ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಅಮೆರಿಕನ್ನರೊಂದಿಗೆ ದೀಪಾವಳಿ ಆಚರಿಸುತ್ತಿರುವಂತೆ ಕಂಡರೂ, ಅವರನ್ನು ಬೆಂಬಲಿಸುವ ‘ಮ್ಯಾಗಾ’ (MAGA – Make America Great Again) ಶಿಬಿರದ ಸದಸ್ಯರು ಹಿಂದೂಗಳ ವಿರುದ್ಧ ದ್ವೇಷಪೂರಿತ ಹೇಳಿಕೆಗಳನ್ನು ನೀಡಿದ್ದಾರೆ.
ಯುಎಸ್ ಕಾಂಗ್ರೆಸ್‌ಗೆ ಆಯ್ಕೆಯಾದ ಮೊದಲ ಹಿಂದೂ ಹಾಗೂ ಮಾಜಿ ರಾಷ್ಟ್ರೀಯ ಗುಪ್ತಚರ ನಿರ್ದೇಶಕರಾದ ತುಳಸಿ ಗಬ್ಬಾರ್ಡ್ ಅವರು ದೀಪಾವಳಿ ಸಂದರ್ಭದಲ್ಲಿ ಶುಭಾಶಯ ಕೋರಿ ಒಂದು ದಿನದ ಹಿಂದೆ ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿದ್ದರು.
ಇದಕ್ಕೆ ಹಲವರು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಾರೆ. ‘ದೀಪಾವಳಿ ಅಮೆರಿಕನ್ನರ ಹಬ್ಬವಲ್ಲ, ಭಾರತಕ್ಕೆ ಹೋಗಿ’ ಎಂದು ದ್ವೇಷವನ್ನು ಕಾರಿದ್ದಾರೆ. ಅಂತೆಯೇ, ಗುಜರಾತ್ ಮೂಲದ ಎಫ್‌ಬಿಐ ಮುಖ್ಯಸ್ಥ ಕಾಶ್ ಪಟೇಲ್ ಅವರಿಗೂ ಇದೇ ರೀತಿಯ ದ್ವೇಷಪೂರಿತ ಕಾಮೆಂಟ್‌ಗಳು ಎದುರಾಗಿವೆ. ‘ಸುಳ್ಳು ದೇವರುಗಳ ಆರಾಧನೆ ನಿಲ್ಲಿಸಿ’ ಮತ್ತು ‘ಪಶ್ಚಾತ್ತಾಪಪಟ್ಟು ರಕ್ಷಣೆಗಾಗಿ ಪ್ರಭು ಯೇಸುಕ್ರಿಸ್ತನನ್ನು ನಂಬಿರಿ’ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.