Home ದೇಶ ಬಿಜೆಪಿ ಆಡಳಿತದ ಮಧ್ಯಪ್ರದೇಶ, ಯುಪಿಯಲ್ಲಿ ಮುಂದುವರೆದ ಘೋರ ಕೃತ್ಯಗಳು: ದಲಿತರಿಗೆ ಮೂತ್ರ ಕುಡಿಸಿದ ಜಾತಿವ್ಯಾಧಿಗಳು

ಬಿಜೆಪಿ ಆಡಳಿತದ ಮಧ್ಯಪ್ರದೇಶ, ಯುಪಿಯಲ್ಲಿ ಮುಂದುವರೆದ ಘೋರ ಕೃತ್ಯಗಳು: ದಲಿತರಿಗೆ ಮೂತ್ರ ಕುಡಿಸಿದ ಜಾತಿವ್ಯಾಧಿಗಳು

0

ದೆಹಲಿ: ಬಿಜೆಪಿ ಆಡಳಿತದಲ್ಲಿರುವ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ನಿಂತಿಲ್ಲ.

ಚಾಲಕ ಕೆಲಸ ಬಿಟ್ಟಿದ್ದಕ್ಕಾಗಿ 25 ವರ್ಷದ ದಲಿತ ಯುವಕನನ್ನು ಅಪಹರಿಸಿ ಥಳಿಸಿದ ಕೆಲವು ವ್ಯಕ್ತಿಗಳು, ಆತನಿಗೆ ಬಲವಂತವಾಗಿ ಮೂತ್ರ ಕುಡಿಸಿದ ದಾರುಣ ಘಟನೆ ಮಧ್ಯಪ್ರದೇಶದ ಭೀಂಡ್‌ ಜಿಲ್ಲೆಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಲಕ್ನೋ ಹೊರವಲಯದಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ, ದೀಪಾವಳಿ ಹಬ್ಬದಂದು ದೇವಾಲಯದ ಬಳಿ ಮೂತ್ರ ವಿಸರ್ಜನೆ ಮಾಡಿದ ವೃದ್ಧ ದಲಿತನ ಮೇಲೆ ಹಳ್ಳಿಗರು ಹಲ್ಲೆ ಮಾಡಿ, ಆತನಿಂದ ಅದೇ ಸ್ಥಳದಲ್ಲಿ ನೆಲ ನೆಕ್ಕಿಸಿದ್ದಾರೆ.

ಮಧ್ಯಪ್ರದೇಶ ಪೊಲೀಸರ ಪ್ರಕಾರ, ತಮ್ಮಲ್ಲಿ ಚಾಲಕನಾಗಿ ಕೆಲಸ ಬಿಟ್ಟಿದ್ದಕ್ಕಾಗಿ ದಲಿತ ವ್ಯಕ್ತಿಯ ಮೇಲೆ ಕೋಪಗೊಂಡಿದ್ದ ಪ್ರಮುಖ ಆರೋಪಿ ಆತನನ್ನು ಬಂಧಿಸಿ, ಹಲ್ಲೆ ಮಾಡಿದ್ದಲ್ಲದೆ ಬಲವಂತವಾಗಿ ಮೂತ್ರ ಕುಡಿಸಿದ್ದಾನೆ. ಸಂತ್ರಸ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಸಂತ್ರಸ್ತನ ದೂರಿನ ಅನ್ವಯ, ಸೋಮವಾರದಂದು ಗ್ವಾಲಿಯರ್‌ನಲ್ಲಿ ಮೂವರು ವ್ಯಕ್ತಿಗಳು ಆತನನ್ನು ಅಪಹರಿಸಿ ಭೀಂಡ್‌ಗೆ ಕರೆದೊಯ್ದಿದ್ದಾರೆ. ಅಲ್ಲಿ ಆತನಿಗೆ ಥಳಿಸಿ ಮೂತ್ರ ಕುಡಿಸಿದ್ದಾರೆ. ಬಾಧಿತನನ್ನು ಅಪಹರಿಸಿ ಕಾರಿನಲ್ಲಿ ಕರೆದೊಯ್ಯುವಾಗ ಒಮ್ಮೆ, ಮತ್ತು ಅಕುಟ್‌ಪುರ ಗ್ರಾಮದಲ್ಲಿ ಸರಪಳಿಯಿಂದ ಕಟ್ಟಿಹಾಕಿದ ನಂತರ ಮತ್ತೊಮ್ಮೆ ಆತನಿಗೆ ಬಲವಂತವಾಗಿ ಮೂತ್ರ ಕುಡಿಸಲಾಗಿದೆ ಎಂದು ಎಎಸ್‌ಪಿ ಸಂಜೀವ್ ಪಾಠಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಮುಖ ಆರೋಪಿ ಸೋನು ಬಾರುವಾ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸಂತ್ರಸ್ತ ಇತ್ತೀಚೆಗೆ ಕೆಲಸ ಬಿಟ್ಟಿದ್ದ ಎಂದು ಅವರು ಹೇಳಿದರು.

ಲಕ್ನೋ ಹೊರವಲಯದ ಘಟನೆಯಲ್ಲೂ ಆರೋಪಿಯ ವಿರುದ್ಧ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ದಲಿತ ವೃದ್ಧನಿಗೆ ಉಬ್ಬಸ (ಆಸ್ತಮಾ) ಕಾಯಿಲೆ ಇದ್ದು, ಕೆಮ್ಮುವಾಗ ಆಕಸ್ಮಿಕವಾಗಿ ಮೂತ್ರ ವಿಸರ್ಜನೆಯಾಗಿದೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಆದರೆ, ವೃದ್ಧನಿಂದ ನೆಲವನ್ನು ನೆಕ್ಕಿಸಿಲ್ಲ, ಕೇವಲ ತಲೆಯನ್ನು ಮಾತ್ರ ನೆಲಕ್ಕೆ ತಾಗಿಸಲಾಗಿದೆ ಎಂದು ಆರೋಪಿ ವಾದಿಸಿದ್ದಾನೆ. ಈ ಘಟನೆಯು ಯುಪಿಯಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಆಡಳಿತಾರೂಢ ಬಿಜೆಪಿ ರಾಜ್ಯದಲ್ಲಿ ದಲಿತ ವಿರೋಧಿ ವಾತಾವರಣವನ್ನು ಹರಡುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ.

You cannot copy content of this page

Exit mobile version