ಬೆಂಗಳೂರಿನಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ ದ್ವಿಚಕ್ರ ಟ್ಯಾಕ್ಸಿ ಚಾಲಕನಿಗೆ ಕಿರುಕುಳ ನೀಡಿ ರಸ್ತೆಯಲ್ಲಿ ನಿಲ್ಲಿಸಿ ಬೈಕ್ ಕೀ ಕಿತ್ತುಕೊಂಡಿದ್ದಾನೆ. ಈ ವೇಳೆ ಆಟೋ ಚಾಲಕ ಬೈಕ್ ಸವಾರನಿಗೆ ಕಠೋರ ಎಚ್ಚರಿಕೆ ನೀಡಿ ಬಿಳಿ ಬೋರ್ಡ್ ಹಾಕಿ ಬೈಕ್ ಟ್ಯಾಕ್ಸಿ ಓಡಿಸುವುದನ್ನು ನಿಲ್ಲಿಸುವಂತೆ ಹೇಳಿರುವುದು ಕಂಡು ಬಂದಿದೆ.
ವೈರಲ್ ವೀಡಿಯೊದಲ್ಲಿ, ಆಟೋ ಚಾಲಕ ಕೀಗಳನ್ನು ಕಸಿದುಕೊಂಡು, “ವೈಟ್‌ಬೋರ್ಡ್ ಬೈಕ್‌ಗಳಿಗೆ ದ್ವಿಚಕ್ರ ಟ್ಯಾಕ್ಸಿಗಳಾಗಿ ಕಾರ್ಯನಿರ್ವಹಿಸಲು ಯಾವುದೇ ಅನುಮತಿ ಇಲ್ಲ. ಅಂತಹ ವಾಹನಗಳನ್ನು ನಿಲ್ಲಿಸಲು ಇನ್ಸ್‌ಪೆಕ್ಟರ್ ಆದೇಶ ಹೊರಡಿಸಿದ್ದಾರೆ” ಎಂದು ಹೇಳಿರುವುದು ಕಂಡುಬಂದಿದೆ.
ಮತ್ತೊಬ್ಬ ವ್ಯಕ್ತಿ ಆಟೋ ಚಾಲಕನನ್ನು ತಡೆದು ನಿಲ್ಲಿಸಲು ಆಟೋ ಚಾಲಕನಿಗೆ ಏನು ಹಕ್ಕಿದೆ ಎಂದು ಕೇಳಿದಾಗ, “ನನಗೆ ನಿಯಮಗಳು ಗೊತ್ತು. ನೀವು ಸಹ ನಿಯಮಗಳನ್ನು ತಿಳಿದುಕೊಳ್ಳಲು ಬಯಸಿದರೆ, ನನ್ನೊಂದಿಗೆ ಬನ್ನಿ, ಮತ್ತು ನಾನು ನಿಮಗೆ ತೋರಿಸುತ್ತೇನೆ. ನಾನು ಅವನನ್ನು ಇನ್ಸ್ಪೆಕ್ಟರ್ ಬಳಿಗೆ ಕರೆದುಕೊಂಡು ಹೋಗುತ್ತಿದ್ದೇನೆ. ಅದಕ್ಕೂ ಇದನ್ನೆಲ್ಲ ಕೇಳಲು ನೀನು ಯಾರು?”ಎಂದು ಎದುರುತ್ತರ ನೀಡಿದ್ದಾನೆ.
ನಂತರ ಆಟೋ ಚಾಲಕ ಬೈಕ್ ಟ್ಯಾಕ್ಸಿ ಚಾಲಕನ ಕೀ ಮತ್ತು ಮೊಬೈಲ್ ಫೋನ್ ಕಸಿದುಕೊಂಡು ತನ್ನ ಆಟೋದಲ್ಲಿ ಕರೆದುಕೊಂಡು ಹೋಗಿದ್ದಾನೆ. ವೈರಲ್ ಆಗಿರುವ ವಿಡಿಯೋದಲ್ಲಿ ಬೈಕ್ ಸವಾರನನ್ನು ಮಾರತ್ತಹಳ್ಳಿ ಠಾಣೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಕಾನೂನನ್ನು ಕೈಗೆತ್ತಿಕೊಂಡ ಆಟೋ ಚಾಲಕನನ್ನು ಬಂಧಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದಾರೆ. “ಪ್ರತಿದಿನ, ಒಂದೇ ಸಮಸ್ಯೆ. ಈ ಪುಂಡರ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ!! @blrcitytraffic ದಯವಿಟ್ಟು ಈ ವ್ಯಕ್ತಿಯನ್ನು ಬಂಧಿಸಿ! ಕಾನೂನನ್ನು ಕೈಗೆ ತೆಗೆದುಕೊಳ್ಳುವ ಹಕ್ಕು ಇವರಿಗೆ ಕೊಟ್ಟವರು ಯಾರು!!? ಆತನನ್ನು ಬಂಧಿಸಿ ದಂಡ ವಿಧಿಸಬೇಕು’ ಎಂದು ಜಾಲತಾಣ ಬಳಕೆದಾರರೊಬ್ಬರು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಚಾಲಕರಿಗೆ ಆಟೋ ಚಾಲಕರು ಕಿರುಕುಳ ನೀಡುತ್ತಿರುವ ಘಟನೆಗಳು ಪದೇ ಪದೇ ನಡೆಯುತ್ತಿವೆ. ದ್ವಿಚಕ್ರ ವಾಹನ ಟ್ಯಾಕ್ಸಿಗಳನ್ನು ನಿಷೇಧಿಸುವುದು ನಗರದ ಆಟೋ ರಿಕ್ಷಾ ಸಂಘಟನೆಗಳ ಬಹುದಿನಗಳ ಬೇಡಿಕೆಯಾಗಿದ್ದು, ಬೈಕ್ ಟ್ಯಾಕ್ಸಿ ಚಾಲಕರ ಮೇಲೆ ಹಲವು ದಾಳಿಗಳು ವರದಿಯಾಗುತ್ತಿವೆ. ಕಾನೂನಾತ್ಮಕವಾಗಿ ಅವುಗಳನ್ನು ನಿಷೇಧಿಸಲಾಗದಿದ್ದರೂ, ಕರ್ನಾಟಕ ಸಾರಿಗೆ ಇಲಾಖೆಯು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.