ಶಿವಮೊಗ್ಗ : ಶಿವಮೊಗ್ಗದ ನಿದಿಗೆ ಇಂಡಸ್ಟ್ರಿಯಲ್ ಎಸ್ಟೇಟ್ ಪ್ರದೇಶದಲ್ಲಿನ ಫ್ಯಾಕ್ಟರಿ ಒಂದಕ್ಕೆ ಪೊಲೀಸರು ದಾಳಿ ಮಾಡಿದ್ದು, ಸ್ಥಳೀಯ ಮಟ್ಟದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಈ ಫ್ಯಾಕ್ಟರಿ ಇರುವ ಜಾಗ ಬಿಜೆಪಿ ಪಕ್ಷದ ಸ್ಥಳೀಯ ಮುಖಂಡ ಶಿವಮೊಗ್ಗ ಮೇಯರ್ ಅವರಿಗೆ ಸಂಬಂಧಿಸಿದ್ದು ಎಂದು ಸ್ಥಳೀಯರ ಕಡೆಯಿಂದ ಬಂದ ಮಾಹಿತಿಯಾಗಿದೆ. ಈ ಬಗ್ಗೆ ನಿಖರ ಮಾಹಿತಿ ಪೊಲೀಸ್ ಇಲಾಖೆ ಕಡೆಯಿಂದ ಬರಬೇಕಿದೆ.
ಸಾಕುಪ್ರಾಣಿಗಳಿಗೆ ಆಹಾರ ತಯಾರಿಕೆಗೆ ಬೇಕಾದ ಪದಾರ್ಥಗಳನ್ನು ತಯಾರಿಸುವ ಫ್ಯಾಕ್ಟರಿ ಇದಾಗಿದ್ದು, ಅಕ್ರಮವಾಗಿ ದನ ಮತ್ತು ಕರುಗಳನ್ನು ಇಲ್ಲಿ ಕೂಡಿ ಹಾಕಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಸಾಕುಪ್ರಾಣಿಗಳಿಗೆ ಬೇಕಾದ ಆಹಾರ ತಯಾರಿಗೆ ಈ ಫ್ಯಾಕ್ಟರಿ ಕಡೆಯಿಂದ ಕಚ್ಚಾ ವಸ್ತುಗಳನ್ನು ಮಾಡಿ ದೊಡ್ಡ ದೊಡ್ಡ ಕಂಪನಿಗಳಿಗೆ ರವಾನೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಇದೇ ಕಾರಣಕ್ಕೆ ದನ ಕರುಗಳನ್ನು ಇಲ್ಲಿ ಕೂಡಿ ಹಾಕಲಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ. ಪ್ರಾಥಮಿಕ ಹಂತದಲ್ಲಿ ಸಿಕ್ಕ ಮಾಹಿತಿ ಪ್ರಕಾರ, ದನ ಕರುಗಳನ್ನು ಬಳಸಿಕೊಂಡು, ಅವುಗಳ ಮೂಳೆ ಮತ್ತು ಮಾಂಸಗಳಿಂದ ಸಾಕುಪ್ರಾಣಿಗಳಿಗೆ ಹಾಕುವ ಫೀಡ್ಗಳನ್ನು ತಯಾರು ಮಾಡಲಾಗುತ್ತದೆ ಅಥವಾ ತಯಾರಿಸುವ ಕಂಪನಿಗಳಿಗೆ ರವಾನೆ ಮಾಡಲಾಗುತ್ತಿದೆ ಎಂಬುದಾಗಿದೆ.
ಸಧ್ಯಕ್ಕೆ ಈ ಫ್ಯಾಕ್ಟರಿ ಮಾಲಿಕತ್ವದ ಬಗ್ಗೆ ಹಲವು ಕುತೂಹಲ ಹುಟ್ಟಿದ್ದು, ಶಿವಮೊಗ್ಗದ ಬಿಜೆಪಿ ಪಕ್ಷದ ಪ್ರಭಾವಿ ವ್ಯಕ್ತಿಯವರದ್ದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಕಡೆಯಿಂದ ಖಚಿತ ಮಾಹಿತಿ ಹೊರಬರಬೇಕಿದೆ. ದಾಳಿ ನಡೆಸಿರುವ ತಂಡ, ಫ್ಯಾಕ್ಟರಿಯ ಮಾಲಿಕತ್ವದ ಬಗ್ಗೆ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ.