ಇಸ್ರೇಲ್ ಸೇನೆಯು ಕೇಂದ್ರ ಗಾಜಾದಲ್ಲಿ ಭಾರಿ ವೈಮಾನಿಕ ದಾಳಿ ನಡೆಸಿದೆ. ಇದು ಜನರಲ್ಲಿ ತಲ್ಲಣ ಮೂಡಿಸಿದ್ದು ಮಾಹಿತಿಯ ಪ್ರಕಾರ, ಈ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಕನಿಷ್ಠ 2 ಪ್ಯಾಲೆಸ್ತೀನ್ ಪತ್ರಕರ್ತರು ಸಾವನ್ನಪ್ಪಿದ್ದಾರೆ. ಸೆಂಟ್ರಲ್ ಗಾಜಾದಲ್ಲಿರುವ ಅಲ್-ಅಕ್ಸಾ ಆಸ್ಪತ್ರೆ ಬಳಿಯ ಟೆಂಟ್ ಮೇಲೆ ಈ ದಾಳಿ ನಡೆದಿದೆ.
ಈ ದಾಳಿಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಟೆಂಟನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಜನರು ಗಾಬರಿಯಿಂದ ಓಡುತ್ತಿರುವುದು, ಗಾಯಾಳುಗಳನ್ನು ರಕ್ಷಿಸುವಂತೆ ಸ್ಥಳೀಯರು ಕಿರುಚುತ್ತಿರುವ ದೃಶ್ಯವೂ ಕಂಡು ಬಂದಿದೆ.
ಸೆಂಟ್ರಲ್ ಗಾಜಾದ ದೇರ್ ಅಲ್-ಬಲಾಹ್‌ನಲ್ಲಿರುವ ಅಲ್-ಅಕ್ಶಾ ಆಸ್ಪತ್ರೆ ಬಳಿಯ ಟೆಂಟ್ ಮೇಲೆ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಇಬ್ಬರು ಫೆಲೆಸ್ತೀನ್ ಪತ್ರಕರ್ತರು ಸಾವನ್ನಪ್ಪಿದ್ದರು. ಇನ್ನೂ ಹಲವರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾದ ವಿಡಿಯೋದಲ್ಲಿ ದಾಳಿಯ ನಂತರ ಅಲ್ಲಿ ಅವ್ಯವಸ್ಥೆಯ ವಾತಾವರಣವಿದ್ದು, ಜನರು ಅತ್ತ ಇತ್ತ ಓಡಿ ಹೋಗಿ ಕಿರುಚುತ್ತಿರುವುದು ಕಂಡು ಬರುತ್ತಿದೆ. ಅಕ್ಟೋಬರ್ 7, 2023ರಂದು ಹಮಾಸ್ ದಾಳಿಯ ನಂತರ ಇಸ್ರೇಲಿ ಸೈನ್ಯವು ಗಾಜಾದ ಮೇಲೆ ನಿರಂತರವಾಗಿ ಪ್ರತೀಕಾರ ನಡೆಸುತ್ತಿದೆ.
ಗಾಜಾದಲ್ಲಿ ಇಲ್ಲಿಯವರೆಗೆ 32 ಸಾವಿರಕ್ಕೂ ಹೆಚ್ಚು ಸಾವುಗಳು
ಹಮಾಸ್‌ನ ಆರೋಗ್ಯ ಸಚಿವಾಲಯದ ಪ್ರಕಾರ, ಗಾಜಾದ ವೈಮಾನಿಕ ದಾಳಿ ಮತ್ತು ನೆಲದ ಕಾರ್ಯಾಚರಣೆಗಳಲ್ಲಿ ಇದುವರೆಗೆ 32 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಗಾಜಾದ ವಿವಿಧ ಭಾಗಗಳ ಮೇಲೆ ಇಸ್ರೇಲ್ ಸೇನೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಇದುವರೆಗೆ ನಡೆದ ದಾಳಿಯಲ್ಲಿ ಹಲವಾರು ಸಾವಿರ ಹಮಾಸ್ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಇಸ್ರೇಲಿ ಸೇನೆ ಹೇಳಿಕೊಂಡಿದೆ.