾಟಗಾರ!

ಮಹಾತ್ಮ ಗಾಂಧೀಜಿಯವರು ಮಂಗಳೂರಿಗೆ ಮೂರು ಬಾರಿ ಬೇಟಿ ನೀಡಿದ್ದಾರೆ. 1920ರಲ್ಲಿ ಅಸಹಕಾರ ಚಳುವಳಿಯನ್ನು ಆರಂಭಿಸಿ ಅದರೊಂದಿಗೆ ಖಿಲಾಫತ್ ಚಳುವಳಿಗೆ ಭಾರತೀಯರ ಬೆಂಬಲ ಪಡೆಯಲು ಆಲಿ ಸಹೋದರರೊಂದಿಗೆ ರಾಷ್ಟ್ರವ್ಯಾಪಿ ಖಿಲಾಫತ್ ಪ್ರವಾಸ ಕೈಗೊಂಡು 19 ನೇ ಅಗಸ್ಟ್ 1920 ಕೇಂದ್ರ ಮೈದಾನದಲ್ಲಿ ಸಾರ್ವಜನಿಕ ಭಾಷಣ ಮಾಡಿದ್ದರು. ಸ್ವದೇಶಿ ಖಾದಿಯ ಪ್ರಚಾರ ಮಾಡುತ್ತಾ 26ನೇ ಅಕ್ಟೋಬರ್ 1927ರಂದು ಮಂಗಳೂರಿನಲ್ಲಿ ಜನತೆಯನ್ನು ಉದ್ಧೇಶಿಸಿ ಮಾತನಾಡಿದ್ದರು. 1933-34ರಲ್ಲಿ ಗಾಂಧೀಜಿಯವರ ಅಸ್ಪøಶ್ಯತೆಯ ವಿರುದ್ಧ ಅರಿವು ಮೂಡಿಸಲು ದೇಶಪ್ರವಾಸ ಮಾಡಿದಾಗ ಅವರು ಮಂಗಳೂರಿಗೆ ಮೂರನೇಯ ಭೇಟಿ ನೀಡಿದ್ದರು. 24ನೇ ಫೆಬ್ರವರಿ 1934ರಂದು ಮಡಿಕೇರಿಯಿಂದ ಸಂಪಾಜೆ, ಸುಳ್ಯ ಮೂಲಕ ಪುತ್ತೂರನ್ನು ತಲುಪಿ ಸಾರ್ವಜನಿಕ ಭಾಷಣ ಮಾಡಿದ್ದರು. ಅಲ್ಲಿನ ಹರಿಜನಕೇರಿಗೆ ಭೇಟಿ ನೀಡಿದ್ದರು. ಅಲ್ಲಿಂದ ಮಂಗಳೂರಿಗೆ ಬಂದು ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈ ಮೂರು ಭೇಟಿಗಳು ಕರಾವಳಿಯಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೆಚ್ಚಿಸಿದವು. ಅನೇಕ ತರುಣರು ರಾಷ್ಟ್ರೀಯ ಚಳುವಳಿಗೆ ಧುಮುಕಿದರು. ಅಂತ ಮಹನೀಯರಲ್ಲಿ ಬೈಲು ಕೋಚಣ್ಣ ಭಂಡಾರಿ ಓರ್ವರು.

ಬೈಲು ಕೋಚಣ್ಣ ಭಂಡಾರಿಯವರು 1935ರಲ್ಲಿ ಮಂಗಳೂರಿನ ಬಜ್ಪೆಯಲ್ಲಿ ವಾಸಿಸುತ್ತಿದ್ದರೆಂದು ಶಿವರಾಮ ಕಾರಂತರು ಹೇಳುತ್ತಾರೆ. ಇವರ ಪತ್ನಿ ಸಾವಿತ್ರಿಯವರು ಕಾರಂತರ ಪತ್ನಿ ಲೀಲಾರವರ ಸಹೋದರಿ. ಕಾಂಗ್ರೇಸಿನ ಸಕ್ರೀಯ ಕಾರ್ಯಕರ್ತರಾಗಿದ್ದ ಬಿ ಕೆ ಭಂಡಾರಿಯವರು ಪ್ರಸಿದ್ಧ ಸಮಾಜ ಸೇವಕ ‘ಥಕ್ಕರ್ ಬಾಪಾ’ರ ಅನುಯಾಯಿಯಾಗಿದ್ದರು. 1933ರಲ್ಲಿ ಗಾಂಧೀಜಿ ಅಸ್ಪøಶ್ಯತೆಯ ವಿರುದ್ಧ ಅರಿವು ಮೂಡಿಸಲು ‘ಹರಿಜನ ಸೇವಾ ಸಂಘ’ ಸ್ಥಾಪಿಸಿ ಭಾರತದಾದ್ಯಂತ ಪ್ರವಾಸ ಆರಂಭಿಸಿದರು. ಥಕ್ಕರ್ ಬಾಪಾ ಈ ಸಂಘದ ಕಾರ್ಯದರ್ಶಿಯಾಗಿ ಅಸ್ಸಾಂನಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸೇವೆ ಮಾಡುತ್ತಿದ್ದರು. ಇದು ಬಿ ಕೆ ಭಂಡಾರಿಯವರನ್ನು ಆಕರ್ಷಿಸಿ 1936ರಲ್ಲಿ ಅಸ್ಸಾಂ ಕಡೆ ಪಯಣ ಬೆಳೆಸುವಂತೆ ಮಾಡಿತು. ಗಾಂಧೀಜಿಯವರ ಪ್ರವಾಸಗಳಲ್ಲಿ ಅವರ ಕಾರನ್ನು ತಾವೇ ಚಲಾಯಿಸುತ್ತಾರೆ. ಕಾಮರೂಪವನ್ನು ಕೇಂದ್ರವಾಗಿಟ್ಟುಕೊಂಡು ಸೇವೆಯನ್ನು ಅರಂಭಿಸಿದ ಭಂಡಾರಿಯವರು ಬಕ್ಸಾ ಎಂಬ ಜಾಗದ ಶೈಕ್ಷಣಿಕವಾಗಿ ಮತ್ತು ಸ್ವಚ್ಛತೆಯಲ್ಲಿ ಹಿಂದುಳಿದಿದ್ದ ಬೋರೊ ಮೊದಲಾದ ಬುಡಕಟ್ಟುಗಳ ಸೇವೆಯನ್ನು ಮಾಡುತ್ತಾರೆ. ಇದು ದಟ್ಟವಾದ ಕಾಡಿನಿಂದ ಆವೃತವಾದ ಸ್ಥಳವಾಗಿದ್ದು ಮಲೇರಿಯಾ, ಕಾಲಾರಗಳಿಂದ ಬಾಧಿತವಾಗಿತ್ತು. ಈ ಪ್ರದೇಶವನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತಾರೆ.

ಕೋಚಣ್ಣ ಭಂಡಾರಿಯವರ ಮೊದಲ ಪತ್ನಿ ಸುಮತಿಯವರು ಅಸ್ಸಾಮಿನಲ್ಲಿ ಮರಣಹೊಂದಿದ ನಂತರ ಅವರು ಮಂಗಳೂರು ಮೂಲದ ‘ಸಾವಿತ್ರಿ ಆಳ್ವ’ರನ್ನು ವಿವಾಹವಾಗುತ್ತಾರೆ. ಸಾವಿತ್ರಿಯವರು ತುಳು ಮೂಲದವರಾದರೂ ಅಸ್ಸಾಮಿ ಕಲಿತು ಅಸ್ಸಾಮಿ ಬಟ್ಟೆ ತೊಡಲು ಆರಂಭಿಸಿದರು. ಹೈನುಗಾರಿಕೆ, ಜೇನು, ಹೂದೋಟ, ತರಕಾರಿ ಮೊದಲಾದವನ್ನು ಬೆಳೆಸುವ ಅರಿವನ್ನು ಇವರು ಅಲ್ಲಿಯ ಮಹಿಳೆಯರಲ್ಲಿ ಮೂಡಿಸಿದರು. ಕೋಚಣ್ಣ ಭಂಡಾರಿಯವರಿಗೆ ಡಾ.ಸುಮನ್, ನಯನ್ ಭಂಡಾರಿ ಶರ್ಮ, ಶೋಭನ್ ಭಂಡಾರಿ ದೇಕಾ ಮತ್ತು ಮಲಯ ಭಂಡಾರಿ ದೇಕಾ ಎಂಬ ಪುತ್ರಿಯರು ಹಾಗೂ ಮೋಹನದಾಸ್ ಎಂಬ ಓರ್ವ ಪುತ್ರ. ಇವರಲ್ಲಿ ಡಾ. ಸುಮನ್ ಮರಣಹೊಂದಿದ್ದು ಉಳಿದವರೆಲ್ಲರೂ ಕುಟುಂಬದೊಂದಿಗೆ ಅಸ್ಸಾಮಿನಲ್ಲೇ ನೆಲೆಸಿದ್ದಾರೆ.

ಕೋಚಣ್ಣ ಭಂಡಾರಿಯವರು ಅಸ್ಸಾಮಿನ ಬರಮದಲ್ಲಿ ಆರಂಭಿಸಿದ ಅಸ್ಸಾಂ ಸೇವಾ ಸಂಘ್ ಬಕ್ಸಾ, ಬರಮ ಮೊದಲಾದ ಹಿಂದುಳಿದ ಪ್ರದೇಶಗಳಲ್ಲಿ ಶಾಲೆಗಳು, ವಸತಿ ನಿಲಯಗಳ ಮತ್ತು ಆರೋಗ್ಯ ಕೇಂದ್ರಗಳನ್ನು ಆರಂಭಿಸಿತು. ಭಂಡಾರಿಯವರು ಅಸ್ಸಾಮಿನಲ್ಲಿ ಸೇವೆಯನ್ನು ಆರಂಭಿಸುವಾಗ ಅನೇಕ ಕೊರತೆಗಳಿದ್ದವು. ಸಂಘದ ಕಟ್ಟಡದ ನಿರ್ಮಾಣದ ಕೆಲಸವನ್ನು ಸ್ವತಃ ತಾವೇ ಮಾಡಿದ್ದರು. ಈ ಸಂಘದ ಅಡಿಯಲ್ಲಿ ಗೋರೊ, ಖಾಸಿ ಮೊದಲಾದ ಗಿರಿ ಪ್ರದೇಶಗಳಲ್ಲಿ ಕುಷ್ಠರೋಗಿಗಳ ಚಿಕಿತ್ಸಾ ಕೇಂದ್ರವನ್ನು ತೆರೆದಿದ್ದರು. ಮಂಗಳೂರಿನ ಬೈಲು ಕೋಚಣ್ಣ ಭಂಡಾರಿಯವರು ಅಸ್ಸಾಮಿನ ಜನತೆಯ ಸೇವೆಯನ್ನು ಮಾಡಿ ಅಜರಾಮರರಾಗಿದ್ದಾರೆ.

ಅಸ್ಸಾಮಿನ ಜನರು ಭಂಡಾರಿಯವರಲ್ಲಿ ಓರ್ವ ಸಂತನನ್ನು ಕಂಡಿದ್ದಾರೆ. ಗಾಂಧಿಯ ಕರೆಗೆ ಓಗೊಟ್ಟು ಅಸ್ಸಾಮಿಗೆ ಧಾವಿಸಿ ತನ್ನ ಜೀವನದ ಬಹುತೇಕ ಕಾಲವನ್ನು ಜನಸೇವೆಗೆ ಮೀಸಲಿಟ್ಟ ಮಹಾ ಗಾಂಧೀವಾದಿ ಬೈಲು ಕೋಚಣ್ಣ ಭಂಡಾರಿಯವರು ಕರಾವಳಿಯ ಹೆಮ್ಮೆ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಚರಣ್ ಐವರ್ನಾಡು
ಬರಹಗಾರ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು.
ಇತಿಹಾಸ, ಜಾನಪದ, ರಾಜಕೀಯ ಮತ್ತು ಸಬಾಲ್ಟ್ರನ್ ಅಧ್ಯಯನಗಳು
ಇವರ ಬರವಣಿಗೆಯ ಕ್ಷೇತ್ರಗಳು

Related Articles

ಇತ್ತೀಚಿನ ಸುದ್ದಿಗಳು