Home ಅಪರಾಧ ಜನದನಿ ಸಂಪಾದಕರಾಗಿದ್ದ ದಿ.ಮೋಹನ್ ಕುಮಾರ್ ಅವರ ಮಗನ ಮೇಲೆ ಕೊಲೆ ಯತ್ನ

ಜನದನಿ ಸಂಪಾದಕರಾಗಿದ್ದ ದಿ.ಮೋಹನ್ ಕುಮಾರ್ ಅವರ ಮಗನ ಮೇಲೆ ಕೊಲೆ ಯತ್ನ

0

ರಾಮನಗರ: ಹಿರಿಯ ಪತ್ರಕರ್ತ , ಹೋರಾಟಗಾರ, ಜನದನಿ ಪತ್ರಿಕೆಯ ಸಂಪಾದಕರಾಗಿದ್ದ ದಿ.ಮೋಹನ್ ಕುಮಾರ್ ಅವರ ಮಗನ ಮೇಲೆ ಇತ್ತೀಚಿಗೆ ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. 

ಸೆ.11 ರಂದು ಸಂಜೆ 5.30 ರ ಸಮಯದಲ್ಲಿ ನಗರದ ಉಮೇಶ್ ಬಾರ್‌ನಲ್ಲಿದ್ದ ಆಕಾಶ್ ಗೌತಮ್ ಮೇಲೆ ಏಕಾಏಕಿಯಾಗಿ ನುಗ್ಗಿ ಬಂದ ದುಷ್ಕರ್ಮಿಗಳ ಗುಂಪೊಂದು ವಿನಾಕಾರಣ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದೆ. ಹಲ್ಲೆ ನಡೆಸಿದಾತ ಗುಡ್ಡೆ ವೆಂಕಟೇಶ್ ಎಂಬಾತನ ಮಗ ಪುನೀತ್ ಅಲಿಯಾಸ್ ಮೀಸೆ ಪುನಿ ಎಂದು ತಿಳಿದುಬಂದಿದೆ.

ಅಷ್ಟೇ ಅಲ್ಲದೇ , ” ನೀನಿನ್ನೂ ಸತ್ತಿಲ್ವಾ? ಸಾಯು ಸೂ* ಮಗನೇ!” ಎಂದು ಹೇಳಿ ಆಕಾಶ್‌ ಅವರ ಪಕ್ಕೆಲುಬು ಮತ್ತು ಎದೆ ಭಾಗಗಳಿಗೆ ಜಾಡಿಸಿ ಒದ್ದಿದ್ದು, ಟೇಬಲ್‌ನಿಂದ ನೆಲಕ್ಕೆ ಬಿದ್ದು ಬಲ ತೋಳಿನ ಮೂಳೆ ಮುರಿದಿದೆ. ಒಡೆದು ಚೂರಾದ ಬಾಟಲಿ ಗಾಜಿನಿಂದ ಮುಖದ ಮೇಲೆ ಮಾರಣಾಂತಿಕ ಗಾಯ ಮಾಡಿ, ಕೊಲೆ ಪ್ರಯತ್ನ ಮಾಡಿರುವುದು ಬಾರಿನಲ್ಲಿರುವ ಸಿಸಿಟಿವಿಯಲ್ಲಿ ಕಂಡುಬಂದಿದೆ.

ಈ ಬಗ್ಗೆ ದಿನಾಂಕ ಸೆ.12 ರಂದು ರಾಮನಗರದ ಐಜೂರು ಆರಕ್ಷಕ ಉಪನಿರೀಕ್ಷಕರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೇಸ್ ನಂಬರ್ 72/2024)  ಆದರೆ ಆ ಪ್ರಕರಣದಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದ ಸೆಕ್ಷನ್‌ ಹಾಕಿಲ್ಲ ಎಂದು ಆಕಾಶ್ ಗೌತಮ್‌ರವರ ಮನೆಯವರು ಹೇಳಿದ್ದು, ಈ ಬಗ್ಗೆ ಮೇಲಾಧಿಕಾರಿಗಳಿಗ ದೂರು ಸಲ್ಲಿಸುತ್ತಿದ್ದೇವೆ ಎಂದಿದ್ದಾರೆ. 

ಹಲ್ಲೆಯಿಂದ ಗಾಯಗೊಂಡಿರುವ ಆಕಾಶ್‌ ಗೌತಮ್

ಪ್ರಕರಣಕ್ಕೆ ಸಂಬಂಧಿಸಿ ಯೋಗೇಶ್, ವಿನೋದ್, ಅರುಣ್, ಖಾನ್ ಹಾಗೂ ಪಕ್ಕದ ಟೇಬಲ್‌ನಲ್ಲಿದ್ದು ಕೊಲೆ ಪ್ರಯತ್ನ ಮಾಡಿದ ಗುಡ್ಡೆ ವೆಂಕಟೇಶನ ಮಗನಾದ ಪುನೀತ್ ಅಲಿಯಾಸ್ ಮೀಸೆ ಪುನಿ, ಬಾಲಗೆರೆಯ ಪ್ರತಾಪ್ ಆಲಿಯಾಸ್ ಸೋನು ಹಾಗೂ ಇನ್ನು ಇಬ್ಬರು ಸಹಚರರು ಈ ಕೃತ್ಯದಲ್ಲಿ ಭಾಗಿಯಾಗಿದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ. ಖಾನ್ ಎಂಬುವವನ ಮೊಬೈಲ್ ಕ್ಯಾಮೆರಾದಲ್ಲೂ ಸೆರೆಯಾಗಿದೆ.

“ಈ ಘಟನೆಯ ಬಗ್ಗೆ ಈಗಾಗಲೇ ಪ್ರಕರಣ ದಾಖಲಾಗಿದ್ದರು ಕೊಲೆ ಪ್ರಯತ್ನ ಮಾಡಿರುವ ಪುನೀತ್ ಆಲಿಯಾಸ್ ಮೀಸೆ ಪುನಿಯ ತಂದೆ (ಗುಡ್ಡೆ ವೆಂಕಟೇಶ್) ರಾಜಕೀಯ ಹಾಗೂ ಆರ್ಥಿಕವಾಗಿ ಪ್ರಭಾವಿಯಾಗಿರುವ ಕಾರಣ ಐಜೂರಿನ ಬೀದಿಗಳಲ್ಲಿ ಹಾಗೂ ಗಣೇಶ ವಿಸರ್ಜನೆ ಮೆರವಣಿಗೆಗಳಲ್ಲಿ ಸಾರ್ವಜನಿಕವಾಗಿ “ಬರಿ ಈಗ ಆಗಿರೋದು ಸಣ್ಣಕೇ ಆಯ್ತೆ, ಅವನಿಗೆ ಈ ಸಲ ಫುಲ್ ಮಾಡದೇ ಹೋ ದರೆ ನಾನು ನನ್ನ ಅಪ್ಪನಿಗೆ ಹುಟ್ಟಿರೋನೇ ಅಲ್ಲ, ನಮ್ಮಪ್ಪ ಗುಡ್ಡೆ ವೆಂಕಟೇಶ್ ಇರಬೇಕಾದರೆ ನನಗೆ ಯಾರ ಭಯ ಇಲ್ಲ, ಯಾವ ಕಂಪ್ಲೇಂಟು ಕೇಸು ನಮ್ಮು ಮುಂದೆ ನಿಲ್ಲೋದಿಲ್ಲ, ಯಾವ್ ಪೊಲೀಸು – ಕೋರ್ಟು ನನ್ನ ಹಿಡಿದು ಜೈಲಿಗೆ ಹಾಕಲ್ಲ. ಅದಕ್ಕೆ ನಾನು ಮತ್ತು ನಮ್ ಹುಡುಗ್ರು ಅವರ ಮನೆ ಮನೆಯವರ ಸುತ್ತ ರೌಂಡಿಂಗ್ ಹಾಕ್ತಾನೆ ಇದ್ದೀವಿ” ಎಂದು ಹೇಳಿದ್ದಾನೆ. ಹೀಗೆ ರಾಜರೋಷವಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ, ಹೀಗಾಗಿ ನಮಗೆ ಜೀವ ಬೆದರಿಕೆ ಇದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಕೂಡಲೇ ಅರೋಪಿಗಳನ್ನ ಬಂಧಿಸಿ , ನಮಗೆ ನ್ಯಾಯ ಒದಗಿಸಿಕೊಡಬೇಕು,” ಎಂದು ಆಕಾಶ್ ಗೌತಮ್‌ರವರ ಸಹೋದರ ಅಕ್ಷಯ್ ಗೌತಮ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

You cannot copy content of this page

Exit mobile version